ಹಿರಿಯೂರು ಉಪ ಚುನಾವಣೆ: NDA ಮೈತ್ರಿಯಲ್ಲಿ ಜೆಡಿಎಸ್ ಅಭ್ಯರ್ಥಿ ಕಣಕ್ಕೆ?: H D ಕುಮಾರಸ್ವಾಮಿ ಲೆಕ್ಕಾಚಾರವೇನು?

ವಿಧಾನ ಪರಿಷತ್ ಚುನಾವಣೆಯಲ್ಲಿ ಒಳಜಗಳ ಹಾಗೂ ಅಡ್ಡಮತದಾನದ ಸಮಸ್ಯೆಯಿಂದ ಸಂಕಷ್ಟಕ್ಕೀಡಾದ ಬಿಜೆಪಿ, ಹಿರಿಯೂರು ಉಪಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಒಪ್ಪಿಕೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ಗೆ ತಿಳಿಸಿವೆ.
H D Kumaraswamy
ಹೆಚ್ ಡಿ ಕುಮಾರಸ್ವಾಮಿ
Updated on

ಬೆಂಗಳೂರು: ಕೇಂದ್ರ ಉಕ್ಕು ಹಾಗೂ ಭಾರೀ ಕೈಗಾರಿಕೆಗಳ ಸಚಿವ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಅವರು ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ತೀವ್ರ ಆಸಕ್ತಿ ತೋರಿದ್ದಾರೆ.

ಮಾಜಿ ಸಚಿವ ಡಿ. ಸುಧಾಕರ್ ಅವರು ಮೇ ತಿಂಗಳಲ್ಲಿ ನಿಧನರಾದ ಹಿನ್ನೆಲೆಯಲ್ಲಿ ಹಿರಿಯೂರು ವಿಧಾನಸಭಾ ಕ್ಷೇತ್ರ ತೆರವಾಗಿದೆ.

ಜೂನ್ 18ರಂದು ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಒಳಜಗಳ ಹಾಗೂ ಅಡ್ಡಮತದಾನದ ಸಮಸ್ಯೆಯಿಂದ ಸಂಕಷ್ಟಕ್ಕೀಡಾದ ಬಿಜೆಪಿ, ಹಿರಿಯೂರು ಉಪಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಒಪ್ಪಿಕೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ಗೆ ತಿಳಿಸಿವೆ.

ಬಿಜೆಪಿ ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗ್ರವಾಲ್ ಅವರು ಇಂದು ಕುಮಾರಸ್ವಾಮಿ ಅವರೊಂದಿಗೆ ಈ ಕುರಿತು ಚರ್ಚೆ ನಡೆಸುವುದಾಗಿ ಹೇಳಿದ್ದಾರೆ.

H D Kumaraswamy
'ಈಗಲೇ ರಾಜ್ಯ ರಾಜಕೀಯಕ್ಕೆ ಮರಳಲ್ಲ': ಊಹಾಪೋಹಗಳಿಗೆ ಎಚ್.ಡಿ. ಕುಮಾರಸ್ವಾಮಿ ತೆರೆ

ಹಿರಿಯೂರಿನಿಂದ ನಮ್ಮ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂಬ ಒತ್ತಾಯ ಜೆಡಿಎಸ್‌ನಲ್ಲಿ ಹೆಚ್ಚುತ್ತಿದೆ. ಈ ಕುರಿತು ಬಿಜೆಪಿ ಹೈಕಮಾಂಡ್ ನಾಯಕರೊಂದಿಗೆ ಚರ್ಚೆ ನಡೆಸಿದ್ದೇನೆ. ಹಿರಿಯೂರು ಕ್ಷೇತ್ರದ ಮುಖಂಡರೊಂದಿಗೆ ಎರಡು-ಮೂರು ಸಭೆಗಳನ್ನೂ ನಡೆಸಿದ್ದೇನೆ. ಇನ್ನೂ ಸಾಕಷ್ಟು ಸಮಯ ಇರುವುದರಿಂದ ಪರಿಸ್ಥಿತಿ ಹೇಗೆ ಬೆಳೆಯುತ್ತದೆ ಎಂಬುದನ್ನು ನೋಡೋಣ ಎಂದು ಕುಮಾರಸ್ವಾಮಿ ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಇದೇ ವೇಳೆ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಚಿಕ್ಕನಾಯಕನಹಳ್ಳಿ ಶಾಸಕ ಸಿ.ಬಿ. ಸುರೇಶ್ ಬಾಬು, ಸಾಂಪ್ರದಾಯಿಕವಾಗಿ ಹಿರಿಯೂರಿನಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆಯೇ ನೇರ ಸ್ಪರ್ಧೆ ನಡೆಯುತ್ತ ಬಂದಿದೆ ಎಂದು ಹೇಳಿದರು.

ಇತ್ತೀಚಿನ ವಿಧಾನ ಪರಿಷತ್ ಚುನಾವಣೆಯಲ್ಲಿ ಎನ್‌ಡಿಎ ಕಳಪೆ ಪ್ರದರ್ಶನ ನೀಡಿರುವ ಹಿನ್ನೆಲೆಯಲ್ಲಿ, ಹಿರಿಯೂರು ಉಪಚುನಾವಣೆಯಲ್ಲಿ ಕುಮಾರಸ್ವಾಮಿ ಮುಂಚೂಣಿಯಲ್ಲಿ ನಿಂತು ಲೆಕ್ಕಾಚಾರದ ರಾಜಕೀಯ ಹೆಜ್ಜೆ ಇಡುವ ಸಾಧ್ಯತೆ ಇದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಹಿರಿಯೂರು ಕ್ಷೇತ್ರದಲ್ಲಿ ಸುಮಾರು 35 ಸಾವಿರ ಕುಂಚಿಟಿಗ ಒಕ್ಕಲಿಗ ಮತದಾರರು, 45 ಸಾವಿರ ಕಾಡುಗೊಲ್ಲ ಸಮುದಾಯದ ಮತದಾರರು, 65 ಸಾವಿರ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮತದಾರರು ಮತ್ತು ಸುಮಾರು 20 ಸಾವಿರ ಮುಸ್ಲಿಂ ಮತದಾರರಿದ್ದಾರೆ.

ಕಾಂಗ್ರೆಸ್, ಡಿ. ಸುಧಾಕರ್ ಅವರ ಪುತ್ರ ಸುಹಾಸ್ ಅವರಿಗೆ ಟಿಕೆಟ್ ನೀಡಿದರೆ, ಜೆಡಿಎಸ್ ಕಾಡುಗೊಲ್ಲ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಒಕ್ಕಲಿಗರ ಮತಗಳನ್ನು ತನ್ನತ್ತ ಸೆಳೆಯುವ ಲೆಕ್ಕಾಚಾರದಲ್ಲಿದೆ. ಸುಹಾಸ್ ಜೈನ ಸಮುದಾಯಕ್ಕೆ ಸೇರಿದವರಾಗಿದ್ದಾರೆ.

ಕಾಂಗ್ರೆಸ್ ನಾಯಕತ್ವ ಸುಹಾಸ್ ಅವರನ್ನು ಆಯ್ಕೆ ಮಾಡುತ್ತದೆಯೇ ಅಥವಾ ಗೊಲ್ಲ ಸಮುದಾಯದ ನಾಯಕಿ ಹಾಗೂ ಮಾಜಿ ಶಾಸಕ ಪೂರ್ಣಿಮಾ ಕೃಷ್ಣಪ್ಪ ಅವರಿಗೆ ಟಿಕೆಟ್ ನೀಡುತ್ತದೆಯೇ ಎಂಬುದು ಕಾದು ನೋಡಬೇಕಿದೆ. ಅವರ ತಂದೆ ಎ. ಕೃಷ್ಣಪ್ಪ ಅವರು 2013ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುಧಾಕರ್ ವಿರುದ್ಧ ಅಲ್ಪ ಮತಗಳ ಅಂತರದಿಂದ ಸೋತಿದ್ದರು.

2023ರ ವಿಧಾನಸಭೆ ಚುನಾವಣೆಯಲ್ಲಿ ಡಿ. ಸುಧಾಕರ್ ವಿರುದ್ಧ ಸೋತ ಬಳಿಕ ಪೂರ್ಣಿಮಾ ಕೃಷ್ಣಪ್ಪ ಅವರು ಬಿಜೆಪಿಯಿಂದ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದರು.

ಪೂರ್ಣಿಮಾ ಅವರಿಗೆ ಇನ್ನೂ ಕ್ಷೇತ್ರದಲ್ಲಿ ಪ್ರಭಾವವಿದೆ. ಅವರಿಗೆ ಟಿಕೆಟ್ ಘೋಷಿಸಿದರೆ ಬಿಜೆಪಿ ಕಾರ್ಯಕರ್ತರಲ್ಲೂ ಕೆಲವರು ಕಾಂಗ್ರೆಸ್ ಕಡೆಗೆ ವಾಲುವ ಸಾಧ್ಯತೆ ಇದೆ ಎಂದು ಟಿ. ನಾಗೇನಹಳ್ಳಿಯ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಗಿರೀಶ್ ಹೇಳುತ್ತಾರೆ.

ಇದೀಗ ಬಿಜೆಪಿ ಕೂಡ ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಅವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿ, ಅಭ್ಯರ್ಥಿ ಆಯ್ಕೆ ಕುರಿತು ಕಾರ್ಯತಂತ್ರ ರೂಪಿಸಲು ಮುಂದಾಗಿದೆ.

ಹಿಂದಿನ ಚುನಾವಣಾ ಫಲಿತಾಂಶಗಳು

2023ರ ವಿಧಾನಸಭೆ ಚುನಾವಣೆ:

  • ಡಿ. ಸುಧಾಕರ್ (ಕಾಂಗ್ರೆಸ್) – 92,050 ಮತಗಳು

  • ಪೂರ್ಣಿಮಾ ಕೃಷ್ಣಪ್ಪ (ಬಿಜೆಪಿ) – 61,728 ಮತಗಳು

  • ಎಂ. ರವೀಂದ್ರಪ್ಪ (ಜೆಡಿಎಸ್) – 38,686 ಮತಗಳು

2018ರ ವಿಧಾನಸಭೆ ಚುನಾವಣೆ:

  • ಪೂರ್ಣಿಮಾ ಕೃಷ್ಣಪ್ಪ (ಬಿಜೆಪಿ) – 77,733 ಮತಗಳು

  • ಡಿ. ಸುಧಾಕರ್ (ಕಾಂಗ್ರೆಸ್) – 64,858 ಮತಗಳು

  • ಡಿ. ಯಶೋಧರ (ಜೆಡಿಎಸ್) – 42,044 ಮತಗಳು

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com