

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನನ್ನ ನಡುವೆ ದೊಡ್ಡ ಮುನಿಸೂ ಇಲ್ಲ, ಸಣ್ಣ ಮುನಿಸೂ ಇಲ್ಲ. ಕೆಲವರು ನಮ್ಮ ನಡುವೆ ಮುನಿಸು ಇದೆ ಎಂಬ ವಾತಾವರಣ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಸಿಎಂ ಡಿ ಕೆ ಶಿವಕುಮಾರ್ ಸೋಮವಾರ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ರಾಜಕಾರಣದಲ್ಲಿ ನಿಂದಕರು ಇರಬೇಕು, ವಿರೋಧಿಗಳು ಇರಬೇಕು. ಅವರೆಲ್ಲ ಇದ್ದಾಗಲೇ ನಮ್ಮಂತಹವರು ಶುದ್ಧ ರಾಜಕಾರಣ ಮಾಡಲು ಸಾಧ್ಯ. ಸಿದ್ದರಾಮಯ್ಯ ಅವರು ನಮ್ಮ ನಾಯಕರು. ಮಹಾಸ್ವಾಮಿಗಳೂ ಸೇರಿದಂತೆ ಕೆಲವರು ಮಾಧ್ಯಮಗಳಲ್ಲಿ ವಿಭಿನ್ನ ರೀತಿಯಲ್ಲಿ ಬಿಂಬಿಸುತ್ತಿದ್ದಾರೆ. ಈ ವಿಚಾರಗಳಿಗೆ ಸಂಬಂಧಿಸಿದಂತೆ ನಾವು ಅವರಿಗೆ ತಿಳಿಸಬೇಕಾದ ವಿಷಯಗಳನ್ನು ಈಗಾಗಲೇ ತಿಳಿಸಿದ್ದೇವೆ ಎಂದರು.
ಸಿದ್ದರಾಮಯ್ಯ ನಮ್ಮ ನಾಯಕರು. ಸ್ಥಳೀಯ ಸಂಸ್ಥೆಗಳ ಚುನಾವಣೆ ಸಮೀಪಿಸುತ್ತಿದೆ. ಹೀಗಾಗಿ ಅವರ ಬಳಿ ಅನೇಕ ವಿಚಾರಗಳನ್ನು ಚರ್ಚೆ ಮಾಡಬೇಕಾದ್ದರಿಂದ ಅವರನ್ನು ಭೇಟಿ ಮಾಡಿ ಹಬ್ಬದ ಶುಭಾಶಯ ಕೋರಿದ್ದೇನೆ ಎಂದು ಹೇಳಿದರು.
ಮೇಖ್ರಿ ವೃತ್ತದ ಬಳಿ ಉದ್ದೇಶಿತ ಎಲಿವೇಟೆಡ್ ಕಾರಿಡಾರ್ ಹಾಗೂ ಸುರಂಗ ಮಾರ್ಗದ ಯೋಜನೆ ಕುರಿತು ಕೇಳಿದಾಗ, "ನಾವು ಸುರಂಗ ರಸ್ತೆ ನಿರ್ಮಿಸಿದರೂ ಪ್ರತಿಪಕ್ಷಗಳಿಗೆ ಆಕ್ಷೇಪ, ಎಲಿವೇಟೆಡ್ ಕಾರಿಡಾರ್ ನಿರ್ಮಿಸಿದರೂ ಆಕ್ಷೇಪ. ಅವರು ಯಾವಾಗಲೂ ನಕಾರಾತ್ಮಕವಾಗಿಯೇ ಯೋಚಿಸುತ್ತಾರೆ. ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಣೆಯಾಗಬೇಕಾದರೆ ಪರ್ಯಾಯ ಮಾರ್ಗಗಳನ್ನು ಕಲ್ಪಿಸಲೇಬೇಕು. ರಸ್ತೆಯನ್ನು ಮೇಲ್ಭಾಗದಲ್ಲಿ ನಿರ್ಮಿಸಬೇಕು ಅಥವಾ ಭೂಮಿಯೊಳಗೆ ಸುರಂಗ ಮಾರ್ಗ ಮಾಡಬೇಕು. ಕಟ್ಟಡಗಳನ್ನು ತೆರವುಗೊಳಿ ರಸ್ತೆ ಅಗಲ ಮಾಡಲು ಆಗುತ್ತದೆಯೇ ಎಂದು ಹೇಳಿದರು.
ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ರಸ್ತೆ ಅಗಲೀಕರಣಕ್ಕಾಗಿ ರಕ್ಷಣಾ ಇಲಾಖೆಯ ಜಾಗವನ್ನು ಕೇಳಲಾಗಿದೆ. ಈಗಾಗಲೇ ರಕ್ಷಣಾ ಸಚಿವರ ಬಳಿ ಮೇಖ್ರಿ ವೃತ್ತದ ಬಳಿಯ ಮೂಲೆಯಲ್ಲಿರುವ ಜಾಗವನ್ನು ನೀಡುವಂತೆ ಮನವಿ ಮಾಡಿದ್ದೇನೆ. ಆ ಜಾಗ ದೊರೆತರೆ ಅಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರಬಹುದು. ಒಂದು ವೃತ್ತದ ಸುತ್ತ ಮತ್ತೊಂದು ವೃತ್ತದ ಮಾದರಿಯಲ್ಲಿ ರೋಟರಿ ಸರ್ಕಲ್ ಹಾಗೂ ರಿಂಗ್ ವ್ಯವಸ್ಥೆ ರೂಪಿಸಲಾಗುವುದು. ಎಡಕ್ಕೆ ಹೋಗುವವರು ಎಡಕ್ಕೆ, ಬಲಕ್ಕೆ ಹೋಗುವವರು ಬಲಕ್ಕೆ ಸಾಗುವಂತೆ ವ್ಯವಸ್ಥೆ ಮಾಡಲಾಗುವುದು. ಮೇಲ್ಭಾಗದಲ್ಲಿ ಸಂಚಾರಕ್ಕೆ ಅವಕಾಶ ಕಲ್ಪಿಸುವುದರ ಜೊತೆಗೆ ಅಗತ್ಯವಿರುವ ಕಡೆ ಸುರಂಗ ಮಾರ್ಗವನ್ನೂ ಬಳಸಿಕೊಳ್ಳಲಾಗುವುದು ಎಂದು ವಿವರಿಸಿದರು.
ಕಾಮಗಾರಿ ವೇಳೆ ಯಾವುದೇ ರೀತಿಯ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವುದಿಲ್ಲ. ಸಂಚಾರ ಪೊಲೀಸರು ಈಗಾಗಲೇ ಯೋಜನೆಯನ್ನು ಪರಿಶೀಲಿಸಿದ್ದಾರೆ. ಇತ್ತೀಚೆಗೆ ಬಿಡಿಎ ಅಧ್ಯಕ್ಷರೂ ಸ್ಥಳ ಪರಿಶೀಲನೆ ನಡೆಸಿದ್ದಾರೆ. ನಾನೂ ಸ್ಥಳಕ್ಕೆ ಭೇಟಿ ನೀಡಿ, ಯಾವ ಭಾಗದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ ಎಂಬುದನ್ನು ಪರಿಶೀಲಿಸುವಂತೆ ಸೂಚಿಸಿದ್ದೇನೆ ಎಂದರು.
ಕಾಮಗಾರಿ ನಡೆಯುವ ಸಂದರ್ಭದಲ್ಲಿ ಕೆಲವು ದೊಡ್ಡ ವಾಹನಗಳು ಹಾಗೂ ಸರಕು ಸಾಗಣೆ ವಾಹನಗಳನ್ನು ಮಾತ್ರ ನಿರ್ದಿಷ್ಟ ಸಮಯದಲ್ಲಿ ತಾತ್ಕಾಲಿಕವಾಗಿ ತಡೆಹಿಡಿಯಲಾಗುತ್ತದೆ. ಉಳಿದ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.