

ಬೆಂಗಳೂರು: ನಾನು ಮುಖ್ಯಮಂತ್ರಿಯಾದ ಮೇಲೆ ಅವರಿಗೆ ಸಹಿಸಿಕೊಳ್ಳಲು ಏಕೆ ಸಾಧ್ಯವಾಗಲಿಲ್ಲ?. ನನ್ನ ಸರ್ಕಾರ ತೆಗೆಯಲು ಯಾರು ಏನು ಮಾಡಿದರು ಎಂಬುದೆಲ್ಲಾ ಈಗ ಕೇವಲ ಇತಿಹಾಸ. ಅದೆಲ್ಲವೂ ನನಗೆ ಗೊತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ತಿರುಗೇಟು ನೀಡಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ತಾವು ಯಾವತ್ತೂ ಕುಮಾರಸ್ವಾಮಿಯವರಿಗೆ ಕೆಟ್ಟದ್ದನ್ನು ಬಯಸಿಲ್ಲ ಎಂದು ಅವರು ಹೇಳಿರುವುದನ್ನು ನಾನು ಕೂಡ ಮಾಧ್ಯಮಗಳ ಮೂಲಕ ಗಮನಿಸಿದ್ದೇನೆ. ಆದರೆ, ಮೈತ್ರಿ ಸರ್ಕಾರದ ಕಾಲದಲ್ಲಿ ಅವರು ನನ್ನಿಂದ ಏನೇನು ಪಡೆದುಕೊಂಡರು ಮತ್ತು ಕೊನೆಗೆ ನನಗೆ ಏನನ್ನು ಬಳುವಳಿಯಾಗಿ ನೀಡಿದರು ಎಂಬುದು ನನಗಿಂತ ರಾಜ್ಯದ ಜನರಿಗೆ ಬಹಳ ಚೆನ್ನಾಗಿ ಗೊತ್ತಿದೆ ಎಂದು ಟಾಂಗ್ ಕೊಟ್ಟರು.
ನಾನು ಮುಖ್ಯಮಂತ್ರಿಯಾದ ಮೇಲೆ ಅವರಿಗೆ ಸಹಿಸಿಕೊಳ್ಳಲು ಏಕೆ ಸಾಧ್ಯವಾಗಲಿಲ್ಲ? ಹಳೆಯ ವಿಚಾರಗಳ ಬಗ್ಗೆ ಈಗ ಚರ್ಚೆ ಮಾಡುವುದು ಬೇಡ, ಯಾರು ಯಾರಿಗೆ ಏನು ಸಹಾಯ ಮಾಡಿದರು?. ನನ್ನ ಸರ್ಕಾರ ತೆಗೆಯಲು ಯಾರು ಏನು ಮಾಡಿದರು ಎಂಬುದೆಲ್ಲಾ ಈಗ ಕೇವಲ ಇತಿಹಾಸ. ಅದೆಲ್ಲವೂ ನನಗೆ ಗೊತ್ತಿದೆ ಎಂದರು.
ನನಗೇನು ಕೆಟ್ಟದ್ದು ಮಾಡಿಲ್ಲ ಎಂದು ಅವರು ಬಾಯಿ ಮಾತಿನಲ್ಲಿ ಹೇಳುತ್ತಿದ್ದಾರೆ. ಆದರೆ, ನಮ್ಮ ಪಕ್ಷದ ಶಾಸಕರನ್ನು ಸೆಳೆದುಕೊಳ್ಳಲು ಅವರು ಏನೆಲ್ಲಾ ಕುತಂತ್ರಗಳನ್ನು ನಡೆಸುತ್ತಿದ್ದಾರೆ ಎಂಬ ಮಾಹಿತಿಯು ನನಗಿದೆ. ಇಂತಹವರು ನನಗೆ ಒಳ್ಳೆಯದನ್ನು ಮಾಡಿದ್ದಾರೆ ಎಂದರೆ ನಂಬಲು ಸಾಧ್ಯವೇ? ಒಳಗೊಂದು ಹೊರಗೊಂದು ಇಂತಹ ಇಬ್ಬಗೆಯ ನೀತಿಯ ಜನರನ್ನ ನಂಬಲು ಸಾಧ್ಯವೇ? ಎಂದು ಪ್ರಶ್ನಿಸಿದರು.
ಪಕ್ಷವನ್ನು ಬಿಟ್ಟು ಕಾಂಗ್ರೆಸ್ ಸೇರಿದ್ದ 30-40 ಜನತಾ ಪರಿವಾರದ ನಾಯಕರು ವಾಪಸ್ ಮಾತೃಪಕ್ಷಕ್ಕೆ ಬಂದರೆ ನಾನು ಸ್ವಾಗತಿಸುತ್ತೇನೆ. ಸದ್ಯದ ಸರ್ಕಾರ ನಡೆಯುತ್ತಿರುವ ರೀತಿ ಹಾಗೂ ಕಾಂಗ್ರೆಸ್ ಪಕ್ಷದ ನಾಯಕತ್ವದ ವಿರುದ್ಧ ತೀವ್ರ ಅತೃಪ್ತಿ ಹೊಂದಿರುವ ಅನೇಕ ನಾಯಕರು ಜೆಡಿಎಸ್ಗೆ ವಾಪಸ್ ಆಗುವ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ ಎಂದರು.
ಯಾರು ಬರುತ್ತಾರೆ? ಯಾರು ಹೋಗುತ್ತಾರೆ? ಎಂಬ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ, ಪಕ್ಷವನ್ನು ಸಂಘಟನೆ ಮಾಡುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದೇನೆ. ಅದು ನನ್ನ ಜವಾಬ್ದಾರಿ. ನನ್ನ ಕೈಯಲ್ಲಾದ ಮಟ್ಟಿಗೆ ರಾಜ್ಯಕ್ಕೆ ಒಳ್ಳೆಯದನ್ನು ಮಾಡುವುದಕ್ಕೆ ಪ್ರಯತ್ನ ಮಾಡುತ್ತಾ ಬಂದಿದ್ದೇನೆ ಎಂದು ಕುಮಾರಸ್ವಾಮಿ ತಿಳಿಸಿದರು.
ರಾಜ್ಯ ಸರ್ಕಾರವು NDRF ಅನುದಾನದ ವಿಚಾರದಲ್ಲಿ ಸದಾ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುವುದು ಸರಿಯಲ್ಲ. ಕೇಂದ್ರದ ಮುಂದೆ ಹೋಗಿ ಅನುದಾನ ತರಬೇಕಾಗಿರುವುದು ರಾಜ್ಯ ಸರ್ಕಾರದ ಜವಾಬ್ದಾರಿ. ತಾವು ಎರಡು ಬಾರಿ ಮುಖ್ಯಮಂತ್ರಿಯಾಗಿ, ಯುಪಿಎ ಹಾಗೂ ಎನ್ಡಿಎ ಸರ್ಕಾರಗಳಿದ್ದಾಗಲೂ ಕೆಲಸ ಮಾಡಿದ್ದರೂ, ಪ್ರತಿಯೊಂದು ವಿಚಾರಕ್ಕೂ ಕೇಂದ್ರವನ್ನು ದೂರಿರಲಿಲ್ಲ ಎಂದರು.
ರೈತರ ಪರಿಹಾರದ ವಿಚಾರದಲ್ಲಿ ಸರ್ಕಾರದ ನಿರ್ಲಕ್ಷ್ಯ: ಬರಗಾಲ ಅಥವಾ ಬೆಳೆ ಹಾನಿಗೆ ಸಂಬಂಧಿಸಿದಂತೆ ರೈತರಿಗೆ ನೀಡಬೇಕಾದ ಪರಿಹಾರದ ಹಣದಲ್ಲಿ ₹2500 ಮೊತ್ತಕ್ಕೆ ಬದಲಿಗೆ ಕೇವಲ ₹1000 ನೀಡುತ್ತಿರುವುದರ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಾ, ರಾಜ್ಯದ ರೈತರೇನು ಭಿಕ್ಷುಕರೇ? ಎಂದು ಖಾರವಾಗಿ ಪ್ರಶ್ನಿಸಿದರು.