

ಬೆಂಗಳೂರು: ರಾಜ್ಯ ಸರ್ಕಾರ ಇತ್ತೀಚಿಗೆ ಹಲವು ನಿಗಮ ಮಂಡಳಿಗಳಿಗೆ ನಿರ್ದೇಶಕರು ಮತ್ತು ಸದಸ್ಯರನ್ನು ನೇಮಕ ಮಾಡಿದ್ದು, ಹಲವು ಆರ್ ಎಸ್ಎಸ್ ಕಾರ್ಯಕರ್ತರಿಗೆ ಅವಕಾಶ ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು, ಒಂದೆರಡು ಅಚಾತುರ್ಯ ಆಗಿರುತ್ತದೆ, ಅದನ್ನು ಸರಿ ಮಾಡಿಕೊಳ್ಳುತ್ತೇವೆ. ಈ ಬಗ್ಗೆ ಈಗಾಗಲೇ ಕೆಲವರಿಗೆ ನಾವು ನಿರ್ದೇಶನ ನೀಡಿದ್ದೇವೆ. ಅವರು ಮುಂದೆ ರಾಜೀನಾಮೆ ಕೊಡಬೇಕು ಎಂದರು.
ಆರ್ಎಸ್ಎಸ್ ಹಿನ್ನೆಲೆ ಯಾರ್ಯಾರಿಗೆ ಇದೆ ಅಂತ ತನಿಖೆ ಮಾಡುತ್ತಿದ್ದೇವೆ. ಅಂತವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಅಥವಾ ಸರ್ಕಾರವೇ ಅವರಿಗೆ ನೀಡಿರುವ ಸ್ಥಾನ ಮಾನ ರದ್ದು ಮಾಡಬೇಕು. ಆರ್ಎಸ್ಎಸ್ ನಂಟು ಇರುವಂತವರಿಗೆ ನೀಡಿರುವ ಹುದ್ದೆಯನ್ನು ವಾಪಸ್ ಪಡೆಯಬೇಕು ಎಂದು ನಾವು ಈಗಾಗಲೇ ಹೇಳಿದ್ದೀವೆ ಎಂದರು.
ನಾವು ಸುಮಾರು 400 ಕ್ಕೂ ಹೆಚ್ಚು ನೇಮಕ ಮಾಡಿದ್ದೀವಿ. ಒಂದೆರಡು ಅಚಾತುರ್ಯ ಆಗಿರುತ್ತದೆ, ಅದನ್ನು ಸರಿ ಮಾಡಿಕೊಳ್ಳುತ್ತೇವೆ. ಇನ್ನೂ ಎರಡು ಪಟ್ಟಿ ಬರುತ್ತದೆ, ಅದರಲ್ಲಿ ಎಲ್ಲರಿಗೂ ಸಹ ಅವಕಾಶ ಮಾಡತಕ್ಕಂತಹ ಪ್ರಯತ್ನವನ್ನು ನಾವು ಮಾಡುತ್ತೇವೆ ಎಂದರು.