

ಬೆಂಗಳೂರು: ಎಂಎಲ್ ಸಿ ಚುನಾವಣೆಯಲ್ಲಿ ಸೋಲು ಕಂಡಿದ್ದ ಕಾಂಗ್ರೆಸ್ ಪಕ್ಷವನ್ನು ಮತ್ತೆ ಹಿರಿಯೂರು ಉಪಚುನಾವಣೆಯಲ್ಲಿ ಮಣಿಸಲು ಬಿಜೆಪಿ-ಜೆಡಿಎಸ್ ತಂತ್ರ ರೂಪಿಸುತ್ತಿವೆ. ಆದರೆ ಈ ಮಧ್ಯೆ ಮೈತ್ರಿಯಲ್ಲಿ ಟಿಕೆಟ್ ವಿಷಯವಾಗಿ ಗೊಂದಲ ಮೂಡಿರುವುದು ನಾಯಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಮಾಜಿ ಸಚಿವ ಡಿ.ಸುಧಾಕರ್ ನಿಧನದಿಂದ ತೆರವಾಗಿರುವ ಕ್ಷೇತ್ರ ಉಳಿಸಿಕೊಳ್ಳಲು ಕಾಂಗ್ರೆಸ್ ರಣತಂತ್ರ ನಡೆಸುತ್ತಿದ್ದರೆ, ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಗೊಂದಲ ಶುರುವಾಗಿದೆ.
ಒಂದೆಡೆ ತನ್ನ ಅಭ್ಯರ್ಥಿಯನ್ನೇ ಕಣಕ್ಕಿಳಿಸಲು ಬಿಜೆಪಿ ಲೆಕ್ಕಾಚಾರ ಹಾಕುತ್ತಿದ್ದರೆ, ಇನ್ನೊಂದೆಡೆ ಬಿಜೆಪಿ ಮಿತ್ರಪಕ್ಷ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಚಿಂತನೆ ನಡೆಸಿದೆ. ಮಿತ್ರ ಪಕ್ಷಗಳ ನಾಯಕರು ಟಿಕೆಟ್ ವಿಷಯವಾಗಿ ಬಹಿರಂಗವಾಗಿಯೇ ಹೇಳಿಕೆ ನೀಡುತ್ತಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಸ್ವತಃ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ಹಿರಿಯೂರು ಟಿಕೆಟ್ ಬಿಜೆಪಿಗೆ ನೀಡಬೇಕೆನ್ನುವ ವಿಪಕ್ಷ ನಾಯಕ ಆರ್ ಅಶೋಕ್ ಮಾತಿಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಪರಿಸ್ಥಿತಿ ಏನು ಎಂಬುದನ್ನು ಬಿಜೆಪಿ ನಾಯಕರು ಅರ್ಥೈಸಿಕೊಳ್ಳಬೇಕು. ಉಪಚುನಾವಣೆಯಲ್ಲಿ ಅಭ್ಯರ್ಥಿ ಹಾಕುವ ಬಗ್ಗೆ ನನಗೆ ಪ್ರತಿಷ್ಠೆ ಇಲ್ಲ. ಆ ಚುನಾವಣೆ ಗೆದ್ದರೇ ರಾಜ್ಯದಲ್ಲಿ ಮುಂದಿನ ಭವಿಷ್ಯ ಇದೆ. ಜನ ಏನು ನಿರೀಕ್ಷೆ ಮಾಡುತ್ತಿದ್ದಾರೆ ಅದನ್ನು ಪ್ರೋತ್ಸಾಹ ಮಾಡಬೇಕು. ಇಲ್ಲಿ ಬಿಜೆಪಿ-ಜೆಡಿಎಸ್ನಿಂದ ನಿಲ್ಲಬೇಕು ಎಂಬುದು ಪ್ರಶ್ನೆ ಅಲ್ಲ. ಜನಾಭಿಪ್ರಾಯ ಸಂಗ್ರಹ ಮಾಡುವುದು ಎರಡು ಪಕ್ಷಗಳ ಜವಾಬ್ದಾರಿ. ನಾನು ಮಾತನಾಡಲು ತಯಾರಿದ್ದೇನೆ ಎಂದಿದ್ದಾರೆ.
ಹಿರಿಯೂರು ಟಿಕೆಟ್ ನಮ್ಮ ಪಕ್ಷಕ್ಕೆ ನೀಡಬೇಕು. ಟಿಕೆಟ್ ಕುರಿತು ಕೇಂದ್ರ ಸಚಿವ ಕುಮಾರಸ್ವಾಮಿ ಜೊತೆ ಮಾತನಾಡುತ್ತೇವೆ. ಜೆಡಿಎಸ್ ಜೊತೆ ಕೇಂದ್ರ ನಾಯಕರು ಕೂಡ ಚರ್ಚೆ ಮಾಡ್ತಾರೆ. ಜೆಡಿಎಸ್ ಮನವೊಲಿಸಿ ನಮ್ಮ ಪಕ್ಷಕ್ಕೇ ಟಿಕೆಟ್ ಕೊಡುವ ವಿಶ್ವಾಸವಿದೆ. ಸದ್ಯ ನಾವು ಬಿಜೆಪಿಗೇ ಟಿಕೆಟ್ ನೀಡಬೇಕೆಂದು ನಿರ್ಧರಿಸಿದ್ದೇವೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದರು.