‘Kissa kursi ka’: ಮೊದಲ ಸಾಲಿನಲ್ಲಿ ಡಿಕೆಶಿ, ಐದನೇ ಸಾಲಿನಲ್ಲಿ ಸಿದ್ದು? ಸೋನಿಯಾ ಕಾರ್ಯಕ್ರಮದಲ್ಲಿ ಅವಮಾನ..? ಆಸನ ವಿವಾದಕ್ಕೆ 'ಕೈ' ಕಮಾಂಡ್ ಕೊಟ್ಟ ಸ್ಪಷ್ಟನೆಯೇನು..?

ಹಿರಿಯ ನಾಯಕ ಹಾಗೂ ಅಹಿಂದ (ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ದಲಿತರು) ಚಳವಳಿಯ ಪ್ರಮುಖ ಮುಖವಾಗಿರುವ ಸಿದ್ದರಾಮಯ್ಯ ಅವರನ್ನು ಐದನೇ ಸಾಲಿನಲ್ಲಿ ಕೂರಿಸಿದ್ದು ಏಕೆ?
Siddaramaiah in back seat
ಹಿಂದಿನ ಸಾಲಿನಲ್ಲಿ ಕುಳಿತಿರುವ ಸಿದ್ದರಾಮಯ್ಯ
Updated on: 

ಬೆಂಗಳೂರು: ನವದೆಹಲಿಯಲ್ಲಿ ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' ಆತ್ಮಕಥನ ಬಿಡುಗಡೆ ಕಾರ್ಯಕ್ರಮದಲ್ಲಿ ಆಸನ ವ್ಯವಸ್ಥೆ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಐದನೇ ಸಾಲಿನಲ್ಲಿ ಆಸನ ಕಲ್ಪಿಸಿದ್ದನ್ನು ಮುಂದಿಟ್ಟುಕೊಂಡು ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹಿಂದುಳಿದ ವರ್ಗಗಳಿಗೆ ಕಾಂಗ್ರೆಸ್ ಅವಮಾನ ಮಾಡಿದೆ ಎಂದು ಆರೋಪಿಸಿದ್ದಾರೆ.

ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಈ ವಿಚಾರವಾಗಿ ಪ್ರಶ್ನೆ ಎತ್ತಿದ್ದು, ಹಿರಿಯ ನಾಯಕ ಹಾಗೂ ಅಹಿಂದ (ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ದಲಿತರು) ಚಳವಳಿಯ ಪ್ರಮುಖ ಮುಖವಾಗಿರುವ ಸಿದ್ದರಾಮಯ್ಯ ಅವರನ್ನು ಐದನೇ ಸಾಲಿನಲ್ಲಿ ಕೂರಿಸಿದ್ದು ಏಕೆ ಎಂದು ಪ್ರಶ್ನಿಸಿದ್ದಾರೆ.

ಇದೇ ವೇಳೆ ಬಲಪಂಥೀಯ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲೂ ಈ ವಿಚಾರ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಸಚಿವರಾದ ಎಂ.ಬಿ. ಪಾಟೀಲ್, ಎಚ್.ಸಿ. ಬಾಲಕೃಷ್ಣ, ಜಿ. ಪರಮೇಶ್ವರ್ ಸೇರಿದಂತೆ ಹಲವು ನಾಯಕರು ಸಿದ್ದರಾಮಯ್ಯ ಅವರ ಬೆಂಬಲಕ್ಕೆ ನಿಂತಿದ್ದಾರೆ.

ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಬಳಿಕ ಸಿದ್ದರಾಮಯ್ಯ ಅವರನ್ನು ಎರಡನೇ ಸಾಲಿಗೆ ಕರೆತಂದು ಕೂರಿಸಿದರು. ಅಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕುಳಿತಿದ್ದರು ಎಂದು ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ.

ಇದೇ ವೇಳೆ ಸಿದ್ದರಾಮಯ್ಯ ಅವರನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸುವ ಪ್ರಯತ್ನ ನಡೆದಿಲ್ಲ ಎಂದು ಅವರ ಆಪ್ತ ಮೂಲಗಳು ಸ್ಪಷ್ಟಪಡಿಸಿವೆ.

ಕಾರ್ಯಕ್ರಮಕ್ಕೆ ಅವರು ತಡವಾಗಿ ಆಗಮಿಸಿದ್ದರು. ಅಷ್ಟರಲ್ಲಾಗಲೇ ಮೊದಲ ಸಾಲಿನ ಬಹುತೇಕ ಆಸನಗಳು ಭರ್ತಿಯಾಗಿದ್ದವು ಎಂದು ಸಮರ್ಥಿಸಿಕೊಂಡಿವೆ.

Siddaramaiah in back seat
ಸೋನಿಯಾ ಗಾಂಧಿ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕಡೆಗಣಿಸಲಾಯಿತೇ: ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆಯೇನು?

ಕಾರ್ಯಕ್ರಮದಲ್ಲಿ ತಾವೂ ಉಪಸ್ಥಿತರಿದ್ದೆ ಎಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ರಾಜ್ಯಸಭಾ ಸಂಸದ ಡಾ. ಸಯ್ಯದ್ ನಾಸಿರ್ ಹುಸೇನ್ ತಿಳಿಸಿದ್ದಾರೆ.

ಸಿದ್ದರಾಮಯ್ಯ ಅವರು ಬಂದಾಗ ಸಾಕಷ್ಟು ತಡವಾಗಿತ್ತು. ಸಭಾಂಗಣವೂ ದೊಡ್ಡದಾಗಿರಲಿಲ್ಲ. ಅಷ್ಟರಲ್ಲಾಗಲೇ ಅತಿಥಿಗಳು ತಮ್ಮ ಆಸನಗಳಲ್ಲಿ ಕುಳಿತಿದ್ದರು ಎಂದು ಹೇಳಿದ್ದಾರೆ.

ಈ ವಿವಾದಕ್ಕೆ ಕಾಂಗ್ರೆಸ್ ನೀಡಿರುವ ವಿವರಣೆ ಸರಳವಾಗಿ ಕಂಡರೂ, ಕರ್ನಾಟಕದ ರಾಜಕೀಯದಲ್ಲಿ ಇದು ಮಹತ್ವ ಪಡೆದುಕೊಂಡಿದೆ. ಏಕೆಂದರೆ ಇಲ್ಲಿ ಜಾತಿ ಸಮೀಕರಣ ಮತ್ತು ನಾಯಕರ ನಡುವಿನ ಸ್ಥಾನಮಾನಗಳು ಸೂಕ್ಷ್ಮ ವಿಚಾರಗಳಾಗಿವೆ.

ಸಚಿವ ಈಶ್ವರ್ ಖಂಡ್ರೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಅವರು ಜನನಾಯಕರಾಗಿದ್ದಾರೆ. ನಮ್ಮೆಲ್ಲರ ಹೃದಯದಲ್ಲೂ ಅವರಿಗೆ ವಿಶೇಷ ಸ್ಥಾನವಿದೆ. ಇಂತಹ ದೊಡ್ಡ ಕಾರ್ಯಕ್ರಮಗಳಲ್ಲಿ ಆಸನ ವ್ಯವಸ್ಥೆಯನ್ನು ಸಂಘಟಕರು ನಿರ್ಧರಿಸುತ್ತಾರೆ. ಅದನ್ನೇ ಮುಂದಿಟ್ಟುಕೊಂಡು ನಾಯಕರು ಕುಳಿತ ಆಸನಗಳ ಬಗ್ಗೆ ಟೀಕೆ ಮಾಡುವುದು ಅತ್ಯಂತ ದುರದೃಷ್ಟಕರ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಅವರ ರಾಜಕೀಯ ಶಕ್ತಿ ಅಹಿಂದ ಸಮುದಾಯದ ಬೆಂಬಲದೊಂದಿಗೆ ನಿಕಟ ಸಂಬಂಧ ಹೊಂದಿದೆ. ಹೀಗಾಗಿ ಅವರಿಗೆ ಅಗೌರವ ತೋರಲಾಗಿದೆ ಎಂಬ ಭಾವನೆ ಮೂಡಿದರೆ, ಹಿಂದುಳಿದ ವರ್ಗಗಳ ಬಗ್ಗೆ ಕಾಂಗ್ರೆಸ್ ಹೊಂದಿರುವ ಬದ್ಧತೆಯನ್ನು ಪ್ರಶ್ನಿಸಲು ಬಿಜೆಪಿಗೆ ಅವಕಾಶ ಸಿಗುತ್ತದೆ ಎಂಬ ವಿಶ್ಲೇಷಣೆಗಳಿವೆ.

ಇದರ ನಡುವೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ಸಂಬಂಧದ ಬಗ್ಗೆಯೂ ನಿರಂತರ ಚರ್ಚೆಗಳು ನಡೆಯುತ್ತಿವೆ.

ಇಬ್ಬರು ನಾಯಕರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಸಂದರ್ಭಗಳು ಹಾಗೂ ಅವರ ನಡುವಿನ ಪ್ರತಿಯೊಂದು ನಡೆ, ನುಡಿಗಳನ್ನೂ ರಾಜಕೀಯ ದೃಷ್ಟಿಯಿಂದ ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ.

ಸಿದ್ದರಾಮಯ್ಯ ತಡವಾಗಿ ಬಂದಿದ್ದರಿಂದ ಐದನೇ ಸಾಲಿನಲ್ಲಿ ಆಸನ ನೀಡಲಾಗಿತ್ತೇ ಅಥವಾ ಶಿಷ್ಟಾಚಾರದ ನಿರ್ವಹಣೆಯಲ್ಲಿ ಲೋಪವಾಗಿತ್ತೇ ಎಂಬ ಚರ್ಚೆ ಮುಂದುವರಿದಿದೆ. ಕರ್ನಾಟಕದ ಜಾತಿ ರಾಜಕಾರಣದ ಹಿನ್ನೆಲೆಯಲ್ಲಿ ಒಂದು ಆಸನದ ವಿಚಾರವೂ ದೊಡ್ಡ ರಾಜಕೀಯ ವಿವಾದವಾಗಿ ರೂಪುಗೊಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X