

ಬೆಳಗಾವಿ: ಲಕ್ಷ್ಮಣ ಸವದಿ ಬಿಜೆಪಿಗೆ ಬರುವುದಿಲ್ಲ. ಬಿಜೆಪಿಯಲ್ಲಿದ್ದಾಗ ಚುನಾವಣೆಯಲ್ಲಿ ಸೋತು ಮನೆಯಲ್ಲಿ ಕುಳಿತಾಗ ಕರೆದು ಡಿಸಿಎಂ ಸ್ಥಾನ ನೀಡಿದವರಿಗೆ ಅವಮಾನವಾಗಿದೆ. ಈಗ ಅವರೇ ವಿರೋಧ ಮಾಡುತ್ತಿದ್ದಾರೆ.
ಅದೇ ರೀತಿ ನನಗೂ ಕಾಂಗ್ರೆಸ್ ಪಕ್ಷದಿಂದ ಮೇಲಿಂದ ಮೇಲೆ ಆಫರ್ ಬರುತ್ತಿವೆ. ಆದರೆ, ನಾನು ಕಾಂಗ್ರೆಸ್‌ಗೆ ಹೋಗಲ್ಲ. 2028ರ ಚುನಾವಣೆಯಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇವೆ ಎಂದು ಮಾಜಿ ಸಚಿವ, ಶಾಸಕ ರಮೇಶ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.
ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ ಅವರು ತಮ್ಮ ಪಕ್ಷ ಬದಲಾವಣೆ ಕುರಿತ ಊಹಾಪೋಹಗಳಿಗೆ ಸ್ಪಷ್ಟ ಉತ್ತರ ನೀಡಿದ್ದಾರೆ. ಒಂದು ವೇಳೆ ಹಾಗೆ ಹೋದರೆ ಅಲ್ಲಿ ತಮಗೆ ಯಾವುದೇ ಕಿಮ್ಮತ್ತು ಉಳಿಯುವುದಿಲ್ಲ ಎಂದು ಹೇಳಿದ್ದಾರೆ. ತಮ್ಮ ರಾಜಕೀಯ ನಿಲುವಿನ ಬಗ್ಗೆ ಬಹಳ ದಿನಗಳಿಂದ ನಡೆಯುತ್ತಿದ್ದ ಚರ್ಚೆಗೆ ಈ ಮೂಲಕ ಅವರು ತೆರೆ ಎಳೆದಿದ್ದಾರೆ.
ತಮಗೆ ಬೇಡ ಎಂದ ಮೇಲೆ ಅಲ್ಲಿಗೆ ಹೋಗಿ ಏನು ಮಾಡುವುದು ಎಂಬ ಪ್ರಶ್ನೆಯನ್ನು ಅವರು ಕಾರ್ಯಕರ್ತರ ಮುಂದೆ ಇಟ್ಟಿದ್ದಾರೆ. ಹೇಗೋ ತಮಗೆ ಮತ್ತು ತಮ್ಮ ಜೊತೆಗಿರುವವರಿಗೆ ಗೌರವ ಇರುವ ಕಡೆ ಇರಬೇಕು ಎಂಬುದು ತಮ್ಮ ಅಭಿಪ್ರಾಯ ಎಂದು ಅವರು ಹೇಳಿದ್ದಾರೆ.
ಅಥಣಿ ಕ್ಷೇತ್ರದ ಬಿಜೆಪಿ ನಾಯಕರಲ್ಲಿ ಯಾವುದೇ ಭಿನಾಭಿಪ್ರಾಯಗಳಿಲ್ಲ. ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಮುಖಂಡರ ಆಂತರಿಕ ಸಮಸ್ಯೆಯಿಂದ ಹಿನ್ನಡೆಯಾಗಿದೆ. ಆಡಳಿತ ಪಕ್ಷದ ವೈಫಲ್ಯ ಖಂಡಿಸಿ ಪ್ರತಿಭಟನೆ ಮಾಡಿದರೆ ಮಾತ್ರ ಪಕ್ಷದ ಮುಖಂಡರು ಕ್ರಿಯಾಶೀಲರಾಗಿದ್ದಾರೆ ಎಂದು ಭಾವಿಸುವುದು ತಪ್ಪು.
ಕೆಲವು ಸಂದರ್ಭದಲ್ಲಿ ಸೈಲೆಂಟ್ ತಂತ್ರವನ್ನೇ ಅನುಸರಿಸಿ ಗೆಲುವು ಸಾಧಿಸಿದ್ದೇವೆ. ಜಿ.ಪಂ, ತಾ.ಪಂ ಚುನಾವಣೆಗಳನ್ನು ಗೆಲ್ಲುತ್ತೇವೆ. 2028ರ ವಿಧಾನಸಭಾ ಚುನಾವಣೆಯಲ್ಲಿ ಅಥಣಿ ಮತ್ತು ಕಾಗವಾಡ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವುದು ಪಕ್ಕಾ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ಕಾಗವಾಡ ಮತಕ್ಷೇತ್ರದ ಬಗ್ಗೆ ಶಾಸಕ ರಾಜು ಕಾಗೆ ಅವರ ಜೊತೆ ಈಗಾಗಲೇ ಮಾತನಾಡಿದ್ದೇವೆ. ಈ ಕ್ಷೇತ್ರವನ್ನು ಸುಲಭವಾಗಿ ಗೆಲ್ಲುತ್ತೇವೆ. ಇನ್ನು ಅಥಣಿ ರಾಜಕೀಯ ಲೆಕ್ಕಾಚಾರವನ್ನು ನಾವು ಗೋಕಾಕನಲ್ಲಿ ನಡೆದ ಅನೇಕ ಸಭೆಗಳಲ್ಲಿ ಚರ್ಚಿಸಿದ್ದೇವೆ. ಇಲ್ಲಿ ನಾವು ಅನೇಕ ಸಭೆಗಳನ್ನು ಮಾಡುವುದರಿಂದ ಲಕ್ಷ್ಮಣ ಸವದಿ ಎಚ್ಚರವಾಗುತ್ತಾನೆ. ಆದ್ದರಿಂದ, ನಾವು ಸೈಲೆಂಟ್ ತಂತ್ರವನ್ನು ಅನುಸರಿಸಿದ್ದೇವೆ. ಆಗಾಗ, ನಮ್ಮ ಕಾರ್ಯಕರ್ತರಿಗೆ ಮತ್ತು ಮುಖಂಡರಿಗೆ ಧೈರ್ಯ ತುಂಬಲು ನಾನು ಬರುತ್ತೇನೆ ಎಂದರು.
ತಮ್ಮ ನಿರ್ಧಾರದ ಹಿಂದೆ ಸ್ವಾಭಿಮಾನ ಮತ್ತು ಕಾರ್ಯಕರ್ತರ ಹಿತವಿದೆ ಎಂದು ಅವರು ಮಾತಿನ ಮೂಲಕ ತಿಳಿಸಿದ್ದಾರೆ. ಒಂದು ಬಾರಿ ಹೊರಬಂದ ಮೇಲೆ ಮತ್ತೆ ಹಿಂದಕ್ಕೆ ಹೋಗುವುದು ಸರಿಯಲ್ಲ ಎಂಬ ಸಂದೇಶವನ್ನು ಅವರು ನೀಡಿದ್ದಾರೆ.
ಲಕ್ಷ್ಮಣ ಸವದಿ ಮಂತ್ರಿಯಾದ ನಂತರ ಗೋಕಾಕ ಸಾಹುಕಾರ ಅಥಣಿಗೆ ಬರುವುದನ್ನು ನಿಲ್ಲಿಸಿದ್ದಾರೆ ಅಂದುಕೊಂಡರೆ ಅದು ತಪ್ಪು. ನಾನು ಯಾರಿಗೆ ಹೆದರುವ ಮಗನೇ ಅಲ್ಲ. ನಮ್ಮ ಕಾರ್ಯಕರ್ತರು ಕೂಡ ಯಾರಿಗೆ ಹೆದರುವ ಅಗತ್ಯವಿಲ್ಲ. ಜಿಪಂ, ತಾಪಂ ಚುನಾವಣೆಗಳನ್ನು ಗೆಲ್ಲುವ ನಿಟ್ಟಿನಲ್ಲಿ ಮುಖಂಡರೊಂದಿಗೆ ಅನೇಕ ಸಭೆಗಳನ್ನು ಮಾಡಿದ್ದೇವೆ.
ಜಿಲ್ಲಾ ಪಂಚಾಯತ ಕ್ಷೇತ್ರಗಳಲ್ಲಿ ಕಾರ್ಯಕರ್ತರ ಸಭೆಗಳನ್ನು ನಡೆಸುವ ಮೂಲಕ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸೋಣ ಎಂದು ಶಾಸಕ, ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಇನ್ನೂ ಸಿದ್ದರಾಮಯ್ಯ ಅವರೊಂದಿಗೆ ನಮ್ಮ ವಯಕ್ತಿಕ ಸಂಬಂಧ ಚೆನ್ನಾಗಿದೆ, ಅವರು ಯಾವಾಗಲೂ ನಮ್ಮ ನಾಯಕರೆ ಪಕ್ಷ ಬೇರೆ ಇದ್ದರೂ, ಸಿದ್ದರಾಮಯ್ಯ ಅವರೊಂದಿಗೆ ವಯಕ್ತಿಕ ಸಂಬಂಧ ಚೆನ್ನಾಗಿದೆ, ಪಕ್ಷದ ವೇದಿಕೆಯಲ್ಲಿ ಪಕ್ಷದ ಪರವಾಗಿ ಮಾತನಾಡುತ್ತೇವೆ ಎಂದಿದ್ದಾರೆ.
ವಯಕ್ತಿಕವಾಗಿ ಸಿದ್ದರಾಮಯ್ಯ ಯಾವಾಗಲೂ ನಮ್ಮ ನಾಯಕರೇ, ಅವರೊಂದಿಗೆ ಖಾಸಗಿಯಾಗಿ ಭೇಟಿಯಾಗಿದ್ದು, ಯಾವುದೇ ರಾಜಕೀಯ ಚರ್ಚೆ ನಡೆಸಿಲ್ಲ. ಹಿಂದುಳಿದ ವರ್ಗಗಳ ನಾಯಕರಿಗೆ ಅಪಮಾನ ಮಾಡಿದರೇ ಅವರನ್ನು ನಂಬಿರುವ ಜನರು ಮತ್ತು ಅವರ ವೋಟ್ ಬ್ಯಾಂಕ್ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಲಿದ್ದಾರೆ.