

ರಾಮನಗರ: ಚುನಾವಣಾ ಆಯೋಗದ ಎದುರು ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕರು ನಡೆಸುತ್ತಿರುವ ಧರಣಿಯು ಸೋಲಿನ ಭಯದಿಂದ ಮಾಡುತ್ತಿರುವ ಹತಾಶೆಯ ನಾಟಕ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ರಾಮನಗರದಲ್ಲಿ ಬೆಂಗಳೂರು ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲಾ ಎನ್‌ಡಿಎ ಮೈತ್ರಿಕೂಟದ ಪ್ರಮುಖರ ಸಮನ್ವಯ ಸಭೆಯು ಇಲ್ಲಿನ ಆರ್.ವಿ.ಸಿ.ಎಸ್ ಕಲ್ಯಾಣ ಮಂಟಪದಲ್ಲಿ ನಡೆಯಿತು.
ನಂತರ ಮಾತನಾಡಿದ ಅವರು, ಚುನಾವಣಾ ಆಯೋಗ ಒಂದು ಸ್ವತಂತ್ರ, ನಿಷ್ಪಕ್ಷಪಾತ ಮತ್ತು ಸಂವಿಧಾನಬದ್ಧ ಸಂಸ್ಥೆ. ದೇಶದಲ್ಲಿ ಹಲವು ರಾಜ್ಯಗಳಲ್ಲಿ ಎಸ್.ಐ.ಆರ್ ಪ್ರಕ್ರಿಯೆಯು ಬಹಳ ಚೆನ್ನಾಗಿ, ಅಚ್ಚುಕಟ್ಟಾಗಿ ಮತ್ತು ಪಾರದರ್ಶಕವಾಗಿ ನಡೆದಿದೆ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಈಗ ಸೋಲಿನ ಭಯ ಶುರುವಾಗಿದೆ ಎಂದರು.
ಕಾಂಗ್ರೆಸ್ ಪಕ್ಷವು ಬ್ಯಾಕ್ ಟು ಬ್ಯಾಕ್ ಚುನಾವಣೆಗಳಲ್ಲಿ ಹೀನಾಯ ಸೋಲು ಕಂಡು ಸಂಪೂರ್ಣ ಹತಾಶೆಗೊಂಡಿದೆ. ಇಡೀ ದೇಶದಲ್ಲಿ ಕಾಂಗ್ರೆಸ್ ಹೈಕಮಾಂಡ್ ಗೆ ಉಳಿದಿರುವುದು ಕರ್ನಾಟಕ ಒಂದೇ ರಾಜ್ಯ. ಆ ಒಂದು ರಾಜ್ಯವನ್ನು ಉಳಿಸಿಕೊಳ್ಳಲು ಈಗ ಇಲ್ಲಿ ಹೋರಾಟ, ಧರಣಿ ನಾಟಕ ಮಾಡುತ್ತಿದೆ.
ರಾಜ್ಯದಲ್ಲೂ ಇವರಿಗೆ ಸೋಲಿನ ಭಯ ಶುರುವಾಗಿರುವುದರಿಂದಲೇ ಈಗ ಭಾರತ್ ಜೋಡೋ 2.O ಹೆಸರಿನಲ್ಲಿ ಮತ್ತೆ ಜನರನ್ನು ದಾರಿ ತಪ್ಪಿಸಲು ಹೊರಟಿದ್ದಾರೆ ಎಂದು ತಿಳಿಸಿದರು. ಎಲ್ಲೆಲ್ಲಿ ಚುನಾವಣೆಗಳಲ್ಲಿ ಸೋಲ್ತಾರೋ ಅಲ್ಲೆಲ್ಲಾ SIR ಖ್ಯಾತೆ ಮಾಡ್ತಾರೆ, ಕೇರಳದಲ್ಲಿ ಸರ್ಕಾರ ಯಾವುದು ಬಂತು. ಕಾಂಗ್ರೆಸ್ ಆಡಳಿತವಿರುವ ರಾಜ್ಯದಲ್ಲಿ ಎಸ್ ಐ ಆರ್ ಚೆನ್ನಾಗಿದ್ಯಾ ಎಂದು ಪ್ರಶ್ನಿಸಿದ್ದಾರೆ.
ಅಭ್ಯರ್ಥಿ ಯಾರೇ ಇರಲಿ ತಂತ್ರಕ್ಕೆ ರಣತಂತ್ರ ಮಾಡಿದ್ದೇವೆ ಎಂದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಕುಮಾರಣ್ಣನ ಗರಡಿಯಲ್ಲಿ ಬೆಳೆದು ಬಂದವರೇ ಆಗಿದ್ದಾರೆ. ಏನೋ ಶಿಕ್ಷಕರಿಗೆ ಒಳ್ಳೆಯದಾಗಲಿ ಎಂಬ ಕುಮಾರಸ್ವಾಮಿ ಅವರ ಕಾರ್ಯಕ್ರಮಗಳಿಂದಾಗಿ ಆಯ್ಕೆಯಾಗಿದ್ದರು.
ಮೂರು ಪಕ್ಷಗಳನ್ನು ನೋಡಿ ಬಂದಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಾಜಾಜಿನಗರಕ್ಕೆ ಹೋಗಿಬಂದಿದ್ದಾರೆ. ಇವರು ಆರು ವರ್ಷ ಗಟ್ಟಿಯಾಗಿ ಇರುತ್ತಾರೆ ಎಂಬ ನಂಬಿಕೆಯಿಲ್ಲ, ಮತ್ತೆ ಉಪ ಚುನಾವಣೆ ನಡೆಯುವ ಸಾಧ್ಯತೆ ಇರುತ್ತದೆ ಎಂದರು.