

ಬೆಂಗಳೂರು: ಕೋಲಾರ-ಚಿಕ್ಕಬಳ್ಳಾಪುರ ಪ್ರದೇಶದ ಹಲವಾರು ಕಾಂಗ್ರೆಸ್ ಶಾಸಕರು ಭಾನುವಾರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಿವಾಸದಲ್ಲಿ ಅವರನ್ನು ಭೇಟಿಯಾದರು. ಈ ಭೇಟಿಯು ಆಡಳಿತಾರೂಢ ಪಕ್ಷದೊಳಗೆ ಹೊಸ ಭಿನ್ನಾಭಿಪ್ರಾಯಗಳ ಕುರಿತು ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ.
ಮಾಜಿ ಸಚಿವ ಎಂ.ಸಿ. ಸುಧಾಕರ್, ಕೆಜಿಎಫ್ ಶಾಸಕಿ ರೂಪಕಲಾ ಎಂ. ಶಶಿಧರ್, ಮುಳಬಾಗಿಲು ಶಾಸಕ ಕೊತ್ತನೂರು ಮಂಜುನಾಥ್, ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಮತ್ತು ಬಾಗೇಪಲ್ಲಿ ಶಾಸಕ ಎಸ್.ಎನ್. ಸುಬ್ಬಾ ರೆಡ್ಡಿ ಅವರು ಮುಖ್ಯಮಂತ್ರಿಯನ್ನು ಭೇಟಿಯಾಗಿ ಚರ್ಚಿಸಿದ್ದಾರೆ.
ಇತ್ತೀಚೆಗೆ ನಡೆದ ವಿಧಾನಸಭಾ ಅಧಿವೇಶನದ ವೇಳೆ ಕೋಲಾರ ಜಿಲ್ಲೆಯ ಕಾಂಗ್ರೆಸ್ ಶಾಸಕರಾದ ರೂಪಕಲಾ ಶಶಿಧರ್ ಮತ್ತು ಕೆ.ಆರ್. ರಮೇಶ್ ಕುಮಾರ್ ಬಣದ ನಾರಾಯಣಸ್ವಾಮಿ ಅವರ ನಡುವೆ ಸದನದ ಒಳಗೇ ತೀವ್ರ ವಾಕ್ಸಮರ ನಡೆದಿತ್ತು. ಶಾಸಕ ನಾರಾಯಣಸ್ವಾಮಿ ಅವರು ರೂಪಕಲಾ ಅವರು ತಮಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದರು. ಕೋಲಾರ ಜಿಲ್ಲೆಯ ಬಣ ರಾಜಕೀಯದ ಈ ಕಿತ್ತಾಟವು ಮುಖ್ಯಮಂತ್ರಿ ಹಾಗೂ ಪಕ್ಷದ ಶಾಸಕಾಂಗ ಪಕ್ಷದ ಸಭೆಯಲ್ಲಿ ಗಂಭೀರ ಚರ್ಚೆಗೆ ಕಾರಣವಾಗಿತ್ತು. ಇದೀಗ ಶಾಸಕರ ಫೈಟ್ ಸಿಎಂ ಅಂಗಳ ತಲುಪಿದೆ.
ಒಂದು ಕಡೆ ಶಾಸಕಿ ರೂಪಕಲಾ ಶಶಿಧರ್ ವಿರುದ್ದ ಕೋಲಾರ ಶಾಸಕರು ಮುನಿಸಿಕೊಂಡಿದ್ರೇ. ಮತ್ತೊಂದೆಡೆ ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಶಾಸಕ ಪ್ರದೀಪ್ ಈಶ್ವರ್ ಮತ್ತು ಮಾಜಿ ಸಚಿವ / ಚಿಂತಾಮಣಿ ಶಾಸಕ ಎಂ.ಸಿ. ಸುಧಾಕರ್ ನಡುವೆ ತೀವ್ರ ರಾಜಕೀಯ ಸಮರ ಹಾಗೂ ಒಳಜಗಳ ನಡೆಯುತ್ತಿದೆ.
ನಮ್ಮದೇ ಸರ್ಕಾರವಿದ್ದರೂ ದಲಿತರಿಗೆ ದೇವಸ್ಥಾನ ಪ್ರವೇಶಕ್ಕೆ ಅವಕಾಶ ನೀಡುತ್ತಿಲ್ಲ ಎಂದು ಪ್ರದೀಪ್ ಈಶ್ವರ್ ಬಹಿರಂಗವಾಗಿ ತಮ್ಮದೇ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ರು. ಪ್ರದೀಪ್ ಈಶ್ವರ್ ಅವರ ಕಾರ್ಯವೈಖರಿಗೆ ಎಂ.ಸಿ. ಸುಧಾಕರ್ ಬಣ ತೀವ್ರ ವಿರೋಧ ವ್ಯಕ್ತಪಡಿಸಿದೆ. ಪ್ರದೀಪ್ ಈಶ್ವರ್ ಅವರಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ನೀಡಬಾರದು ಎಂದು ಕೆಪಿಸಿಸಿಗೆ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಮನವಿ ಮಾಡಿದ್ರು.
ಪ್ರದೀಪ್ ಈಶ್ವರ್ ಟ್ವೀಟ್ ನಿಂದ ಬೇಸರಗೊಂಡಿರುವ ಮಾಜಿ ಸಚಿವ ಎಂ.ಸಿ ಸುಧಾಕರ್ ಸಿಎಂಗೆ ದೂರು ನೀಡಲು ಆಗಮಿಸಿದ್ರು. ಕೋಲಾರ, ಚಿಕ್ಕಬಳ್ಳಾಪುರ ಶಾಸಕರು ಅಧಿವೇಶನ ನಡೆಯುವಾಗ ಸದನದಲ್ಲಿ ಕಿತ್ತಾಡಿಕೊಂಡಿದ್ದರು. ಶಾಸಕಿ ರೂಪಕಲಾ ಶಶಿಧರ್ ಮತ್ತು ಕೋಲಾರದ ಕೆಲವು ಶಾಸಕರ ನಡುವಿನ ಭಿನ್ನಾಭಿಪ್ರಾಯದ ವರದಿಗಳು ಕಾಂಗ್ರೆಸ್‌ನ ಆತಂಕವನ್ನು ಮತ್ತಷ್ಟು ಹೆಚ್ಚಿಸಿವೆ. ಸರ್ಕಾರದ ಕಾರ್ಯವೈಖರಿಯ ಬಗ್ಗೆ ಹಿರಿಯ ಕಾಂಗ್ರೆಸ್ ಶಾಸಕರು ಕಳವಳ ವ್ಯಕ್ತಪಡಿಸಿದ ಕೆಲವೇ ದಿನಗಳಲ್ಲಿ ಈ ಭೇಟಿ ನಡೆದಿದೆ.
ಏತನ್ಮಧ್ಯೆ, ಜಿಲ್ಲೆಯಲ್ಲಿ ಯಾವುದೇ ಬಣ ರಾಜಕೀಯವಿಲ್ಲ ಮತ್ತು ಅಭಿವೃದ್ಧಿ ವಿಷಯಗಳ ಕುರಿತು ಚರ್ಚಿಸಲು ಶಾಸಕರು ಮುಖ್ಯಮಂತ್ರಿಯನ್ನು ಭೇಟಿಯಾಗಿದ್ದಾರೆ ಎಂದು ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ತಿಳಿಸಿದ್ದಾರೆ.
ಮಾಜಿ ಅಧ್ಯಕ್ಷ ಗೋವಿಂದ ಗೌಡ ಅವರ ಅಧಿಕಾರಾವಧಿಯಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಲ್ಲಿ ನಡೆದಿರುವ ಕೋಟ್ಯಂತರ ರೂಪಾಯಿಗಳ ಅಕ್ರಮಗಳ ಆರೋಪದ ಕುರಿತು ತನಿಖೆ ನಡೆಸುವಂತೆಯೂ ಶಾಸಕರು ಕೋರಿದ್ದಾರೆ ಎಂದು ನಾರಾಯಣಸ್ವಾಮಿ ಹೇಳಿದರು.