

ಬೆಂಗಳೂರು: ಪ್ರಧಾನಿ ಮೋದಿ ಅವರ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನೀಡಿದ್ದಾರೆ ಎನ್ನಲಾದ ಹೇಳಿಕೆ ದೇಶಾದ್ಯಂತ ಭಾರಿ ರಾಜಕೀಯ ಚರ್ಚೆಗೆ ಗ್ರಾಸವಾಗಿದ್ದು, ಇದರ ಬೆನ್ನಲ್ಲೇ ಕಾಂಗ್ರೆಸ್ ನಾಯಕರು ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದೆ.
ಕಾಂಗ್ರೆಸ್ ಮಾಧ್ಯಮ ಘಟಕದ ಅಧ್ಯಕ್ಷ ರಮೇಶ್ ಬಾಬು ಅವರು ಮಾತನಾಡಿ, ಟೀಕೆ ಮಾಡುವ ಹಕ್ಕು ಬಿಜೆಪಿಗೆ ಇದೆ. ಆದರೆ, ಹಿಂದೆ ಖರ್ಗೆ ಅವರ ಮೇಲೆ ತಾವು ನಡೆಸಿದ ವೈಯಕ್ತಿಕ ದಾಳಿಗಳನ್ನು ಬಿಜೆಪಿ ಮೊದಲು ನೆನಪಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
2015ರ ಡಿಸೆಂಬರ್ 11ರಂದು ಬಿಜೆಪಿ ಸಂಸದ ವೀರೇಂದ್ರ ಸಿಂಗ್ ಅವರು ಖರ್ಗೆ ಹಾಗೂ ಇತರ ಕಾಂಗ್ರೆಸ್ ನಾಯಕರ ವಿರುದ್ಧ ಮಾನಹಾನಿಕರ ಹೇಳಿಕೆಗಳನ್ನು ನೀಡಿದ್ದರು. 2022ರ ಡಿಸೆಂಬರ್ 20ರಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಸೇರಿದಂತೆ ಇತರರು ರಾಜ್ಯಸಭೆಯಲ್ಲಿ ಖರ್ಗೆ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದರು.
2023ರ ಏಪ್ರಿಲ್ 27ರಂದು ಬಿಜೆಪಿ ನಾಯಕರು ಖರ್ಗೆ ವಿರುದ್ಧ ಮಾನಹಾನಿಕರ ಟೀಕೆಗಳನ್ನು ಮಾಡಿದ್ದರು. ಅದೇ ವರ್ಷ ಆಗಸ್ಟ್ 2ರಂದು ಕರ್ನಾಟಕದ ಮಾಜಿ ಗೃಹ ಸಚಿವ ಹಾಗೂ ಬಿಜೆಪಿ ನಾಯಕ ಆರಗ ಜ್ಞಾನೇಂದ್ರ ಅವರು ಖರ್ಗೆ ಅವರ ಮೈಬಣ್ಣದ ಕುರಿತು ಹೇಳಿಕೆ ನೀಡಿದ್ದರು.
ಖರ್ಗೆ ಅವರು ಹೊಂದಿರುವ ಹುದ್ದೆಗೆ ರಾಜಕೀಯ ಮತ್ತು ಸಾಂಸ್ಥಿಕ ಮಹತ್ವವಿದೆ. ಅವರ ಹಿರಿಯ ಸ್ಥಾನಮಾನಕ್ಕೆ ತಕ್ಕ ಗೌರವ ನೀಡಬೇಕು. ಪಕ್ಷದ ಭೇದವಿಲ್ಲದೆ ಪ್ರತಿಯೊಬ್ಬ ನಾಯಕನಿಗೂ ನೀಡಬೇಕಾದ ಕನಿಷ್ಠ ಸೌಜನ್ಯವನ್ನು ಖರ್ಗೆ ಅವರಿಗೂ ತೋರಿಸಬೇಕು ಎಂದು ಹೇಳಿದ್ದಾರೆ.
ರಾಜಕೀಯ ಎದುರಾಳಿಗೆ ಗೌರವ ನೀಡುವುದು ರಾಜಕೀಯ ದೌರ್ಬಲ್ಯದ ಸಂಕೇತವಲ್ಲ. ಅದು ಪ್ರಜಾಸತ್ತಾತ್ಮಕ ಪ್ರಬುದ್ಧತೆಯ ಪ್ರತಿಬಿಂಬ. ಖರ್ಗೆ ಅವರ ಮಾತುಗಳನ್ನು ಟೀಕಿಸಲು ಮತ್ತು ವಿವರಣೆ ಕೇಳಲು ಬಿಜೆಪಿಗೆ ಹಕ್ಕಿದೆ. ಅದೇ ರೀತಿ, ಬಿಜೆಪಿ ನಾಯಕರ ಹೇಳಿಕೆಗಳನ್ನು ಪ್ರಶ್ನಿಸಲು ಕಾಂಗ್ರೆಸ್ ನಾಯಕರಿಗೂ ಹಕ್ಕಿದೆ ಎಂದು ತಿಳಿಸಿದ್ದಾರೆ.
ಆದರೆ, ಪ್ರಜಾಸತ್ತಾತ್ಮಕ ಹೊಣೆಗಾರಿಕೆಯನ್ನು ಎಲ್ಲರಿಗೂ ಸಮಾನವಾಗಿ ಅನ್ವಯಿಸಬೇಕು. ಆಯ್ದ ವಿಚಾರಗಳಿಗೆ ಮಾತ್ರ ಆಕ್ರೋಶ ವ್ಯಕ್ತಪಡಿಸುವ ಧೋರಣೆ ಇರಬಾರದು. ಪ್ರಜಾಪ್ರಭುತ್ವದಲ್ಲಿ ರಾಜಕೀಯ ಭಿನ್ನಾಭಿಪ್ರಾಯಗಳು ಸಹಜ. ಆದರೆ, ವೈಯಕ್ತಿಕ ದ್ವೇಷವು ರಾಜಕೀಯ ಚರ್ಚೆಗೆ ಪರ್ಯಾಯವಾಗಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.