

ಬೆಂಗಳೂರು: ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಜನರು ತಮ್ಮ ಪಕ್ಷವನ್ನು ತಿರಸ್ಕರಿಸಿದ್ದಾರೆ ಎಂಬುದನ್ನು ಅರಿತುಕೊಂಡಿವೆ. ಹೀಗಾಗಿ, ದಾರಿ ತಪ್ಪಿಸುವ ನಿರೂಪಣೆಗಳ ಮೂಲಕ ದೇಶದಲ್ಲಿ ಗೊಂದಲ ಮತ್ತು ಅಶಾಂತಿ ಸೃಷ್ಟಿಸಲು ಪ್ರಯತ್ನಿಸುತ್ತಿವೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಗುರುವಾರ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ನೇತೃತ್ವದ I.N.D.I.A ಒಕ್ಕೂಟ ದೇಶವಿರೋಧಿ ಶಕ್ತಿಗಳನ್ನು ಪ್ರಚೋದಿಸುವ ಮೂಲಕ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಪ್ರಯತ್ನಿಸುತ್ತಿದೆ. CJPಯ ಅಭಿಜೀತ್ ದೀಪ್ಕೆ ಮತ್ತು ಆಶುತೋಷ್ ರಾಂಕಾಗೆ ಹಣಕಾಸು ನೆರವು ನೀಡುತ್ತಿರುವವರು ಯಾರು? ಆಪರೇಷನ್ ಸಿಂಧೂರ ಸಂದರ್ಭದಲ್ಲಿ ರಾಂಕಾ ಅವರಿಗೆ ಪಾಕಿಸ್ತಾನದಿಂದ ಹಣ ಬಂದಿದೆ. ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರ್ಕಾರಗಳನ್ನು ಉರುಳಿಸಲು ಸಂಶಯಾಸ್ಪದ ಸಂಘಟನೆಗಳಿಗೆ ಹಣ ನೀಡುವ ಉದ್ಯಮಿ ಜಾರ್ಜ್ ಸೊರೊಸ್ ಅವರನ್ನು ರಾಹುಲ್ ಗಾಂಧಿ ಆಗಾಗ್ಗೆ ಭೇಟಿಯಾಗುತ್ತಿರುವುದೇಕೆ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ನಾಯಕರು ನಿರಂತರವಾಗಿ ಸರ್ಕಾರ ಬದಲಾವಣೆಯ ಬಗ್ಗೆ ಮಾತನಾಡುತ್ತಿದ್ದಾರೆ. ನಮ್ಮಂತಹ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರ ಬದಲಾವಣೆಯಾಗಬೇಕಾದರೆ ಅದು ಚುನಾವಣೆಗಳ ಮೂಲಕವೇ ಹೊರತು ಪ್ರತಿಭಟನೆ ಅಥವಾ ಸಂಘರ್ಷಗಳ ಮೂಲಕವಲ್ಲ. ಜನರು ತಮ್ಮನ್ನು ಅಧಿಕಾರಕ್ಕೆ ತರುವುದಿಲ್ಲ ಎಂಬುದು ಕಾಂಗ್ರೆಸ್‌ಗೆ ಅರಿವಾಗಿದೆ.
ಹೀಗಾಗಿ, ಬಾಂಗ್ಲಾದೇಶ ಮತ್ತು ನೇಪಾಳದಲ್ಲಿ ನಡೆದ ರಕ್ತಸಿಕ್ತ ದಂಗೆಗಳ ಮಾದರಿಯಲ್ಲೇ ಭಾರತದಲ್ಲೂ ಗೊಂದಲ ಮತ್ತು ಅಶಾಂತಿ ಸೃಷ್ಟಿಸಲು ಹತಾಶ ಪ್ರಯತ್ನ ನಡೆಸುತ್ತಿದೆ. ಆದರೆ, ಭಾರತದಲ್ಲಿ ಇಂತಹ ಬೆಳವಣಿಗೆಗಳಿಗೆ ನಾಗರಿಕರು ಅವಕಾಶ ನೀಡುವುದಿಲ್ಲ ಎಂದು ಹೇಳಿದರು.