ರಾಹುಲ್ ಗಾಂಧಿ ಸುಳ್ಳು ಬಯಲು ಮಾಡಿದ ಸಚಿವ ಸತೀಶ್ ಜಾರಕಿಹೊಳಿ ಅವರನ್ನೂ ಸಂಪುಟದಿಂದ ವಜಾ ಮಾಡ್ತೀರಾ..?

ಪಕ್ಷದ ನಿಲುವಿಗೆ ವಿರುದ್ಧವಾಗಿ ಮಾತನಾಡಿದರೆಂದು ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರನ್ನು ಸಂಪುಟದಿಂದ ವಜಾ ಮಾಡಿದಂತೆ, ಈಗ ರಾಹುಲ್ ಗಾಂಧಿ ಅವರ ಹೇಳಿಕೆಗಳನ್ನು ಪ್ರಶ್ನಿಸುವ ರೀತಿಯಲ್ಲಿ ಮಾತನಾಡಿರುವ ಸಚಿವ ಸತೀಶ್ ಜಾರಕಿಹೊಳಿ ಅವರನ್ನೂ ಸಂಪುಟದಿಂದ ವಜಾ ಮಾಡುವ ಧೈರ್ಯ ತೋರಿಸುತ್ತೀರಾ?
D K Shivakumar
ಡಿ ಕೆ ಶಿವಕುಮಾರ್
Updated on: 

ಬೆಂಗಳೂರು: ಪಕ್ಷದ ನಿಲುವಿನ ವಿರುದ್ಧ ಮಾತನಾಡಿದರೆಂದು ಮಾಜಿ ಸಚಿವ ರಾಜಣ್ಣ ಅವರನ್ನು ಸಂಪುಟದಿಂದ ವಜಾ ಮಾಡಿದಂತೆ, ಈಗ ನಿಮ್ಮ ರಾಹುಲ್ ಗಾಂಧಿ ಸುಳ್ಳನ್ನು ಬಯಲು ಮಾಡಿದ ಸಚಿವ ಸತೀಶ್ ಜಾರಕಿಹೊಳಿ ಅವರನ್ನೂ ಸಂಪುಟದಿಂದ ವಜಾ ಮಾಡುವ ಧೈರ್ಯ ತೋರಿಸ್ತೀರಾ? ಎಂದು ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರಿಗೆ ಬಿಜೆಪಿ ಸವಾಲು ಹಾಕಿದೆ.

ರಾಜ್ಯದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಸಮರ್ಪಕವಾಗಿ ನಡೆದಿದೆ ಎಂಬ ಸಚಿವ ಸತೀಶ್ ಜಾರಕಿಹೊಳಿ ಅವರ ಹೇಳಿಕೆಯನ್ನು ಮುಂದಿಟ್ಟುಕೊಂಡು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಎಸ್‌ಐಆರ್‌ ವಿಚಾರವಾಗಿ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷ ನಡೆಸುತ್ತಿರುವ ಪ್ರತಿಭಟನೆ ಹಾಗೂ ಆರೋಪಗಳ ಬಗ್ಗೆ ಸ್ವಪಕ್ಷದ ಸಚಿವರ ಹೇಳಿಕೆಯೇ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಟೀಕಿಸಿದ್ದಾರೆ.

ರಾಹುಲ್ ಗಾಂಧಿ ಅವರ ಸುಳ್ಳಿನ ಟೈರ್ ಪಂಚರ್ ಮಾಡಿದ ಸಚಿವ ಸತೀಶ್ ಜಾರಕಿಹೊಳಿ ಎಂದು ಬರೆದಿರುವ ಅವರು, ಎಸ್‌ಐಆರ್‌ ಬಗ್ಗೆ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ನಾಟಕೀಯ ಪ್ರಹಸನಕ್ಕೆ ಈಗ ಸ್ವತಃ ಅವರ ಸಂಪುಟದ ಸಚಿವ ಸತೀಶ್ ಜಾರಕಿಹೊಳಿ ಅವರೇ ಕನ್ನಡಿ ಹಿಡಿದಿದ್ದಾರೆ.

D K Shivakumar
'ಕರ್ನಾಟಕದಲ್ಲಿ SIR ಪ್ರಕ್ರಿಯೆ ಸಮರ್ಪಕವಾಗಿ ನಡೆದಿದೆ; ಬೇರೆ ರಾಜ್ಯಗಳ ಬಗ್ಗೆ ನಮ್ಮ ಆಕ್ಷೇಪ': ಸಚಿವ ಸತೀಶ್ ಜಾರಕಿಹೊಳಿ ವ್ಯತಿರಿಕ್ತ ಹೇಳಿಕೆ; Video

ರಾಜ್ಯದಲ್ಲಿ ಎಸ್‌ಐಆರ್‌ ಪ್ರಕ್ರಿಯೆ ಅತ್ಯಂತ ಸಮರ್ಪಕವಾಗಿ ನಡೆದಿದೆ ಎಂದು ಜಾರಕಿಹೊಳಿ ನೀಡಿರುವ ಹೇಳಿಕೆ, ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ನಾಯಕರ ನಿಲುವನ್ನು ಪ್ರಶ್ನಿಸುವಂತಿದೆ. ಕರ್ನಾಟಕದಲ್ಲಿ ಎಸ್‌ಐಆರ್‌ ಪ್ರಕ್ರಿಯೆಯನ್ನು ನಾವು ವಿರೋಧಿಸಿಲ್ಲ, ಇಲ್ಲಿ ಎಲ್ಲವೂ ಸರಿಯಾಗಿ ನಡೆದಿದೆ ಎಂದು ಸ್ವತಃ ಕಾಂಗ್ರೆಸ್ ಸಚಿವರೇ ಒಪ್ಪಿಕೊಂಡಿದ್ದಾರೆ. ಹಾಗಾದರೆ ದೆಹಲಿಗೆ ತೆರಳಿ ಬೃಹತ್ ಪ್ರತಿಭಟನೆಯ ಹೆಸರಿನಲ್ಲಿ ರಾಜ್ಯದ ಜನತೆಗೆ ಮತ್ತು ದೇಶಕ್ಕೆ ಸುಳ್ಳು ಹರಡುತ್ತಿರುವುದು ಏಕೆ? ಎಂದು ಪ್ರಶ್ನಿಸಿದ್ದಾರೆ.

ಪಕ್ಷದ ನಿಲುವಿಗೆ ವಿರುದ್ಧವಾಗಿ ಮಾತನಾಡಿದರೆಂದು ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರನ್ನು ಸಂಪುಟದಿಂದ ವಜಾ ಮಾಡಿದಂತೆ, ಈಗ ರಾಹುಲ್ ಗಾಂಧಿ ಅವರ ಹೇಳಿಕೆಗಳನ್ನು ಪ್ರಶ್ನಿಸುವ ರೀತಿಯಲ್ಲಿ ಮಾತನಾಡಿರುವ ಸಚಿವ ಸತೀಶ್ ಜಾರಕಿಹೊಳಿ ಅವರನ್ನೂ ಸಂಪುಟದಿಂದ ವಜಾ ಮಾಡುವ ಧೈರ್ಯ ತೋರಿಸುತ್ತೀರಾ? ಎಂದು ಸವಾಲು ಹಾಕಿದ್ದಾರೆ. ಇದೇ ವೇಳೆ ಕಾಂಗ್ರೆಸ್ ನಾಯಕರ ನಿಲುವಿನಲ್ಲಿ ದ್ವಂದ್ವವಿದೆ ಎಂಬುದು ರಾಜ್ಯದ ಜನರಿಗೆ ಅರ್ಥವಾಗಿದೆ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X