

ಬಳ್ಳಾರಿ: ಲೇ ತಮ್ಮಾ ತಂಗಡಗಿ ಮೊದಲ ಬಾರಿಗೆ ಸಚಿವನಾಗಿದ್ದು ಹೇಗೆ ಎನ್ನುವುದು ನಿನಗೆ ನೆನಪಿದೆಯಾ? ಸಚಿವನ ಮಾಡಲು ಹೆಲಿಕಾಪ್ಟರ್‌ನಲ್ಲಿ ಕರೆದುಕೊಂಡು ಹೋಗಿದ್ದು, ಚೀಲದಲ್ಲಿ ಹಣ ತುಂಬಿಕೊಂಡು ಹೋಗಿದ್ದು ಮರೆತು ಹೋಗಿದ್ದೀಯಾ' ಎಂದು ಜನಾರ್ದನ ರೆಡ್ಡಿ ಪ್ರಶ್ನಿಸಿದ್ದರು.
ಬಿಜೆಪಿ ಹಮ್ಮಿಕೊಂಡ ಬಳ್ಳಾರಿ ಚಲೊ ಪಾದಯಾತ್ರೆಯಲ್ಲಿ ಜನಾರ್ದನ ರೆಡ್ಡಿ ಅವರು ತಂಗಡಗಿ ವಿರುದ್ದ ವಾಗ್ದಾಳಿ ನಡೆಸಿದ್ದರು. ಜನಾರ್ದನ ರೆಡ್ಡಿ ಕರೆದುಕೊಂಡು ಪಾದಯಾತ್ರೆ ಮಾಡಿ ರಾಜ್ಯದ ಜನರಿಗೆ ಯಾವ ಸಂದೇಶ ಕೊಡ್ತಾ ಇದ್ದಾರೆ ಎಂದು ಸಚಿವ ತಂಗಡಗಿ ಮಾಧ್ಯಮಗಳಲ್ಲಿ ಹೇಳ್ತಾ ಇದ್ದಾನೆ. ತಮ್ಮ ತಂಗಡಗಿ ಮೊದಲ ಬಾರಿಗೆ ಶಾಸಕನಾಗಿ ಗೆದ್ದಿದ್ದು ಜನಾರ್ದನ ರೆಡ್ಡಿ ಹಣದಿಂದ ಹಾಗೂ ಮಂತ್ರಿಯಾಗಿದ್ದು ನನ್ನ ಆಶೀರ್ವಾದದಿಂದ. ನೀನು ಕಾಲಿಗೆ ಬಿದ್ದೆ, ನಾನು ಹಣದ ಬ್ಯಾಗ್ ಕೊಟ್ಟು ಕಳುಹಿಸಿದ್ದೆ. ಈಗ ನಿನಗೆ ಕೊಬ್ಬು ಜಾಸ್ತಿಯಾಗಿದೆ ಎಂದರು.
ಜನಾರ್ದನ ರೆಡ್ಡಿ ಗಂಗಾವತಿಯಲ್ಲಿ ಚುನಾವಣೆಗೆ ನಿಂತು ತೋರಿಸಲಿ ಎಂದು ಸವಾಲು ಹಾಕಿದ್ದೀಯಾ. ಗಂಗಾವತಿಯಲ್ಲಿ ನೀನು ಸ್ಪರ್ಧಿಸಿದರೆ ನಾನು ಸೋಲಿಸುತ್ತೇನೆ. ನಾಳೆಯೇ ಚುನಾವಣೆ ನಡೆದರೆ ನಮ್ಮ ಪಕ್ಷದ ಬಸವರಾಜ ದಡೇಸುಗೂರು ಜಯಭೇರಿ ಸಾಧಿಸುತ್ತಾರೆ. ಸಚಿವ ತಂಗಡಿ ಸೊಕ್ಕಿನ ಮಾತು ಆಡುವುದು ಬೇಡ. ತಾಕತ್ ಇದ್ದರೆ ರಾಜೀನಾಮೆ ನೀಡಿ ಚುನಾವಣೆಗೆ ಬರಲಿ ನಾವು ನಿಂತು ತೋರಿಸುತ್ತೇವೆ. ನಿನಗೆ ಠೇವಣಿ ಸಹ ಉಳಿವುದಿಲ್ಲ. ಸೊಕ್ಕಿನ ಮಾತು ಆಡುವುದು ಬೇಡ ಎಂದು ಮರುಸವಾಲು ಹಾಕಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ಲೂಟಿ ಮಾಡಿದ ಕಾಂಗ್ರೆಸ್‍ನವರು ಕಳ್ಳರು. ಅದರ ಲೆಕ್ಕ ಕೇಳಿದರೆ, ಉತ್ತರ ಕೊಡಿ ಅಂದರೆ ಹುಚ್ಚರ ರೀತಿ ಮಾತನಾಡುತ್ತಾರೆ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಲೇವಡಿ ಮಾಡಿದರು.
5ನೇ ದಿನದ ಬಳ್ಳಾರಿ ಚಲೋ ಪಾದಯಾತ್ರೆ ಅಂಗವಾಗಿ ಮಾತನಾಡಿದ ಅವರು, ವಾಲ್ಮೀಕಿ ನಿಗಮದ ಹಣವನ್ನು ಗೋವಾ ಮತ್ತು ತೆಲಂಗಾಣದಲ್ಲಿ ನಡೆದ ಚುನಾವಣೆಗೆ ಬಳಸಿದರು. ದುಡ್ಡು ಹೊಡೆದ ತಪ್ಪಿಗೆ ಇಡೀ ರಾಜ್ಯದ ಜನರ ಎದುರು ತಲೆ ಬಾಗಿಸಿ ದ್ರೋಹ ಮಾಡಿದ್ದೇವೆ ಎಂದು ಕ್ಷಮೆ ಕೇಳಲಿ. ಆಗ ದೇವರು ಇವರನ್ನು ಕ್ಷಮಿಸುತ್ತಾನೆ ಎಂದು ತಿಳಿಸಿದರು.
ಸಚಿವ ನಾಗೇಂದ್ರ ರಾಜೀನಾಮೆ ನಂತರವೂ ಬಿಜೆಪಿಯವರು ಯಾಕೆ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್‍ನವರು ಟೀಕೆ ಮಾಡುತ್ತಿದ್ದಾರೆ. ನಮ್ಮ ಪಾದಯಾತ್ರೆ ಕೇವಲ ನಾಗೇಂದ್ರ ರಾಜೀನಾಮೆಗೆ ಸೀಮಿತ ಅಲ್ಲ. ಬದಲಿಗೆ ಸಮಗ್ರ ಕರ್ನಾಟಕದ ಜನರ ಜ್ವಲಂತ ಸಮಸ್ಯೆಗಳ ಬಗ್ಗೆ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಈ ಪಾದಯಾತ್ರೆ ಮಾಡುತ್ತಿದ್ದೇವೆ. ವಾಲ್ಮೀಕಿ ಸಮುದಾಯದ ಯುವಕನ ಕಾಲಿನ ದೂಳಿಗೂ ನಾಗೇಂದ್ರ ಸಮ ಅಲ್ಲ ಎಂದರು.