

ಬೆಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನೇತೃತ್ವದಲ್ಲಿ ಸಾಗಿ ಬರುತ್ತಿರುವ ಬಳ್ಳಾರಿ ಚಲೋ ಪಾದಯಾತ್ರೆಗೆ ಉತ್ತಮ ಸ್ಪಂದನೆ ಸಿಗುತ್ತಿದೆ. ಬೇರೆ ಬೇರೆ ಕಾರಣಗಳಿಂದ ಪಕ್ಷದ ಚಟುವಟಿಕೆಗಳಿಂದ ದೂರವಿದ್ದ ನಾಯಕರು ಒಟ್ಟಾಗಿ ಹೆಜ್ಜೆ ಹಾಕುತ್ತಿದ್ದಾರೆ. ಆದರೆ, ಈ ಪಾದಯಾತ್ರೆಯ ಹಿಂದೆ, ಬಿಜೆಪಿಯನ್ನೇ ಮುಳುಗಿಸಲು, ಕಮಲ ಪಡೆಯ ತ್ರಿಮೂರ್ತಿಗಳು ಪ್ಲ್ಯಾನ್ ಹಾಕಿಕೊಂಡಿದ್ದಾರೆ ಎಂದು ಸಚಿವ ಶಿವರಾಜ ತಂಗಡಗಿ ಆರೋಪಿಸಿದ್ದಾರೆ.
ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಬಿಜೆಪಿಯಿಂದ ಸಿಡಿದೆದ್ದು ವಿಜಯೇಂದ್ರ ಅವರ ತಂದೆ ಯಡಿಯೂರಪ್ಪ, ಕೆಜೆಪಿಯನ್ನು ಹುಟ್ಟು ಹಾಕಿದ್ದರು. ಅದೇ ರೀತಿ, ಜನಾರ್ದನ ರೆಡ್ಡಿಯವರು, ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (KRPP) ಎನ್ನುವ ಹೆಸರಿನಲ್ಲಿ ಚುನಾವಣೆಯನ್ನೂ ಸ್ಪರ್ಧಿಸಿದ್ದರು. ಇನ್ನು, ಬಿ.ಶ್ರೀರಾಮುಲು ಅವರು ಬಡವರ ಶ್ರಮಿಕರ ರೈತರ ಕಾಂಗ್ರೆಸ್ (BSR Congress), ಪಾರ್ಟಿಯನ್ನು ಹುಟ್ಟು ಹಾಕಿದರು. ತದನಂತರ, ಎಲ್ಲವೂ ಬಿಜೆಪಿ ಜೊತೆ ವಿಲೀನಗೊಂಡಿತ್ತು. ಆದರೆ, ಅವರಿಗೆ ಬಿಜೆಪಿಯ ಮೇಲೆ ಹಳೆಯ ವೈಷಮ್ಯವಿದೆ ಎಂದು ತಂಗಡಗಿ ಆರೋಪಿಸಿದ್ದಾರೆ.
ಗೊತ್ತು ಗುರಿ ಇಲ್ಲದೆ ಪಾದಯಾತ್ರೆ ಕೈಗೊಂಡಿರುವ ವಿಜಯೇಂದ್ರ, ಗಾಲಿ ಜನಾರ್ಧನರೆಡ್ಡಿ, ಬಿ. ಶ್ರೀರಾಮುಲು. ಈ ಮೂವರೂ ಬಿಜೆಪಿ ಮುಗಿಸಲು ಹೊರಟು ವಿಫಲವಾಗಿ ಗಾಯಗೊಂಡವರು. ಅವಕಾಶಕ್ಕಾಗಿ ಹೊಂಚು ಹಾಕುತ್ತಿರುವವರು. ಈಗ ಬಿಜೆಪಿಯ ರಕ್ಷಕರಂತೆ ಪಾದಯಾತ್ರೆ ಮಾಡುತ್ತಿರುವುದು ರಾಜಕೀಯದ ದೊಡ್ಡ ವ್ಯಂಗ್ಯ!
ಬಿಜೆಪಿ ವಿರುದ್ಧ ಉದಯಿಸಿದ ಕೆಜೆಪಿಯ ಸೂತ್ರದಾರಿ ಬಿ.ವೈ. ವಿಜಯೇಂದ್ರ ಈಗ ಬಿಜೆಪಿಯ ರಾಜ್ಯಾಧ್ಯಕ್ಷ. ಬಿಜೆಪಿ ವಿರುದ್ಧ ತೊಡೆ ತಟ್ಟಿ ಪಕ್ಷಗಳ ಹುಟ್ಟು ಹಾಕಿದ ಶ್ರೀರಾಮುಲು, ಜನಾರ್ದನರೆಡ್ಡಿ ಬಿಜೆಪಿಯ ನಿಷ್ಠರು! ಮೂವರೂ ನಾಯಕರು ನಿಮ್ಮ ಮನಃಸಾಕ್ಷಿಯಿಂದ ಹೇಳಿ. ಆ ಮೂರು ಪಕ್ಷಗಳಿಗೆ ಜನ ಬೆಂಬಲ ಸಿಕ್ಕಿದ್ದರೆ ನೀವು ಮತ್ತೆ ಬಿಜೆಪಿಗೆ ಬರುತ್ತಿದ್ರಾ? ನಾವು ಬಿಜೆಪಿ ಪರ ಎಂದು ಈ ಪಶ್ಚಾತ್ತಾಪ ಯಾತ್ರೆ ಮಾಡುತ್ತಿದ್ದಿರಾ? ಎಂದು ಪ್ರಶ್ನಿಸಿದ್ದಾರೆ.
ಜನಾರ್ದನ ರೆಡ್ಡಿ ಅವರೇ, ಕಲ್ಯಾಣ, ಪ್ರಗತಿ ಎಂದುಕೊಂಡು ಪಕ್ಷ ಕಟ್ಟಿ ಬಳ್ಳಾರಿಯಲ್ಲಿ ನಿನ್ನ ಸಹೋದರ ಸೋಮಶೇಖರ ರೆಡ್ಡಿ ವಿರುದ್ಧ ಪತ್ನಿಯನ್ನು ಕಣಕ್ಕಿಳಿಸಿದ್ದು, ಬಿಜೆಪಿ ಸೋಲಿಸಿದ್ದು ನೀನೇ ತಾನೇ? ಸಿರಗುಪ್ಪಾದಲ್ಲಿ ಸೋಮಲಿಂಗಪ್ಪ ರಾಜಕೀಯ ಜೀವನದ ಜೊತೆ ಫುಟ್ಬಾಲ್ ಆಡಿದವನು ನೀನಲ್ಲವೇ? ಅಂದ್ರೆಗಿನ ಶ್ರೀರಾಮುಲು ಅವರು ರಾಹುಲ್ ಗಾಂಧಿ ಅವರ ಬಗ್ಗೆ ಮಾತನಾಡುತ್ತಾರೆ. ಬಡವ ಶ್ರಮಿಕ ರೈತ ಎಂದು ಪಕ್ಷ ಕಟ್ಟಿ ಬಿಜೆಪಿ ವಿರುದ್ಧ ತೊಡೆ ತಟ್ಟಿದ್ಯಲ್ಲಪ್ಪಾ? ಬಿ.ಎಸ್.ಆರ್ ಕಾಂಗ್ರೆಸ್ ಎಂದು ನಿನ್ನ ಹೊಸ ಪಕ್ಷದ ಹೆಸರನ್ನೂ ಕಾಂಗ್ರೆಸ್ ಎಂದೇ ಮಾಡಿದ್ದೆ ಎಂದು ಟೀಕಿಸಿದ್ದಾರೆ.
ಇತ್ತೀಚೆಗಷ್ಟೇ ಜನಾರ್ದನ ರೆಡ್ಡಿ ನನ್ನ ರಾಜಕೀಯ ಜೀವನ ಮುಗಿಸಲು ಹೊರಟಿದ್ದಾನೆ ಎಂದು ಪರಸ್ಪರ ಬಹಿರಂಗ ಜಗಳಕ್ಕೆ ಇಳಿದಿದ್ದವರು. ಈಗ ಬಿಜೆಪಿ ಬಗ್ಗೆ ಹಠಾತ್ ಪ್ರೀತಿ ಯಾಕೆ? ಈಗ ಬಿಜೆಪಿ ಕಾರ್ಯಕರ್ತರಿಗೆ ಅರಿವಾಗಿದೆ. ಮೂವರು ತ್ರಿಮೂರ್ತಿಗಳು ತಮ್ಮ ಹಾಗೂ ತಮ್ಮ ಕುಟುಂಬ ಸದಸ್ಯರ ಮೇಲಿನ ಕೇಸುಗಳಿಗೆ ಹೆದರಿ ಬಿಜೆಪಿಗೆ ಬಂದವರೇ ಹೊರತು ಪಕ್ಷಕ್ಕೆ ನಿಷ್ಠರಲ್ಲ ಎಂದು ತಪರಾಕಿ ಹಾಕಿದ್ದಾರೆ.
ಇದು ಬಿಜೆಪಿ ವಿರೋಧಿಗಳ ಕೂಟದ ಯಾತ್ರೆ. ಹೀಗಾಗಿಯೇ ಆರ್. ಅಶೋಕ್ ಅನುಪಸ್ಥಿತಿ. ಕುಮಾರಣ್ಣ, ಸುನಿಲ್ ಕುಮಾರ್, ಶೋಭಕ್ಕ, ವಿ. ಸೋಮಣ್ಣ, ಜೆ.ಸಿ. ಮಾಧುಸ್ವಾಮಿ, ಸಿ.ಟಿ. ರವಿ ಅಂತಹವರು ಅಂತರ ಕಾಯ್ದುಕೊಂಡಿರುವುದು. ಸ್ವಂತ ಪಕ್ಷ ಸೋಲಿಸಿದ ಸಾಧಕರಿವರು. ಈ ಮೂವರಿಗೂ ಸ್ವಂತ ಪಕ್ಷದವರನ್ನು ಸೋಲಿಸಿದ ಇತಿಹಾಸ ಇದೆಯೇ ಹೊರತು ಬೇರೆ ಕ್ಷೇತ್ರಕ್ಕೆ ಹೋಗಿ ಪಕ್ಷದ ಅಭ್ಯರ್ಥಿ ಗೆಲ್ಲಿಸುವ ಸಾಮರ್ಥ್ಯ ಇಲ್ಲ.
ನಿಮ್ಮ ಪಾದಯಾತ್ರೆಗೆ ನಿರ್ದಿಷ್ಟ ಗುರಿ ಇಲ್ಲ. ಆದರೂ ದಿನಕ್ಕೊಂದು ಮಾರ್ಗದಲ್ಲಿ ಸಾಗಿ, ಬಣ್ಣ ಬದಲಿಸುತ್ತಿದ್ದೀರಿ. ಇದು ಬಿಜೆಪಿ ಪರ ಪಾದಯಾತ್ರೆಯೋ? ಅಥವಾ ಹಳೆಯ ವೈಷಮ್ಯದಿಂದ ಬಿಜೆಪಿ ಮುಗಿಸಲು ಹೊರಟ “ಉಪಸಂಹಾರ ಯಾತ್ರೆ”ಯೋ? ಎಂಬ ಗುಮಾನಿ ಶ್ರೀಸಾಮಾನ್ಯನ ಕಾಡುತ್ತಿದೆ. ಬಿಜೆಪಿ ಅಂತಿಮ ಸಂಹಾರಕ್ಕೆ ಹೊರಟವರ ಉಪ ಸಂಹಾರ ಯಾತ್ರೆ, ಇದು ಬಿಜೆಪಿ ಪಾದಯಾತ್ರೆಯಲ್ಲ. KJP, BSR, KRPP ಪಕ್ಷಗಳ ಪಿತೂರಿ ಯಾತ್ರೆ, ಬಿಜೆಪಿ ಮುಗಿಸಲು ಮೂರು ಹೊಸ ಪಕ್ಷ ಕಟ್ಟಿದ ತ್ರಿಮೂರ್ತಿಗಳ ಪ್ರಾಯಶ್ಚಿತ್ತ ಯಾತ್ರೆ ಎಂದು ಲೇವಡಿ ಮಾಡಿದ್ದಾರೆ.