ವಾಲ್ಮೀಕಿ ನಿಗಮದ ಹಗರಣದ ಎಫೆಕ್ಟ್: ನಾಗೇಂದ್ರ ನಿರ್ಗಮನ ಎಚ್ಚೆತ್ತ ಕೈ ಪಾಳಯ; ಹಾನಿ ತಡೆಯಲು ST ಮತಬ್ಯಾಂಕ್ ಉಳಿಸಿಕೊಳ್ಳಲು ಮಾಸ್ಟರ್ ಪ್ಲ್ಯಾನ್..!

ಸಮುದಾಯದ ಆತಂಕಗಳನ್ನು ನಿವಾರಿಸುವ ಪ್ರಯತ್ನದ ಭಾಗವಾಗಿ, ಬಳ್ಳಾರಿ ಸಂಸದ ಇ. ತುಕಾರಾಂ ಅವರ ಪತ್ನಿ ಹಾಗೂ ಪ್ರಮುಖ ಎಸ್‌ಟಿ ನಾಯಕಿಯಾಗಿರುವ ಸಂಡೂರು ಶಾಸಕಿ ಅನ್ನಪೂರ್ಣ ಅವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸುವ ಸಾಧ್ಯತೆಯನ್ನು ಕಾಂಗ್ರೆಸ್ ಪರಿಶೀಲಿಸುತ್ತಿದೆ.
Minister B. Nagendra and CM D. K. Shivakumar
ಸಚಿವ ಬಿ.ನಾಗೇಂದ್ರ ಮತ್ತು ಸಿಎಂ ಡಿ.ಕೆ.ಶಿವಕುಮಾರ್Online Desk
Updated on

ಬೆಂಗಳೂರು: ಕಾಂಗ್ರೆಸ್‌ನ ಎಸ್‌ಟಿ ನಾಯಕರಿಗೆ ಸರಣಿ ಹಿನ್ನಡೆ ಎದುರಾಗಿರುವ ಹಿನ್ನೆಲೆಯಲ್ಲಿ, 2028ರ ವಿಧಾನಸಭಾ ಚುನಾವಣೆಗೂ ಮುನ್ನ ಸಮುದಾಯವನ್ನು ಸಮಾಧಾನಪಡಿಸಲು ಹಲವು ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಪಕ್ಷದ ನಾಯಕತ್ವ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.

ಸಚಿವ ಬಿ. ನಾಗೇಂದ್ರ ರಾಜೀನಾಮೆ, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ ಕೆ.ಎನ್. ರಾಜಣ್ಣ ಸ್ಪರ್ಧೆಯಲ್ಲಿ ಸೋಲು ಹಾಗೂ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಸಂಬಂಧಿಸಿದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಶೋಧ ಕಾರ್ಯಾಚರಣೆಗಳು ಪಕ್ಷದ ಪ್ರಮುಖ ಎಸ್‌ಟಿ ನಾಯಕರನ್ನು ಕಾಂಗ್ರೆಸ್ ಹೇಗೆ ನಿಭಾಯಿಸುತ್ತಿದೆ ಎಂಬುದರ ಬಗ್ಗೆ ಮತ್ತೆ ಪ್ರಶ್ನೆಗಳನ್ನು ಹುಟ್ಟುಹಾಕಿವೆ.

ಸಮುದಾಯದ ಆತಂಕಗಳನ್ನು ನಿವಾರಿಸುವ ಪ್ರಯತ್ನದ ಭಾಗವಾಗಿ, ಬಳ್ಳಾರಿ ಸಂಸದ ಇ. ತುಕಾರಾಂ ಅವರ ಪತ್ನಿ ಹಾಗೂ ಪ್ರಮುಖ ಎಸ್‌ಟಿ ನಾಯಕಿಯಾಗಿರುವ ಸಂಡೂರು ಶಾಸಕಿ ಅನ್ನಪೂರ್ಣ ಅವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸುವ ಸಾಧ್ಯತೆಯನ್ನು ಕಾಂಗ್ರೆಸ್ ಪರಿಶೀಲಿಸುತ್ತಿದೆ ಎನ್ನಲಾಗಿದೆ.

ಶುಕ್ರವಾರ ನವದೆಹಲಿಯಲ್ಲಿ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನಾಗೇಂದ್ರ ಅವರ ನಿರ್ಗಮನದಿಂದ ಉಂಟಾಗಿರುವ ಕೊರತೆಯನ್ನು ಸರಿದೂಗಿಸಲು ಅನ್ನಪೂರ್ಣ ಅವರನ್ನು ಸಚಿವರನ್ನಾಗಿ ಮಾಡಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಬಹುಕೋಟಿ ಮೌಲ್ಯದ ಮಹರ್ಷಿ ವಾಲ್ಮೀಕಿ ಎಸ್‌ಟಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ನಾಗೇಂದ್ರ ಅವರ ಹೆಸರು ಕೇಳಿಬಂದಿರುವ ಹಿನ್ನೆಲೆಯಲ್ಲಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಪ್ರಭಾವಿ ಎಸ್‌ಟಿ ನಾಯಕ, ಮಾಜಿ ಸಚಿವ ಬಿ. ಶ್ರೀರಾಮುಲು ನೇತೃತ್ವದಲ್ಲಿ ರಾಯಚೂರಿನಿಂದ ಬಳ್ಳಾರಿವರೆಗೆ ನಡೆದ ಪಾದಯಾತ್ರೆಗೆ ಎಸ್‌ಟಿ ಪ್ರಾಬಲ್ಯದ ಪ್ರದೇಶಗಳಲ್ಲಿ ಉತ್ತಮ ಜನಬೆಂಬಲ ವ್ಯಕ್ತವಾಗಿರುವುದು ಕಾಂಗ್ರೆಸ್‌ನ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

Minister B. Nagendra and CM D. K. Shivakumar
ವಾಲ್ಮೀಕಿ ನಿಗಮ ಹಗರಣ: ರಾಜೀನಾಮೆಗೆ ಸಚಿವ ನಾಗೇಂದ್ರ ಮುಂದು? ಇಂದು ಹೈಕಮಾಂಡ್ ಜೊತೆ ಡಿಕೆಶಿ ಚರ್ಚೆ ಸಾಧ್ಯತೆ..!

2028ರ ಚುನಾವಣೆಯಲ್ಲಿ ವೀರಶೈವ-ಲಿಂಗಾಯತ ಮತ್ತು ಎಸ್‌ಟಿ ನಾಯಕರ ಮತಗಳ ಸಂಯೋಜನೆಯನ್ನು ಗಟ್ಟಿಗೊಳಿಸಲು ಬಿಜೆಪಿಯ ಪ್ರಯತ್ನ ಕಾಂಗ್ರೆಸ್‌ಗೆ ಸವಾಲಾಗಬಹುದು. ಇದೇ ಸಾಮಾಜಿಕ ಸಮೀಕರಣ 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಅನುಕೂಲವಾಗಿತ್ತು. ಆ ಚುನಾವಣೆಯಲ್ಲಿ ಎಸ್‌ಟಿ ಮೀಸಲು ಕ್ಷೇತ್ರಗಳ ಪೈಕಿ 15ರಲ್ಲಿ 14 ಕ್ಷೇತ್ರಗಳನ್ನು ಕಾಂಗ್ರೆಸ್ ಗೆದ್ದಿತ್ತು ಎಂದು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ.

ಪ್ರಮುಖ ಮೂವರು ಎಸ್‌ಟಿ ನಾಯಕರಿಗೆ ಎದುರಾಗಿರುವ ಹಿನ್ನಡೆಗಳು ಸಮುದಾಯಕ್ಕೆ ತಪ್ಪು ಸಂದೇಶ ರವಾನಿಸುವ ಸಾಧ್ಯತೆಯಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಕಾಂಗ್ರೆಸ್ ನಾಯಕತ್ವ ತನ್ನ ಪ್ರಮುಖ ನಾಯಕರನ್ನು ರಕ್ಷಿಸಲು ಅಥವಾ ಅವರಿಗೆ ಸೂಕ್ತ ಸ್ಥಾನಮಾನ ನೀಡಲು ವಿಫಲವಾಗಿದೆ ಎಂಬ ಭಾವನೆ ಸಮುದಾಯದಲ್ಲಿ ಮೂಡಿದರೆ, ಅದು ಪಕ್ಷಕ್ಕೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಹೇಳಿದ್ದಾರೆ.

‘ಮತ ಕಳ್ಳತನ’ ಅಭಿಯಾನದ ಕುರಿತು ರಾಹುಲ್ ಗಾಂಧಿ ವಿರುದ್ಧ ಟೀಕೆ ಮಾಡಿದ್ದ ಆರೋಪದ ಹಿನ್ನೆಲೆಯಲ್ಲಿ ಸಹಕಾರ ಸಚಿವ ಸ್ಥಾನದಿಂದ ಕೆಳಗಿಳಿಸಲ್ಪಟ್ಟ ರಾಜಣ್ಣ, ವಾಲ್ಮೀಕಿ ನಿಗಮದ ಪ್ರಕರಣದಲ್ಲಿ ತನಿಖೆ ಎದುರಿಸುತ್ತಿದ್ದ ನಾಗೇಂದ್ರ ಅವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸಬಾರದಿತ್ತು ಎಂದು ಈ ಹಿಂದೆ ವಾದಿಸಿದ್ದರು. ಆದರೆ, ಈ ಬೆಳವಣಿಗೆಗಳು ಪಕ್ಷಕ್ಕೆ ಹಿನ್ನಡೆಯಾಗಿವೆ ಎಂಬ ಅಭಿಪ್ರಾಯವನ್ನು ಕಾಂಗ್ರೆಸ್‌ನ ನಾಯಕರೊಬ್ಬರು ತಳ್ಳಿಹಾಕಿದ್ದಾರೆ. ಪಕ್ಷದ ನಾಯಕತ್ವ ನಾಗೇಂದ್ರ ಮತ್ತು ಸತೀಶ್ ಜಾರಕಿಹೊಳಿ ಅವರಿಗೆ ನಿರಂತರ ಬೆಂಬಲ ನೀಡುತ್ತಿದೆ ಎಂದು ಅವರು ಹೇಳಿದ್ದಾರೆ.

‘ಮತ ಕಳ್ಳತನ’ದ ಕುರಿತ ಹೇಳಿಕೆಗೆ ರಾಜಣ್ಣ ಬೆಲೆ ತೆತ್ತಿದ್ದಾರೆ. ಆದರೆ, ಪಕ್ಷವು ನಾಗೇಂದ್ರ ಹಾಗೂ ಸಮುದಾಯದ ಪ್ರಭಾವಿ ನಾಯಕ ಸತೀಶ್ ಜಾರಕಿಹೊಳಿ ಇಬ್ಬರಿಗೂ ಸಂಪೂರ್ಣ ಬೆಂಬಲ ನೀಡುತ್ತಿದೆ. ಭವಿಷ್ಯದಲ್ಲಿ ಇಬ್ಬರೂ ಮತ್ತಷ್ಟು ಬಲಿಷ್ಠರಾಗಿ ಹೊರಹೊಮ್ಮಲಿದ್ದಾರೆ. ಅಲ್ಲದೆ, ಸಮುದಾಯದ ಕಲ್ಯಾಣಕ್ಕಾಗಿ ಅಗತ್ಯ ಪ್ರಮಾಣದ ಅನುದಾನ ಮೀಸಲಿಡುವ ಮೂಲಕ ಸರ್ಕಾರ ಅದರ ಬೇಡಿಕೆಗಳು ಮತ್ತು ಆತಂಕಗಳನ್ನು ಪರಿಹರಿಸಲಿದೆ ಎಂದು ಕಾಂಗ್ರೆಸ್ ನಾಯಕ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com