

ಬೆಂಗಳೂರು: ರಾಜ್ಯದಲ್ಲಿ ಒಕ್ಕಲಿಗ ಮತಗಳನ್ನು ಕೇವಲ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪ್ರಭಾವದಿಂದಲೇ ನಿರ್ಧರಿಸಲು ಸಾಧ್ಯವಿಲ್ಲ. ಮತದಾರರು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರತ್ತಲೂ ಗಮನಹರಿಸುತ್ತಾರೆ ಎಂದು ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು ಗುರುವಾರ ಹೇಳಿದ್ದಾರೆ.
ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ಜನರು ಕೇವಲ ಶಿವಕುಮಾರ್ ಅವರನ್ನು ನೋಡಿ ಮತ ಹಾಕುವುದಿಲ್ಲ. ದೇವೇಗೌಡರನ್ನೂ ನೋಡಿಕೊಂಡು ಮತ ಹಾಕುತ್ತಾರೆ. ನಮ್ಮವರು ಅಧಿಕಾರದಲ್ಲಿರುವುದರಿಂದ ಅಧಿಕಾರಿಗಳು ಅಥವಾ ಮತದಾರರು ಸ್ವಲ್ಪ ಒಲವು ತೋರಿ ಹೆಚ್ಚುವರಿಯಾಗಿ ಶೇ.5ರಷ್ಟು ಮತಗಳನ್ನು ತಂದುಕೊಡಬಹುದು. ಅದನ್ನು ನಾನು ನಿರಾಕರಿಸುವುದಿಲ್ಲ. ಆದರೆ, ಗೆಲುವಿಗೆ ಬೇಕಾದ ಮತಗಳನ್ನು ಅವರು ತಂದುಕೊಡಬೇಕು ಎಂದು ಹೇಳಿದ್ದಾರೆ.
ಇದೇ ವೇಳೆ ಕಾಂಗ್ರೆಸ್‌ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಹತ್ವದ ಕುರಿತು ಮಾತನಾಡಿರುವ ಅವರು, ಕಾಂಗ್ರೆಸ್‌ಗೆ ಮತಗಳನ್ನು ತಂದುಕೊಡುವವರಿದ್ದರೆ ಅದು ಸಿದ್ದರಾಮಯ್ಯ. ಸಿದ್ದರಾಮಯ್ಯ ಕಾಂಗ್ರೆಸ್‌ಗೆ, ಯಡಿಯೂರಪ್ಪ ಬಿಜೆಪಿಗೆ ಹಾಗೂ ದೇವೇಗೌಡ ಜೆಡಿಎಸ್‌ಗೆ ತಮ್ಮ ಸಮುದಾಯದ ಬೆಂಬಲದ ಆಧಾರದಲ್ಲಿ ಮತಗಳನ್ನು ತಂದುಕೊಡುತ್ತಾರೆ. ರಾಜ್ಯದಲ್ಲಿ ಹೀಗೆ ಮಾಡಬಲ್ಲ ಮೂವರು ನಾಯಕರಿವರು ಎಂದು ತಿಳಿಸಿದರು.
ಸಿದ್ದರಾಮಯ್ಯ ಬಲಿಷ್ಠರಾಗಿದ್ದರೆ ಕಾಂಗ್ರೆಸ್ ಬಲಿಷ್ಠವಾಗಿರುತ್ತದೆ. ಸಿದ್ದರಾಮಯ್ಯ ದುರ್ಬಲರಾದರೆ ಕಾಂಗ್ರೆಸ್ ದುರ್ಬಲವಾಗುತ್ತದೆ. ಅಷ್ಟೇ ಎಂದಿದ್ದಾರೆ.
ಇದೇ ವೇಳೆ ವಾಸ್ತವಾಂಶ ಎಂದು ಪರಿಗಣಿಸಿದ್ದನ್ನೇ ಹೇಳುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದ ರಾಜಣ್ಣ, ತಮ್ಮ ಹೇಳಿಕೆಗಳನ್ನು ಜನರು ವಿಭಿನ್ನ ರೀತಿಯಲ್ಲಿ ಅರ್ಥೈಸಿಕೊಳ್ಳಬಹುದು ಎಂಬುದನ್ನೂ ಒಪ್ಪಿಕೊಂಡರು.
ನಾನು ವಾಸ್ತವಾಂಶವನ್ನು ಹೇಳುತ್ತಿದ್ದೇನೆ. ನೀವು ಅದನ್ನು ವರದಿ ಮಾಡುತ್ತೀರಿ. ಬೆಂಗಳೂರಿನಲ್ಲಿರುವ ಜನರು—ಹಿತೈಷಿಗಳಾಗಲಿ, ವಿರೋಧಿಗಳಾಗಲಿ, ತಮ್ಮದೇ ಆದ ವ್ಯಾಖ್ಯಾನಗಳನ್ನು ನೀಡುತ್ತಾರೆ ಎಂದು ಹೇಳಿದ್ದಾರೆ.
ನಾನು ಎಂದಾದರೂ ಕಾಂಗ್ರೆಸ್ ತೊರೆಯುವುದಾದರೆ, ಬಹಿರಂಗವಾಗಿಯೇ ಮಾತನಾಡಿ ಪಕ್ಷವನ್ನು ತೊರೆಯುತ್ತೇನೆ; ಪಕ್ಷದಲ್ಲೇ ಉಳಿದು ದ್ರೋಹ ಮಾಡುವುದಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.