

ಬೆಂಗಳೂರು: ಲಂಚದ ವಿಷಯವಾಗಿ ಅಧಿಕಾರಿಗಳಿಗೆ ಗೌರವಯುತವಾಗಿ ಕೊಡೋದು ನಿಮ್ಮ ಧರ್ಮ ಎಂಬ ಸಚಿವ ಶಿವಲಿಂಗೇಗೌಡ ಅವರ ಹೇಳಿಕೆ ಇದೀಗ ತೀವ್ರ ವಿವಾದಕ್ಕೆ ಕಾರಣವಾಗಿದೆ.
ಶಿವಲಿಂಗೇಗೌಡ ಅವರ ಹೇಳಿಕೆಯನ್ನೇ ಅಸ್ತ್ರವಾಗಿಸಿಕೊಂಡು ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿರುವ ಪ್ರತಿಪಕ್ಷ ಬಿಜೆಪಿ, ಮಂಗಳವಾರ 'ಗೌರವಯುತ ಲಂಚದ ವಿಶೇಷ ಅಂಚೆ ಚೀಟಿಯನ್ನು ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.
ಶಿವಲಿಂಗೇಗೌಡ ಅವರ ಫೋಟೋ ಇರುವ ಅಂಚೆ ಚೀಟಿಯನ್ನು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕರ್ನಾಟಕ ಬಿಜೆಪಿ, "ಲಂಚವನ್ನು ಗೌರವಯುತ"ವಾಗಿ ಕೊಡಬೇಕು ಎಂದು ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಲಿಖಿತ ನಿಯಮ ಜಾರಿಗೊಳಿಸಿದೆ!
ಹಾಗೇ ಸರ್ಕಾರ ನೂರು ದಿನ ಪೂರೈಸಿದ ಸಂದರ್ಭ ವಿಶೇಷ ಅಂಚೆ ಚೀಟಿ ಬಿಡುಗಡೆ ಮಾಡಿ, ಲಂಚಾವತಾರಕ್ಕೆ ಪ್ರೋತ್ಸಾಹ ನೀಡಬಹುದು! ಎಂದು ಕಿಡಿ ಕಾರಿದೆ.
ಹಾಸನ ಜಿಲ್ಲೆಯ ಪ್ರಜಾ ಸೇವಾ ಕಾರ್ಯಕ್ರಮದಲ್ಲಿ ಸಚಿವ ಶಿವಲಿಂಗೇಗೌಡ ಅವರು ಲಂಚದ ವಿಚಾರಕ್ಕೆ ಎಡವಟ್ಟು ಹೇಳಿಕೆ ನೀಡಿ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ. ವಿಪಕ್ಷಗಳಿಗೆ ಇದೇ ಅಸ್ತ್ರವಾಗಿದೆ.
ಇನ್ನು ಮೈಸೂರಿನ ವಾಯ್ಸ್ ಆಫ್ ಪೀಪಲ್ ಸಂಸ್ಥೆಯಿಂದ ಸಚಿವ ಶಿವಲಿಂಗೇಗೌಡ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಹ ನೀಡಿದೆ.