

ಮೈಸೂರು: ಮೈಸೂರು ದಸರಾ ಗಜಪಡೆ ಮಾವುತರು ಮತ್ತು ಕಾವಾಡಿಗರಿಗಾಗಿ ಆಯೋಜಿಸಿದ್ದ ಉಪಹಾರ ಕೂಟಕ್ಕೆ ತಡವಾಗಿ ಆಗಮಿಸಿದ್ದ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಶಾಸಕ ತನ್ವೀರ್ ಸೇಠ್ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸೋಮವಾರ ಬೆಳಗ್ಗೆ 9 ಗಂಟೆಗೆ ನಿಗದಿಯಾಗಿದ್ದ ಉಪಹಾರ ಕಾರ್ಯಕ್ರಮಕ್ಕೆ ಯತೀಂದ್ರ ಸಿದ್ದರಾಮಯ್ಯ ಒಂದು ತಾಸು ತಡವಾಗಿ, ಅಂದರೆ 10 ಗಂಟೆಗೆ ಆಗಮಿಸಿದರು. ಇದರಿಂದ ಮಾವುತರು ಮತ್ತು ಕಾವಾಡಿಗರು ಒಂದು ಗಂಟೆ ಕಾಲ ಕಾಯುವಂತಾಯಿತು.
ಮಾವುತರು ಹಾಗೂ ಕಾವಾಡಿಗರಿಗೆ ಆಯೋಜಿಸಿದ್ದ ಉಪಹಾರ ಕೂಟ ಮತ್ತು ಕಿಟ್ ವಿತರಣಾ ಕಾರ್ಯಕ್ರಮ ವಿಳಂಬವಾಗಿದ್ದಕ್ಕೆ ಅಸಮಾಧಾನಗೊಂಡ ಶಾಸಕ ತನ್ವೀರ್ ಸೇಠ್ ಸ್ಥಳದಿಂದ ನಿರ್ಗಮಿಸಿದ ಪ್ರಸಂಗ ನಡೆಯಿತು.
ಬೆಳಗ್ಗೆಯಿಂದ ಕಾಯುತ್ತಿದ್ದ ಮಾವುತರಿಗೆ ಗೌರವ ನೀಡಬೇಕು, ಸಮಯಕ್ಕೆ ಸರಿಯಾಗಿ ಉಪಹಾರ ನೀಡಬೇಕು, ಅವರನ್ನು ಊಟಕ್ಕಾಗಿ ಕಾಯಿಸುವುದು ಸರಿಯಲ್ಲ ಎಂದು ಶಾಸಕರು ಬೇಸರ ವ್ಯಕ್ತಪಡಿಸಿ ಕೂಡಲೇ ಅಧಿಕಾರಿಗಳಿಗೆ ಕಾರ್ಯಕ್ರಮ ಆರಂಭಿಸುವಂತೆ ಸೂಚಿಸಿದರು. ಆದರೆ ಅಧಿಕಾರಿಗಳು ಸಹ ಕಾರ್ಯಕ್ರಮವನ್ನು ಆರಂಭಿಸಲು ವಿಳಂಬ ಮಾಡಿದ್ದಕ್ಕೆ ಮತ್ತಷ್ಟು ಸಿಡಿಮಿಡಿಗೊಂಡು ಸ್ಥಳದಿಂದ ಹೊರನಡೆದರು.
ಸಮಯ ಪ್ರಜ್ಞೆ ಇಲ್ವೇನ್ರೀ? ದೇರ್ ಇಸ್ ಎ ಲಿಮಿಟ್ ಫಾರ್ ಎವರಿಥಿಂಗ್ ಎಂದು ಅವರು ಜಿಲ್ಲಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಮಾವುತರು ಕಾಡಿನ ಜನರು, ಅವರಿಗೆ ಸಮಯಕ್ಕೆ ಸರಿಯಾಗಿ ಊಟ ತಿಂಡಿ ಆಗಬೇಕು ಎಂದು ಸೇಠ್ ಪ್ರತಿಪಾದಿಸಿದರು.
ನಂತರ ತನ್ವೀರ್ ಸೇಠ್ ಉಪಹಾರ ಕೂಟ ಸ್ಥಳದಿಂದ ತೆರಳಿದರು. ನಂತರ 10 ಗಂಟೆಗೆ ಯತೀಂದ್ರ ಸಿದ್ದರಾಮಯ್ಯ ಸ್ಥಳಕ್ಕೆ ಆಗಮಿಸಿ, ಮಾಜಿ ಸಚಿವ ಜಿ.ಟಿ. ದೇವೇಗೌಡರೊಂದಿಗೆ ಉಪಹಾರ ಕೂಟದಲ್ಲಿ ಪಾಲ್ಗೊಂಡರು. ಈ ಘಟನೆ ಮೈಸೂರು ಕಾಂಗ್ರೆಸ್ ವಲಯದಲ್ಲಿ ಸಣ್ಣ ಮಟ್ಟದ ಇರುಸುಮುರುಸು ಸೃಷ್ಟಿಸಿದೆ.