

ಬೆಂಗಳೂರು: ವಿಶೇಷ ಅಧಿವೇಶನದಲ್ಲಿ ಬರಗಾಲದ ಕುರಿತ ಚರ್ಚೆಯ ಸಂದರ್ಭದಲ್ಲಿ ಸಚಿವರು ಗೈರುಹಾಜರಾಗಿದ್ದಕ್ಕೆ ವಿಧಾನ ಪರಿಷತ್ತಿನ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಆಕ್ಷೇಪ ವ್ಯಕ್ತ ಪಡಿಸಿದರು.
ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಸಿ. ಪುಟ್ಟರಂಗಶೆಟ್ಟಿ ಸದನದಲ್ಲಿ ನಿದ್ದೆ ಮಾಡುತ್ತಿದ್ದರು. ಜೊತೆಗೆ ಆಡಳಿತ ಪಕ್ಷದ ಸದಸ್ಯರು ಯಾರೂ ಚರ್ಚೆಯ ವೇಳೆ ವ್ಯಕ್ತವಾದ ಅಂಶಗಳನ್ನು ಟಿಪ್ಪಣಿ ಮಾಡಿಕೊಳ್ಳುತ್ತಿರಲಿಲ್ಲ ಎಂದು ಬಸವರಾಜ ಹೊರಟ್ಟಿ ಕಿಡಿ ಕಾರಿದರು.
ಸಿ. ಪುಟ್ಟರಂಗಶೆಟ್ಟಿ ಅವರತ್ತ ಬೊಟ್ಟು ಮಾಡಿ ಮಾತನಾಡಿದ ಹೊರಟ್ಟಿ, "ನೀವು ಇಲ್ಲಿಗೆ (ಪರಿಷತ್ತಿಗೆ) ಬರುವುದು ನಿದ್ದೆ ಮಾಡಲಿಕ್ಕಾ ಅಥವಾ ವಿಷಯಗಳನ್ನು ಟಿಪ್ಪಣಿ ಮಾಡಿಕೊಳ್ಳಲಿಕ್ಕಾ?" ಎಂದು ಪ್ರಶ್ನಿಸಿದರು.
ಚರ್ಚೆಯ ವೇಳೆ ವ್ಯಕ್ತವಾಗುವ ಪ್ರಮುಖ ಅಂಶಗಳನ್ನು ಸಚಿವರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಟಿಪ್ಪಣಿ ಮಾಡಿಕೊಳ್ಳುವ ವ್ಯವಸ್ಥೆ ಇದೆ ಎಂಬುದನ್ನು ಅವರು ಸದನದ ನಾಯಕ ಡಾ. ಯತೀಂದ್ರ ಸಿದ್ದರಾಮಯ್ಯ ಅವರಿಗೆ ನೆನಪಿಸಿದರು.
ಚರ್ಚೆಯ ಅಂಶಗಳನ್ನು ಸಚಿವರ ಆಪ್ತ ಸಹಾಯಕರು, ಸಿಬ್ಬಂದಿ ಮತ್ತು ಸರ್ಕಾರಿ ಅಧಿಕಾರಿಗಳು ಟಿಪ್ಪಣಿ ಮಾಡಿಕೊಳ್ಳುತ್ತಾರೆ ಎಂದು ಯತೀಂದ್ರ ಸಮಜಾಯಿಷಿ ನೀಡಿದಾಗ, ಹೊರಟ್ಟಿ, "ಅವರೇನಾದರೂ ಪಾಯಿಂಟ್ಸ್ ಗಳನ್ನು ಟಿಪ್ಪಣಿ ಮಾಡಿ ಸದನದಲ್ಲಿ ಉತ್ತರಿಸುವುದಾದರೆ, ನಮಗೆ ಸಚಿವರು ಏಕೆ ಬೇಕು?" ಎಂದು ಮರುಪ್ರಶ್ನೆ ಹಾಕಿದರು.
ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ತಾವು ಅಂಶಗಳನ್ನು ಟಿಪ್ಪಣಿ ಮಾಡಿಕೊಳ್ಳುತ್ತಿರುವುದಾಗಿ ಹೇಳಿದಾಗ, ಅವರು ಏನು ಬರೆದುಕೊಂಡಿದ್ದಾರೆ ಎಂಬುದನ್ನು ತೋರಿಸುವಂತೆ ಹೊರಟ್ಟಿ ಆಗ್ರಹಿಸಿದರು. ತಮ್ಮ 47 ವರ್ಷಗಳ ಅನುಭವದಲ್ಲಿ ಸಚಿವರು ಸದನದಲ್ಲಿ ನಿದ್ದೆ ಮಾಡುವುದನ್ನಾಗಲಿ ಅಥವಾ ತಮ್ಮ ಇಷ್ಟಬಂದಂತೆ ಹಾಜರಾಗುವುದನ್ನಾಗಲಿ ನೋಡಿಲ್ಲ ಎಂದು ಹೇಳಿದ ಹೊರಟ್ಟಿ, ಈ ರೀತಿಯಾಗಿ ಸದನ ಹೇಗೆ ನಡೆಯಲು ಸಾಧ್ಯ ಎಂದು ಪ್ರಶ್ನಿಸಿದರು.
ವೆಂಕಟರಮಣ ಅವರಂತಹ ವಿಧಾನ ಪರಿಷತ್ ಸದಸ್ಯರು 3.5 ಗಂಟೆಗಳ ಕಾಲ ಮಾತನಾಡುತ್ತಿದ್ದಾಗ, ಸಂಬಂಧಪಟ್ಟ ಸಚಿವರು ಅದನ್ನು ಆಲಿಸಿ, ಅಂಶಗಳನ್ನು ಟಿಪ್ಪಣಿ ಮಾಡಿಕೊಂಡು ಉತ್ತರಿಸುತ್ತಿದ್ದರು ಎಂಬುದನ್ನು ಅವರು ಸ್ಮರಿಸಿದರು.
ಹಿಂದೆ ವಿರೋಧ ಪಕ್ಷದವರೂ ಕೂಡ ಅಂತಹ ಗುಣಮಟ್ಟವನ್ನೇ ಹೊಂದಿದ್ದರು ಎಂದು ಆಡಳಿತ ಪಕ್ಷದವರು ಪ್ರತಿಕ್ರಿಯಿಸಿದಾಗ, ಪರಿಷತ್ತಿನ ಉಪಸಭಾಪತಿ ಉಮಾಶ್ರೀ ಮಧ್ಯಪ್ರವೇಶಿಸಿ, ಹಿರಿಯ ಸದಸ್ಯ ಹೊರಟ್ಟಿ ಅವರ ಸಲಹೆಗಳನ್ನು ಪಾಲಿಸುವಂತೆ ಹಾಗೂ ಚರ್ಚೆಯ ವೇಳೆ ವ್ಯಕ್ತವಾಗುವ ಅಂಶಗಳನ್ನು ಟಿಪ್ಪಣಿ ಮಾಡಿಕೊಂಡು ಸಚಿವರಿಗೆ ಮಾಹಿತಿ ನೀಡುವಂತೆ ಆಡಳಿತ ಪಕ್ಷದವರಿಗೆ ಸೂಚಿಸಿದರು.
ಇದಕ್ಕೂ ಮುನ್ನ, ಒಂಬತ್ತು ಮಂದಿ ಸಚಿವರು ಸದನದಲ್ಲಿ ಹಾಜರಿಲ್ಲ ಎಂಬುದನ್ನು ವಿಧಾನ ಪರಿಷತ್ ಸದಸ್ಯ ಭೋಜೇಗೌಡರು ಗಮನಕ್ಕೆ ತಂದ ನಂತರ, ಸಭಾಪತಿ ಸಲೀಂ ಅಹ್ಮದ್ ಅವರು ಅಧಿಕಾರಿಗಳು ಮತ್ತು ಸಚಿವರ ಗೈರುಹಾಜರಿಯನ್ನು ಗಂಭೀರವಾಗಿ ಪರಿಗಣಿಸಿದರು. ಸಚಿವರು ಸದನದಲ್ಲಿ ಹಾಜರಿರುವಂತೆ ನೋಡಿಕೊಳ್ಳಲು ಅವರು ಯತೀಂದ್ರ ಅವರಿಗೆ ಸೂಚಿಸಿದರು.
ಗೈರುಹಾಜರಾದ ಅಧಿಕಾರಿಗಳನ್ನು ಅಮಾನತುಗೊಳಿಸುವಂತೆಯೂ ಅವರು ಯತೀಂದ್ರ ಅವರಿಗೆ ನಿರ್ದೇಶನ ನೀಡಿದರು ಮತ್ತು ಅವರು ಲಭ್ಯವಿಲ್ಲದಿದ್ದರೆ ಅವರನ್ನು ಅಮಾನತುಗೊಳಿಸುವಂತೆ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯುವುದಾಗಿ ಹೇಳಿದರು. "ಅಧಿವೇಶನ ಮುಗಿಯುವವರೆಗೆ ಇಲ್ಲಿ ಹಾಜರಿರುವುದು ಅವರ ಕರ್ತವ್ಯ," ಎಂದು ಸಲೀಂ ಹೇಳಿದರು.