ಸಾಹಿತ್ಯ ಪ್ರೀತಿಗೆ, ತಿಂಗಳಿಗೊಂದೊಪ್ಪತ್ತಿಗೆ - ‘ಈ ಹೊತ್ತಿಗೆ’

ಓದಿದ ಒಳ್ಳೆಯ ಹೊತ್ತಗೆಯನ್ನು, ಸಮಾನ ಮನಸ್ಕರೊಡನೆ, ಸ್ನೇಹಿತರೊಡನೆ ಕಲೆತು ಹಂಚಿಕೊಳ್ಳುವ ಸುಖ ಬಲ್ಲವನೇ ಬಲ್ಲ. ಒಂದೊಳ್ಳೆಯ ಪುಸ್ತಕದ ಓದು ಎಂತಹ...
ಈ ಹೊತ್ತಿಗೆ
ಈ ಹೊತ್ತಿಗೆ
ಓದಿದ ಒಳ್ಳೆಯ ಹೊತ್ತಗೆಯನ್ನು, ಸಮಾನ ಮನಸ್ಕರೊಡನೆ, ಸ್ನೇಹಿತರೊಡನೆ ಕಲೆತು ಹಂಚಿಕೊಳ್ಳುವ ಸುಖ ಬಲ್ಲವನೇ ಬಲ್ಲ. ಒಂದೊಳ್ಳೆಯ ಪುಸ್ತಕದ ಓದು ಎಂತಹ ಆನಂದವನ್ನು ಕೊಡುತ್ತದೆ ಎನ್ನುವುದು ಒಳ್ಳೆಯ ಓದುಗರಿಗೆಲ್ಲಾ ಗೊತ್ತು. ನನಗೆ ಓದಿನಷ್ಟೇ ಬಹು ಮುಖ್ಯ, ಆ ಓದಿನಿಂದ ನಾನೇನು ಅರಿತೆ ಎನ್ನುವುದನ್ನು ಇತರರೊಡನೆ ಹಂಚಿಕೊಳ್ಳುವುದೂ ಕೂಡ. ಇದರಿಂದ ಎರಡು ಬಹು ಮುಖ್ಯ ಲಾಭವಿದೆ... ಒಂದು ನನ್ನೊಳಗೇ ಹುಟ್ಟಿ ಅಲ್ಲೇ ಉಳಿದುಹೋಗಿ ಬಿಡುವಂಥ ಒಳ್ಳೆಯ ವಿಚಾರಗಳು, ಚಿಂತನೆಗಳು ಇತರರನ್ನು ಸ್ಪರ್ಶಿಸುತ್ತವೆ ಹಾಗೂ ಇತರರಲ್ಲಿ ಆ ಪುಸ್ತಕವನ್ನು ಓದುವ (ಒಂದೊಮ್ಮೆ ಈ ಮೊದಲೇ ಓದಿರದಿದ್ದರೆ) ಆಸಕ್ತಿಯನ್ನು ಉದ್ದೀಪನಗೊಳಿಸುವ ಒಳ್ಳೆಯ ಕಾರ್ಯ ನನ್ನಿಂದಾಗುತ್ತದೆ. ಒಂದೊಮ್ಮೆ ಅವರೂ ಮೊದಲೇ ನಾನು ಓದಿದ ಪುಸ್ತಕವನ್ನೇ ಓದಿ ಬಿಟ್ಟಿದ್ದರಂತೂ ಸಂತಸಕ್ಕೆ ಪಾರವೇ ಇರದು ಅಲ್ಲವೇ? ಪರಸ್ಪರ ತಮ್ಮ ತಮ್ಮ ಅನಿಸಿಕೆಗಳನ್ನು ನಿರ್ಭೀತಿಯಿಂದ ಮುಕ್ತವಾಗಿ ಬೇಕಾದಂತೇ ಹಂಚಿಕೊಳ್ಳಬಹುದು.. ಆ ಮೂಲಕ ನಮ್ಮ ಜ್ಞಾನವನ್ನು, ಅರಿವಿನ ವಿಸ್ತಾರವನ್ನೂ ಹೆಚ್ಚಿಸಿಕೊಳ್ಳಬಹುದು. ಹೀಗಿರುವಾಗ ಕೇವಲ ಒಬ್ಬರು ಇಬ್ಬರೂ ಎನ್ನದೇ ಆಸಕ್ತರೆಲ್ಲರೂ ಒಂದೆಡೆ ಸೇರಿ.. ತಾವು ಓದಿ ಬಂದಿರುವ ಒಂದೇ ಪುಸ್ತಕದ ಕುರಿತು ತಮ್ಮ ತಮ್ಮ ವಿಭೀನ್ನ ದೃಷ್ಟಿಕೋನವನ್ನು ಹಂಚಿಕೊಳ್ಳವಂತಾದರೆ? ಎಂತಹ ಸುಂದರ, ಅತ್ಯುತ್ತಮ ಕಲ್ಪನೆ ಅಲ್ಲವೇ? ಆದರೆ ಇದು ನನಸಾಗಿ  ಎರಡು ವರುಷದ ಮೇಲಾಗಿದೆ!
ಹೀಗೇ ಕೆಲವು ವರುಷಗಳ ಹಿಂದೆ ನಾನು ನನ್ನಿಬ್ಬರು ಸ್ನೇಹಿತರು ಸೇರಿ ನಮ್ಮ ಮನೆಯಲ್ಲೇ ಒಂದು ಪುಸ್ತಕ ವಿಮರ್ಶೆಯ ಗುಂಪನ್ನು ತೆರೆಯಬೇಕು ಎಂದು ಆಶಿಸಿದ್ದೆವು. ಅಂತೆಯೇ ಒಂದೆರಡು ಪುಸ್ತಕ ವಿಮರ್ಶೆಯ ಭೇಟಿಯೂ ಆಯಿತು. ಆದರೆ ನಾನಾ ಕಾರಣಗಳಿಂದ ಅದು ನಿಂತು ಹೋಯಿತು. ಆ ಬೇಸರ ನನ್ನೊಳಗೆ ಹಾಗೇ ಇದ್ದಿರುವಾಗಲೇ ಥಟ್ಟನೆ ಒಂದು ದಿನ ಎಫ್.ಬಿಯಲ್ಲಿ ಶ್ರೀಮತಿ ಜಯಲಕ್ಷ್ಮೀ ಪಾಟೀಲರು ತೆರೆದ `ಈ ಹೊತ್ತಿಗೆ'ಯ ಬಾಗಿಲ ಕಂಡು ಮನಸು ಸಂತಸದಿಂದ ಅರಳಿತು ಉತ್ಸಾಹದಿಂದ ಕಾತರಗೊಂಡಿತು. ಹೌದು,  ಈ ಹೊತ್ತಿಗೆಯನ್ನು ಆರಂಭಿಸಿದ್ದು ಜಯಲಕ್ಷ್ಮೀ ಪಾಟೀಲಾರಾಗಿದ್ದರೂ, ಅದು ಬಹು ಬೇಗ ಸಾಹಿತ್ಯ ಪ್ರೇಮಿಗಳೆಲ್ಲರ ಈ ಹೊತ್ತಿಗೆಯಾಗಿ ಹೋಯ್ತು. ಇಂದು ನಮ್ಮೆಲ್ಲರ ಈ ಹೊತ್ತಿಗೆ ಆರಂಭಗೊಂಡು ಎರಡೂವರೆ ವರುಷದ ಮೇಲಾಗಿದೆ. ಅಂದಿನಿಂದಲೂ ಅಡೆ ತಡೆಗಳಿಲ್ಲದೇ ಸರಾಗವಾಗಿ, ಸಮಾನ ಮನಸ್ಕರಿಂದ, ಆಸಕ್ತರಿಂದ, ಸಾಹಿತ್ಯ ಪ್ರಿಯರಿಂದ ಸಾಹಿತ್ಯವಲಯದ ಹಿರಿ ಕಿರಿಯ ಸಾಹಿತಗಳ ಬೆಂಬಲಗಳಿಂದ ಸಾಂಗವಾಗಿ ಸಾಗುತ್ತಿದೆ. ಈ ಹೊತ್ತಿಗೆಗೆ ಬೇಕಾದ್ದು ಪುಸ್ತಕ ಪ್ರೀತಿ, ಓದು, ಸಂವಹನ ಅಷ್ಟೇ. ಈ ಹೊತ್ತಿಗೆಯನ್ನು ಆರಂಭಿಸಿದ ಮೂಲೋದ್ದೇಶವೇ ಓದಿರಿ,  ಓದಿದ್ದನ್ನು ಚರ್ಚಿಸಿ ಎಂಬ ಧ್ಯೇಯದ ಮೇಲೆ. ಹೆಚ್ಚು ಹೆಚ್ಚು ಉತ್ತಮ ಸಾಹಿತ್ಯವನ್ನು ಓದಬೇಕು, ಸಾಹಿತ್ಯ ಚರ್ಚಿಸಲ್ಪಡಬೇಕು ಆ ಮೂಲಕ ಓದುಗರ ಬಳಗ ಬೆಳೆಯ ಬೇಕು, ಉಳಿಯಬೇಕು ಎಂಬ ಆಶಯದ ಸಂಕಲ್ಪದೊಂದಿದೆ. 
ಫ್ರೆಬ್ರವರಿ ೧೦, ೨೦೧೩ ರಂದು ಮೊತ್ತ ಮೊದಲ ಬಾರಿ ಈ ಹೊತ್ತಿಗೆಯ ಶುಭಾರಂಭವಾದದ್ದು. ಜಯನಗರದ 4th T ಬ್ಲಾಕಿನಲ್ಲಿರುವ ಶ್ರೀಯುತ ಹೆಚ್.ಸಿ ಶ್ರೀನಿವಾಸ್ ಅವರು  ತಮ್ಮ ಮನೆಯ ಬೇಸ್ ಮೆಂಟನ್ನು  ಲಲಿತ ಕಲಾಪ್ರಕಾರಗಳಿಗಾಗಿಯೇ ‘ಸಿರಿಸಂಪಿಗೆ ಕಲಾಕ್ಷೇತ್ರ’ವನ್ನಾಗಿ  ಬದಲಿಸಿರುವ ತಾಣದಲ್ಲಿ  ಈ ಹೊತ್ತಿಗೆ ಪ್ರಾರಂಭವಾಯಿತು. ಅಂದಿನಿಂದ, ಇಂದಿನವರೆಗೂ  ಶ್ರೀನಿವಾಸ್  ಅವರ ಸಹೃದಯತೆ, ವಿಶಾಲ ಮನಃಸ್ಥಿತಿಯಿಂದಾಗಿಯೇ ಸಾಹಿತ್ಯಾಸಕ್ತರು ಪ್ರತಿ ತಿಂಗಳೂ ಅಲ್ಲಿ ಸೇರಿ ನಾವು ಓದಿಕೊಂಡಿರುವ ಹೊತ್ತಗೆಯ ಕುರಿತು ನಮ್ಮ ನಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಸಾಧ್ಯವಾಗಿದೆ. ಮೊತ್ತ ಮೊದಲ ಈ ಹೊತ್ತಿಗೆಯಲ್ಲಿ ನಾವು ಕೈಗೆತ್ತಿಕೊಂಡ ಪುಸ್ತಕವೆಂದರೆ ಕೆ.ವಿ ಅಯ್ಯರ್ ಅವರ ಸುಪ್ರಸಿದ್ಧ ಕಾದಂಬರಿಯಾದ "ರೂಪದರ್ಶಿ". ಅಂದು ಅಲ್ಲಿ ಉತ್ಸುಕಳಾಗಿ ಭಾಗಿಯಾಗಿದ್ದ ನಾನು, ನನ್ನ ಓದಿನ ಹರವನ್ನು ಎಲ್ಲರೆದುರು ಹರವಿದಾಗ, ನನ್ನೊಳಗೆ ಅಡಗಿದ್ದ ಪುಟ್ಟ ವಿಮರ್ಶಕನ ದರ್ಶನವಾಗಿ ಸ್ವಯಂ ರೋಮಾಂಚನಗೊಂಡಿದ್ದೆ. ‘ಒಂದು ಪುಸ್ತಕ ನೋಟ ಹಲವು’ - ಈ ಒಂದು ಪರಿಕಲ್ಪನೆಯೇ ನನ್ನ ಪ್ರಪ್ರಥಮವಾಗಿ ಬಹು ಸೆಳೆದದ್ದು ಕೂಡ. ಅಂತೆಯೇ ಮುಂದೆ ಹಲವರ ಅಭಿಪ್ರಾಯಗಳನ್ನು ಸೂಕ್ಷ್ಮವಾಗಿ ಗಮನಸಿದಾಗ, ಗ್ರಾಹ್ಯ ಮಾಡಿಕೊಂಡಾಗ ನನ್ನ ಓದಿನಲ್ಲಿ ನಾನು ಮಾಡೀಕೊಳ್ಳಬೇಕಾದ ಸುಧಾರಣೆಗಳನ್ನು, ಯಾವ ಯಾವ ಕೋನದಲ್ಲೆಲ್ಲಾ ಒಂದು ಪುಸ್ತಕವನ್ನು ಹಿಡಿದಿಡಬಹುದು ಎಂಬ ಅರಿವನ್ನು ಗಳಿಸಿಕೊಳ್ಳ ತೊಡಗಿದೆ. ಆ ನಿಟ್ಟಿನಲ್ಲಿ ಈ ಹೊತ್ತಿಗೆ ನನಗೆ ಬಹು ದೊಡ್ಡ ಸಹಾಯವನ್ನು ಮಾಡಿದೆ, ಮಾಡುತ್ತಿದೆ. ಇಂಥಾ ಒಂದು ಅಫೂರ್ವ ಯೋಜನೆಯನ್ನು ಚಿಂತಿಸಿ, ಸಮರ್ಥವಾಗಿ ಜಾರಿಗೆ ತಂದು ಎಲ್ಲರೂ ತಮ್ಮ ತಮ ಸಾಹಿತ್ಯ ಪ್ರೇಮದ ಪಾಕವನ್ನು ಪರಸ್ಪರ ಹಂಚಿಕೊಳ್ಳಲು ಕಾರಣೀ ಕರ್ತರಾದ ಜಯಲಕ್ಷ್ಮೀ ಪಾಟೀಲರಿಗೆ ಅನಂತ ವಂದನೆಗಳನ್ನು ಅರ್ಪಿಸುತ್ತಿದ್ದೇನೆ. ಈ ಹೊತ್ತಿಗೆಯ ಆರಂಭದ ದಿನದಿಂದ ಹಿಡಿದು ಬಹುತೇಕ ಎಲ್ಲಾ ಚರ್ಚೆಗಳಲ್ಲೂ ಸಕ್ರಿಯವಾಗಿ, ಆಸಕ್ತಿಯಿಂದ ಅಕ್ಕರೆಯಿಂದ ನಮ್ಮೊಂದಿಗೆ ಭಾಗಿಯಾದವರೆಂದರೆ ಅಪ್ಪಟ ಸಾಹಿತ್ಯ ಪ್ರೇಮಿಗಳಾದ ಶ್ರೀಯುತ ಎಸ್.ದಿವಾಕರ್ ಮತ್ತು ಜಯಶ್ರೀ ದಿವಾಕರ್. ಅವರನ್ನೂ ನಾನಿಲ್ಲಿ ಮನಸಾ ಸ್ಮರಿಸಿಕೊಳ್ಳುತ್ತಿದ್ದೇನೆ.
‘ಈ ಹೊತ್ತಿಗೆ’ ಆರಂಭಗೊಂಡ ಮೊದಲೊಂದು ವರ್ಷ, ಪ್ರತಿ ಹದಿನೈದು ದಿವಸಕ್ಕೊಮ್ಮೆ ಆಯ್ದ ಒಂದು ಪುಸ್ತಕವನ್ನು ಓದಿ ಬಂದು, ಅಲ್ಲಿ ಸೇರಿ ಚರ್ಚೆ, ಸಂವಾದ ಮಾಡುತ್ತಿದ್ದೆವು. ತದನಂತರ ಕ್ರಮೇಣ ಒಂದು ಪುಸ್ತಕವನ್ನೋದಿ ಆಸ್ವಾದಿಸಿ, ಮೆಲ್ಲಲು ಇನ್ನೂ ತುಸು ಹೊತ್ತಿನ ಆವಶ್ಯಕತೆಯಿದೆ ಎನ್ನುವುದನ್ನು ಮನಗಂಡ ಎಲ್ಲರೂ, ಒಂದು ತಿಂಗಳಿಗೊಮ್ಮೆ ಸೇರುವುದೆಂದು ನಿಶ್ಚಯಿಸಿದೆವು. ಅಂತೆಯೇ ಈಗ ಪ್ರತಿ ತಿಂಗಳ ಮೂರನೆಯ ಭಾನುವಾರದೊಂದು ಸಿರಿ ಸಂಪಿಗೆಯಲ್ಲಿ ಸೇರುತ್ತಿದ್ದೇವೆ. ಈ ವರೆಗೆ ಒಟ್ಟೂ 39 ಪುಸ್ತಗಳ ಮೇಲೆ ಸಂವಾದ, ಚರ್ಚೆ ನಡೆಸಲಾಗಿದೆ. ಬೆಂಗಳೂರಿನಲ್ಲೇ ವಾಸಿಸುತ್ತಿದ್ದು, ಲಭ್ಯವಿರುವ ಆಯಾ ಪುಸ್ತಕದ ಲೇಖಕರನ್ನೂ ಅವರ ಪುಸ್ತಕದ ಮೇಲೆ ಚರ್ಚೆ ಇದ್ದ ದಿನ ಆಹ್ವಾನಿಸಲಾಗುತ್ತದೆ. ಚರ್ಚೆಯ ನಂತರ ಅವರಲ್ಲಿ ನಮಗೇನಾದರೂ ಸಂದೇಹಗಳಿದ್ದರೆ ನೇರವಾಗಿ ಕೇಳಿ ಪರಿಹರಿಸಿಕೊಳ್ಳುತ್ತೇವೆ. ಅಲ್ಲದೇ, ಪ್ರತಿ ಚರ್ಚೆನ್ನೂ ರೆಕಾರ್ಡ್ ಮಾಡಿಕೊಂಡು, ತದನಂತರ ಆದಾಗೆಲ್ಲಾ, ಅದರ ರಿಪೋರ್ಟ್ ಬರೆದು ಎಫ್.ಬಿಯಲ್ಲಿರುವ ಈ ಹೊತ್ತಿಗೆಯ ಪೇಜ್‌ನಲ್ಲಿ ಹಾಕಲಾಗುತ್ತಿದೆ. ಜೋಗಿಯವರು, ಜಯಂತ್ ಕಾಯ್ಕಿಣಿಯವರು, ಶ್ರೀನಿವಾಸ ವೈದ್ಯರು,  ವಸ್ತಾರೆ, ಉಮಾ ರಾವ್, ಶ್ರೀರಾಮ್, ಹೀಗೆ ಹಲವಾರು ಲೇಖಕರು ನಮ್ಮೊಂದಿಗೆ ತಮ್ಮ ಅನುಭವ, ಅನಿಸಿಕೆಗಳನ್ನು ಸಾಹಿತ್ಯಾಸಕ್ತರೊಂದಿಗೆ ಹಂಚಿಕೊಂಡಿದ್ದಾರೆ. ಇಂತಹ ಅತ್ಯುತ್ತಮ ಅವಕಾಶವನ್ನು ಕಲ್ಪಿಸುವ ಈ ಹೊತ್ತಿಗೆಯಲ್ಲಿ ಯಾರೂ ಭಾಗವಹಿಸಬಹುದು. ಎಲ್ಲರಿಗೂ ಸುಸ್ವಾಗತವಿದೆ. ಆದರೆ ಒಂದೇ ಒಂದು ಷರತ್ತಿರುತ್ತದೆ.. ಅದೇನೆಂದರೆ ನಿಗದಿಯಾದ ಪುಸ್ತಕವನ್ನು ಓದಿಕೊಂಡೇ ಅಲ್ಲಿಗೆ ಬರಬೇಕಾಗುತ್ತದೆ. ಓದದೇ ಬಂದರೆ ಅವರು ಚರ್ಚೆಯಲ್ಲಿ ಸಕ್ರಿಯವಾಗಿ ಭಾಗಿಯಾಗಲು ಅಡ್ಡಿಯಾಗುತ್ತದೆ ಎಂಬ ಉದ್ದೇಶದಿಂದಷ್ಟೇ ಈ ಷರತ್ತನ್ನು ಹಾಕಲಾಗಿದೆ. ಪ್ರತಿಯೊಬ್ಬರೂ ಸಂವಾದದಲ್ಲಿ ಭಾಗಿಯಾಗಬೇಕೆಂಬ ಆಶಯ ಈ ಹೊತ್ತಿಗೆಯದು. ಯಾವ ಪುಸ್ತಕ ಮುಂದಿನ ಓದಿಗೆ ಇದೆ ಎನ್ನುವುದನ್ನು ಪ್ರತಿ ಸಂವಾದದ ನಂತರ ಅಲ್ಲಿ ಸೇರಿರುವ ಸದಸ್ಯರ ಅಭಿಪ್ರಾಯದ ಮೇರೆಗೆ ನಿರ್ಧರಿಸಲಾಗುತ್ತದೆ. ಹಾಗೆ ನಿರ್ಧರಿತವಾದ ಪುಸ್ತಕವನ್ನು  ಫೇಸ್‌ಬುಕ್‌ನಲ್ಲಿಯ ‘ಈ ಹೊತ್ತಿಗೆ’ಯ ಪೇಜಿನ ಮುಖಗೋಡೆಯಲ್ಲಿ ಪ್ರಕಟಲಾಗುತ್ತದೆ. ಈ ಮೂಲಕ ಆಸಕ್ತರು ನಿಗದಿತ ಒಂದು ತಿಂಗಳ ಸಮಯಾವಧಿಯೊಳಗೆ ಪುಸ್ತಕವನ್ನೋದಿ ಚರ್ಚೆಗೆ ಬರುತ್ತಾರೆ. 
ಕೇವಲ ಪುಸ್ತಕಗಳ ಮೇಲಿನ ಚರ್ಚೆಗಷ್ಟೇ ಈ ಹೊತ್ತಿಗೆ ಸೀಮಿತವಾಗಿರದೇ ಹಲವು ವಿಶಿಷ್ಟ, ಕ್ರಿಯಾತ್ಮಕ ಪ್ರಯೋಗಗಳನ್ನೂ ಕೈಗೊಂಡು ಯಶಸ್ವಿಯಾಗಿದೆ. ಕಳೆದ ವರ್ಷದ ನವೆಂಬರಿನಲ್ಲಿ ನಡೆದ ರಾಜ್ಯಮಟ್ಟದ ಕಥಾ ಕಮ್ಮಟ, ನಗೆ ಹೊತ್ತಗೆ, ಕಾವ್ಯ ಹೊತ್ತಗೆ, ಹೊನಲು - ಇವೆಲ್ಲಾ ಮತ್ತಷ್ಟು ಬಣ್ಣಗಳನ್ನು ಈ ಹೊತ್ತಿಗೆಗೆ ತುಂಬಿದಂಥ ಕಾರ್ಯಕ್ರಮಗಳು. ಈ ವರುಷ ಅಂದರೆ ನವೆಂಬರ್ ತಿಂಗಳಿನ ೨೧ ಮತ್ತು ೨೨ರಂದು (ವಾರಾಂತ್ಯದಲ್ಲಿ) ಜೆ.ಪಿ.ನಗರದಲ್ಲಿರುವ ‘ಕಪ್ಪಣ್ಣ ಅಂಗಳ’ ಅಡಿಟೋರಿಯಂನಲ್ಲಿ, ರಾಜ್ಯದಲ್ಲೇ ಪ್ರಪ್ರಥಮವಾಗಿ ವಿಮರ್ಶಾ ಕಮ್ಮಟವನ್ನು ಆಯೋಜಿಸಲಾಗಿದೆ. ಈ ಹಿಂದೆ ಎಂದೂ ಘಟಿಸದಿರುವ ಈ ಅಪೂರ್ವ ಕಾರ್ಯಕ್ರಮದ ರೂವಾರಿ ನಮ್ಮೆಲ್ಲರ ಈ ಹೊತ್ತಿಗೆಯಾಗಿದೆ ಎನ್ನುವುದೇ ಬಹು ದೊಡ್ಡ ಹೆಮ್ಮೆಯ ವಿಷಯ.
-ತೇಜಸ್ವಿನಿ ಹೆಗ್ಡೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com