ಕನ್ನಡ ಶಾಲೆಗಳನ್ನು ಉಸಿರಾಡಲು ಬಿಡಿ!

ಆ ಹೊತ್ತಿಗೆ " ಕನ್ನಡವೆಂದರೆ ಕುಣಿಯುವುದೆನ್ನೆದೆ, ಕನ್ನಡವೆನೆ ಕಿವಿ ನಿಮಿರುವುದು" ಅಂತನ್ನಿಸೋಕೆ ಆರಂಭವಾಯ್ತು. ಹಾಗನ್ನಿಸಿದ್ದಕ್ಕೆ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಅದೊಂದು ದಿವಿನಾದ ದಿನ. .ನಾನು ಐದನೇ ಇಯತ್ತೆಯಲ್ಲಿ ಓದುತ್ತಿದ್ದೆನೇನೊ...ಸರಿಯಾಗಿ ನೆನಪಿಲ್ಲ. ಆದರೆ ಅವರ ಹೆಸರು ಮಾತ್ರ ಚೆನ್ನಾಗಿ ನೆನಪಿದೆ . ಕಿರಣ್ ಮಾಸ್ತರು ! ಅಪ್ಪಟ ಕನ್ನಡಾಭಿಮಾನಿಯಾಗಿದ್ದವರು.  ಆ ದಿನದ ತರಗತಿಯ ಕೊನೆಗೆ ನಮಗೆಲ್ಲ ಒಂದು ಮನೆಗೆಲಸ ಕೊಟ್ಟರು.  ಸೂರ್ಯ, ಚಂದ್ರ , ಭೂಮಿ, ಬಾನು, ನಕ್ಷತ್ರ ಇವಕ್ಕೆಲ್ಲ ಕನ್ನಡ ಭಾಷೆಯಲ್ಲೇ ಅವೆಷ್ಟೊ ಸಮನಾರ್ಥಕ ಪದಗಳಿವೆ. ಅವನ್ನೆಲ್ಲಾ ಹುಡುಕಿ ಬರೆದು ತರಬೇಕೆಂಬ ಕೆಲಸ! ಅದೊಂದು ಕೆಲಸವೇ ಮೊದಲ ಬಾರಿಗೆ ಕನ್ನಡದ ಶಬ್ಧಕೋಶವನ್ನು ಕೈಯಲ್ಲಿ ಹಿಡಿಯುವಂತೆ , ಪದಗಳನ್ನು ಹುಡುಕುವಂತೆ ಮಾಡಿತ್ತು ! ಪ್ರತಿ ಪುಟ ತಿರುಗಿಸಿ ಸಿಕ್ಕ ಪದಗಳನ್ನು ಹೆಕ್ಕಿ ಒಂದೆಡೆ ಬರೆದಾಗ ಅದೆಷ್ಟು ಖುಷಿ. ..!  ಊಹಿಸಿ ...ಒಂದು ಹಳ್ಳಿಯ ಅಪ್ಪಟ ಕನ್ನಡ ಶಾಲೆಯಲ್ಲಿ ಕಲಿಯುವ ಮಕ್ಕಳಿಗೆ ಅದೇ ಅವತ್ತಿಗೆ ದೊಡ್ಡ ಸಾಧನೆ. ಎಲ್ಲರಿಗೂ ಶಬ್ಧಕೋಶದ ಸೌಲಭ್ಯವಿರದ ಕಾಲದಲ್ಲಿ ನನಗೆ ಸುಲಭವಾಗಿ ಸಿಕ್ಕ ಕೋಶದೊಳಗೆ ನಾನೊಂದು ಮಿಣುಕು ಹುಳುವಾಗುವಂತೆ ಮಾಡಿದ್ದು ಅದೇ ಕಿರಣ್ ಮಾಸ್ತರು. ಅವರ ಕನ್ನಡ ಭಾಷೆಯನ್ನು ಕಲಿಸಬೇಕೆಂಬ ಅಭಿಯಾನ.  ಮುಂದೆ ಕನ್ನಡ ಭಾಷೆಯನ್ನು ನನ್ನ ಉಸಿರಾಗಿಸಿಕೊಳ್ಳುವ ನನ್ನ ಯಾನ ಶುರುವಾಗಿದ್ದೇ ಆವಾಗ.
ಆ ಹೊತ್ತಿಗೆ " ಕನ್ನಡವೆಂದರೆ ಕುಣಿಯುವುದೆನ್ನೆದೆ, ಕನ್ನಡವೆನೆ ಕಿವಿ ನಿಮಿರುವುದು" ಅಂತನ್ನಿಸೋಕೆ ಆರಂಭವಾಯ್ತು. ಹಾಗನ್ನಿಸಿದ್ದಕ್ಕೆ ಇವತ್ತು ನಾನೊಬ್ಬ ಕನ್ನಡ ಮಾಧ್ಯಮ ವಿದ್ಯಾರ್ಥಿನಿ ಅನ್ನುವ ಹೆಮ್ಮೆಯಿಂದ ಹೇಳಿಕೊಳ್ಳುವ ವಿಶ್ವಾಸವನ್ನು ಬೆಳೆಸಿದ್ದು. ಆ ಹೊತ್ತಿಗೇ "ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯಶಿವ" ಅಂದ ಕುವೆಂಪು ಧ್ಯಾನ ತೀವ್ರವಾಗಿತ್ತು.
ಅಮ್ಮನನ್ನು ಬಿಟ್ಟರೆ ಮಾತೃಭಾಷೆಯ ಮೇಲಿನ ಅಂಥ ಅಗಾಧ ಪ್ರೀತಿಯನ್ನು ಹುಟ್ಟುಹಾಕಿದ ಶಾಲೆಗಳು ಇವತ್ತಿಗೆ ಬಹಳ ಶೋಚನೀಯ ಪರಿಸ್ಥಿತಿಯಲ್ಲಿವೆ ಅನ್ನುವ ದುರಂತವನ್ನು ಅರಗಿಸಿಕೊಳ್ಳಬೇಕಾದ ಕಾಲದಲ್ಲಿ ನಾವಿದ್ದೇವೆ. ಪ್ರತೀವರ್ಷ ಮಕ್ಕಳಿಲ್ಲದ ಮಾಸ್ತರಿಲ್ಲದ ಅದೆಷ್ಟೋ ಶಾಲೆಗಳು ಚರಮಗೀತೆ ಹಾಡಿಸಿಕೊಳ್ಳುತ್ತಿವೆ. ಕೆಲವು ಕಡೆ ಶಿಕ್ಷಕರಿಲ್ಲ.  ಕೆಲವೆಡೆ ಕಟ್ಟಡಗಳೇ ಇಲ್ಲ. ಇನ್ನು ಆಸಕ್ತರೀತಿಯಲ್ಲಿ ಕಲಿಸುವ ಶಿಕ್ಷಕರನ್ನೆಲ್ಲಿ ಹುಡುಕುವುದು ? ಕೇವಲ ಸಂಬಳಕ್ಕಾಗಿ , ಉದ್ಯೋಗದ ಆಸೆಗಾಗಿ ಶಿಕ್ಷಕ ತರಬೇತಿಯ ಬೆನ್ನುಬಿದ್ದಿರುವ ಯುವಜನರ ಸಂಖ್ಯೆಯೇ ಹೆಚ್ಚಾದಂತಿದೆ ಹೊರತಾಗಿ ಅಲ್ಲಿ ನಮ್ಮ ಭಾಷೆಯೆಂಬ ಅಭಿಮಾನದಿಂದ ಕಲಿಸುವವರ ಕೊರತೆಯೂ ಕಂಡುಬರುತ್ತಿದೆ. ಇನ್ನು ಆಸೆಯಿಂದ ಕಲಿಸುವ ಶಿಕ್ಷಕರಿಗೆ ನಿರಂತರ ಕೆಲಸದ ಒತ್ತಡ, ತರಬೇತಿಗಳು, ಪರೀಕ್ಷಾ ಮೇಲ್ವಿಚಾರಣೆ, ಎಲೆಕ್ಷನ್ನುಗಳು,  ಗಣತಿ ಮುಂತಾದ ಕಾರಣಗಳಿಂದ ಸಿಗುವ ಸಮಯವನ್ನೆಲ್ಲ ಬೇರೆಯದಕ್ಕಾಗಿಯೇ ವಿನಿಯೋಗಿಸಬೇಕಾದ ಪರಿಸ್ಥಿತಿ.
ಸರ್ಕಾರಿ ಶಾಲೆಗಳಲ್ಲಿ ಈ ಸಮಸ್ಯೆಯಾದರೆ ಖಾಸಗಿ ಶಾಲೆಗಳದ್ದು ಬೇರೆ ರೀತಿ. ಸರ್ಕಾರವೇ ಕೊಟ್ಟ ಅನುಮತಿಯನ್ನು ದುರುಪಯೋಗಿಸಿಕೊಳ್ಳುವ ಅದರಲ್ಲೂ ಕನ್ನಡದ ಹೆಸರು ಹೇಳಿಕೊಂಡು ಒಳಗೆ ಆಂಗ್ಲಭಾಷೆಯನ್ನು ಬೋಧಿಸುವ ಶಾಲೆಗಳು ಹೇಗೆ ತಾನೆ ಮಾತೃಭಾಷೆಯ ಮೇಲಿನ ಪ್ರೀತಿಯನ್ನು ಮಕ್ಕಳಲ್ಲಿ ಜಾಗೃತಗೊಳುವಂತೆ ಮಾಡಲು ಸಾಧ್ಯ ? ಹದ ಮಾಡಿದ ಭೂಮಿಗೆ ಆಗಷ್ಟೇ ಬಿತ್ತಿದ ಬೀಜಕ್ಕೆ ಒಳ್ಳೆಯ ಪೋಷಣೆ ಕೊಟ್ಟಾಗ ಮಾತ್ರ ಅದೊಂದು ಆರೋಗ್ಯವಂತ ಗಿಡವಾಗುವುದು. ಮಾತೃಭಾಷೆಯೂ ಹಾಗೆ ಅಮ್ಮನ ಮಡಿಲು ಬಿಟ್ಟು ಶಾಲೆಗೆ ಕಾಲಿರಿಸುವ ಮಗುವಿಗೆ ಅಮ್ಮನ ಭಾಷೆಯಲ್ಲೇ ಕಲಿಯುವ ವಾತಾವರಣ ಸಿಕ್ಕಿದರೆ ಅದಕ್ಕಿಂತ ಖುಷಿ ಆ ಮಗುವಿಗೆ ಬೇರಾವುದೂ ಇರಲಾರದು. 
ಒಂದೆಡೆ ಇತರ ಮಾಧ್ಯಮಗಳಿಗೆ ಅವಕಾಶ ಕೊಟ್ಟು ಆಲಂಗಿಸುವ ಸರ್ಕಾರ ಮತ್ತೊಂದೆಡೆ ಕನ್ನಡ ಶಾಲೆಗಳ ಅವನತಿಗೆ ಕಾರಣವಾಗುತ್ತಿದೆ. ಇಂಥ ಬದಲಾದ ಕಾಲಘಟ್ಟದಲ್ಲಿ ಕಡೇ ಪಕ್ಷ ಒಂದು ದಿಟ್ಟ ನಿರ್ಧಾರದ ಅವಶ್ಯಕತೆ ಸರ್ಕಾರದ ಮುಂದಿದೆ. ಬಹುಶಃ ಈಗಾಗಲೆ ಆ ಮಾತು ಕೇಳಿ ಬರುತ್ತಿದೆಯಾದರೂ ಅದು ಸಂಪೂರ್ಣವಾಗಿ ಚಾಲ್ತಿಗೆ ಬರಬೇಕಾದ ಅನಿವಾರ್ಯತೆ ಇದೆ. ಪ್ರತಿಯೊಬ್ಬರಿಗೂ ಸರ್ಕಾರಿ ಕೆಲಸ ಬೇಕು, ಸರ್ಕಾರದ ಸವಲತ್ತು ಬೇಕು, ಸುಲಭವಾಗಿ ಮತ್ತು ಪುಕ್ಕಟೆಯಾಗಿ ಸಿಗುವ ಎಲ್ಲವೂ ಬೇಕು. ಆದರೆ ಸರ್ಕಾರಿ ಶಾಲೆ ಬೇಡ.  ಹೌದು ! ಇದು ದುರಂತವಲ್ಲದೆ ಮತ್ತೇನು? ಈ ನಿಟ್ಟಿನಲ್ಲಿ ನಿಯಮ ಬದಲಾಗಬೇಕಿದೆ. ನಿಜ, ಸರ್ಕಾರಿ ನೌಕರರ ಮಕ್ಕಳು ಕಡ್ಡಾಯವಾಗಿ ಸರ್ಕಾರಿ ಶಾಲೆಗಳಲ್ಲೇ ಓದಬೇಕು.  ಇಂತಹ ಒಂದು ನಿಯಮ  ಕಡ್ಡಾಯವಾದರೆ ಬಹುಶಃ ಒಂದಷ್ಟು ಸುಧಾರಣೆ ಕಂಡೀತು. ಹಾಲಿನಿಂದ ಹಿಡಿದು ಬಿಸಿಯೂಟದವರೆಗೆ ಶಾಲೆಗಳಿಗೆ ಪ್ರೋತ್ಸಾಹ ನೀಡಿ ಮಕ್ಕಳನ್ನು ಸೆಳೆಯುವ ಸರ್ಕಸ್ಸು ಮಾಡುತ್ತಿರುವ ಸರ್ಕಾರ ಆಂಗ್ಲ ಮಾಧ್ಯಮದ ಖಾಸಗಿ ಶಾಲೆಗಳಿಗೆ ಅನುಮತಿ ನೀಡುವುದನ್ನು ನಿಲ್ಲಿಸಬೇಕು. ಆಗ ಅನಿವಾರ್ಯತೆಯಿಂದಲಾದರೂ ಮಕ್ಕಳು ಕನ್ನಡದ ಶಾಲೆಗಳಿಗೆ ಬರುವಂತಾಗುತ್ತದೆ.  ಹಾಗೆ ನೋಡಿದರೆ ಇವತ್ತು ಉನ್ನತ ಹುದ್ದೆಗಳಲ್ಲಿರುವ ಅಧಿಕಾರಿಗಳನ್ನು ನೋಡಿ. ಅವರಲ್ಲಿ ಹೆಚ್ಚಿನವರು ಕನ್ನಡ ಮಾಧ್ಯಮದಲ್ಲೇ ಓದಿದವರಾಗಿರುತ್ತಾರೆ. ಮಾತೃಭಾಷೆಯ ಶಕ್ತಿ ಅದು. ಆತ್ಮವಿಶ್ವಾಸವನ್ನು ಹೆಚ್ಚಿಸುವ ಶಕ್ತಿ. 
ಆದರೆ ಈಗಿನ ಜನರ ನಂಬಿಕೆ ಹೇಗಾಗಿದೆಯೆಂದರೆ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣವಿಲ್ಲ. ಪಾಠಗಳೂ ಸರಿಯಾಗಿ ನಡೆಯುವುದಿಲ್ಲ. ಮಕ್ಕಳು ಶಿಸ್ತು ಕಲಿಯುವುದಿಲ್ಲ . . . ಹೀಗೆ. ..! ತಮಾಶೆಯೆಂದರೆ ಶಿಕ್ಷಕರ ತರಬೇತಿಗಳಲ್ಲಿ ಅತ್ಯುತ್ತಮ ಅಂಕ ತೆಗೆದುಕೊಂಡವರು ಮಾತ್ರ ಸರ್ಕಾರಿ ಶಾಲೆಗಳಿಗೆ ನಿಯುಕ್ತಿಯಾಗುವುದು. ಅಲ್ಲಿ ಸಲ್ಲದವರು ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಾರೆ. ಪದವಿಗಳು ಮಾತ್ರವೇ ಅತ್ಯುತ್ತಮ ಶಿಕ್ಷಕರನ್ನು ತಯಾರು ಮಾಡುವುದಿಲ್ಲವಾದರೂ ಮಕ್ಕಳ ಮಟ್ಟಕ್ಕಿಳಿದು ಕಲಿಸಬೇಕಾದ ಪರಿಕಲ್ಪನೆಯನ್ನು ಅರೆದು ಕುಡಿದವರೇ ಕನ್ನಡ ಶಾಲೆಗಳಲ್ಲಿರುವವರು. ಎಷ್ಟೋ ಕಡೆಗಳಲ್ಲಿ ಖಾಸಗಿ ಶಾಲೆಗಳು ತರಬೇತಿಯೇ ಇಲ್ಲದ ಅಥವಾ ಆ ವಿದ್ಯಾರ್ಹತೆಯೇ ಇಲ್ಲದವರನ್ನು ಅವಶ್ಯಕತೆಗಾಗಿ ಆಯ್ಕೆ ಮಾಡಿಕೊಂಡಿರುತ್ತಾರೆ. ಹಾಗಾದರೆ ಕನ್ನಡ ಶಾಲೆಗಳು ಯಾವ ಕಾರಣಕ್ಕೆ ಮುಚ್ಚುವ ಪರಿಸ್ಥಿತಿಯಲ್ಲಿವೆ. ...? ಎಲ್ಲವೂ ಇದ್ದು ಏನೂ ಇಲ್ಲದ ಸ್ಥಿತಿ. ಇವತ್ತು ಒಬ್ಬ ಹಳ್ಳಿಯ ಗಮಾರನೂ ನನ್ನ ಮಗ ಇಂಗ್ಲಿಷ್ ಕಲಿಯಬೇಕು, ಆಫೀಸರಾಗಬೇಕೆಂದೆ ಬಯಸುತ್ತಾನೆ ಹೊರತು ರೈತನಾಗಬೇಕೆಂದಲ್ಲ. ಅದಕ್ಕಾಗಿ ತನ್ನ ದುಡಿಮೆಯ ಬಹುಪಾಲು ಹಣವನ್ನು ಖಾಸಗಿ ಶಾಲೆಗಳಿಗೆ ನೀಡಿಯಾದರೂ ಮಕ್ಕಳನ್ನು ಸೇರಿಸುತ್ತಾನೆ. ಹಾಗಿದ್ದಲ್ಲಿ ಬೇರೆ ಯಾವ ವರ್ಗದ ಜನರಿಂದ ನಾವು ಮಕ್ಕಳನ್ನು ನಿರೀಕ್ಷಿಸಬಹುದು ? ಮೂರು ಹೊತ್ತು ಊಟಕ್ಕೂ ತತ್ವಾರವಿರುವ ಕೆಳವರ್ಗದ ಬೀದಿಗಳಿಂದ ಬರುವ ಮಕ್ಕಳು. ಒತ್ತಾಯದಿಂದ ಕಲಿಯಲು ಬರುವಂಥವರು.  ಇಲ್ಲಿ ನನಗೆ ಗೊತ್ತಿರುವ ಸರ್ಕಾರದ ಅನುದಾನಿತ ಶಾಲೆಯೊಂದಿದೆ. ಆ ಶಾಲೆಯ ಆಡಳಿತ ಮಂಡಳಿ ಪ್ರತಿವರ್ಷ ಮಕ್ಕಳ ದಾಖಲಾತಿಗಾಗಿ ಪಡುವ ಕಷ್ಟ ಪಡಿಪಾಟಲು ನೋಡಿದರೆ ನಕ್ಕುಬಿಡುತ್ತೀರಿ. ಶಾಲೆ ಆರಂಭವಾಗಲು ಮೂರು ತಿಂಗಳಿರುವಂತೆ ಮೊದಲು ಎಲ್ಲ ಸ್ಲಮ್ ಏರಿಯಾಗಳಿಗೆ ಎಡತಾಕುತ್ತಾರೆ. ಅಲ್ಲಿ ಪ್ರತಿಮನೆಯಲ್ಲೂ ಜಾಲಾಡಿ ಸಿಕ್ಕ ಮಕ್ಕಳನ್ನು ತಂದು ದಾಖಲಾತಿ ಮಾಡುತ್ತಾರೆ. ಅದೂ ವಯಸ್ಸಿನ ಸರಿಯಾದ ಲೆಕ್ಕಾಚಾರಗಳನ್ನೂ ಎಣಿಸದೆ. ದಾಖಲೆಗೆ ಬೇಕಾದ ಅಂಕಿಅಂಶ ಸರಿದೂಗಿಸುತ್ತಾರೆ. ಅದಕ್ಕಾಗಿ ಬರುವ ಎಲ್ಲಾ ಸರ್ಕಾರಿ ಸವಲತ್ತುಗಳನ್ನೂ ಲಂಚ ಕೊಟ್ಟೊ ಅಥವಾ ಶಾಸಕರು , ಮಂತ್ರಿಗಳನ್ನು ಹಿಡಿದೊ ಪಡೆದುಕೊಳ್ಳುತ್ತಾರೆ. ಹೆಸರಿಗಷ್ಟೆ ಶಾಲೆ . ..ಮಕ್ಕಳು ...!ಈ ರೀತಿ ಸ್ಲಮ್ ಮಕ್ಕಳನ್ನು ಗುರಿಮಾಡಿಕೊಳ್ಳುವ ಅನುದಾನಿತ ಶಾಲೆಗಳಿಂದಾಗಿ ಸರ್ಕಾರಿ ಶಾಲೆಗಳಲ್ಲಿ ಅಲ್ಲಿನ ಮಕ್ಕಳೂ ಸಿಗಲಾರದ ಸ್ಥಿತಿ . ಇಂತಹ ಹತ್ತಾರು ಕಾರಣಗಳು ಸರ್ಕಾರಿ ಶಾಲೆಗಳ ಅವನತಿಗೆ ಕಾರಣವಾಗಿವೆ. ಮುಚ್ಚುವ ಪರಿಸ್ಥಿತಿಗೆ ಬಂದಿವೆ.  ಸಾಹಿತಿಗಳು, ವಿಜ್ಞಾನಿಗಳು, ನೇತಾರರು ಮುಂತಾದ ಕ್ಷೇತ್ರಗಳಲ್ಲಿನ ಅನರ್ಘ್ಯ ಮುತ್ತುರತ್ನಗಳ ಭಂಡಾರವನ್ನೇ ಈ ನಾಡಿಗೆ ಕೊಟ್ಟ ಸರ್ಕಾರಿ ಶಾಲೆಗಳು ಅವಸಾನ ಹೊಂದುತ್ತಿವೆ. ಆಧುನಿಕ ಸಮಾಜದಲ್ಲಿ ಸಮರ್ಥವಾಗಿ ಬದುಕಬೇಕಾದ ಹಪಹಪಿಕೆಯಿಂದಾಗಿ ಜನ ಆಂಗ್ಲಮಾಧ್ಯಮಕ್ಕೆ ಮೊರೆಹೋಗುತ್ತಿದ್ದಾರೆ. ಇದು ನಿಲ್ಲಬೇಕಾದರೆ ಮೊದಲೆ ಹೇಳಿದ  ಹಾಗೆ ಸರ್ಕಾರಿ ನೌಕರಿ ಸರ್ಕಾರಿ ಸವಲತ್ತು ಸರ್ಕಾರಿ ಸಂಬಳ ಬಯಸುವ ಮಂದಿಯಾದರೂ ಸರ್ಕಾರಿ ಶಾಲೆಗಳನ್ನು ಉಳಿಸಬೇಕಿದೆ. ಆಗ ಮಾತ್ರ ಒಂದಷ್ಟು ಉಸಿರಾಡಬಹುದು.! ಏನಂತೀರಿ?
- ಭವಾನಿಲೋಕೇಶ್ ಮಂಡ್ಯ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com