ಕನ್ನಡ ಮತ್ತು ಅನುವಾದ ಸಾಹಿತ್ಯ

ನೊಬೆಲ್ ಪ್ರಶಸ್ತಿಗೆ ಕೃತಿಯೊಂದನ್ನು ಆಯ್ಕೆ ಮಾಡಬೇಕಾದರೆ ಆ ಭಾಷೆಯ ಕೃತಿ ಇಂಗ್ಲೀಷ್‌ಗೆ ಅನುವಾದವಾಗಿರುತ್ತದೆ. ಪ್ರಶಸ್ತಿ ನಿರ್ಣಾಯಕರ ಮಂಡಳಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಒಂದು ಭಾಷೆ ಮತ್ತು ಸಾಹಿತ್ಯ ಬೆಳೆಯಬೇಕಾದರೆ ಅದರ ವ್ಯಾಪ್ತಿ ವಿಸ್ತೃತವಾಗುತ್ತಾ ಹೋಗಬೇಕು. ಭಾಷಾ ಸಾಹಿತ್ಯದ ಕಂಪು ಎಲ್ಲೆಡೆ ಪಸರಿಸಬೇಕಾದರೆ ನಮ್ಮ ಸಾಹಿತ್ಯ ಇನ್ನೊಂದು ಭಾಷೆಗೆ ಅನುವಾದವಾಗುವುದು ಮುಖ್ಯ. ನೊಬೆಲ್ ಪ್ರಶಸ್ತಿಗೆ ಕೃತಿಯೊಂದನ್ನು ಆಯ್ಕೆ ಮಾಡಬೇಕಾದರೆ ಆ ಭಾಷೆಯ ಕೃತಿ ಇಂಗ್ಲೀಷ್‌ಗೆ ಅನುವಾದವಾಗಿರುತ್ತದೆ. ಪ್ರಶಸ್ತಿ ನಿರ್ಣಾಯಕರ ಮಂಡಳಿ ಪ್ರಾದೇಶಿಕ ಭಾಷೆಯಲ್ಲಿರುವ ಕೃತಿಯನ್ನು ಇಂಗ್ಲಿಷ್‌ನಲ್ಲಿ ಓದಿದ ನಂತರವೇ ಅದನ್ನು ಪ್ರಶಸ್ತಿಗೆ ಪರಿಗಣಿಸುತ್ತದೆ. ಹೀಗಿರುವಾಗ ಅಲ್ಲಿ ಅನುವಾದ ಹೆಚ್ಚಿನ ಪ್ರಾಧಾನ್ಯತೆಯನ್ನು ವಹಿಸುತ್ತದೆ. ಆದರೆ ರಾಜ್ಯಕ್ಕೊಂದು, ಜಿಲ್ಲೆಗಳಿಗೊಂದು, ಸಮುದಾಯಗಳಿಗೊಂದು ಭಾಷೆಯಿರುವ ನಮ್ಮ ದೇಶದಲ್ಲಿ ಇತರ ಭಾಷೆಗಳ ಕೃತಿಗಳು ಪ್ರಾದೇಶಿಕ ಭಾಷೆಗಳಿಗೆ ಅನುವಾದಗೊಂಡರೆ ಮಾತ್ರ ಅದು ಸಾಮಾನ್ಯ ಜನರನ್ನು ತಲುಪುತ್ತದೆ. ಕನ್ನಡ ಭಾಷೆಯ ಮಟ್ಟಿಗೆ ಹೇಳುವುದಾದರೆ ಕನ್ನಡದ ಹಲವಾರು ಕೃತಿಗಳು ಇತರ ಭಾಷೆಗಳಿಗೆ ತರ್ಜುಮೆಯಾಗಿವೆ. ಅನುವಾದದ ಮೂಲಕ ನಮ್ಮ ಭಾಷೆ ಇನ್ನೊಂದು ಭಾಷೆಯ ಜನರಿಗೆ ತಲುಪುವ ಮೂಲಕ ಸಾಹಿತ್ಯ ಕ್ಷೇತ್ರದ ಅಭಿವೃದ್ಧಿಗೆ ಕಾರಣವಾಗುತ್ತಿದೆ. ಹೀಗೆ ಕನ್ನಡ ಭಾಷೆಯ ಕೃತಿಗಳನ್ನು ಇತರ ಭಾಷೆಗಳಿಗೆ ತಲುಪಿಸಿ, ನಮ್ಮ ಸಾಹಿತ್ಯದ ಉನ್ನತಿಗೆ ಕಾರಣರಾದ ಏಳು ಭಾಷೆಗಳ ಅನುವಾದಕರನ್ನು ಮಾತನಾಡಿಸಿದಾಗ...
ಕೇಳಿದ ಪ್ರಶ್ನೆಗಳು
1. ಇನ್ನೊಂದು ಭಾಷೆಯ ಮೇಲೆ ಹೊಟ್ಟೆಕಿಚ್ಚು ಬಾರದೆ ಅನುವಾದ ಹುಟ್ಟುವುದಿಲ್ಲ ಎಂಬ ಮಾತಿದೆ. ನೀವು ಹಾಗೆ ಹೊಟ್ಟೆಕಿಚ್ಚು ಪಟ್ಟಿದ್ದೀರಾ? ಅಥವಾ ನಿಮ್ಮದು ಸ್ವಯಂಸ್ಫೂರ್ತಿಯೇ?
2. ಒಂದು ಪರಿಪೂರ್ಣ ತೃಪ್ತಿಕರ ತರ್ಜುಮೆಯೆಂದರೆ ಅಲ್ಲಿ ಏನೆಲ್ಲ ಅಂಶಗಳು ಅಡಕವಾಗಿರಬೇಕು?
3. ವಿಶ್ವಸಾಹಿತ್ಯಕ್ಕೆ ಸವಾಲೊಡ್ಡುವ ಪ್ರಯೋಗಗಳು ಕನ್ನಡದಲ್ಲಾಗಿವೆ. ಆದರೆ, ಅದು ಲೋಕಕ್ಕೇ ಗೊತ್ತಾಗಿಲ್ಲ. ಬೇರೆ ಭಾಷೆಯ ಅನುವಾದಕರನ್ನು ಸೆಳೆಯುವಲ್ಲಿ  ನಾವೆಲ್ಲಿ ಸೋತಿದ್ದೇವೆ?
4. ನೇರವಾಗಿ ಸಾಹಿತ್ಯ ಸೃಷ್ಟಿಸಿದಾಗ ಸಿಗುವಂಥ ಸಂತೃಪ್ತಿ, ಅನುವಾದಿಸಿದಾಗಲೂ ದಕ್ಕುತ್ತದಾ?
5. ನೀವೇಕೆ ಅನುವಾದಿಸುತ್ತೀರಿ? ತರ್ಜುಮೆ ಪ್ರಕಾರಕ್ಕೆ ಈಗಿನ ಪ್ರಕಾಶಕರಿಂದ ಸ್ಪಂದನೆ ಸಿಗುತ್ತಿದೆಯೇ?
=====
ಕೆ.ಕೆ ಗಂಗಾಧರನ್
ಮಲಯಾಳಂ
1. ಅನುವಾದ ಮಾಡಬೇಕಾದರೆ ಇನ್ನೊಂದು ಭಾಷೆಯ ಮೇಲೆ ಹೊಟ್ಟೆ ಕಿಚ್ಚು ಯಾಕೆ ಪಡಬೇಕು? ಭಾಷೆಯ ಮೇಲೆ ಪ್ರೀತಿ ಇರಬೇಕು. ನಾನು ಅನುವಾದ ಮಾಡುವುದು ಸ್ವಯಂ ಸ್ಫೂರ್ತಿಯಿಂದಲೇ.
2. ಅಲ್ಲಿರುವ ಶಬ್ದಗಳಿಗೆ ಶಬ್ದಗಳ ಜೋಡಣೆಯನ್ನು ಅನುವಾದ ಅಂತ ಹೇಳಲು ಆಗುವುದಿಲ್ಲ. ಈಗ ನೋಡಿ ಕಾಸರಗೋಡಿನ ಬಿಸಿಲು, ಮಂಗಳೂರಿನ ಬಿಸಿಲು ಎರಡೂ ಬೇರೆ ಬೇರೆಯೇ. ನಾವು ಅಲ್ಲಿ ಎರಡೂ ಕಡೆ ಬಿಸಿಲು ಅಂತ ಹೇಳೋಕೆ ಆಗುವುದಿಲ್ಲ. ಆವಾಗ ನಾವು ಅಲ್ಲಿ ಅಲ್ಲಿನ ಪರಿಸರವನ್ನು ತರಬೇಕಾಗುತ್ತದೆ. ಅಲ್ಲಿನ ವಾತಾವರಣ, ಸಂಸ್ಕೃತಿಯನ್ನು ಲಕ್ಷ್ಯ ಭಾಷೆಗೆ ನಾವು ತರಲೇಬೇಕಾಗುತ್ತದೆ.
3. ಬೇರೆ ಭಾಷೆಯ ಅನುವಾದಕರನ್ನು ಸೆಳೆಯುವುದರಲ್ಲಿ ನಾವು ಸೋತಿದ್ದೇವೆ ಎಂದು ಹೇಳುವುದಕ್ಕೆ ಆಗಲ್ಲ. ಆದರೆ ಕನ್ನಡದಲ್ಲಿ ಅನುವಾದಕ್ಕೆ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿದೆ. ಅನುವಾದ ಕೃತಿಗಳಿಗಾಗಲೀ, ಕತೆಗಳಿಗಾಗಲೀ ಕನ್ನಡ ಪತ್ರಿಕೆಗಳು ಹೆಚ್ಚಿನ ಪ್ರೋತ್ಸಾಹ ನೀಡುತ್ತಾ ಬಂದಿವೆ. ಆದರೆ ಮಲಯಾಳಂನಲ್ಲಿ ಅನುವಾದಕ್ಕೆ ಸಿಗುವ ಪ್ರೋತ್ಸಾಹ ಕಡಿಮೆ. ಖ್ಯಾತ ಕನ್ನಡ ಲೇಖಕಕರ ಕೃತಿಗಳು ಮಾತ್ರ ಮಲಯಾಳಂಗೆ ಅನುವಾದಗೊಳ್ಳುತ್ತವೆ. ಸಾಮಾನ್ಯ ಲೇಖಕನೊಬ್ಬ ಒಳ್ಳೆಯ ಕಥೆ ಬರೆದಿದ್ದರೂ ಅದು ಮಲಯಾಳಂಗೆ ತರ್ಜುಮೆಗೊಳ್ಳುವುದಿಲ್ಲ ಮತ್ತು ಅದನ್ನು ಅಲ್ಲಿ ಸ್ವೀಕರಿಸುವುದಿಲ್ಲ. ನಾನು ಅನುವಾದಕ್ಕಾಗಿ ಕಥೆಗಳನ್ನು ಆಯ್ಕೆ ಮಾಡುವಾಗ ಅವುಗಳ ಗುಣಮಟ್ಟವನ್ನು ನೋಡಿ ಆಯ್ಕೆ ಮಾಡುತ್ತೇನೆಯೇ ವಿನಾ ಕಥೆಗಾರರನ ಜನಪ್ರಿಯತೆಯನ್ನು ನೋಡಿ ಅಲ್ಲ.
4. ಖಂಡಿತವಾಗಿಯೂ ಸಿಗುತ್ತೆ. ಅನುವಾದ ಕಷ್ಟ. ಎಚ್‌ಎಸ್‌ವಿಯವರು ಹೇಳಿದಂತೆ ಅನುವಾದ ಅಂದರೆ ಬೇರೆ ಆತ್ಮವನ್ನು ಮತ್ತೊಂದು ಆತ್ಮಕ್ಕೆ ಜೋಡಿಸುವುದು. ಅನುವಾದದಲ್ಲಿ ಬೇರೆಯವರ ಭಾವನೆಗಳನ್ನು ಆವಾಹಿಸಿಕೊಂಡು ಅದನ್ನು ಅಕ್ಷರ ರೂಪಕ್ಕೆ ತರಬೇಕು.
5. ಕನ್ನಡದಲ್ಲಿ ಒಳ್ಳೆಯ ಸ್ಪಂದನೆ ಸಿಗುತ್ತದೆ. ನಾನು ಯಾಕೆ ಅನುವಾದ ಮಾಡುತ್ತೇನೆ ಎಂದರೆ ಬೇರೊಂದು ಭಾಷೆಯ ಒಳ್ಳೊಳ್ಳೆ ಕೃತಿಗಳು ಕನ್ನಡದಲ್ಲೂ ಸಿಗಲಿ ಎಂಬ ಆಶಯ ನನ್ನದು. ಕನ್ನಡಿಗರಿಗೆ ಒಂದೊಳ್ಳೆಯ ಸಾಹಿತ್ಯವನ್ನು ನೀಡುತ್ತೇನೆ ಎಂಬ ತೃಪ್ತಿ ನನಗಿದೆ.
=====
ಬಿ.ವೈ. ಲಲಿತಾಂಬ 
ಹಿಂದಿ
1. ಸ್ವಯಂ ಸ್ಫೂರ್ತಿಯಿಂದಲೇ ಅನುವಾದ ಮಾಡತೊಡದ್ದು. ನಾನು ಹೆಚ್ಚಾಗಿ ಕನ್ನಡ ಭಾಷೆಯಿಂದ ಹಿಂದಿಗೆ ಅನುವಾದ ಮಾಡಿದ್ದೇನೆ. ಕನ್ನಡ ಸಾಹಿತ್ಯವನ್ನು ನಾವು ಬೇರೆ ಬೇರೆ ಭಾಷೆಗಳಿಗೆ ತಲುಪುವಂತೆ ಮಾಡುವುದು ನಮ್ಮ ಜವಾಬ್ದಾರಿ, ಆದ್ದರಿಂದಲೇ ಅನುವಾದ ಕಾರ್ಯದಲ್ಲಿ ನಿರತರಾಗಿದ್ದೇನೆ.
2. ಪ್ರಮುಖವಾಗಿ ನಾವು ಯಾವ ಭಾಷೆಯ ಕೃತಿಯನ್ನು ಅನುವಾದಕ್ಕಾಗಿ ಆಯ್ಕೆ ಮಾಡಿಕೊಂಡಿದ್ದೇವೆಯೋ ಅನುವಾದಕನಿಗೆ ಆ ಭಾಷೆ ಚೆನ್ನಾಗಿ ಅರ್ಥವಾಗಬೇಕು. ಹಾಗಿದ್ದರೆ ಮಾತ್ರ ನಾವದನ್ನು ಇನ್ನೊಂದು ಭಾಷೆಗೆ ತರ್ಜುಮೆ ಮಾಡಲು ಸಾಧ್ಯ. ಇಲ್ಲಿ ಎರಡೂ ಭಾಷೆಗಳ ಅರಿವು, ನಿಷ್ಠೆ, ಪ್ರಾಮಾಣಿಕತೆ, ಸಮರ್ಪಣಾ ಭಾವ ಮುಖ್ಯ. ಅನುವಾದಕನಾದವನು ಮೂಲ ಲೇಖಕನ ಜತೆ, ಭಾಷೆ ಜತೆ, ಆ ಭಾಷೆಯ ಓದುಗರ ಜತೆ ಸಹ ಸಂವಾದ ನಡೆಸಬೇಕು. ಅನುವಾದ ಎಂಬುದು ಒಂದು ಅವಧಾನ ಅಂತಲೇ ಹೇಳಬಹುದು. ಅನುವಾದಕ ಒಂದು ಕೃತಿಯನ್ನು ಮರುಸೃಷ್ಟಿ ಮಾಡುತ್ತಾನೆ. ಅಲ್ಲಿ ಆತನಿಗೆ ಸಂಸ್ಕೃತಿಯ ಪರಿಚಯ ಇಲ್ಲದೇ ಹೋದರೆ ಅದು ಉತ್ತಮ ಅನುವಾದ ಎಂದು ಹೇಳಲ್ಪಡುವುದಿಲ್ಲ.
3. ನಾನು ಸಾಧ್ಯವಾದಷ್ಟು ಮಟ್ಟಿಗೆ ಯಾರ ಪರಿಚಯ ಹಿಂದೀ ಭಾಷೆಗೆ ಆಗಿಲ್ಲವೋ ಅವರ ಕೃತಿಯನ್ನು ಹಿಂದೀ ಮಾತನಾಡುವ ಜನರಿಗೆ ಪರಿಚಯಿಸುವ ಕಾರ್ಯವನ್ನು ಮಾಡುತ್ತಿದ್ದೇನೆ.  ಬಿ. ಟಿ. ಲಲಿತಾ ನಾಯಕ್  ಅವರ 'ಗತಿ' ಕಾದಂಬರಿಯನ್ನು ಹಿಂದಿಗೆ ಅನುವಾದಿಸಿದ್ದೀನಿ. ಈ ಮೂಲಕ ನಮ್ಮಲ್ಲಿನ ಸಂಸ್ಕೃತಿಯನ್ನು ಹಿಂದೀ ಭಾಷೆಗೂ , ಅಲ್ಲಿನದ್ದನ್ನು ಇಲ್ಲಿಗೂ ಅನುವಾದ ಮಾಡುವಾಗ ಎರಡು ಸಂಸ್ಕೃತಿಗಳ ಒಡನಾಟ ಇಲ್ಲಿ ಸಾಧ್ಯವಾಗುತ್ತದೆ.
4. ನಾನು ಅನುವಾದವನ್ನು ಸಹಜವಾಗಿ ಸ್ವೇಚ್ಛೆಯಿಂದಲೇ ಮಾಡುತ್ತೇನೆ. ಯಾರಾದರೂ ಬಲವಂತ ಮಾಡಿ ಅದು ಹೀಗಿರಬೇಕು, ಹಾಗಿರಬೇಕು ಎಂದರೆ ಅನುವಾದ ಸಾಧ್ಯವಿಲ್ಲ. ಮುಖ್ಯವಾಗಿ ಅನುವಾದಕನಿಗೆ ಸಂವಾದ ನಡೆಸುವಾಗ ಆನಂದವೂ, ಅನುವಾದ ಮಾಡುವಾಗ ಸಂತೃಪ್ತಿಯೂ ಸಿಗುತ್ತದೆ.
5. ಖಂಡಿತವಾಗಿಯೂ ಪ್ರಕಾಶಕರಿಂದ ಉತ್ತಮ ಸ್ಪಂದನೆ  ಸಿಗುತ್ತಿದೆ. ಇದೀಗ ದೇಶದ ಸಾಹಿತ್ಯವನ್ನು ತಿಳಿದುಕೊಳ್ಳುವ ಕುತೂಹಲ ಓದುಗನಿಗೆ ಜಾಸ್ತಿ ಇದೆ. ಅನುವಾದದ ಮೂಲಕ ಅನುವಾದಕನಿಗೆ ಮಾನ್ಯತೆ ಸಿಗುತ್ತದೆ. ನಾನು ಹಿಂದೀ ಭಾಷೆಗೆ ಅನುವಾದ ಮಾಡುವಾಗ ನನಗೆ ಅಲ್ಲಿ ಮನ್ನಣೆ ಸಿಗುತ್ತೆ ಮಾತ್ರವಲ್ಲದೆ ಅಲ್ಲಿ ನಾನೂ ಬೆಳೆಯುತ್ತೇನೆ. ಇದರೊಂದಿಗೆ ನನ್ನ ಮಾತೃಭಾಷೆಗೂ ಸೇವೆ ಸಲ್ಲಿಸಿದಂತಾಗುತ್ತದೆ. ನನ್ನ ಆಶಯ ಏನಂದರೆ ಅನುವಾದ ಮೂಲಕ ದೇಶದ ಭಾವೈಕ್ಯ ಸಮೃದ್ಧವಾಗಬೇಕು. ಈ ಭಾವೈಕ್ಯಕ್ಕೆ ಸಾಹಿತ್ಯ ಸಹಾಯವಾಗುತ್ತದೆ.
=====
ಡಾ. ಗೀತಾ ಶೆಣೈ
ಕೊಂಕಣಿ
1. ಅನುವಾದ ಸ್ವಯಂ ಸ್ಫೂರ್ತಿಯೇ. ಅನುವಾದಕ್ಕಾಗಿ ನಾನು ನನಗಿಷ್ಟವಾದ ಕೃತಿಗಳನ್ನೇ ಆಯ್ಕೆ ಮಾಡುತ್ತೇನೆ. ಪ್ರಶಸ್ತಿ ಪಡೆದಿರಲಿ, ಪಡೆಯದೇ ಇರಲಿ ನನಗೆ ಉತ್ತಮ ಎನಿಸಿದ ಕೃತಿಗಳನ್ನು ನಾನು ಅನುವಾದಕ್ಕಾಗಿ ಆಯ್ಕೆ ಮಾಡುತ್ತೇನೆ. ಇನ್ನು ಸಂಸ್ಥೆಗಳು ನನಗೆ ಅನುವಾದ ಕೆಲಸ ವಹಿಸಿದರೆ, ಕೃತಿಗಳು ಉತ್ತಮವಾಗಿದ್ದರೆ ಮಾತ್ರ ನಾನು ಅನುವಾದ ಮಾಡಲು ಒಪ್ಪಿಕೊಳ್ಳುತ್ತೇನೆ. ಇಲ್ಲದಿದ್ದರೆ ನಿರಾಕರಿಸುತ್ತೇನೆ.
2. ಪರಿಪೂರ್ಣ ತೃಪ್ತಿಕರ ತರ್ಜುಮೆಯಲ್ಲ್ಲಿ ಅಡಕವಾಗಿರಬೇಕಾದ ಪ್ರಧಾನ ಅಂಶಗಳು ಅಂದರೆ,
1) ನಾವು ಆಯ್ದುಕೊಂಡ ವಸ್ತು ಮುಖ್ಯ ಹಾಗು ಪ್ರಸ್ತುತವಾಗಿರಬೇಕು.
2) ಮೂಲ ಕೃತಿಯಲ್ಲಿನ ವ್ಯಾಕರಣಕ್ಕೆ ಹೊಂದಿಕೊಂಡು ಅನುವಾದ ಮಾಡಬೇಕು.
3) ಮೂಲ ಲೇಖಕರ ಭಾವಕ್ಕೆ ಚ್ಯುತಿ ಬರಬಾರದು. ಕೊಂಕಣಿ ಭಾಷೆಯ ಬಗ್ಗೆ ಹೇಳುವುದಾದರೆ ಕೊಂಕಣಿ ಆರ್ಯನ್ ಭಾಷೆ ಮತ್ತು ಕನ್ನಡ ದ್ರಾವಿಡ ಭಾಷೆ. ಹೀಗಿರುವುದರಿಂದ ಭಾಷಾನುವಾದ ಮಾಡುವಾಗ ತುಂಬಾ ಜಾಗ್ರತೆ ವಹಿಸಬೇಕು. ಅನುವಾದಿತ ಕೃತಿಯನ್ನೋದುವಾಗ ಇದು ಮೂಲ ಕೃತಿಯೇ ಎಂದು ಅನಿಸಿಬಿಡಬೇಕು. ಕನ್ನಡದಲ್ಲಿ ಬೌದ್ಧಿಕ ಮಟ್ಟ ತುಂಬಾ ಬೆಳವಣಿಗೆಯಾಗಿರುವುದರಿಂದ ಇಲ್ಲಿ ಹೆಚ್ಚು ಸಮಸ್ಯೆಗಳಿರಲ್ಲ. ಅನುವಾದ ಮಾಡುವಾಗ ವಿಷಯವಸ್ತುವನ್ನು ನಾನೇ ಆಯ್ಕೆ ಮಾಡಿಕೊಳ್ಳುತ್ತೇನೆ.
3. ಮುಖ್ಯವಾಹಿನಿಯಲ್ಲಿ ಇಲ್ಲದೇ ಇರುವ ಲೇಖಕರ ಕೃತಿಗಳು ಬೇರೆ ಭಾಷೆಗಳಿಗೆ ತಲುಪಬೇಕು. ಇಲ್ಲಿ ಲೇಖಕರು ಮುಖ್ಯವಲ್ಲ, ಕೃತಿ ಮುಖ್ಯವಾಗಬೇಕು. ಅನುವಾದ ಮಾಡುವವರೆಲ್ಲರೂ ದ್ವಿಭಾಷಿಗರು ಆಗಿರುವುದರಿಂದ ಎರಡೂ ಭಾಷೆಗಳಿಗೂ ಅನುವಾದವನ್ನು ನಾವೇ ಮಾಡಬಹುದು. ಕೊಂಕಣಿಯಲ್ಲಿಯೇ ಭಾಷಾ ಪ್ರಭೇಧಗಳು  ತುಂಬಾ ಇವೆ. ನಾನು ಪ್ರಾಮಾಣಿಕೃತ ಕೊಂಕಣಿ ಭಾಷೆಯನ್ನು ಬಳಸಿ ದೇವನಾಗರಿ ಲಿಪಿಯಲ್ಲೇ ಅನುವಾದ ಮಾಡುತ್ತಿದ್ದೀನಿ.
4. ಖಂಡಿತವಾಗಿಯೂ ಸಾಹಿತ್ಯ ಪ್ರಕಾಶನದಿಂದ ಓಳ್ಳೆಯ ಪ್ರೋತ್ಸಾಹ ಸಿಗುತ್ತದೆ. ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಅನುವಾದ ಮಾಡುವಾಗ ಸಂತೋಷ ಸಿಗುತ್ತೆ. ನಮ್ಮ ಸಾಹಿತ್ಯವನ್ನು ಇನ್ನೊಂದು ಭಾಷೆಗೆ ಕರೆದೊಯ್ಯುತ್ತಿದ್ದೀವಲ್ಲಾ ಎಂದು ಸಂತೃಪ್ತಿ. ಮರಾಠಿಯಲ್ಲಿರುವ ಸಾಹಿತ್ಯವನ್ನು ಕನ್ನಡಿಗರಿಗೆ ತಲುಪಿಸುತ್ತೇವೆ ಎಂಬ ಖುಷಿ. ಆದರೆ ಒಬ್ಬ ಅನುವಾದಕ ಎರಡೂ ಭಾಷೆಗ ಳಿಗೆ ನ್ಯಾಯ ಒದಗಿಸಬೇಕು ಎಂಬುದು ಇಲ್ಲಿ ಮುಖ್ಯ.
5. ಖಂಡಿತವಾಗಿಯೂ ದಕ್ಕುತ್ತದೆ. ಅನುವಾದಕರು ಸೃಜನಶೀಲ ಲೇಖಕರು ಅಲ್ಲ. ಆದರೆ ನಾವು ಒಳ್ಳೆಯ ಕೃತಿಯೊಂದನ್ನು ಆಯ್ಕೆ ಮಾಡುತ್ತೇವೆ. ಓದುಗರಿಗೆ ಅದರ ಮೂಲ ಕೃತಿಯನ್ನು ಓದಿದ್ದಷ್ಟೇ ಖುಷಿ ಆಗಬೇಕು. ಅನುವಾದದ ಮೂಲಕ ನಾವು ಒಂದು ಕೃತಿಯ ಮರುಸೃಷ್ಟಿ ಮಾಡುತ್ತೇವೆ ಎಂಬ ಖುಷಿ ನಮಗಿರುತ್ತದೆ.
ಈಗ ಅನುವಾದಕ್ಕೆ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿದೆ. 70ರ ದಶಕದಲ್ಲಿ ಅಷ್ಟೊಂದು ಅನುವಾದಗಳು ಆಗಿರಲಿಲ್ಲ. 80ರ ನಂತರ ತುಂಬಾ ಆಯ್ತು. ಓದಿನ ವ್ಯಾಪ್ತಿಯೂ ಹೆಚ್ಚಾಯಿತು. ಇದೀಗ ಅನುವಾದವನ್ನು  ಪ್ರಕಾಶಕರು ಇಷ್ಟಪಡುತ್ತಾರೆ. ಅವರಿಂದ ಪ್ರೋತ್ಸಾಹ ಪ್ರೇರಣೆ ಸಿಗುತ್ತದೆ. ಅನುವಾದಕ್ಕಾಗಿ ಮೂಲ ಲೇಖಕರ ಅನುಮತಿ ಸಿಗೋದು ಸ್ವಲ್ಪ ಕಷ್ಟ ಯಾಕೆಂದರೆ ಅವರಿಗೂ ಅನುವಾದಕರು ಯಾರು ಎಂಬುದು ಗೊತ್ತಿರುವುದಿಲ್ಲವಲ್ಲಾ. ಅನುವಾದಕರು ಅನುವಾದ ಮಾಡುವಾದ ಯಾವತ್ತೂ ಮೂಲ ಕೃತಿಗೆ ಧಕ್ಕೆ ತರಬಾರದು, ಅದಕ್ಕೆ ಅನ್ಯಾಯ ಮಾಡಬಾರದು. ಈ ದಶಕದಲ್ಲಿ ಅನುವಾದಕ್ಕೆ ಅವಕಾಶ ತುಂಬಾ ಇದೆ.ಅದನ್ನು ಬಳಸಿಕೊಳ್ಳಬೇಕು.
ಸಾಹಿತ್ಯ ಮತ್ತು ಅನುವಾದ ನಾನು ಇಷ್ಟಪಡುವ ಕ್ಷೇತ್ರವಾಗಿರುವುದರಿಂದ ನಾನು ಅನುವಾದ ಮಾಡುತ್ತೀನಿ. ಇದೊಂದು ಮರುಸೃಷ್ಟಿ ಆಗಿರುವುದರಿಂದ ಮೂಲ ಲೇಖಕರಷ್ಟೇ ಕೀರ್ತಿ ಮತ್ತು ಹೆಸರು ಬರುತ್ತದೆ. ನಾನು  ದ್ವಿಭಾಷಿಯಾಗಿರುವುದರಿಂದ ಈ  ಭಾಷಾ ಸಮುದಾಯದ ಮನಸ್ಥಿತಿ ನನಗೆ ಗೊತ್ತಿದೆ. ಅನುವಾದ ಮಾಡಿದ ಕೃತಿಯಾದರೂ ಓದುಗನಿಗೆ ಅದು ಮೂಲ ಕೃತಿಯನ್ನೋದುವ ಅನುಭವವನ್ನು ನೀಡುವಂತಿರಬೇಕು.
=====
ಮೀರಾ ಚಕ್ರವರ್ತಿ
ಬಂಗಾಳಿ
1. ನನಗೆ ಸಾಹಿತ್ಯದ ಬಗ್ಗೆತುಂಬಾ ಆಸಕ್ತಿ ಮತ್ತು ಅನುವಾದ ಮಾಡುತ್ತಿರುವುದು ಸ್ವಯಂ ಸ್ಫೂರ್ತಿಯಿಂದಲೇ. ನನ್ನ ಅಪ್ಪ ಕೇಂದ್ರ ಸರ್ಕಾರದ ಉದ್ಯೋಗಿ ಆಗಿದ್ದುದರಿಂದ ಅವರಿಗೆ ಆಗಾಗ ಬೇರೆ ಬೇರೆ ಊರುಗಳಿಗೆ ವರ್ಗವಾಗುತ್ತಿತ್ತು. ಇದರಿಂದಾಗಿ ನನಗೆ ಹಲವು ಊರು , ಭಾಷೆ ಮತ್ತು ಸಂಸ್ಕೃತಿಗಳ ಪರಿಚಯ ಆಯ್ತು. ಬಾಲ್ಯದಿಂದಲೇ ಈ ಎಲ್ಲ ಅನುಭವಗಳಿರುವುದರಿಂದ ನನಗೆ ಅನುವಾದ ಮಾಡುವ ಕಾರ್ಯವೂ ಸುಲಭ ಆಯಿತು. ನಾನು ಕರ್ನಾಟಕಕ್ಕೆ ಬಂದು 40 ವರ್ಷಗಳೇ ಆದವು. ಮೊದಲು ಇಲ್ಲಿನ ಜನರ ಜತೆ ಸಂವಾದ ನಡೆಸಲು ಕನ್ನಡ ಕಲಿತೆ. ಆಮೇಲೆ ಬಂಗಾಳಿ ಭಾಷೆಯಿಂದ ಕನ್ನಡ ಅನುವಾದ ಮಾಡುವುದು ಆರಂಭ ಮಾಡಿದೆ.
2. ನೋಡಿ, ಕನ್ನಡದಲ್ಲಿ ಹಲವಾರು ಸಂಸ್ಕೃತ ಪದಗಳ ಬಳಕೆಯಿದೆ. ನಾನು ಸಂಸ್ಕೃತ ಕಲಿತಿರುವುದರಿಂದ ನನಗೆ ಕನ್ನಡ ಭಾಷೆ ಕಲಿಯಲು ಸುಲಭವಾಯಿತು. ನಾನು ದೇವನೂರು ಮಹಾದೇವ ಅವರ 'ಕುಸುಮಬಾಲೆ'ಯನ್ನು, ವಚನಗಳನ್ನು ಬಂಗಾಳಿಗೆ ಅನುವಾದ ಮಾಡಿದ್ದೇನೆ. ಮಾತ್ರವಲ್ಲದೆ 'ನಿಶಿ ಕುಟುಂಬ', ಜೀವನಾನಂದ ದಾಸ್ ಅವರ ಕವಿತೆಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದೇನೆ. ಯಾವುದೇ ಕೃತಿಯನ್ನು ಅನುವಾದಿಸುವ ಮುನ್ನ ಅನುವಾದಕರು ಸಾಕಷ್ಟು ಹೋಂವರ್ಕ್ ಮಾಡಿಕೊಳ್ಳಬೇಕಾಗುತ್ತದೆ. ಇತರರಿಂದ ಸಲಹೆಗಳನ್ನು ಪಡೆದುಕೊಳ್ಳಬೇಕು. ಜತೆಗೆ ಇನ್ನೊಂದು ಸಂಸ್ಕೃತಿಯ ಪರಿಚಯ ನಮಗೆ ಇರಬೇಕು. ನನಗೆ ಹಲವಾರು ಊರುಗಳಲ್ಲಿ ಸಾಕಷ್ಟು ಫ್ರೆಂಡ್ಸ್ ಇದ್ದಾರೆ. ಅವರ ಒಡನಾಟದಿಂದ ಇತರ ಸಂಸ್ಕೃತಿಯ ಬಗ್ಗೆಯೂ ಅರಿವು ಸಿಕ್ಕಿತು.
3. ನಾವು ಸೋತಿದ್ದೇವೆ ಎಂದು ಹೇಳಲ್ಲ. ಇಲ್ಲಿನ ಅಭಿವೃದ್ಧಿ ತುಂಬಾ ನಿಧಾನವಾಗಿ ಆಗುತ್ತಿದೆ. ಅನುವಾದ ಮಾಡುವ ವಿಷಯದಲ್ಲಿ ಸಾಹಿತ್ಯ ಅಕಾಡೆಮಿ ಮಾತ್ರ ಆಸಕ್ತಿ ವಹಿಸಿ ಕಾರ್ಯಪ್ರವೃತ್ತವಾಗಿದೆ. ಅನುವಾದದ ಬಗ್ಗೆ ಹೇಳುವಾಗ ನಾವು ಸಾಹಿತ್ಯ ಅಕಾಡೆಮಿಯಿಂದಲೇ ಈ ಎಲ್ಲ ಕಾರ್ಯಗಳು ಆಗಬೇಕು ಎಂದು ಬಯಸುವುದು ತಪ್ಪು. ಅನುವಾದದಲ್ಲಿ ಹೆಚ್ಚಿನ ಅಭಿವೃದ್ಧಿ ಆಗಬೇಕಾದರೆ ನಾವೆಲ್ಲರೂ ಜವಾಬ್ದಾರಿಯನ್ನು ಹಂಚಿಕೊಳ್ಳಬೇಕು. ನೋಡಿ, ನಮ್ಮ ದೇಶದಲ್ಲಿ ಹಲವಾರು ಭಾಷೆಗಳಿವೆ. ಮನಸ್ಸು ಮಾಡಿದರೆ ಎಲ್ಲರಿಗೂ ಅನುವಾದ ಮಾಡುವ ಕೆಲಸದಲ್ಲಿ ತೊಡಗಬಹುದು. ಪತ್ರಿಕಾರಂಗವೂ ಇದಕ್ಕೆ ಪ್ರೋತ್ಸಾಹಕೊಟ್ಟರೆ ಇನ್ನೂ ಓಳ್ಳೆಯದು.
4. ನಿಜವಾಗಲು ಸಿಗುತ್ತೆ. ಅನುವಾದ ಕೂಡಾ ಸಾಹಿತ್ಯ ಸೃಷ್ಟಿಯೇ. ಇಲ್ಲಿಯೂ ಕೂಡಾ ನಾವು ಸೃಜನಶೀಲರಾಗಿರಬೇಕು. ಮೂಲ ಕೃತಿಯಲ್ಲಿರುವ ಸಂಸ್ಕೃತಿ, ಧೋರಣೆ, ಆಯಾಮಗಳನ್ನು ನಮ್ಮಲ್ಲಿ ತರಬೇಕಾದರೆ ನಾವು ಸೃಜನಶೀಲ ವ್ಯಕ್ತಿಗಳು ಆಗಲೇಬೇಕು. ಒಂದು ಪದವನ್ನು ಅಥವಾ ಸಾಲನ್ನು ಇದ್ದಕ್ಕಿದ್ದ ಹಾಗೇ ಅನುವಾದ ಮಾಡುವುದು ಕೆಟ್ಟ ಅನುವಾದ ಎಂದೆನಿಸಿಕೋಳ್ಳುತ್ತದೆ. ಅನುವಾದ ಮಾಡುವಾಗ ನಮ್ಮ ಶೈಲಿ ಕೂಡಾ ಪ್ರಭಾವಶಾಲಿಯಾಗಿರಬೇಕು. ಮಾತ್ರವಲ್ಲದೆ ಅನುವಾದದಲ್ಲಿ ಸರ್‌ಪ್ರೈಸಿಂಗ್ ಎಲಿಮೆಂಟ್ ಇರಬೇಕು. ಅಡಿಗರು ಎಷ್ಟೊಂದು ಚೆನ್ನಾಗಿ ಅನುವಾದ ಮಾಡುತ್ತಿದ್ದರು ಅಲ್ವಾ? ಅದು ಅನುವಾದ ಅಂತ ಗೊತ್ತೇ ಆಗಲ್ಲ. ಅನುವಾದ ಅಂದ್ರೆ ಹಾಗಿರಬೇಕು.
5. ಸಾಹಿತ್ಯ ಅಕಾಡೆಮಿಯಿಂದ ನನಗೆ ಓಳ್ಳೆಯ ಪ್ರೋತ್ಸಾಹ ಸಿಗುತ್ತದೆ. ಪತ್ರಿಕೆಗಳು ಕೂಡಾ ಹೆಚ್ಚಿನ ಪ್ರೋತ್ಸಾಹ ನೀಡುತ್ತಿವೆ. ಈ ಮೊದಲೇ ಹೇಳಿದಂತೆ ನನಗೆ ಸಾಹಿತ್ಯದಲ್ಲಿ ಹೆಚ್ಚಿನ ಆಸಕ್ತಿ ಇರುವುದರಿಂದಲೇ ನಾನು ತರ್ಜುಮೆ ಮಾಡುತ್ತೇನೆ.
=====
ಅಕ್ಷತಾ ದೇಶಪಾಂಡೆ
ಮರಾಠಿ
1. ಭಾಷೆ ಮೇಲೆ ಪ್ರೀತಿ ಇರಬೇಕು.ನನಗೆ ಇಷ್ಟವಾಗಿರುವುದರಿಂದ ಹಾಗು ಸ್ವಯಂ ಸ್ಫೂರ್ತಿಯಿಂದಲೇ ನಾನು ಅನುವಾದ ಮಾಡುತ್ತಿದ್ದೇನೆ. ಅನುವಾದಕರಿಗೆ ಎರಡೂ ಭಾಷೆಗಳ ಮೇಲೆ ಪ್ರಭುತ್ವವಿರಬೇಕು ಹಾಗಿದ್ದರೆ ಮಾತ್ರ ಅನುವಾದ ಮಾಡಬಹುದು.
2. ಈ ಮೊದಲೇ ಹೇಳಿದಂತೆ ಪರಿಪೂರ್ಣ ತೃಪ್ತಿಕರ ತರ್ಜುಮೆ ಮಾಡಬೇಕಾದರೆ ಭಾಷೆ ಮೇಲೆ ಪ್ರಭುತ್ವವಿರಬೇಕು. ಯಾವ  ಭಾಷೆಯಿಂದ ಅನುವಾದ ಮಾಡುತ್ತೇವೆಯೋ ಅದರ ಆಂತರಿಕ ಸ್ವಭಾವ ಬಗ್ಗೆ ಜ್ಞಾನವಿರಬೇಕು. ಮಾತ್ರವಲ್ಲದೆ ಮೂಲ ಕೃತಿಯ ಲೇಖಕರ ಜತೆ ಸಂಪೂರ್ಣವಾದ ಸಹಭಾಗಿತ್ವ ಮತ್ತು ಪಾರದರ್ಶಕತೆ ಇರಬೇಕು. ಮುಖ್ಯವಾಗಿ ಎರಡೂ  ಸಂಸ್ಕೃತಿಗಳ ಬಗ್ಗೆ ಮಾಹಿತಿ ಇರಬೇಕು. ಮೂಲ ಲೇಖಕರ ಅನುಮತಿ ಬೇಕೆ ಬೇಕು.
3. ನಮ್ಮಲ್ಲಿ ಅನುವಾದಕರು ಕಡಿಮೆ. ಆದರೆ ಮರಾಠಿಯಿಂದ ಕನ್ನಡಕ್ಕೆ ಮುಕ್ತತೆ ಇದೆ. ನಾನು ವಿಠ್ಠಲ ವೆಂಕಟೇಶ್  ಕಾಮತ್ ಅವರ ಆತ್ಮಕತೆಯನ್ನು ಕನ್ನಡಕ್ಕೆ (ಇಡ್ಲಿ, ಆರ್ಕಿಡ್ ಮತ್ತು ಆತ್ಮಬಲ) ಅನುವಾದಿಸಿದಾಗ ಅದು ಮರಾಠಿ ಸಾಹಿತ್ಯ ಕ್ಷೇತ್ರದಲ್ಲಿ ಪ್ರಥಮವಾಗಿತ್ತು. ಯಾವುದೇ ವಿಷಯವಾಗಲೀ ಅದು ನನ್ನ ಮನಸ್ಸನ್ನು ಮುಟ್ಟಿದರೆ ನಾನದನ್ನು ಅನುವಾದಿಸುತ್ತೇನೆ.
4. ಅನುವಾದದಲ್ಲಿ ತುಂಬ ತೃಪ್ತಿ ಇರುತ್ತದೆ. ಅನುವಾದ ಮಾಡುವುದು ಕೂಡಾ ಸೃಷ್ಟಿಯೇ. ನೀವೊಂದು ಪುಸ್ತಕವನ್ನು ಓದುವಾಗ ಅದು ಅನುವಾದಿತ ಕೃತಿ ಎಂದೆನಿಸಿಕೊಳ್ಳದೆ ಮೂಲ ಪುಸ್ತಕದಂತೆ ಓದಿಸಿಕೊಂಡು ಹೋಗಿ ಓದಿದ ನಂತರ ಓದುಗ ಇದು ಅನುವಾದಿತ ಕೃತಿಯೇ ಎಂದು ಅಚ್ಚರಿ ಪಟ್ಟುಕೊಳ್ಳುತ್ತಾನಲ್ಲ  ಆವಾಗಲೇ ನಮಗೆ ನಿಜವಾದ ಖುಷಿ  ಸಿಗುತ್ತದೆ.
5. ಪ್ರಕಾಶಕರಿಂದ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತದೆ. ಮರಾಠಿ ಸಾಹಿತ್ಯ ಪ್ರಕಾಶಕರಲ್ಲಿ ಅನುವಾದದ ಪುಸ್ತಕಗಳನ್ನು ಪ್ರಕಟಿಸುವ ಇಲಾಖೆಯೇ ಇದೆ. ಸಾಹಿತ್ಯ ಪ್ರಕಾಶನದಿಂದ ಒಳ್ಳೆಯ ಪ್ರೋತ್ಸಾಹ ಸಿಗುತ್ತಿದೆ. ಮರಾಠಿಯಲ್ಲಿರುವ ಸಾಹಿತ್ಯವನ್ನು ಕನ್ನಡಿಗರಿಗೆ ತಲುಪಿಸುತ್ತೇವೆ ಎಂಬ ಖುಷಿ. ಅನುವಾದಕ ಎರಡೂ ಭಾಷೆಗಳಿಗೆ ನ್ಯಾಯ ಒದಗಿಸಬೇಕಾದುದು ನಮ್ಮ ಆದ್ಯ ಕರ್ತವ್ಯ.
=====
ಕೆ. ಮಲರ್‌ವಿಳಿ
ತಮಿಳು
1. ಒಳ್ಳೆಯ ವಿಷಯ ಯಾವುದೇ ಇದ್ದರೆ ಅದನ್ನು ಇನ್ನೊಂದು ಭಾಷೆಗೆ ತರಬೇಕು. ಅನುವಾದ ಎಂಬುದು ಮನುಷ್ಯ ಮನಸ್ಸಿನ ಬೆಸುಗೆ. ಅಲ್ಲಿ ಹೊಟ್ಟೆ ಕಿಚ್ಚಿಗೆ ಆಸ್ಪದವಿಲ್ಲ. ನಾನು ಸ್ವಯಂಸ್ಫೂರ್ತಿಯಿಂದಲೇ ಅನುವಾದ ಮಾಡುತ್ತಿದ್ದೇನೆ.
2. ಮೂಲ ಕೃತಿಗೆ ಯಾವುದೇ ಕುಂದು ಬಾರದಂತೆ ಭಾಷಾಂತರ ಮಾಡಬೇಕು. ಅಲ್ಲಿಯ ಪದ, ತತ್ವ, ಭಾಷೆಯ ಸೊಗಡು, ಭಾವ ಕೂಡಾ ಬರಬೇಕು. ಅನುವಾದವನ್ನು ಪ್ರಾಮಾಣಿಕವಾಗಿ ಮಾಡಿದರೆ ಮಾತ್ರ ಮೂಲ ಕೃತಿಗೆ ನ್ಯಾಯ.
3.  ಕನ್ನಡ ಕೃತಿಗಳು ಸಾಕಷ್ಟು ತಮಿಳಿಗೆ ಹೋಗಿವೆ. ಅಲ್ಲಿ ಕನ್ನಡ ಅತೀ ಹೆಚ್ಚು ತೆರೆದುಕೊಂಡಿದೆ. ಆದಾಗ್ಯೂ, ಎಲ್ಲ  ಭಾಷೆಗಳ ಅನುವಾದಗಳೂ ಒಳ್ಳೆಯ ಪುರೋಗತಿ ಸಾಧಿಸುತ್ತಿವೆ ಎನ್ನುವುದು ಒಳ್ಳೆಯ ವಿಚಾರ. ನಾನು ಅನುವಾದಕ್ಕೆ ಕೃತಿಯನ್ನು ಆಯ್ಕೆ ಮಾಡಿಕೊಳ್ಳುವಾಗ ಅದರ ಸಾಹಿತ್ಯವನ್ನು ನೋಡುತ್ತೇನೆ, ಸಾಹಿತ್ಯದಲ್ಲಿನ ಶಕ್ತಿಯನ್ನು ನೋಡುತ್ತೇನೆ.
4.  ನಾನು ಸೃಜನಶೀಲ ಕವಿಯತ್ರಿಯೇನೂ ಅಲ್ಲ. ಅನುವಾದ ಮಾಡುವಾಗ ನನಗೆ ಕೃತಿ ರಚನೆ ಮಾಡಿದವರಷ್ಟೇ  ಆನಂದ ಸಿಗುತ್ತದೆ. ಅನುವಾದವೂ ತೃಪ್ತಿಯನ್ನು ನೀಡಿದ್ದು, ಅನುವಾದವೂ ಒಂದು ಸೃಜನಶೀಲ ಕ್ರಿಯೆ ಎಂಬುದು ನನ್ನ ಅಭಿಮತ.
5.  ಖಂಡಿತ ಸಿಗುತ್ತದೆ. ತಮಿಳಿಗರಿಗೆ ಕನ್ನಡ ಅನುವಾದಕರ ಬಗ್ಗೆ ಹೆಚ್ಚಿನ ಒಲವು ಇದೆ. ತಮಿಳಿನಿಂದ ಕನ್ನಡಕ್ಕೆ ಹೆಚ್ಚು ಕೃತಿಗಳು ಅನುವಾದವಾಗಿವೆ. ಆದ್ದರಿಂದ ಎರಡೂ ಕಡೆ ಒಳ್ಳೆಯ ಬಾಂಧವ್ಯವಿದೆ. ನಾನೇಕೆ ತರ್ಜುಮೆ ಮಾಡುತ್ತೀನಿ ಎಂದರೆ ನನಗೆ ಸಾಹಿತ್ಯದಲ್ಲಿ ಆಸಕ್ತಿ ಹೆಚ್ಚು. ಒಂದು ಭಾಷೆಯ ಸಾಹಿತ್ಯವನ್ನು ಇನ್ನೊಂದು ಭಾಷೆಗೆ ಕೊಂಡೊಯ್ಯುವಾಗ ಆನಂದ ಸಿಗುತ್ತದೆ. ನಾನು ನಮ್ಮ ಪ್ರಾದೇಶಿಕ ಭಾಷೆಗೆ ಬೆಲೆ ಕೊಟ್ಟಾಗ ಮಾತ್ರ ಭಾಷೆ ಬೆಳೆಯುತ್ತದೆ, ಉಳಿಯುತ್ತದೆ.
=====
ರಾಜೇಶ್ವರಿ
ತೆಲುಗು
1.  ನಾನು ಅನುವಾದ ಮಾಡುತ್ತಿರುವುದು ಸ್ವಯಂ ಸ್ಫೂರ್ತಿಯಿಂದಲೇ. ಬೆಂಗಳೂರಿನ ಸರ್ಕಾರಿ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿರುವುದರಿಂದ ಕನ್ನಡದ ಬಗ್ಗೆ ಆಸಕ್ತಿ ಬೆಳೆದು, ಕನ್ನಡ ಕಲಿತೆ. ನಾನು ಕನ್ನಡದಿಂದ ತೆಲುಗಿಗೂ, ತೆಲುಗಿನಿಂದ ಕನ್ನಡಕ್ಕೂ ಅನುವಾದ ಮಾಡಿದ್ದು ಕನ್ನಡದಿಂದ ತೆಲುಗಿಗೆ ಅನುವಾದ ಮಾಡಿದ್ದೇ ಜಾಸ್ತಿ.
2. ಅನುವಾದದಲ್ಲಿ ಪರಿಪೂರ್ಣತೆ ಸಿಗಬೇಕಾದರೆ ಅನುವಾದಕನು ಮೂಲ ಸಾಹಿತಿಯಾಗಿ ಪರಕಾಯ ಪ್ರವೇಶ ಮಾಡಬೇಕಾಗತ್ತದೆ. ಹಾಗೆಯೇ ಮೂಲ ಭಾವ ಪದಗಳ ಆತ್ಮೀಯತೆಯನ್ನು ಉಳಿಸುತ್ತಾ, ಇನ್ನೊಂದು ಭಾಷೆಯ ಸೌಂದರ್ಯವನ್ನು ಆವಾಹಿಸಬೇಕು. ಉದಾಹರಣೆಗೆ ಹೇಳುವುದಾದರೆ 'ಮಲೆಗಳಲ್ಲಿ ಮದುಮಗಳು' ಎಂಬುದು ಕನ್ನಡದಲ್ಲಿ ಹೇಳುವಾಗ ಎಷ್ಟು ಚೆನ್ನಾಗಿರುತ್ತೆ ಅಲ್ವಾ? ಅದನ್ನೇ  ತೆಲುಗಿನಲ್ಲಿ ಅನುವಾದ ಮಾಡಿದಾಗ 'ಕೊಂದಲಲೊ ಪೆಳ್ಳಿಕುಸುರು' ಎಂದಾಗುತ್ತದೆ. ಇಲ್ಲಿ ಅನುವಾದವನ್ನು ಗಮನಿಸಿದರೆ ಪರಿಪೂರ್ಣತೆಯ ಸ್ವಲ್ಪ ಕೊರತೆ ಇದ್ದೇ ಇರುತ್ತದೆ. ಭಾವಕ್ಕೆ ಚ್ಯುತಿ ಬರದಂತೆ ಭಾವನಾತ್ಮಕವಾಗಿ ಅನುವಾದ ಮಾಡಬೇಕಾಗಿ ಬರುತ್ತದೆ.
3. ಕನ್ನಡ ಸಾಹಿತಿಗಳು 8 ಜ್ಞಾನಪೀಠ ಪ್ರಶಸ್ತಿಗಳ ಮೂಲಕ ವಿಶ್ವ ವ್ಯಾಪ್ತಿಯ ಗೌರವವನ್ನು ಹೊಂದಿದ್ದಾರೆ. ಅವರ ಕಾವ್ಯ, ಕಾದಂಬರಿಗಳನ್ನು ಅನುವಾದ ಮಾಡಲು ಅನುವಾದಕರು ಅವಕಾಶ ಸಿಗಲೆಂದು ಬಯಸುತ್ತಾರೆ. ಕನ್ನಡ ಸಾಹಿತ್ಯದ ಅನುವಾದ ವಿಷಯವಾಗಿ ತೆಲುಗಿನ ಅನುವಾದಕರಿಗೆ ಹೆಚ್ಚಿನ ಆಸಕ್ತಿ ಇದೆ.  ತೆಲುಗು ಜನರು   ಬೇಗ ಕನ್ನಡ ಕಲಿತುಕೊಳ್ಳುತ್ತಾರೆ. ಆದರೆ ಕನ್ನಡದ ಜನರು ತೆಲುಗು ಬಗ್ಗೆ ಹೆಚ್ಚು ಆಸಕ್ತಿ ವಹಿಸುವುದಿಲ್ಲ.
4. ಕಾವ್ಯ ಅಥವಾ ಕಾದಂಬರಿಯ ರಚನೆಯಲ್ಲಿ ಪ್ರತಿಭೆ, ಅಭ್ಯಾಸ, ವ್ಯುತ್ಪತ್ತಿಗಳೆಂಬ ತ್ರಿಗುಣಗಳಿವೆ. ಅದರಲ್ಲಿ ಸಹಜವಾಗಿ ಪ್ರತಿಭೆಗೆ ಎಂದಿಗೂ ಆದ್ಯತೆ ಇದ್ದೇ ಇದೆ. ಅನುವಾದ ಮಾಡುವ ಸಮಯದಲ್ಲಿ ಹೆಚ್ಚಿನ ಅಭ್ಯಾಸ ಬೇಕು.
5. ಪ್ರಕಾಶಕರಿಗೆ ಕೆಲವು ಅನುವಾದಕರ ಬಗ್ಗೆ ಮಾತ್ರ ಮಾಹಿತಿಯಿದೆ. ಅವರು ಹೆಚ್ಚಿನ ಅನುವಾದಕರ ಬಗ್ಗೆ ಮಾಹಿತಿಯನ್ನು ಪಡೆದು ಅವರ ಅರ್ಹತೆಗಳನ್ನು ನೋಡಿ ಅನುವಾದವನ್ನು ಮಾಡಿಸಲು ಬಯಸಿದರೆ ಇದರಿಂದ ಅಭಿವೃದ್ಧಿ ಸಾಧ್ಯವಾಗುತ್ತದೆ.
- ರಶ್ಮಿ ಕಾಸರಗೋಡು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com