ಸಾಹಿತ್ಯ ಸಮ್ಮೇಳನಕ್ಕೆ ತೆರಳಲು ಮುಗಿಬಿದ್ದ ಜನತೆ

ಸಮ್ಮೇಳಕ್ಕೆ ತೆರಳಲು ಮುಗಿಬಿದ್ದ ಜನತೆ (ಸಂಗ್ರಹ ಚಿತ್ರ)
ಸಮ್ಮೇಳಕ್ಕೆ ತೆರಳಲು ಮುಗಿಬಿದ್ದ ಜನತೆ (ಸಂಗ್ರಹ ಚಿತ್ರ)

ಹಾಸನ: ಜೈನಕಾಶಿ ಶ್ರವಣಬೆಳಗೊಳದಲ್ಲಿ ನಡೆಯುತ್ತಿರುವ 81ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮಹಿಳೆಯರು ಮತ್ತು ಮಕ್ಕಳ ಹಿಂಡೆ ಹರಿದು ಬರುತ್ತಿದೆ. ಸಾಹಿತ್ಯಾಭಿಮಾನಿಗಳ ಜೊತೆಗೆ ಜನ ಮರುಳೋ-ಜಾತ್ರೆ ಮರುಳೋ ಅನ್ನೋ ಹಾಗೆ ಮಹಿಳೆಯರು ಮತ್ತು ಮಕ್ಕಳು ಸಮ್ಮೇಳನದತ್ತ ದಾವಿಸುತ್ತಿದ್ದಾರೆ.

ಇದಕ್ಕಾಗಿ ಭಾನುವಾರ ರಾಜ್ಯರಸ್ತೆ ಸಾರಿಗೆ ಬಸ್ ಗಳಿಗಾಗಿ ಮಹಿಳೆಯರು ಮತ್ತು ಮಕ್ಕಳು ಮುಗಿಬಿದ್ದಿದ್ದರು. ನಾನಾ ಜಿಲ್ಲೆಗಳಿಂದ ಆಗಮನ: ಸಮ್ಮೇಳನಕ್ಕೆ ಹಾಸನ ಜಿಲ್ಲೆಯಲ್ಲದೆ ಹೊರ ಜಿಲ್ಲೆಗಳಾದ ಕೊಡಗು, ಚಿಕ್ಕಮಗಳೂರು ಮೈಸೂರು, ತುಮಕೂರು, ಮಂಡ್ಯ, ದಕ್ಷಿಣ ಕನ್ನಡ ಸೇರಿದಂತೆ ಇತರೆ ಜಿಲ್ಲೆಗಳಿಂದ ಜನ ಸಾಗರೋಪಾದಿಯಲ್ಲಿ ಜಿಲ್ಲೆಗೆ ಆಗಮಿಸುತ್ತಿದ್ದಾರೆ.

ಕೊಡಗು, ದಕ್ಷಿಣ ಕನ್ನಡ, ಚಿಕ್ಕಮಗಳೂರು ಜಿಲ್ಲೆಯ ಜನತೆ ಹಾಸನಕ್ಕೆ ಆಗಮಿಸಿ ಜೈನ ಕಾಶಿ ಶ್ರವಣಬೆಳಗೊಳದತ್ತ ಹೋಗುತ್ತಿದ್ದರೆ, ಇನ್ನು ಮೈಸೂರು ಮಾರ್ಗದಿಂದ ಬರುವಂತಹ ಜನರು ಕೆ.ಆರ್.ಪೇಟೆ ಮೂಲಕ ಚನ್ನರಾಯ ಪಟ್ಟಣಕ್ಕೆ ಆಗಮಿಸಿ ಶ್ರವಣಬೆಳದತ್ತ ಸಾಗುತ್ತಿದ್ದಾರೆ. ಇನ್ನು ಹಾಸನ, ಆಲೂರು, ಸಕಲೇಶಪುರ, ಅರಕಲ ಗೂಡು, ಹೊಳೆನರಸೀಪುರ, ಬೇಲೂರು, ಅರಸೀಕೆರೆ, ಚನ್ನರಾಯಪಟ್ಟಣ ತಾಲೂಕುಗಳ ಜನರು ಸಹ ಶ್ರವಣಬೆಳಗೊಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ತೆರಳುತ್ತಿದ್ದಾರೆ. ಸಾರ್ವಜನಿಕರ ಅನುಕೂಲಕ್ಕೆ ತಕ್ಕಂತೆ ಸಾರಿಗೆ ಬಸ್ ಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಒಮ್ಮೆಯಾದ್ರೂ ನೋಡ್ಬೇಕು

ಪ್ರತಿದಿನಾ ಕೆಲ್ಸಾ ಇದ್ದೇ ಇರುತ್ತೇ, ಹಲವು ವರ್ಷದ ನಂತರ ಸಾಹಿತ್ಯ ಸಮ್ಮೇಳನ ಶ್ರವಣಬೆಳಗೊಳದಲ್ಲಿ ನಡೆಯುತ್ತಿರುವುದರಿಂದ ಒಮ್ಮೆಯಾದ್ರೂ ಸಾಹಿತ್ಯ ಸಮ್ಮೇಳನ ಹೆಂಗೆ ನಡೆಯುತ್ತದೆ ಅನ್ನೋದನ್ನು ಕಣ್ಣಿಂದ ನೋಡಬೇಕು. ಒಂದೂಮುಕ್ಕಾಲು ಕೋಟಿ ರು.ವೆಚ್ಚದಲ್ಲಿ ನಿರ್ಮಾಣ ಮಾಡಿರೋ ಬೃಹತ್ ವೇದಿಕೆನಾ ಯಾವ ರೀತಿ ಹಾಕಿದ್ದಾರೆ ಅಂತನಾದ್ರೂ ನೋಡ್ಬೇಕು ಇವರೆಲ್ಲರ ಆಸೆ. ಜಿಲ್ಲಾದ್ಯಂತ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿರುವುದರಿಂದ ಮಕ್ಕಳು ಗುಂಪು-ಗುಂಪಾಗಿ ಸಮ್ಮೇಳದತ್ತ ಸಾಗುತ್ತಿದ್ದಾರೆ.

30ಕ್ಕೂ ಹೆಚ್ಚು ಬಸ್ ಸಂಚಾರ
ಸಾಹಿತ್ಯ ಸಮ್ಮೇಳನಕ್ಕೆ ಹಾಸನ ವಿಭಾಗದಿಂದ ಸುಮಾರು 40 ಸಾರಿಗೆ ಬಸ್ ಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಆದರೆ ಭಾನುವಾರ ಸಮ್ಮೇಳನದತ್ತ ಹೋಗುವವರ ಸಂಖ್ಯೆ ಹೆಚ್ಚಾಗಿದ್ದರಿಂದ ಹಾಸನ ಬಸ್ ನಿಲ್ದಾಣದಿಂದಲೇ ಸುಮಾರು 30ಕ್ಕೂ ಹೆಚ್ಚು ಬಸ್‍ಗಳ ಸಂಚಾರ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಜೊತೆಗೆ ಪ್ರತಿ ತಾಲೂಕುಗಳಿಂದ ತಲಾ 5 ಬಸ್ ಗಳ ಸಂಚಾರ ನಡೆಸಲಿವೆ ಎಂದಿದ್ದ ಸಾರಿಗೆ ಇಲಾಖೆ, ಈಗ ಬಸ್‍ಗಳ ಸಂಖ್ಯೆ ಹೆಚ್ಚಿಸುವುದು ಅನಿವಾರ್ಯವಾಗಿದೆ.

ಹಬ್ಬದ ವಾತಾವರಣ
ಜಿಲ್ಲೆಯಲ್ಲದೇ ಹೊರ ಜಿಲ್ಲೆಗಳಿಂದ ಶ್ರವಣ ಬೆಳಗೊಳಕ್ಕೆ ಆಗಮಿಸುವಂತಹ ಜನರ ಅನುಕೂಲಕ್ಕಾಗಿ ಹಾಸನದಿಂದ ಶ್ರವಣಬೆಳಗೊಳ ಬಸ್ ನಿಲ್ದಾಣಕ್ಕೆ ನೇರ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದೆ. ಅಗತ್ಯಕ್ಕೆ ತಕ್ಕಂತೆ ಬಸ್‍ಗಳನ್ನು ಬಿಡಲಾಗುತ್ತಿದೆ. ಒಟ್ಟಿನಲ್ಲಿ ಸಮ್ಮೇಳನದತ್ತ ಜನರು ಸಾಗರೋ ಪಾದಿಯಲ್ಲಿ ಸಾಗುತ್ತಿರುವುದರಿಂದ ಜಿಲ್ಲೆಯಾದ್ಯಂತ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com