
ಶ್ರವಣಬೆಳಗೊಳ: ಅಕ್ಟೋಬರ್ ಒಳಗೆ ಭಾಷಾ ಮಾಧ್ಯಮ ಸಮಸ್ಯೆ ಇತ್ಯರ್ಥವಾಗದೇ ಇದ್ದಲ್ಲಿ ಸಾಹಿತ್ಯ ಪರಿಷತ್ ಮುಂದೆ ಆಮರಣಾಂತ ಉಪವಾಸ ಕುಳಿತುಕೊಳ್ಳುತ್ತೇವೆ! ಇದು ಕರ್ನಾಟಕ ಸರ್ಕಾರಕ್ಕೆ ಕನ್ನಡ ಸಾಹಿತ್ಯ ಪರಿಷತ್ ನೀಡಿರುವ ನೇರ ಖಡಕ್ ಎಚ್ಚರಿಕೆ.
ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕಸಾಪ ಅಧ್ಯಕ್ಷ ಪುಂಡಲೀಕ ಹಾಲಂಬಿ, ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲಿಯೇ ಇರಬೇಕೆಂಬ ನಿಟ್ಟಿನಲ್ಲಿ ಸರ್ಕಾರ ಇದೀಗ ಕೈಗೊಂಡ ತೀರ್ಮಾನ ಕೇವಲ ತಾತ್ಕಾಲಿಕ ಉಪಶಮನ. ಸಮಸ್ಯೆಯ ಪರಿಹಾರಕ್ಕೆ ಸರ್ವಪಕ್ಷ ಸಭೆ ಕರೆಯಬೇಕು. ಪ್ರಧಾನಿ ಬಳಿಗೆ ನಿಯೋಗ ಕರೆದೊಯ್ಯಬೇಕೆಂದು ಆಗ್ರಹಿಸಿದರು. ಸದ್ಯ ಸರ್ಕಾರ ಕೈಗೊಂಡಿರುವ ತೀರ್ಮಾನ ತಲೆನೋವಿರುವ ವ್ಯಕ್ತಿ ಸಾರಿಡಾನ್ ಮಾತ್ರೆ ತಿಂದ ಹಾಗಾಗುತ್ತದೆ. ಈ ನಿರ್ಧಾರದ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದರೆ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಕೇಂದ್ರದೊಂದಿಗೆ ಮಾತುಕತೆ ನಡೆಸಿ ಸೂಕ್ತ ಕಾನೂನು ತಿದ್ದುಪಡಿಗೆ ಒತ್ತಾಯಿಸಬೇಕು' ಎಂದರು.
ಬಲಿದಾನವಾದರೂ ಪರವಾಗಿಲ್ಲ
ಒಂದು ವೇಳೆ ಅಕ್ಟೋಬರ್ ಒಳಗಾಗಿ ಭಾಷಾ ಮಾಧ್ಯಮ ಸಮಸ್ಯೆ ಪರಿಹಾರ ಆಗದೇ ಇದ್ದಲ್ಲಿ ಸಾಹಿತ್ಯ ಪರಿಷತ್ ಮುಂದೆ ಆಮರಣಾಂತ ಉಪವಾಸ ನಡೆಸುವುದಾಗಿ ಘೋಷಿಸಿದರಲ್ಲದೇ, `ನನ್ನ ಬಲಿದಾನವಾದರೂ ಪರವಾಗಿಲ್ಲ. ಕನ್ನಡದ ಮೇಲಿನ ಅಚಲ ಪ್ರೀತಿಯಿಂದ ಈ ರೀತಿ ಮಾತನಾಡುತ್ತಿದ್ದೇನೆಯೇ ಹೊರತು ಭಾವೋದ್ವೇಗದಿಂದಲ್ಲ. ವೈಯಕ್ತಿಕ ಋಣ ನನ್ನ ಮೇಲಿದೆ' ಎಂದರು. ಮುಖ್ಯಮಂತ್ರಿ ಸಂಸದರೊಂದಿಗೆ ಸಭೆ ನಡೆಸಬೇಕು. ಸಂಸದರು ಸಂಸತ್‍ನಲ್ಲಿ ವಿಷಯ ಪ್ರಸ್ತಾಪಿಸಿ ಬದ್ಧತೆ ತೋರಬೇಕು.
ಆ ಮೂಲಕ ವಿಷಯದ ಗಾಂಭೀರ್ಯ ಕೇಂದ್ರಕ್ಕೆ ಮುಟ್ಟಬೇಕು ಎಂದು ಹೇಳಿದ ಅವರು, ಮುಂದಿನ ತಲೆಮಾರಿಗೆ ಕನ್ನಡವನ್ನು ತಲುಪಿಸಬೇಕಾಗಿದೆ. ಭಾವೋದ್ವೇಗ ಅಥವಾ ಅಭಿಮಾನದಿಂದ ಈ ಕೆಲಸ ಆಗುವುದಿಲ್ಲ. ಒಂದು ಆಂದೋಲದ ರೂಪದಲ್ಲಿ ಕಾರ್ಯಗಳಾಗಬೇಕು, ಸರ್ಕಾರವೂ ಪ್ರಯತ್ನಿಸಬೇಕು, ಕನ್ನಡಿಗರೂ ಕೈಜೋಡಿಸಬೇಕೆಂದು ಕರೆ ನೀಡಿದರು. ಈ ನಾಡಿನಲ್ಲಿ ಯಾವುದೇ ಕಾರ್ಯಕ್ರಮದಲ್ಲಿ ಸ್ವಯಂ ಪ್ರೇರಿತರಾಗಿ ಇಷ್ಟೊಂದು ಜನ ಸೇರುವುದಿಲ್ಲ. ಕನ್ನಡದ ಮೇಲಿನ ಅತೀವ ಪ್ರೀತಿ ಮತ್ತು ಪರಿಷತ್ ಮೇಲಿನ ಒಲವಿನಿಂದ ತಮ್ಮ ಜೇಬಿನಿಂದ ದುಡ್ಡು ಖರ್ಚು ಮಾಡಿಕೊಂಡು ಸಮ್ಮೇಳನಕ್ಕೆ ಆಗಮಿಸುತ್ತಾರೆ ಎಂದರು.
Advertisement