ಕನ್ನಡ ಪತಾಕೆ ಹಾರಿಸಿದ ಹಾಲಂಬಿ

ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪುಂಡಲೀಕ ಹಾಲಂಬಿ
ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪುಂಡಲೀಕ ಹಾಲಂಬಿ
Updated on

ಕಸಾಪ ಧ್ವಜಾರೋಹಣವನ್ನು ಪರಿಷತ್ತಿನ ರಾಜ್ಯಾಧ್ಯಕ್ಷ ಪುಂಡಲೀಕ ಹಾಲಂಬಿ ನೆರವೇರಿಸಿದರು. ನಾಡಧ್ವಜವನ್ನು ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಎಚ್ .ಎಲ್ ಜನಾರ್ಧನ್ ಮತ್ತು ರಾಷ್ಟ್ರಧ್ವಜವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್ .ಸಿ. ಮಹದೇವಪ್ಪ ನರವೇರಿಸಿದರು. ಬೆಳಗೊಳಕ್ಕೆ ಹೊಂದಿಕೊಂಡಿರುವಂತೆ ಸುಮಾರು ರು2 ಕೋಟಿ ವೆಚ್ಚದಲ್ಲಿ ಸರ್ವಾಂಗ ಸುಂದರವಾಗಿ ನಿರ್ಮಿಸಿರುವ ನಾಲ್ವಡಿ ಕೃಷ್ಣ ರಾಜ ಒಡೆಯರ್ ಅವರ ಬೃಹತ್ ವೇದಿಕೆ ಮುಂಭಾಗ ಧ್ವಜಾರೋಹಣ ನಡೆಸಲಾಯಿತು. ಶಾಸಕ ಸಿ.ಎನ್. ಬಾಲಕೃಷ್ಣ, ಎ.ಮಂಜು, ಜಿಲ್ಲಾಧಿಕಾರಿ ಉಮೇಶ್ ಕುಸ್ಗುಲ್ , ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಎನ್. ಗೋಪಾಲಕೃಷ್ಣ, ಎಸ್‍ಪಿ ರವಿ ದ್ಯಾಮಪ್ಪ ಚನ್ನಣ್ಣನವರ ಇದ್ದರು.

ದೊರೆಯ ಆಗಮನಕ್ಕೆ ಒಂದು ಗಂಟೆ ಕಾಯ್ದರು
ಪೂರ್ವ ನಿಗದಿಯಂತೆ ಸಾಹಿತ್ಯ ಸಮ್ಮೇಳನವು ಬೆಳಗ್ಗೆ 10.30ಕ್ಕೆ ಆರಂಭವಾಗಬೇಕಿತ್ತು. ಆದರೆ ಸಿಎಂ ಸಿದ್ದರಾಮಯ್ಯ ವೇದಿಕೆಗೆ ಆಗಮಿಸಿದಾಗ ಗಂಟೆ 11.25. 10.25ಕ್ಕೆ ವೇದಿಕೆ ಏರಿದ್ದ ಸಮ್ಮೇಳನಾಧ್ಯಕ್ಷ ಸಿದ್ಧಲಿಂಗಯ್ಯ, ಚಾರುಕೀರ್ತಿ ಭಟ್ಟಾರಕರು, ಎಸ್.ಎಲ್.ಭೈರಪ್ಪ, ನಾ. ಡಿ'ಸೋಜಾ ಸೇರಿದಂತೆ ಇತರರು ಒಂದು ತಾಸು ವೇದಿಕೆಯಲ್ಲೇ ಕಾಯ್ದರು. ಕಿಕ್ಕಿರಿದ ಸಭಾಂಗಣದ ಸಹ ಸಿಎಂ ಬರುವಿಕೆಗಾಗಿ ಬಹುಕಾಲ ಎದುರು ನೋಡುವಂತಾಯಿತು.

ಸಮಯ ಮೀರಿದವರಿಗೆ ಪ್ರೇಕ್ಷಕರ ತರಾಟೆ
ಉದ್ಘಾಟನಾ ಕಾರ್ಯಕ್ರಮ ಒಂದು ತಾಸು ತಡವಾಗಿದ್ದರಿಂದ ಸಹಜವಾಗಿ ಪ್ರಧಾನ ವೇದಿಕೆ ಮತ್ತು ಸಮಾನಾಂತರ ವೇದಿಕೆಯಲ್ಲಿ ನಡೆಯಬೇಕಿದ್ದ ಗೋಷ್ಠಿಗಳೆಲ್ಲವೂ ವಿಳಂಬವಾಗಿ ಆರಂಭವಾದವು. ಗೊರೂರು ರಾಮಸ್ವಾಮಿ ಅಯ್ಯಂಗಾರ್ ವೇದಿಕೆಯಲ್ಲಿ ನಡೆಯಬೇಕಿದ್ದ ಮೊದಲ ಗೋಷ್ಠಿಯ ಅವಧಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ವಿಸ್ಮೃತವಾಗಿ ನಡೆದಿತ್ತು. ಈ ವೇಳೆ ಜನರೇ ಆಕ್ಷೇಪ ವ್ಯಕ್ತಪಡಿಸಿ ಮೊದಲು ಸಮಯಕ್ಕೆ ಸರಿಯಾಗಿ ಗೋಷ್ಠಿ ನಡೆಸಿ, ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಳ್ಳಿ ಎಂದು ಸಂಘಟಕರನ್ನು ತರಾಟೆಗೆ  ತೆಗೆದುಕೊಂಡರು.

ಮಾಜಿ ಶಾಸಕರಿಗೆ ಪ್ರವೇಶ ನೀಡಲಿಲ್ಲ!
ಮಾಜಿ ಶಾಸಕರನ್ನು ಪೊಲೀಸರು ತಡೆದರು ಎಂಬುದು ಸಮ್ಮೇಳನದ ಉದ್ಘಾಟನೆ ವೇಳೆ ಬಾರಿ ಗದ್ದಲಕ್ಕೆಕಾರಣವಾಯಿತು. ಮಾಜಿ ಶಾಸಕರಾದ ಪುಟ್ಟೇಗೌಡ, ವಿಶ್ವನಾಥ್ ಅವರು ಪ್ರಧಾನ ವೇದಿಕೆ ಬಳಿ ಬರುತ್ತಿದ್ದಂತೆ ಪೊಲೀಸರು ಅವಕಾಶ ನೀಡಲಿಲ್ಲ. ಇದರಿಂದ ಕೆರಳಿದ ಇಬ್ಬರೂ ಮಾಜಿಗಳು ದೊಡ್ಡ ದನಿಯಲ್ಲಿ ಪ್ರತಿರೋಧ ವ್ಯಕ್ತಪಡಿಸಿದರು. ಇದರಿಂದ ಅಲ್ಲಿದ್ದ ಅವರ ಬೆಂಬಲಿಗರೂ ಕೂಗಾಡಿ, ಸಭಾಂಗಣದ ಗಮನವನ್ನು ತಮ್ಮತ್ತ ಸೆಳೆದುಕೊಳ್ಳುವ ಪ್ರಯತ್ನ ಮಾಡಿದರು.

ಮೆನುವಿನಲ್ಲಿ ಇಲ್ಲದಿದ್ದರೂ ರಾರಾಜಿಸುತ್ತಿದೆ ರಾಗಿ ಮುದ್ದೆ
ಅಖಿಲ ಭಾರತ ಸಾಹಿತ್ಯ ಸಮ್ಮೇಳನವೆಂದರೆ ಭೂರಿಭೋಜನವಿರುತ್ತದೆ. ಆದರೆ ಗಣ್ಯರೂ ರಾಗಿ ಮುದ್ದೆಗೆ ಮಾರು ಹೋಗಿರುವುದರಿಂದ ಆತಿಥ್ಯದಲ್ಲಿ ರಾಗಿ ಮುದ್ದೆ ಸೊಪ್ಪು ಸಾರು ಸೇರಿದೆ. ದೇವೇಗೌಡರು ಪ್ರಧಾನಿಯಾಗಿದ್ದಾಗ ಇಡಿ ರಾಷ್ಟ್ರಕ್ಕೆ ರಾಗಿ ಮುದ್ದೆಯನ್ನು ಪರಿಚಯಿಸಿದರು. ಇದುವರೆಗೂ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮೆನುವಿನಲ್ಲಿ ಮುದ್ದೆ ರಾರಾಜಿಸಿರಲಿಲ್ಲ. ಶ್ರವಣಬೆಳಗೊಳದಲ್ಲಿ ಅತಿ ಗಣ್ಯರಿಗಾಗಿಯೇ ಪ್ರತ್ಯೇಕವಾಗಿ ದಾಸೋಹದ ವ್ಯವಸ್ಥೆ ಕಲ್ಪಿಸಿದ್ದು, ರಾಗಿ ಮುದ್ದೆಗೆ ಬೇಡಿಕೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಬಾಣಸಿಗರನ್ನು ಬಳಸಿಕೊಂಡು ಮುದ್ದೆಗಳು ತಯಾರುಗುತ್ತಿವೆ. ರಾಗಿ ಮುದ್ದೆ ಸಾರು ಎರಡೂ ರುಚಿಕರ ಭೋಜನವಾಗಿರುವುದಷ್ಟೇ ಅಲ್ಲ, ಇದು ತಾಲೂಕಿನ ಎಲ್ಲ ಜನಸಾಮಾನ್ಯರ ಅಡುಗೆಯೂ ಹೌದು.

ಗಮನಸೆಳೆದ ವಾರ್ತಾ ಇಲಾಖೆ ವಸ್ತು ಪ್ರದರ್ಶನ
ಜೈನ ಕಾಶಿಯಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದಲ್ಲಿ ಪ್ರಧಾನ ವೇದಿಕೆ ಮುಂಭಾಗ ನಿರ್ಮಿಸಿರುವ ವಾರ್ತಾ ಇಲಾಖೆ ವಸ್ತು ಪ್ರದರ್ಶನ ಗಮನ ಸೆಳೆಯಿತು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡ ಸಾಹಿತಿಗಳ ಪುತ್ಥಳಿಯನ್ನು ದಾಟಿದರೆ ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟವರ ಹೆಸರು ಮತ್ತು ಇಸವಿ, ಭಾರತರತ್ನ ಪ್ರಶಸ್ತಿ, ಕರ್ನಾಟಕ ರತ್ನ ಪ್ರಶಸ್ತಿ ಪಡೆದವರ ಹೆಸರು, ಭಾವಚಿತ್ರ ಸೇರಿದಂತೆ ಸಮಗ್ರ ಮಾಹಿತಿ ಹಾಕಲಾಗಿದೆ. ಸಾಹಿತಿಗಳೊಂದಿಗೆ ಮುಖ್ಯ ಮಂತ್ರಿಗಳ ಭಾವಚಿತ್ರವೂ ಇದೆ. ಹಾಗೆಯೇ ಇತ್ತೀಚೆಗೆ ರಾಜ್ಯದ 12 ನಗರಗಳ ಹೆಸರನ್ನು ಕನ್ನಡೀಕರಣಗೊಳಿಸಿದ ಮಾಹಿತಿ ಇದೆ.

ಗಣ್ಯರ ನಿಧನಕ್ಕೆ ಸಂತಾಪ
ಇತ್ತೀಚೆಗೆ ನಿಧನರಾದ ಸರೋಜಿನಿ ಮಹಿಷಿ, ವೃಷಬೇಂದ್ರ ಸ್ವಾಮಿ ಮತ್ತು ಆರ್.ಕೆ.ಲಕ್ಷ್ಮಣ್ ಅವರ ಆತ್ಮಕ್ಕೆ ಶಾಂತಿ ಕೋರಿ ಇಡೀ ಸಮ್ಮೇಳನ ಒಂದು ನಿಮಿಷ ಮೌನಾಚರಣೆ ಮಾಡಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com