
ಶ್ರವಣಬೆಳಗೊಳ: ಭಾಷಾ ಮಾಧ್ಯಮದ ವಿಚಾರವಾಗಿ ಬರುವ ಅಕ್ಟೋಬರ್ ಒಳಗೆ ಸೂಕ್ತ ಪರಿಹಾರ ಸಿಗದಿದ್ದರೆ ಸಾಹಿತ್ಯ ಪರಿಷತ್ತಿನ ಎದುರು ಆಮರಣಾಂತ ಉಪವಾಸ ಕೈಗೊಳ್ಳುತ್ತೇನೆ ಎಂದು ಏರು ಹೊತ್ತಿನಲ್ಲಿ ಘೋಷಿಸಿ ಚಪ್ಪಾಳೆ ಗಿಟ್ಟಿಸಿಕೊಂಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿಯವರಿಗೆ ಕನ್ನಡಾಭಿಮಾನಿಗಳು ಮಾತಿನ ಭೋಜನ ಮಾಡಿಸಿದರು.
ಕಾನೂನಿನ ಚೌಕಟ್ಟಿನಲ್ಲಿ ಇತ್ಯರ್ಥವಾಗ ಬೇಕಾಗಿರುವ ವಿಷಯವನ್ನು ಭಾವನಾತ್ಮಕವಾಗಿ ಮಾರ್ಪಡಿಸಲು ಸಾಹಿತ್ಯ ಪರಿಷತ್ತಿನಂಥ ಜವಾಬ್ದಾರಿ ಸ್ಥಾನದಲ್ಲಿದ್ದವರು ಪ್ರಯತ್ನಿಸಿದ್ದು ಎಷ್ಟು ಸರಿ ಎಂದು ಕಲಬುರಗಿಯಿಂದ ಬಂದಿದ್ದ ಬಸವರಾಜ ಪಾಟೀಲ ಪ್ರಶ್ನಿಸಿದರೆ, ಬೆಳಗಾವಿಯಿಂದ ಬಂದ ಸೌಜನ್ಯಾ ಕದಂ ಅವರು, ನೋಡಿ, ನಮ್ಮ ಇಬ್ರೂ ಮಕ್ಕಳು
ಹೈಸ್ಕೂಲು ಓದಾಕತ್ತಾರ. ನಮ್ಮ ಮನೆ ಮಾತು ಮರಾಠಿ. ಆದ್ರೂ ನಾವು ಚೆನ್ನಾಗಿ ಕನ್ನಡ ಮಾತಾಡುತ್ತೇವೆ. ನಮಗೇನು ನಮ್ ಹುಡುಗ್ರನ್ ಇಂಗ್ಲಿಷ್ ಮೀಡಿಯಮ್ಮಿಗೇ
ಕಳುಹಿಸಬೇಕು ಅಂತಿರಲಿಲ್ಲ. ಚಲೋ ಕನ್ನಡ ಶಾಲಿ ಇದ್ರೆ ಅದ್ಕೇ ಹಾಕ್ತಿದ್ವಿ. ನಾವ್ ಇರೋ ರಾಜ್ಯದ ಭಾಷೆಯಲ್ಲಿ ಓದ್ಸೋದಕ್ಕೆ ನಮಗೇನ್ ಅಡ್ಡಿ ಇರ್ಲಿಲ್ಲ. ಇನ್ ಉಪವಾಸ
ಗಿಪವಾಸದ ಬಗ್ಗೆ ಹೇಳೋದಾದ್ರೆ, ಉಪವಾಸ ಶರೀರಕ್ಕೆ ಒಳ್ಳೇದ್ರಿ.
ಆದ್ರೆ ನಮ್ ಕಾನೂನು ನಾವ್ ಮುರೀಲಿಕ್ಕೆ ಉಪವಾಸ ಮಾಡೋದು ಸರಿ ಇಲ್ರಿ ಎಂದರು. ಉಪವಾಸ ಮಾಡುವುದು ಅಂದ್ರೆ ಮಿಂದು ಮಿಂದು ಬೂದಿಯಲ್ಲಿ ಉರುಳಾಡಿದಂತೆ ಎಂದು ಕಾರ್ಕಳದಿಂದ ಬಂದ ಗಣೇಶ ಪೈ ಸಲಹೆ ನೀಡಿದರು. ಮುಳ್ಳನ್ನು ಮುಳ್ಳಿನಿಂದ ತೆಗೆಯಬೇಕು. ಕಾನೂನಿನ ಸಮಸ್ಯೆಯನ್ನು ಕಾನೂನಿನಿಂದ ಬಗೆಹರಿಸಿಕೊಳ್ಳಬೇಕು. ಉಪವಾಸ ಮಾಡಿ ಜೀವ ಬಿಡುತ್ತೇವೆ ಅನ್ನುವುದಕ್ಕೆ ನಮ್ಮನ್ನೇನು ಬ್ರಿಟಿಷರು ಆಳುತ್ತಿಲ್ಲವಲ್ಲ. ಹಾವೇರಿಯಿಂದ ಬಂದ ಸಂಜು ಬಿರಾದಾರಖಾರವಾಗಿ ಪ್ರಶ್ನಿಸಿದರು. ಇನ್ನು ಹಾಲಂಬಿಯವರು ಉಪವಾಸ ಕುಳಿತರೆ ನಾವೂ ಅವರನ್ನು ಬೆಂಬಲಿಸಿ ಉಪವಾಸ ಕುಳಿತುಕೊಳ್ಳಲು ಸಿದ್ಧ.
ಕಾನೂನಿನ ಚೌಕಟ್ಟಿನಲ್ಲಿ ಬಗೆಹರಿಯಬೇಕಾದ ಸಮಸ್ಯೆ ಉಪವಾಸದಿಂದ ಬಗೆಹರಿಯುತ್ತದೆ ಎಂಬುದನ್ನು ಅವರು ಮನವರಿಕೆ ಮಾಡಿಕೊಡ ಬೇಕಾಗುತ್ತದೆ ಎಂದು ಕುಮಟಾದಿಂದ ಬಂದ ಪುರುಷೋತ್ತಮ ಹೆಗಡೆ ಬೆಂಬಲ ವ್ಯಕ್ತಪಡಿಸಿದರು. ಏರುಹೊತ್ತಿನಲ್ಲಿ ಹಾಲಂಬಿ ಹೊತ್ತಿಸಿದ ಕಿಡಿ ಇಳಿಹೊತ್ತಿನಲ್ಲಿ ಹೊಗೆಯಾಡುತ್ತಿತ್ತು.
Advertisement