81ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಡೆದ ಕವಿಗೋಷ್ಠಿ(ಸಂಗ್ರಹ ಚಿತ್ರ)
81ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಡೆದ ಕವಿಗೋಷ್ಠಿ(ಸಂಗ್ರಹ ಚಿತ್ರ)

ಗೋಷ್ಠಿ ಸ್ಥಳಾಂತರ; ಪ್ರೇಕ್ಷಕರಲ್ಲಿ ಗೊಂದಲ

Published on

ಶ್ರವಣಬೆಳಗೊಳ: ಸಮಾನಾಂತರ ವೇದಿಕೆಯಲ್ಲಿ ಕನ್ನಡ ಚಲನಚಿತ್ರ ಗೋಷ್ಠಿ ನಿಗದಿಪಡಿಸಿದ್ದಕ್ಕೆ ಚಲನಚಿತ್ರ ರಂಗದ ಹಿರಿಯರು, ನಟರು ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆಯಿತು.

ಮಂಗಳವಾರ ಬೆಳಗ್ಗೆ ಗೋಷ್ಠಿ ನಿಗದಿಗೊಳಿಸಿದ್ದ ಸಮಾನಾಂತರ ವೇದಿಕೆ ಜನರಿಲ್ಲದೆ ಭಣಗುಡುತ್ತಿತ್ತು. ಇದನ್ನು ಕಂಡ ನಿರ್ಮಾಪಕ ಸಾ.ರಾ.ಗೋವಿಂದ, ಹಿರಿಯ ನಿರ್ದೇಶಕ ರಾಜೇಂದ್ರಸಿಂಗ್ ಬಾಬು, ನಟಿ ಜಯಮಾಲಾ ಸೇರಿದಂದೆ ಹಲವು ನಟ, ನಟಿಯರು ಬೇಸರ ವ್ಯಕ್ತಪಡಿಸಿದರು. ಗೋಷ್ಠಿಯನ್ನು ಆಲಿಸಲು ಪ್ರೇಕ್ಷಕರೇ ಇಲ್ಲದೆ ಹೋದರೆ, ನಾವು ಯಾರ ಎದುರು ವಿಷಯ ಮಂಡಿಸಬೇಕು. ಕನ್ನಡ ಚಲನಚಿತ್ರ ಕನ್ನಡ ಭಾಷೆಯ ಅವಿಭಾಜ್ಯ ಅಂಗ. ಈ ಕ್ಷೇತ್ರ ಪ್ರಾಮುಖ್ಯ ಪಡೆದುಕೊಂಡಿದೆ.

ಹೀಗಾಗಿ ಜನರೇ ಇಲ್ಲದ ವೇದಿಕೆಯಲ್ಲಿ ಗೋಷ್ಠಿ ನಡೆಸಿದರೆ ಯಾವುದೇ ಪ್ರಯೋಜನವಾಗದು. ಯಾರಿಗಾಗಿ ನಾವು ಗೋಷ್ಠಿ ನಡೆಸಬೇಕು ಎಂದು ಅಲವತ್ತುಕೊಂಡರು. ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿನ ಪ್ರಧಾನ ವೇದಿಕೆಯಿಂದ ಕೂಗಳತೆ ದೂರದಲ್ಲಿ ಇರುವ ಸಮನಾಂತರ ವೇದಿಕೆಯಲ್ಲಿ ಕನ್ನಡ ಚಲನಚಿತ್ರದ ಬಗ್ಗೆ ಏರ್ಪಡಿಸಿದ್ದ ಗೋಷ್ಠಿಯ ಅಧ್ಯಕ್ಷತೆಯನ್ನು ಎಸ್.ರಾಜೇಂದ್ರಸಿಂಗ್ ಬಾಬು ವಹಿಸಬೇಕಿತ್ತು. ವಿವಿಧ ವಿಷಯಗಳ ಬಗ್ಗೆ ನಾಗತಿಹಳ್ಳಿ ಚಂದ್ರಶೇಖರ್ (ಚಿತ್ರ ಸಾಹಿತ್ಯ), ಟಿ.ಎಸ್.ನಾಗಾಭರಣ (ರಿಮೇಕ್-ಡಬ್ಬಿಂಗ್) ಮತ್ತು ಡಿ.ಸುಮನಾ ಕಿತ್ತೂರು (ಕನ್ನಡ ಚಿತ್ರರಂಗ-ಸ್ಥಿತ್ಯಂತರದ ನೆಲೆಯಲ್ಲಿ) ಕುರಿತು ವಿಚಾರ ಮಂಡಿಸಬೇಕಿತ್ತು.

ಆದರೆ ಇದಕ್ಕಾಗಿ ಸಿದ್ಧತೆ ಮಾಡಿಕೊಂಡು ಅವರು ಹೋದರೆ ವೇದಿಕೆಯ ಬಹುತೇಕ ಖುರ್ಚಿಗಳು ಖಾಲಿ ಹೊಡೆಯುತ್ತಿದ್ದವು. ಇಡೀ ವೇದಿಕೆಯಲ್ಲಿ ಒಂದು ರೀತಿಯ ಮೌನ ಆವರಿಸಿತ್ತು. ಇದರಿಂದ ಇರುಸುಮುರುಸಿಗೊಂಡ ಸಿನಿಮಾ ರಂಗದವರು, ಪ್ರಧಾನ ವೇದಿಕೆಯಲ್ಲಿ ಗೋಷ್ಠಿಗೆ ಅವಕಾಶ ಮಾಡಿಕೊಡಿ ಎಂದು ಕಸಾಪ ಅಧ್ಯಕ್ಷ ಪುಂಡಲೀಕ ಹಾಲಂಬಿ ಅವರಲ್ಲಿ ಮನವಿ ಮಾಡಿದರು. ಇದಕ್ಕೆ ಹಾಲಂಬಿ ಸ್ಪಂದಿಸಿ ಗೋಷ್ಠಿಗೆ ಅನುವು ಮಾಡಿಕೊಟ್ಟರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com