81ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದಲಿಂಗಯ್ಯ (ಸಂಗ್ರಹ ಚಿತ್ರ)
81ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದಲಿಂಗಯ್ಯ (ಸಂಗ್ರಹ ಚಿತ್ರ)

ಹಿಂದಿ ಹೇರಿಕೆ ವಿರೋಧಿಸಿ: ಸಿದ್ದಲಿಂಗಯ್ಯ

ಶ್ರವಣಬೆಳಗೊಳ: ದಕ್ಷಿಣದ ರಾಜ್ಯಗಳ ಮೇಲೆ ಹಿಂದಿ ಹೇರಿಕೆಯ ಅಪಾಯವನ್ನು ಒತ್ತಿಹೇಳಿದ 81ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸಿದ್ದಲಿಂಗಯ್ಯನವರು, ಕೇಂದ್ರ ಸರ್ಕಾರವು  ಹಿಂದಿಯಲ್ಲಿ ಪತ್ರಗಳನ್ನು ಬರೆದರೆ ಅಚ್ಚಕನ್ನಡದಲ್ಲಿ ಉತ್ತರವನ್ನು ನೀಡಿ ಎಂದು ಸರ್ಕಾರಕ್ಕೆ ಸಲಹೆ ನೀಡಿದರು.

ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಸಿದ್ದಲಿಂಗಯ್ಯ ಅವರು, ಇದು ಕನ್ನಡ ಸಾಹಿತ್ಯ ಸಮ್ಮೇಳನದ ಮುಕ್ತಾಯವಲ್ಲ, ಕನ್ನಡಕ್ಕಾಗಿನ ಮುಂದಿನ ಹೋರಾಟದ ಆರಂಭ. ತಮಗೆ ನೀಡಿದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನವು ಈ  ನಾಡಿನ ಎಲ್ಲ ಶೋಷಿತ ವರ್ಗದವರಿಗೆ, ಬಡವರಿಗೆ ದೊರೆತ ಗೌರವವಾಗಿದೆ. ಕನ್ನಡಕ್ಕೆ ಅಳಿವಿಲ್ಲ, ಕನ್ನಡಕ್ಕೆ ಸಾವಿಲ್ಲ, ಕನ್ನಡವನ್ನು ಕುಗ್ಗಿಸುವ ಶಕ್ತಿ ಯಾರಿಗೂ ಇಲ್ಲ ಎಂದು ಅವರು ಘೋಷಿಸಿದರು.

ಎಲ್ಲ ಜಾತಿಗಳಲ್ಲಿ ಇರುವ ಶೋಷಿತರು, ಬಡವರು ಮತ್ತು ಅಸಹಾಯಕರನ್ನೇ ಸೇರಿಸಿಕೊಂಡು ದಲಿತ ಚಳವಳಿಗೆ ಹೊಸ ರೂಪ ನೀಡಬೇಕಾಗಿದೆ. ಈ ವಿಶಾಲಾರ್ಥದ ತಳಹದಿಯಲ್ಲಿ ಚಿಂತನೆ ನಡೆಸಬೇಕಾಗಿದೆ ಎಂದು ಸಮ್ಮೇಳನಾಧ್ಯಕ್ಷ ಡಾ. ಸಿದ್ದಲಿಂಗಯ್ಯ ಹೇಳಿದರು. ದಲಿತ ಸಮಸ್ಯೆ ದಲಿತರದ್ದಲ್ಲ. ಅದು ಸಮಾಜದ ಸಮಸ್ಯೆ. ಹಾಗಾಗಿ ಸಮಾಜದ ಎಲ್ಲ ಬಡವರನ್ನು ಒಗ್ಗೂಡಿಸಿಕೊಂಡೇ ಹೋರಾಟ ಮಾಡಬೇಕಾಗಿದೆ. ಇದು ಎಲ್ಲ ವರ್ಗಗಳ ಬದುಕುವ ಸ್ಥಿತಿಯಲ್ಲಿ ಬದಲಾವಣೆ ಆಗಿದೆ. ಈ ಸೂಕ್ಷ್ಮತೆಯನ್ನು ಅರಿತು ಚಳವಳಿ ರೂಪಿಸಬೇಕಾಗಿದೆ. ಏಕಾಏಕಿ ಮೇಲ್ವರ್ಗದ ಮೇಲೆ ಆಕ್ರೋಶ ವ್ಯಕ್ತಪಡಿಸಿ ಬೈಯ್ಯುವುದಲ್ಲ.

ಎಲ್ಲ ಬಡವರನ್ನು ಜತೆಗೂಡಿಸಿಕೊಂಡು ದಲಿತ ಸಮಸ್ಯೆಯನ್ನು ಬಗೆಹರಿಸಬೇಕೆಂಬುದು ನನ್ನ ಚಿಂತನೆಯಾಗಿದೆ ಎಂದು ಮಂಗಳವಾರ `ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ' ಗೋಷ್ಠಿಯಲ್ಲಿ ಪ್ರತಿಪಾದಿಸಿದರು. ನುಡಿಸಿರಿ ಸಮ್ಮೇಳನದಲ್ಲಿ ದಲಿತ ಸಂಘರ್ಷ ಸಮಿತಿಯು ಸುಟ್ಟು ಹಾಕಬೇಕೆಂದು ಹೇಳಿದ್ದ ಮನುಸ್ಮತಿ ಕೃತಿ ಬಿಡುಗಡೆ ಮಾಡಿದ್ದೀನಿ ನಿಜ. ಈ ಬಗ್ಗೆ ತಪ್ಪಾಗಿ ಅರ್ಥೈಸಬೇಕಿಲ್ಲ. ನನ್ನದು ಮನುಸ್ಮೃತಿ ಬಗ್ಗೆ ಈಗಲೂ ಕಡು ವಿರೋಧ. ಅಂದು ತಜ್ಞರೊಬ್ಬರನ್ನು ನೇಮಿಸಿ ಮನುಸ್ಮೃತಿ ಕೃತಿಯಲ್ಲಿ ಇದ್ದ ಅಸಮಾನತೆ ಅಂಶಗಳನ್ನು ಕಿತ್ತು ಹಾಕಿ, ಸಮ ಸಮಾಜಕ್ಕೆ ಬೇಕಾದ ಉತ್ತಮಾಂಶಗಳನ್ನು ಹಾಕಿ ಮುದ್ರಿಸಲಾಗಿತ್ತು. ಈ ಕಾರಣಕ್ಕೆ ಬಿಡುಗಡೆ ಮಾಡಿದೆ ಎಂದರು.

ಸಮಾರೋಪ ಭಾಷಣ ಮಾಡಿದ ಕಮಲಾ ಹಂಪನಾ ಅವರು, ರಾಜ್ಯವು ದ್ವಿಭಾಷಾ ನೀತಿಯನ್ನು ಅನುಸರಿಸಬೇಕು. ಪ್ರಾಥಮಿಕ ಪೂರ್ವಹಂತದಿಂದಲೇ ಕನ್ನಡ ಮಾಧ್ಯಮ
ಮಾಡಬೇಕು ಹಾಗೂ ಇಂಗ್ಲಿಷನ್ನು ಒಂದು ಸಂವಹನ ಅಥವ ಸಂಪರ್ಕ ಭಾಷೆಯನ್ನಾಗಿ ಕಲಿಸಬೇಕು ಎಂದು ಅಭಿಪ್ರಾಯಪಟ್ಟರು. ರಾಜ್ಯ ಭಾಷೆಯೇ ಆ ರಾಜ್ಯದ ಜನರ ಮಾತೃಭಾಷೆ ಎಂದು ಪರಿಗಣಿಸಬೇಕು. ಈ ಸಂಬಂಧದಲ್ಲಿ ಒಂದು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತರಬೇಕು ಮತ್ತು ಹಿಂದಿ ಭಾಷೆ ಹೇರಿಕೆಯ ಕುರಿತೂ ಅವರು ಎಚ್ಚರಿಸಿದರು. ದೆಹಲಿಯಲ್ಲಿ ಒಂದು ವೃತ್ತಕ್ಕೆ ಒಂದು ರಸ್ತೆಗೆ ಮಹಾಕವಿ ಕುವೆಂಪು ಅವರ ಹೆಸರನ್ನು ಇಡಬೇಕು. ಈ ದಿಶೆಯಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಇದಕ್ಕೂ ಮೊದಲು ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕನ್ನಡದ ವಿಷಯದಲ್ಲಿ ಯಾವುದೇ ರೀತಿಯ ಹೋರಾಟ ಜರುಗಿದರೂ ಅದಕ್ಕೆ ತಮ್ಮ ಬೆಂಬಲವಿದೆ ಎಂದರು. ಪರಿಷತ್ತಿನ ಮಾಜಿ ಅಧ್ಯಕ್ಷರುಗಳಾದ ಪ್ರೊ.ಹಂಪನಾ, ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ, ಡಾ. ಸಾ.ಶಿ.ಮರುಳಯ್ಯ, ಹರಿಕೃಷ್ಣ ಪುನರೂರು, ಡಾ.ನಲ್ಲೂರುಪ್ರಸಾದ ಅವರಿಗೆ ಶತಮಾನೋತ್ಸವದ ಗೌರವವನ್ನು ಸಲ್ಲಿಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಸಮ್ಮೇಳನಾಧ್ಯಕ್ಷರ ಹುಟ್ಟುಹಬ್ಬದ ಅಂಗವಾಗಿ ಕೇಕ್ ಕತ್ತರಿಸಲಾಯಿತು.

Related Stories

No stories found.

Advertisement

X
Kannada Prabha
www.kannadaprabha.com