ಕನ್ನಡ ಕಡ್ಡಾಯ ಜನಾಂದೋಲನಕ್ಕೆ ಗಡುವು..!

81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆ ಬಿದಿದ್ದು, ಕನ್ನಡ ಕಡ್ಡಾಯಕ್ಕೆ ಜನಾಂದೋಲನ ರೂಪಿಸುವಂತೆ ಸಮ್ಮೇಳನದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ...
81ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (ಸಂಗ್ರಹ ಚಿತ್ರ)
81ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (ಸಂಗ್ರಹ ಚಿತ್ರ)

ಶ್ರವಣಬೆಳಗೊಳ: 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆ ಬಿದಿದ್ದು, ಕನ್ನಡ ಕಡ್ಡಾಯಕ್ಕೆ ಜನಾಂದೋಲನ ರೂಪಿಸುವಂತೆ ಸಮ್ಮೇಳನದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಅವಧಿಯೊಳಗೆ ಬೇಡಿಕೆ ಈಡೇರದಿದ್ದರೆ ತೀವ್ರ ಹೋರಾಟ ನಡೆಸುವಂತೆ ನಿರ್ಧಾರ ಕೈಗೊಳ್ಳಲಾಗಿದೆ.

ರಾಜ್ಯದ ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಮಾಧ್ಯಮ ಕಡ್ಡಾಯಗೊಳಿಸಲು ಸರ್ಕಾರ ಪ್ರಬಲವಾದ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸ ಬೇಕು. ಈ ಹಿನ್ನೆಲೆಯಲ್ಲಿ ಸಂವಿಧಾನ
ತಿದ್ದುಪಡಿ ಮಾಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಇದರ ನೇತೃತ್ವವನ್ನು ಮುಖ್ಯಮಂತ್ರಿಗಳೇ ವಹಿಸಬೇಕು ಎಂದು 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಿರ್ಣಯಿಸಿದೆ.

ಮಂಗಳವಾರ ನಡೆದ ಸಮ್ಮೇಳನದ ಬಹಿರಂಗ ಅಧಿವೇಶನದಲ್ಲಿ ನಿರ್ಣಯವನ್ನು ಮಂಡಿಸಿದ ಕಸಾಪ ಗೌರವ ಕಾರ್ಯದರ್ಶಿ ಸಿ.ಕೆ. ರಾಮೇಗೌಡ, ಸುಪ್ರೀಂ ಕೋರ್ಟ್ ತೀರ್ಪಿನಿಂದ ಕನ್ನಡವೂ ಸೇರಿದಂತೆ ಪ್ರಾದೇಶಿಕ ಭಾಷೆಗಳಿಗೆ ತೀವ್ರ ಹಿನ್ನಡೆಯಾಗಿದೆ. ಭಾರತ ಒಕ್ಕೂಟ ವ್ಯವಸ್ಥೆಯಲ್ಲಿನ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳನ್ನು ಒಗ್ಗೂಡಿಸಿಕೊಂಡು, ಪ್ರಾದೇಶಿಕ ಭಾಷೆಗಳ ಸಾರ್ವಭೌಮತೆ ಎತ್ತಿ ಹಿಡಿಯಲು ಭಾರತ ಸಂವಿಧಾನ ತಿದ್ದುಪಡಿ ಮಾಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಇದರ ನೇತೃತ್ವವನ್ನು ಸಿಎಂ ಸಿದ್ದರಾಮಯ್ಯ ವಹಿಸಿಕೊಳ್ಳಬೇಕೆಂದು ನಿರ್ಣಯಿಸಿರುವುದಾಗಿ ತಿಳಿಸಿದರು.

ಕಸಾಪ ಅಧ್ಯಕ್ಷ ಪುಂಡಲೀಕ ಹಾಲಂಬಿ ಅವರು ಮಾತನಾಡಿ, ಪ್ರಾಥಮಿಕ ಹಂತದಲ್ಲಿ ಕನ್ನಡ ಮಾಧ್ಯಮ ಕಡ್ಡಾಯಗೊಳಿಸುವುದನ್ನು ಒಂದು ಜನಾಂದೋಲನ ಮಾಡುವ ನಿಟ್ಟಿನಲ್ಲಿ ಈ ವೇದಿಕೆ ತಯಾರಿ ಮಾಡಿತು. ಇದೀಗ ಕೇವಲ ನಿರ್ಣಯ ತೆಗೆದುಕೊಂಡು ಕಸಾಪ ಅಥವ ಕನ್ನಡಿಗರಾಗಲಿ ಸುಮ್ಮನಿರುವುದಲ್ಲ. ಈ ನಾಡಿನ ಎಲ್ಲ ಜನಪ್ರತಿನಿಧಿಗಳು ಸಹ ಇದನ್ನು ಸಮ್ಮತಿಸಿ ಪ್ರಯತ್ನ ನಡೆಸಬೇಕು ಎಂದರು. ಪ್ರಾಥಮಿಕ ಶಿಕ್ಷಣ ಕನ್ನಡದಲ್ಲೇ ಆಗುವ ಜೊತೆಗೆ ಏಕರೂಪ ಶಿಕ್ಷಣ ಅನುಷ್ಠಾನಕ್ಕೆ ಬರಬೇಕು. ಕನ್ನಡ ಮಾಧ್ಯಮ ಶಾಲೆಗಳನ್ನು ಅಭಿವೃದ್ಧಿಪಡಿಸಬೇಕು. ಒಂದು ವೇಳೆ ಜನಪ್ರತಿನಿಧಿಗಳು ಜಾಣ ಕುರುಡು ವಹಿಸಿದರೆ ಜನರು ಬೀದಿಗಿಳಿದು ಹೋರಾಟ ನಡೆಸುವ ಆಂದೋಲನವನ್ನು ಕಸಾಪ ಸೃಷ್ಟಿಸುತ್ತದೆ ಇದು ಭಾವೋದ್ವೇಗದ ಮಾತಲ್ಲ ಎಂದರು.

ಹಾಗೆಯೇ ಮುಂದಿನ ಸಮ್ಮೇಳನದೊಳಗೆ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಮಾಧ್ಯಮ ಕಡ್ಡಾಯವಾಗುವ ತೀರ್ಮಾನವಾಗಬೇಕು. ಇಲ್ಲವಾದರೆ ಸಾಹಿತ್ಯ ಪರಿಷತ್ತೇ ಹೋರಾಟದ ನೇತೃತ್ವ ವಹಿಸುತ್ತದೆ ಎಂಬ ಕಟು ಸಂದೇಶವನ್ನೂ ರವಾನಿಸಲಾಗಿದೆ.

ವಿಧಾನ ಮಂಡಲದಲ್ಲಿ ಭಾಷಾ ಮಾಧ್ಯಮ ವಿಚಾರವಾಗಿ ಚರ್ಚಿಸಿ ಕೇಂದ್ರದ ಮೇಲೆ ಒತ್ತಡ ಹೇರಬೇಕು. ಮುಖ್ಯಮಂತ್ರಿಯವರ ನಿಯೋಗ ಪ್ರಧಾನಿ ಬಳಿ ತೆರಳಬೇಕು, ರಾಜ್ಯದ ಎಲ್ಲ ರಾಜಕೀಯ ನಾಯಕರು ಈ ವಿಚಾರ ಒಪ್ಪಿ ದುಡಿಯಬೇಕು. ಈಗ ಕಠಿಣ ಹೆಜ್ಜೆ ಇಡದೇ ಇದ್ದರೆ ಮುಂದಿನ 25 ವರ್ಷಗಳಲ್ಲಿ ನಮ್ಮ ಮಕ್ಕಳ ನಾಲಿಗೆಯಲ್ಲಿ ಕನ್ನಡ ನಲಿಯದು, ಕನ್ನಡ ಅಸ್ತಿತ್ವದಲ್ಲಿಯೇ ಇರದು.
-ಪುಂಡಲೀಕ ಹಾಲಂಬಿ, ಕಸಾಪ ಅಧ್ಯಕ್ಷ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com