ಕನ್ನಡಕ್ಕಾಗಿ ಮಿಡಿದ ಮಾಜಿ ಸಿಎಂಗಳ ಮನ!

81ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡ (ಸಂಗ್ರಹ ಚಿತ್ರ)
81ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡ (ಸಂಗ್ರಹ ಚಿತ್ರ)

ಶ್ರವಣಬೆಳಗೊಳ: ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಕಾಣಿಸಿಕೊಂಡು ಕನ್ನಡ ಅಳಿವು- ಉಳಿವಿನ ಬಗ್ಗೆ ಮಾತನಾಡಿ ಕನ್ನಡ ಭಾಷೆ ಬಗ್ಗೆ ಕಾಳಜಿ ಮೆರೆದರು. ಇದು 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತೊಂದು ದಾಖಲೆಯಾಯಿತು.

ಮಂಗಳವಾರ ರಾಜರ್ಷಿ ನಾಲ್ವಡಿ ಕೃಷ್ಣ ರಾಜ ಒಡೆಯರ್ ವೇದಿಕೆಯಲ್ಲಿ ನಾಡು, ನುಡಿಗೆ ಸೇವೆ ಸಲ್ಲಿಸಿದ ಗಣ್ಯರು, ಸಾಹಿತಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಈಗ ರಾಜ್ಯ ಸರ್ಕಾರ 1ರಿಂದ 5ನೇ ತರಗತಿಯವರೆಗಿನ ಪ್ರಾಥಮಿಕ ಶಿಕ್ಷಣ ಕನ್ನಡ ಮಾಧ್ಯಮದಲ್ಲಿ ಇರಬೇಕು ಎಂದು ನಿರ್ಧರಿಸಿದೆ. ಇದಕ್ಕೆ ಸಂಪೂರ್ಣ ಸಹಕಾರ ನೀಡಲಾಗುವುದು. ಆ ಬಗ್ಗೆ ಮರು ಮಾತಿಲ್ಲ. ಕನ್ನಡ ಈಗ ಯಾವ ಸ್ಥಾನಮಾನ ಹೊಂದಿದೆ ಎಂಬ ಬಗ್ಗೆ ಚಿಂತಿಸಿ ಒಗ್ಗೂಡಿ ಹೋರಾಟ ಮಾಡೋಣ. ಅದರಲ್ಲಿ ಯಾವ ದಾಕ್ಷಿಣ್ಯ ಇಲ್ಲ. ಸರ್ಕಾರದ ಜೊತೆಗೆ ಕನ್ನಡ ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲೆ ಎಂಬುದು ಕೂಡ ಮುಖ್ಯ ಎಂದರು.

ಚೀಟಿ ನೀಡಿದೆ ಅವಕಾಶ ನೀಡಲಿಲ್ಲ
1981ರಲ್ಲಿ ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್‍ನಲ್ಲಿ ಸಾಹಿತಿಗಳಾದ ಸಿದ್ದಯ್ಯ ಪುರಾಣಿಕ, ಲಂಕೇಶ್ ಮತ್ತಿತರು ನನಗೆ ಸನ್ಮಾನ ಏರ್ಪಡಿಸಿದ್ದರು. ಆಗ ಸಾಹಿತಿಗಳು, ಜೆ.ಎಚ್. ಪಟೇಲ್ ಅವರು ಮಾತ್ರ ಲೋಕಸಭೆ, ವಿಧಾನಸಭೆಯಲ್ಲಿ ಕನ್ನಡದಲ್ಲಿ ಮಾತನಾಡುತ್ತಾರೆ. ನೀವು ಲೋಕಸಭೆಯಲ್ಲಿ ಕನ್ನಡದಲ್ಲಿಯೇ ಮಾತನಾಡಬೇಕು ಎಂದು ಸೂಚನೆ ನೀಡಿದರು. ನಾನು ಒಪ್ಪಿದೆ.

ಅದರಂತೆ ಆಗ ಲೋಕಸಭೆ ಸ್ಪೀಕರ್ ಆಗಿದ್ದ ಶಿವರಾಜ್ ಪಾಟೀಲ್ ಅವರಿಗೆ ನಾನು ಕನ್ನಡ ದಲ್ಲಿ ಮಾತನಾಡುತ್ತೇನೆ ಎಂದು ಚೀಟಿ ಕೊಟ್ಟೆ. ಕೂಡಲೇ ತಮ್ಮ ಚೇಂಬರ್‍ಗೆ ಕರೆಸಿಕೊಂಡ ಶಿವರಾಜ್ ಪಾಟೀಲ್, ನನಗೂ ಕರ್ನಾಟಕಕ್ಕೂ ಸಂಬಂಧವಿದೆ. ತಮಿಳುನಾಡಿನಿಂದ ಕಾವೇರಿ ವಿಷಯದಲ್ಲಿ ನಿಮಗೆ ತುಂಬಾ ಅನ್ಯಾಯವಾಗಿದೆ. ನೀವು ಹಿಂದಿ ಅಥವಾ ಇಂಗ್ಲೀಷ್ ನಲ್ಲಿ ಮಾತನಾಡಿದರೆ ಮಾತ್ರ ಸಮಸ್ಯೆ ಅಳ-ಅಗಲ ಗೊತ್ತಾಗುತ್ತದೆ ಎಂದರು. ಇದೇ ಸಮಯಕ್ಕೆ ಕಾಂಗ್ರೆಸ್ ನ ಮಣಿಶಂಕರ್ ಅಯ್ಯರ್ ಅವರು ಒಂದೂವರೆ ಗಂಟೆ ಕಾವೇರಿ ವಿವಾದದ ಬಗ್ಗೆ ಭಾಷಣ ಮಾಡಿದ್ದರು.

ಅಂದು ಸಿಎಂ ಆಗಿದ್ದ ಎಸ್. ಬಂಗಾರಪ್ಪನವರು, ಕಾವೇರಿ ವಿಷಯಕ್ಕೆ ಸುಗ್ರೀವಾಜ್ಞೆ ಹೊರಡಿಸಿದ್ದನ್ನು ಸುಪ್ರೀಂ ಕೋರ್ಟ್‍ನಲ್ಲಿ ಪ್ರಶ್ನಿಸಿ ಬಿಟ್ಟಿದ್ದರು. ಬಹಳ ಕಠಿಣ ಪರಿಸ್ಥಿತಿ ಕರ್ನಾಟಕಕ್ಕೆ ಎದುರಾಗಿತ್ತು. ನನಗೆ ದಿಕ್ಕು ತೋಚದಂತಾಯಿತು, ಬೆಂಗಳೂರಿನಲ್ಲಿ ಕನ್ನಡದಲ್ಲಿಯೇ ಮಾತನಾಡುತ್ತೇನೆ ಎಂದು ಮಾತು ಕೊಟ್ಟಿದ್ದೇನೆ. ಈಗ ಮಾತನಾಡಲು ಆಗುತ್ತಿಲ್ಲ ಏನು ಮಾಡೋದು ಎಂಬ ಉಭಯ ಸಂಕಟಕ್ಕೆ ಸಿಲುಕಿಕೊಂಡೆ. ಕೊನೆಗೆ ಬಹುತೇಕ ಮುಖಂಡರು, ನೀವು ಇಂಗ್ಲೀಷ್‍ನಯೇ ಮಾತನಾಡಿ ನಿಮ್ಮ ರಾಜ್ಯದ ಹಿತದೃಷ್ಟಿಯಿಂದ ಎಂದು ಒತ್ತಡ ಹೇರಿದರು.

ಆಗ ಬೇರೆ ದಾರಿಯಿಲ್ಲದೇ ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಆಗಿರುವ ಅನ್ಯಾಯವನ್ನು ಬಿಡಿಸಿ ಬಿಡಿಸಿ ಹೇಳಿ ಕೇಂದ್ರಕ್ಕೆ ಮನವರಿಕೆ ಮಾಡಿಕೊಟ್ಟೆ. ನನ್ನ ಭಾಷಣ ಮುಗಿದ ನಂತರ ಇಂದಿರಾಜಿ ಅವರ ಆಪ್ತರಾಗಿದ್ದ ಮರಗತಂ ಚಂದ್ರಶೇಖರ್ ಬಂದು, ಕಾವೇರಿ ಸಮಸ್ಯೆ ಬಗ್ಗೆ ನಿಜ ದರ್ಶನ ಮಾಡಿಸಿದಿರಿ ಎಂದರು. ಮೈಸೂರಿನ ಅರಸರೊಂದಿಗೆ ಸಂಬಂಧ ಹೊಂದಿರುವ ವಿಜಯರಾಜೇ ಸಿಂಧೆ ಅವರು ಕೂಡ ಬೆನ್ನು ತಟ್ಟಿ, ತಮಿಳುನಾಡು ನಿಮಗೆ ಎಷ್ಟೊಂದು ಅನ್ಯಾಯ ಮಾಡಿದೆ ಎಂಬುದು ಈಗ ತಿಳಿಯಿತು ಎಂದರು.

ಹೀಗೆ ಕೆಲ ಸಮಯ ನೀಡಿದ ಭರವಸೆಯಂತೆ ನಡೆದುಕೊಳ್ಳಲು ಆಗದ ಸಂಕಟ ಸ್ಥಿತಿ ನಿರ್ಮಾಣ ಆಗುತ್ತದೆ ಎಂದು ನೆನೆದ ಗೌಡರು, ಕನ್ನಡ ಸಾಹಿತ್ಯ ಮತ್ತು ಭಾಷೆ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಕೀಯ ನುಸುಳಬಾರದು ಎಂದರು.

ಪ್ರತಿ ಮನೆ-ಮನಗಳಲ್ಲಿ ಕನ್ನಡ ಬೆಳಗಲಿ
ಇದಕ್ಕೂ ಮೊದಲು ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂಪ್ಪ, ಸಾಹಿತ್ಯ ಸಮ್ಮೇಳನಗಳಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಅಕ್ಷರಶಃ ಜಾರಿಗೊಳಿಸುವುದು ರಾಜ್ಯ ಸರ್ಕಾರದ ಕರ್ತವ್ಯ. ಇಂದು ಕನ್ನಡ ನಾಡಿನಲ್ಲಿ ಕನ್ನಡ ಉಳಿಸಿ ಎಂದು ಹೋರಾಟ ಮಾಡಬೇಕಾದ ದುಸ್ಥಿತಿ ಬಂದಿರುವುದು ದುರ್ದೈವದ ಸಂಗತಿ. ರಾಜ್ಯ ಸರ್ಕಾರ ಉದ್ಯೋಗದಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕು.

ಎಲ್ಲ ಉದ್ಯೋಗಗಳು ಬೇರೆ ರಾಜ್ಯಗಳವರ ಪಾಲಾಗುತ್ತಿದ್ದು, ಶೇ.90ರಷ್ಟು ಕನ್ನಡಿಗರು ಉದ್ಯೋಗವಿಲ್ಲದೇ ಬೀದಿಯಲ್ಲಿ ನಿಲ್ಲುವಂತ ಕೆಟ್ಟ ಪರಿಸ್ಥಿತಿ ಇದೆ. ಇದೇ ವೇಳೆ ಕನ್ನಡಿಗರ ಮಕ್ಕಳು ಕನ್ನಡ ಮಾತನಾಡಲು ಹಿಂದೇಟು ಹಾಕುತ್ತಿದ್ದರೆ. ಹಾಗಾಗಿ ಕನ್ನಡಿಗರ ಮನೆ-ಮನಗಳಲ್ಲಿ ಕನ್ನಡ ಬೆಳಗುವುದು ಮುಖ್ಯ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com