ಸಾಹಿತ್ಯಾಸಕ್ತರಿಗಾಗಿ ಅಡುಗೆ ಮಾಡುತ್ತಿರುವ ಬಾಣಸಿಗರು (ಸಂಗ್ರಹ ಚಿತ್ರ)
ಸಾಹಿತ್ಯಾಸಕ್ತರಿಗಾಗಿ ಅಡುಗೆ ಮಾಡುತ್ತಿರುವ ಬಾಣಸಿಗರು (ಸಂಗ್ರಹ ಚಿತ್ರ)

ಸಾಹಿತ್ಯಾಸಕ್ತರಿಗೆ ಭೂರಿ ಭೋಜನ

81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಮತ್ತು ಕರಾವಳಿ ಶೈಲಿಯ ಭೋಜನಗಳನ್ನು ತಯಾರಿಸಲಾಗುತ್ತಿದೆ..
Published on

ಶ್ರವಣಬೆಳಗೊಳ: ಶ್ರವಣಬೆಳಗೊಳದಲ್ಲಿ ನಡೆಯುತ್ತಿರುವ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿರುವ ಸಾಹಿತ್ಯಾಸಕ್ತರಿಗಾಗಿ ಭೂರಿ ಭೋಜನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಸಮ್ಮೇಳನದ ಪ್ರಮುಖ ವೇದಿಕೆ ನಾಲ್ವಡಿ ಕೃಷರಾಜ ಒಡೆಯರ್ ವೇದಿಕೆಯ ಪಕ್ಕದಲ್ಲಿಯೇ ಬೃಹತ್ 5 ಅಡುಗೆ ಮನೆಗಳನ್ನು ನಿರ್ಮಿಸಲಾಗಿದ್ದು, 450ಕ್ಕೂ ಅಧಿಕ ಸಿಬ್ಬಂದಿ ಅಡುಗೆ ತಯಾರಿಯ ಮೇಲುಸ್ತುವಾರಿ ನೋಡುಕೊಳ್ಳುತ್ತಿದ್ದಾರೆ. ರಾಜ್ಯ ವಿವಿಧ ಮೂಲೆಗಳಿಂದ ಆಗಮಿಸುವ ಸಾಹಿತ್ಯಾಸಕ್ತರಿಗಾಗಿ ವಿವಿಧ ಬಗೆಯ ಭಕ್ಷ್ಯಭೋಜನಗಳನ್ನು ತಯಾರಿಸಲಾಗುತ್ತಿದೆ. ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಮತ್ತು ಕರಾವಳಿ ಶೈಲಿಯ ಭೋಜನಗಳನ್ನು ತಯಾರಿಸಲಾಗುತ್ತಿದೆ.

ಉತ್ತರ ಕರ್ನಾಟಕದ ಶೈಲಿಯ ವಿಶೇಷ ಜೋಳದ ರೊಟ್ಟಿ, ಸಜ್ಜೆ ರೊಟ್ಟಿ, ದಕ್ಷಿಣ ಕರ್ನಾಟಕದ ಶೈಲಿಯ ರಾಗಿಮುದ್ದೆ, ಸೊಪ್ಪುಸಾರು, ಅನ್ನ ಸಾಂಬಾರ್, ಕರಾವಳಿ ಶೈಲಿಯ ಕೆಲ ಖಾದ್ಯಗಳು ಮತ್ತು ಸಿಹಿ ಪದಾರ್ಥಗಳಾದ ಪೂರಿ, ಬಾದಾಮಿಪೂರಿ ವಿವಿಧ ಖಾದ್ಯಗಳನ್ನು ಸಿದ್ಧಪಡಿಸಲಾಗಿದೆ. ಮಧ್ಯಾಹ್ನದ ಊಟಕ್ಕಾಗಿ ಈಗಾಗಲೇ ಸುಮಾರು 25 ಸಾವಿರ ರಾಗಿ ಮುದ್ದೆಗಳನ್ನು ಸಿದ್ಧಪಡಿಸಲಾಗಿದೆ. ಇದಲ್ಲದೆ ವಿಶೇಷ ತುಪ್ಪದ ಕಾಯಿ ಹೋಳಿಗೆ. ಬಾದುಷಾ ಮತ್ತು ಸಿಹಿ ಬೂಂದಿಯನ್ನು ಕೂಡ ಮಾಡಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಸಮ್ಮೇಳನದಲ್ಲಿ ಪ್ರತಿನಿತ್ಯ ಸುಮಾರು 50 ಸಾವಿರ ಜನರ ಆಗಮನದ ನಿರೀಕ್ಷೆ ಇತ್ತು. ಹೀಗಾಗಿ ಒಟ್ಟು 5 ಕೌಂಟರ್‌ಗಳಲ್ಲಿ ತಲಾ 10 ಸಾವಿರ ಜನರಿಗಾಗಿ ಅಡುಗೆ ಸಿದ್ಧಪಡಿಸಲು ಸೂಚನೆ ನೀಡಲಾಗಿತ್ತು. ಆದರೆ ಪ್ರಸ್ತುತ ಅಧಿಕ ಪ್ರಮಾಣದಲ್ಲಿ ಜನರು ಆಗಮಿಸುತ್ತಿದ್ದು, ಈ ವರೆಗೂ ಅಂದರೆ ಬೆಳಗಿನ ತಿಂಡಿಗೆ ಸುಮಾರು 60 ಸಾವಿರ ಮಂದಿ ಆಗಮಿಸಿದ್ದಾರೆ. ಹೀಗಾಗಿ ಮಧ್ಯಾಹ್ನದ ಹೊತ್ತಿಗೆ ಇನ್ನಷ್ಟು ಜನರು ಆಗಮಿಸುವ ಸಾಧ್ಯತೆಗಳಿದ್ದು, ಅವರೆಲ್ಲರಿಗೂ ಊಟದ ಸಿದ್ಧತೆ ಮಾಡಲಾಗುತ್ತಿದೆ ಎಂದು ಅಡುಗೆ ಮನೆ ಉಸ್ತುವಾರಿ ನೋಡಿಕೊಳ್ಳುತ್ತಿರುವ ವಜ್ರಕುಮಾರ್ ಅವರು ಹೇಳಿದ್ದಾರೆ.

ಒಟ್ಟು 5 ಅಡುಗೆ ಮನೆಗಳನ್ನು ನಿರ್ಮಿಸಲಾಗಿದ್ದು, ಪ್ರತಿಯೊಂದು ಅಡುಗೆ ಮನೆಯಲ್ಲಿಯೂ ಒಟ್ಟು 85ರಿಂದ ನೂರು ಮಂದಿ ಸ್ವಯಂ ಸೇವಕರು ಕೆಲಸ ಮಾಡುತ್ತಿದ್ದು, ಇದಲ್ಲದೆ 50 ಮಂದಿ ಸ್ವಯಂ ಸೇವಕರು ಅಡುಗೆ ಬಡಿಸುವ ಕಾರ್ಯದಲ್ಲಿ ತೊಡಗಲಿದ್ದಾರೆ. ಇನ್ನು ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ಕೌಂಟರ್‌ಗಳನ್ನು ತೆರೆಯಲಾಗಿದ್ದು, ಯಾವುದೇ ಕಾರಣಕ್ಕೂ ಗೊಂದಲಕ್ಕೆ ಆಸ್ಪದ ನೀಡುವುದಿಲ್ಲ ಎಂದು ವಜ್ರಕುಮಾರ್ ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com