ಕಾವೇರಿ ತೀರದಲ್ಲಿ ಒಂದು ಕಾಡು, ಕಾಡೊಂದು ನೆಮ್ಮದಿ ಬೀಡು: ಗಾಳಿಬೋರೆ ಜಂಗಲ್ ಲಾಡ್ಜಸ್

ಕಾವೇರಿ ತೀರದಲ್ಲಿ ಒಂದು ಕಾಡು, ಕಾಡೊಂದು ನೆಮ್ಮದಿ ಬೀಡು: ಗಾಳಿಬೋರೆ ಜಂಗಲ್ ಲಾಡ್ಜಸ್

ತೆಪ್ಪದ ಸವಾರಿ ಮುಗಿಸಿ ಬಂದಾಗ ನಮಗೆ ಲಘು ಉಪಾಹಾರ ಮತ್ತು ಬಿಸಿಯಾದ ಚಹಾ ಕಾದಿರುತ್ತದೆ! ಅನಂತರ, ರಾತ್ರಿ ಒಂದು ವನ್ಯಜೀವಿ ಚಲನಚಿತ್ರದ ವೀಕ್ಷಣೆ, ಕ್ಯಾಂಪ್ ಫೈರ್ ಮುಂದೆ ಬೆಂಕಿ ಕಾಯಿಸಿಕೊಳ್ಳುತ್ತಾ ಸಿಬ್ಬಂದಿಯವರೊಂದಿಗೆ ಹಾಗೂ ಇತರ ಪ್ರವಾಸಿಗರೊಂದಿಗೆ ಹರಟುವುದು ಮುದ ನೀಡುತ್ತದೆ!
<strong>ಚಿತ್ರಲೇಖನ: ಬಿ.ಆರ್. ಸುಹಾಸ್</strong>
ಚಿತ್ರಲೇಖನ: ಬಿ.ಆರ್. ಸುಹಾಸ್

ಡಾ. ಬಿ.ಆರ್.ಸುಹಾಸ್, ವೃತ್ತಿಯಲ್ಲಿ ಚರ್ಮರೋಗ ತಜ್ಞರು, ಪ್ರವೃತ್ತಿಯಲ್ಲಿ ಲೇಖಕರು, ಕನ್ನಡದಲ್ಲಿ ಕಿರಿಯರ ಕಥಾಸರಿತ್ಸಾಗರ, ಚಾಣಕ್ಯ ನೀತಿ, ಭಾರತದ ವನ್ಯಧಾಮಗಳು, ಸುಶ್ರುತ, ಲೂಯಿ ಪ್ಯಾಶ್ಚರ್,ಮೊದಲಾದ ಕೆಲವು ಪುಸ್ತಕಗಳು ಪ್ರಕಟವಾಗಿವೆ.

ದಿನನಿತ್ಯದ ಜಂಜಾಟ, ಗಲಾಟೆಗಳಿಂದ ದೂರವಾಗಿ ಪ್ರಕೃತಿಯ ಮಡಿಲಲ್ಲಿ ಆನಂದವಾಗಿ ನಲಿದಾಡುತ್ತಾ ಮೈಮರೆಯಲು ಒಂದು ರಮ್ಯಮನೋಹರ ತಾಣವೆಂದರೆ ಗಾಳಿಬೋರೆ ಪ್ರಕೃತಿ ಶಿಬಿರ. ಬೆಂಗಳೂರಿನಿಂದ ಸುಮಾರು ನೂರು ಕಿಲೋಮೀಟರ್ ಗಳಷ್ಟು ದೂರವಿರುವ ಈ ಸ್ಥಳ, ಕರ್ನಾಟಕ ಸರ್ಕಾರದ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ರವರ ವಸತಿ ಶಿಬಿರವಾಗಿದೆ. 

ದಾರಿ ಇಲ್ಲಿದೆ

ಬೆಂಗಳೂರಿನಿಂಧ ಕನಕಪುರ ರಸ್ತೆಗೆ ಹೋಗಿ ಅಲ್ಲಿ ಸಂಗಮದ ಕಡೆ ಹೋದರೆ ಅಲ್ಲಿ ಕಾವೇರಿ ವನ್ಯಧಾಮಕ್ಕೆ ಸ್ವಾಗತ ಎಂಬ ಫಲಕ ಕಾಣುತ್ತದೆ. ಅಲ್ಲಿಂದ ಮುಂದೆ ಹೋದರೆ ಬಲಕ್ಕೆ ಗಾಳಿಬೋರೆಯ ಕಡೆಗೆ ದಿಕ್ಕು ತೋರಿಸುವ ಒಂದು ಫಲಕ ಕಾಣುತ್ತದೆ.ಇಲ್ಲಿಂದ ಒಂಬತ್ತು ಕಿ.ಮೀ. ಮಣ್ಣಿನ ರಸ್ತೆಯಲ್ಲಿ ಸಾಗಲು ಗಾಳಿಬೋರೆ ಪ್ರಕೃತಿ ಶಿಬಿರ ಸಿಗುತ್ತದೆ. 

ನಾವು ಮೊದಲೇ ಅಂತರ್ಜಾಲದಲ್ಲಿ ಜಂಗಲ್ ಲಾಡ್ಜಸ್ ರವರ ತಾಣದಲ್ಲಿ (www.junglelodges.com) ನಮ್ಮ ವಸತಿಯನ್ನು ಕಾಯ್ದಿರಿಸಿಕೊಂಡು ಹಣ ಪಾವತಿಸಿ ನಿಗದಿತ ದಿನದಂದು ಹೊರಡಬೇಕು. ಅಂದು ಶಿಬಿರದ ಸಿಬ್ಬಂದಿಯವರೇ ಕರೆ ಮಾಡಿ ನೆನಪಿಸಿ ದಾರಿಯನ್ನೂ ಹೇಳುತ್ತಾರೆ. ಬೆಳಿಗ್ಗೆ ಸುಮಾರು ಹತ್ತೂವರೆ ಗಂಟೆಯ ಹೊತ್ತಿಗೆ ನಾವು ವಸತಿಯನ್ನು ಪ್ರವೇಶಿಸಿ ಕಛೇರಿಯಲ್ಲಿ ವರದಿ ಮಾಡಿಕೊಳ್ಳಬೇಕು. ನಾವು ಇಳಿದುಕೊಳ್ಳಲು ಇಲ್ಲಿ ಸೊಗಸಾದ, ಎಲ್ಲ ಸೌಲಭ್ಯಗಳಿರುವ ಟೆಂಟ್ ಗಳೆಂಬ ಕೋಣೆಗಳಿವೆ. ಇವುಗಳ ಗೋಡೆಗಳು ಬಟ್ಟೆಯಿಂದ ಮಾಡಲಾಗಿದ್ದು ಈ ಟೆಂಟ್ ನಲ್ಲಿರುವುದೇ ಒಂದು ಆನಂದ! ಇಲ್ಲಿನ ‌‌‌‌‌‌‌‌‌‌‌‌‌‌‌‌‌‌ಸಿಬ್ಬಂದಿಯವರು ಬಹಳ ಸ್ನೇಹಪರರು.

ಆಟದ ವ್ಯವಸ್ಥೆ

ದೊಡ್ಡ ಮೈದಾನದಂಥ ಪ್ರದೇಶ, ಮತ್ತು ಎದುರಿಗೆ ಝುಳು ಝುಳು ಹರಿಯುವ ಕಾವೇರಿ ನದಿಯ ಅತ್ಯಂತ ರಮ್ಯವಾದ ನೋಟ ನಮ್ಮಲ್ಲಿ ಪುಳಕವುಂಟುಮಾಡುತ್ತದೆ! ಹಸಿರಿನಿಂದ ಕೂಡಿದ ಬೆಟ್ಟಗುಡ್ಡಗಳ ಮನೋಹರ ದೃಶ್ಯಾವಳಿಯೊಂದಿಗೆ ಕಾವೇರಿ ನದಿಯ ಸೌಂದರ್ಯವನ್ನು ನೋಡುತ್ತಾ ಕೂರಲೆಂದೇ ಒಂದು ದುಂಡಾದ ಕಟ್ಟೆಯ ಆವರಣವಿದೆ. ಮೈದಾನದ ಪ್ರದೇಶದಲ್ಲಿ ಕಟ್ಟಿಗೆಯ ಜೋಕಾಲಿ, ಟೈರ್, ಟೆನ್ನಿಸ್ ಆಡಲು ಹಾಗೂ ಹತ್ತಲು ಪರದೆಗಳು, ಮೊದಲಾಗಿ ಆಟಗಳನ್ನಾಡಲು ಹಲವಾರು ಸಾಧನಗಳಿವೆ. ಅಂತೆಯೇ ಪ್ರತಿ ಟೆಂಟ್ ನ ಮುಂದೆಯೂ ಮಲಗಿ ವಿಶ್ರಾಂತಿ ಪಡೆಯಲು ಹ್ಯಾಮಾಕ್ ಅಥವಾ ತೂಗುಮಂಚಗಳಿವೆ.

ಗಾಳಿಬೋರೆ ಪ್ರದೇಶ ಕಾವೇರಿ ವನ್ಯಧಾಮಕ್ಕೆ ಸೇರಿದೆ.ವಸತಿಶಿಬಿರದ ಹಿಂದೆ ಇರುವ ಒಂದು ದೊಡ್ಡ ಬಂಡೆ ಗಾಳಿಗೆ ಮೈಯೊಡ್ಡಿ ನಿಂತಿರುವುದರಿಂದ ಈ ಸ್ಥಳಕ್ಕೆ ಗಾಳಿಬೋರೆ ಎನ್ನುತ್ತಾರೆ. ಆಸಕ್ತರು ಸಮಯ ಸಿಕ್ಕರೆ ಇದನ್ನು ಹತ್ತಬಹುದು. ವಸತಿ ತಲುಪಿದ ಬಳಿಕ, ತಂಪಾದ ಪಾನೀಯ ಇಲ್ಲವೇ ಚಹಾ ಸೇವನೆಯೊಂದಿಗೆ ಸ್ವಲ್ಪ ವಿಶ್ರಾಂತಿಯ ಬಳಿಕ, ಪರಿಸರವಾದಿಗಳು ಒಂದು ನಿಗದಿತ ದಾರಿಯಲ್ಲಿ ಕಾವೇರಿ ನದೀತೀರದವರೆಗೆ ಚಾರಣ ಮಾಡಿಸುತ್ತಾರೆ. 

ಅಳಿಲು ಸಿಕ್ಕ ಅದೃಷ್ಟ

ದಾರಿಯಲ್ಲಿ ಅವರು ಹಲವಾರು ವಿಶಿಷ್ಟ ಗಿಡಮರಗಳನ್ನೂ ಪ್ರಾಣಿಪಕ್ಷಿಗಳನ್ನೂ ತೋರಿಸುತ್ತಾರೆ.ಇಲ್ಲಿ ನೋಡಲೇಬೇಕಾದ ಒಂದು ಪ್ರಾಣಿಯೆಂದರೆ ಗ್ರಿಜಲ್ಡ್ ಜಯಂಟ್ ಸ್ಕ್ವಿರಲ್ ಅಥವಾ ಕಂದು ಬಣ್ಣದ ದೈತ್ಯ ಅಳಿಲು. ನನ್ನ ಅದೃಷ್ಟಕ್ಕೆ ನಾನು ಹೋದಾಗ ಅದು ನನಗೆ ನೋಡಲು ಸಿಕ್ಕಿತು! 

ಕರ್ನಾಟಕದಲ್ಲಿ  ಕಾವೇರಿ ವನ್ಯಧಾಮ ಬಿಟ್ಟರೆ ಇದು ಇನ್ನೆಲ್ಲೂ ಕಂಡುಬರುವುದಿಲ್ಲ. ಇದರಂತೆ ಕಾವೇರಿ ವನ್ಯಧಾಮಕ್ಕೆ ‌‌‌‌‌‌‌‌‌‌‌‌‌‌‌‌‌‌‌ಸೇರಿದ ಭೀಮೇಶ್ವರಿಯೆಂಬ ಇನ್ನೊಂದು ಸ್ಥಳದಲ್ಲಿ ಇದನ್ನು ಕಾಣಬಹುದು.ಚಾರಣದ ದಾರಿ ಮತ್ತು ಕಾವೇರೀ ನದೀತೀರ ಪ್ರಕೃತಿ ಸೌಂದರ್ಯದಿಂದ ತುಂಬಿದ್ದು ಛಾಯಾಚಿತ್ರಗಳನ್ನು ತೆಗೆಯಲು ಒಳ್ಳೆಯ ಅವಕಾಶವಿದೆ. ಚಾರಣದ ಬಳಿಕ, ಗೋಲ್ ಘರ್ ಎಂಬ ದುಂಡಾದ ಕೊಟ್ಟಿಗೆಯಂಥ ಸ್ಥಳದಲ್ಲಿ ಸೊಗಸಾದ ಭೋಜನವಿರುತ್ತದೆ.ಇಲ್ಲಿನ ಭೋಜನ, ಬಹಳ ರುಚಿಯಾಗಿಯೂ ಶುಚಿಯಾಗಿಯೂ ಇದ್ದು,ಪ್ರಕೃತಿಯ ಮಧ್ಯೆ ಊಟ ಮಾಡುವುದೇ ಒಂದು ಚೆಂದ! 

ನದಿ, ಬಂಡೆ ಮತ್ತು ಮೊಸಳೆ

ಊಟದ ಬಳಿಕ ಕೋಣೆಯಲ್ಲಿ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆಯಬಹುದು ಇಲ್ಲವೇ ಆಟವಾಡುತ್ತಾ, ಪಕ್ಷಿ ವೀಕ್ಷಣೆ,ಚಿಟ್ಟೆಗಳ ವೀಕ್ಷಣೆ, ಛಾಯಾಗ್ರಹಣಗಳಲ್ಲಿ ಕಾಲಕಳೆಯಬಹುದು. ನದೀತೀರದ ಬಳಿ ಪದೇ ಪದೇ ಬಾಲ ಬಡಿಯುತ್ತಾ ಓಡಾಡುತ್ತಿದ್ದ ವ್ಯಾಗ್ಟೇಲ್  ಪಕ್ಷಿಯನ್ನು ಛಾಯಾಗ್ರಹಣ ಮಾಡುವ ಅದೃಷ್ಟ ನನಗೆ ಸಿಕ್ಕಿತು! 

ಸುಮಾರು ನಾಲ್ಕು ಗಂಟೆಯ ಹೊತ್ತಿಗೆ ನದಿಯಲ್ಲಿ ಕೊರಕಲ್ ಅಥವಾ ತೆಪ್ಪದ ಮೇಲೆ ವಿಹಾರ ಮಾಡಿಸುತ್ತಾರೆ. ನದಿಯ ಮೇಲೆ ವಿಹಾರ ಮಾಡುತ್ತಾ ಪ್ರಕೃತಿ ಸೌಂದರ್ಯ ‌ಸವಿಯುವ ಸೊಗಸೇ ಸೊಗಸು! ತೆಪ್ಪದ ಸವಾರಿ ಮಾಡುವಾಗ ಪಕ್ಷಿವೀಕ್ಷಣೆಗೆ ಹೆಚ್ಚು ಅವಕಾಶವಿದೆ. ಡಾರ್ಟರ್ ಅಥವಾ ಹಾವಕ್ಕಿ, ಕಾರ್ಮೋರೆಂಟ್ ಅಥವಾ ನೀರುಕಾಗೆ, ಹಲವು ಬಗೆಯ ಹದ್ದುಗಳು, ಮೊದಲಾದ ಪಕ್ಷಿಗಳನ್ನು ನೋಡಬಹುದು. ಕೆಲವೊಮ್ಮೆ ಆಚೆಯ ದಡದಲ್ಲಿ ಆನೆಗಳೂ ಕಾಣುತ್ತವೆ. ಅಂತೆಯೇ ನದಿಯಲ್ಲಿ ಮತ್ತು ಬಂಡೆಗಳ ಮೇಲೆ ಮೊಸಳೆಗಳನ್ನೂ ಕಾಣಬಹುದು!

ಕ್ಯಾಂಪ್ ಫೈರ್ ಎದುರು ಚಳಿ ಮಾಯ

ತೆಪ್ಪದ ಸವಾರಿ ಮುಗಿಸಿ ಬಂದಾಗ ನಮಗೆ ಲಘು ಉಪಾಹಾರ ಮತ್ತು ಬಿಸಿಯಾದ ಚಹಾ ಕಾದಿರುತ್ತದೆ! ಅನಂತರ, ರಾತ್ರಿ ಒಂದು ವನ್ಯಜೀವಿ ಚಲನಚಿತ್ರದ ವೀಕ್ಷಣೆ, ಕ್ಯಾಂಪ್ ಫೈರ್ ಮುಂದೆ ಬೆಂಕಿ ಕಾಯಿಸಿಕೊಳ್ಳುತ್ತಾ ಸಿಬ್ಬಂದಿಯವರೊಂದಿಗೆ ಹಾಗೂ ಇತರ ಪ್ರವಾಸಿಗರೊಂದಿಗೆ ಹರಟುವುದು ಮುದ ನೀಡುತ್ತದೆ! ತೂಗುಮಂಚದ ಮೇಲೆ ಮಲಗಿ ಆಗಸದಲ್ಲಿ ಹರಡಿರುವ ನಕ್ಷತ್ರಗಳ ಸೌಂದರ್ಯವನ್ನು ಸವಿಯುವುದು ಇಲ್ಲೊಂದು ವಿಶೇಷ! 

ಪುನಃ ಗೋಲ್ ಘರ್ ನಲ್ಲಿ ಪುಷ್ಕಳ ಭೋಜನದೊಂದಿಗೆ ರಾತ್ರಿಯ ಕಾರ್ಯಕ್ರಮಗಳು ಮುಗಿದು ಟೆಂಟ್ ಕೋಣೆಯಲ್ಲಿ ಸುಖನಿದ್ರೆಗೆ ತೆರಳಬಹುದು.ಮರುದಿನ ಬೆಳಿಗ್ಗೆ ಉಪಾಹಾರದ ಬಳಿಕ, ಪ್ರಕೃತಿ ಸೌಂದರ್ಯ, ಪಕ್ಷಿ ವೀಕ್ಷಣೆ, ಆಟಪಾಟಗಳಲ್ಲಿ ಸ್ವಲ್ಪ ಹೊತ್ತು ತೊಡಗಿ ಸುಮಾರು ಹತ್ತೂವರೆ ಗಂಟೆಯ ಹೊತ್ತಿಗೆ ಹೊರಡಬೇಕಾಗುತ್ತದೆ.

ಹೀಗೆ ಗಾಳಿಬೋರೆ ಪ್ರಕೃತಿ ಶಿಬಿರದಲ್ಲಿ ಒಂದು ದಿನ ಆನಂದವಾಗಿ ಕಳೆಯಬಹುದು.ಈ ಪ್ರವಾಸದ ವೆಚ್ಚ ಮೊದಲಾದ ವಿವರಣೆಗಳಿಗಾಗಿ ಜಂಗಲ್ ಲಾಡ್ಜಸ್ ರವರ ಅಂತರ್ಜಾಲದ ವೆಬ್ ಸೈಟ್ www.junglelodges.com ಅನ್ನು ಸಂಪರ್ಕಿಸಬಹುದು.

Related Stories

No stories found.

Advertisement

X
Kannada Prabha
www.kannadaprabha.com