ದಿಗ್ದರ್ಶಕ ಪುಟ್ಟಣ್ಣ ಕಣಗಾಲರು ಹೇಳದೇ ಉಳಿಸಿ ಹೋದ ನೂರೆಂಟು ಕಥೆಗಳು ಕೊಡಗಿನಲಿ ಜೀವಂತ

ಪುಟ್ಟಣ್ಣ ಎಂದಾಕ್ಷಣ ಮಣಜೂರು ಅಜ್ಜಿಮನೆಯ ಮಣ್ಣಿನ ಗೋಡೆಗಳ ನಡುವಿದ್ದ ಬೀಟೆ ಮಂಚದ ಮೇಲೆ ಅಪ್ಪ ನ್ಯಾಷನಲ್ ಟೇಪ್ ರೆಕಾರ್ಡರ್ ಇಟ್ಟುಕೊಂಡು ಗೊಗ್ಗರು ದನಿಯಲ್ಲಿ ಕೇಳಿಸುತ್ತಿದ್ದ 'ಸಂದೇಶ ಮೇಘ ಸಂದೇಶ' ಹಾಡು ನೆನಪಾಗುತ್ತದೆ. ನದಿ ತಟದಲ್ಲಿ, ಮರಗಳ ನಡುವೆ ಪ್ರೇತಕಳೆಯಿಂದ ಕಲ್ಪನಾ ಓಡುವುದು ನೆನಪಾಗುತ್ತದೆ.
ಶರಪಂಜರ ಸಿನಿಮಾದಲ್ಲಿ ನಟಿ ಕಲ್ಪನಾ
ಶರಪಂಜರ ಸಿನಿಮಾದಲ್ಲಿ ನಟಿ ಕಲ್ಪನಾ
Updated on

ಲೇಖನ: ಹರ್ಷವರ್ಧನ್ ಸುಳ್ಯ

ಮಣಜೂರಿನ ಅಜ್ಜಿಮನೆಯ (ಅಪ್ಪನ ಅಮ್ಮ) ಮಗ್ಗುಲಲ್ಲೇ ನಡೆದು ಹೋದರೆ ಕೆಲವೇ ಮಾರು ದೂರದಲ್ಲಿ ಕಾವೇರಿ ನದಿ ಹರಿಯುತ್ತದೆ. ಹೊಳೆಯಾಚೆಗೆ ಹೊನ್ನಾಪುರ, ಹೆಬ್ಬಾಲೆ ಆಂಡ್ ಕಣಗಾಲ್ ಸಿಗುತ್ತದೆ. ಯು ಗಾಟ್ ಇಟ್ ರೈಟ್, ಅದೇ ಕಣಗಾಲ್. ಚಿಕ್ಕಂದಿನಿಂದಲೂ ಪುಟ್ಟಣ್ಣನವರ ಹಾಡುಗಳನ್ನು, ಅವರ ಸಿನಿಮಾಗಳ ಪಾತ್ರಗಳನ್ನು, ಅದರಲ್ಲಿನ ನಟ ನಟಿಯರ ಕುರಿತ ಕುತೂಹಲಕರ ಮಾಹಿತಿಯನ್ನು ಅಂಡ್ ಅಫ್ ಕೋರ್ಸ್ ಪುಟ್ಟಣ್ಣನವರ ಗ್ರೇಟ್ ನೆಸ್ ಅನ್ನು ಬಿಚ್ಚಿಡುತ್ತಿದ್ದ ಅಪ್ಪ, ನನ್ನಲ್ಲಿ ಪುಟ್ಟಣ್ಣನವರ ಬಗ್ಗೆ ಅನೂಹ್ಯವಾದ ಕಾಲ್ಪನಿಕ ಲೋಕವನ್ನು ಸೃಷ್ಟಿಸಿದ್ದರು.

ತಮ್ಮ ಬಾಲ್ಯದ ದಿನಗಳಲ್ಲಿ ಕಾವೇರಿ ನದಿಯನ್ನು ಈಜಿ ಹೊನ್ನಾಪುರ, ಕಣಗಾಲುಗಳಿಗೆ ಸಿನಿಮಾ ನೋಡಲು ಅಪ್ಪ ತೆರಳುತ್ತಿದ್ದುದನ್ನು ಕೇಳಿಯೇ ರೋಮಗಳು ನಿಮಿರುತ್ತಿದ್ದವು. ಅಜ್ಜಿ ಮನೆಯ ಎದುರಿನಲ್ಲೇ ಮೊದಲು ನಟಿ ಆರತಿ ಕುಟುಂಬ ವಾಸವಿದ್ದುದನ್ನು ಕೇಳಿದ ನಂತರವಂತೂ ನನ್ನ ಕಲ್ಪನೆಯ ದೃಶ್ಯಗಳೆಲ್ಲಾ ಕಾಲ್ಪನಿಕತೆಯ ಗೆರೆ ದಾಟಿ ಕಣ್ಮುಂದೆಯೇ ರೂಪ ತಳೆದಿದ್ದವು. ಮುಂದೆ ಅವರ ಕುಟುಂಬ ಪಕ್ಕದ ಕೊಣನೂರಿಗೆ ಸ್ಥಳಾಂತರಗೊಂಡಿದ್ದಾಗಿ ಅಪ್ಪ ಹೇಳಿದ್ದು ನೆನಪು.

ಅಪ್ಪನಿಗೆ ತಾಲೂಕು ಕಚೇರಿ, ಕೋರ್ಟುಗಳಲ್ಲಿ ಕೆಲಸವಿದ್ದಾಗಲೆಲ್ಲಾ ಹಠ ಮಾಡಿ ಸೋಮವಾರಪೇಟೆ, ಶಿರಂಗಾಲ, ವಿರಾಜಪೇಟೆ, ಶನಿವಾರ ಸಂತೆಗಳಿಗೆ ನಾನೂ ಅಪ್ಪನ ಕೈ ಹಿಡಿದು ಹೊರಟುಬಿಡುತ್ತಿದ್ದೆ. ಅಪ್ಪನ ಎಲ್ ಎಂ ಎಲ್ ವೆಸ್ಪಾದಲ್ಲಿ ಮುಂದುಗಡೆ ಅಪ್ಪನ ಗದ್ದದ ಕೆಳಗೆ ಜತನವಾಗಿ ನಿಂತುಬಿಡುತ್ತಿದ್ದೆ, ಕಾಂಗರೂ ಮರಿಯಂತೆ! ಅಪ್ಪನ ಸ್ಕೂಟರು ಕಾಡು ಮಧ್ಯದ ಬಳುಕುವ ರಸ್ತೆಗಳಲ್ಲಿ ಹಾವಿನಂತೆ ಹರಿಯುತ್ತಾ ಕುಟುರ್ ಕುಟುರ್ ಎಂದು ಸಾಗುತ್ತಿತ್ತು. ದಾರಿಯಲ್ಲಿ ಪುಟ್ಟಣ್ಣನವರ ಯಾವ ಹಾಡಿನ ಯಾವ ದೃಶ್ಯವನ್ನು ಆ ಜಾಗದಲ್ಲಿ ಶೂಟ್ ಮಾಡಿದ್ದಾರೆ ಎನ್ನುವುದನ್ನು ಅಪ್ಪ ವಿವರಿಸುತ್ತಿದ್ದರೆ ನಾನು ದಿಗ್ಭ್ರಾಂತನಾಗುತ್ತಿದ್ದೆ. ಒಬ್ಬ ವ್ಯಕ್ತಿ ಒಂದಿಡೀ ಪ್ರಾಂತ್ಯವನ್ನೂ, ಅಲ್ಲಿನ ಜನರನ್ನೂ ಪ್ರಭಾವಿಸುವುದು ಎಷ್ಟು ಸೋಜಿಗ!

ಶರಪಂಜರ ಸಿನಿಮಾದಲ್ಲಿ ಕಲ್ಪನಾ ನದಿ ತಟದಲ್ಲಿ ನಾ ಬಂದೆ ಎನ್ನುತ್ತಾ ವಿಲಕ್ಷಣವಾಗಿ ಪ್ರೇತ ಕಳೆಯಿಂದ ಸೈಕಾಟಿಕ್ಕಾಗಿ ಓಡುತ್ತಾಳಲ್ಲ ಅದಕ್ಕೂ ಸ್ವಲ್ಪ ಮುಂಚೆ, ಅವಳು ಆ ಸೈಕಾಟಿಕ್ ಮನೋ ಸ್ಥಿತಿಗೆ ಜಾರುವ ಹಂತದಲ್ಲಿರುವಾಗ ಗಾಳಿಯಲ್ಲಿ ಏನೋ ತೇಲಿಬಂದಂತೆ ಭಾಸವಾಗುವ ಒಂದು ಸಂಗೀತದ ತುಣುಕು ಅನುರಣಿಸುತ್ತದೆ. ಕೆಲವೇ ಸೆಕೆಂಡುಗಳು ಅಷ್ಟೇ. ಆಕೆಯನ್ನು ಆವರಿಸಿಕೊಳ್ಳುತ್ತಿರುವ ಆ ಸೈಕಾಟಿಕ್ ಮನೋಸ್ಥಿತಿಗೆ ಪ್ರೇಕ್ಷಕರನ್ನೂ ಕರೆದೊಯ್ಯುವ ಆ ಸೆಕೆಂಡುಗಳ ಅವಧಿಯ ವಿಜಯ ಭಾಸ್ಕರ್ ಸಂಗೀತ ಎಂಥಾ ಕಲ್ಲೆದೆಯವರಲ್ಲೂ ಹಿಸ್ಟೀರಿಯಾವನ್ನು ಉದ್ದೀಪಿಸುತ್ತದೆ. ಆ ಸನ್ನಿವೇಶಕ್ಕೆ ಅಂಥದ್ದೊಂದು ಸಂಗೀತ ಬೇಕೆನ್ನುವ ಆಯ್ಕೆ ಇದೆಯಲ್ಲ ಅದು ಪುಟ್ಟಣ್ಣ brilliance.

ನಾವಿಂದು ಫಿಲಂ ಫಾರ್ಮು, ಫಿಲಂ ಥಿಯರಿ ಎಂದೆಲ್ಲಾ ಮಣ್ಣು ಮಸಿ ಮಾತನಾಡುತ್ತೇವೆ. ಆದರೆ, Cinema in its simplest formನಲ್ಲೇ ಪುಟ್ಟಣ್ಣ ತಮ್ಮ ಸಿನಿಮಾಗಳ ಪ್ರತಿ ಚಿತ್ರಿಕೆಯಲ್ಲೂ ಅದೆಷ್ಟೋ ಸಂಗತಿಗಳನ್ನು, ಬದುಕಿನ ವರ್ಣಿಸಲದಳ ಭಾವನೆಗಳನ್ನು ತುಂಬಿ ಬಿಟ್ಟು ಹೋಗಿದ್ದಾರೆ. ಇಂದಿಗೂ ಪುಟ್ಟಣ್ಣ ಎಂದಾಕ್ಷಣ ಮಣಜೂರು ಅಜ್ಜಿಮನೆಯ ಮಣ್ಣಿನ ಗೋಡೆಗಳ ನಡುವಿದ್ದ ಬೀಟೆ ಮಂಚದ ಮೇಲೆ ಅಪ್ಪ ನ್ಯಾಷನಲ್ ಟೇಪ್ ರೆಕಾರ್ಡರ್ ಇಟ್ಟುಕೊಂಡು ಗೊಗ್ಗರು ದನಿಯಲ್ಲಿ ಕೇಳಿಸುತ್ತಿದ್ದ 'ಸಂದೇಶ ಮೇಘ ಸಂದೇಶ' ಹಾಡು ನೆನಪಾಗುತ್ತದೆ. ನದಿ ತಟದಲ್ಲಿ, ಮರಗಳ ನಡುವೆ ಪ್ರೇತಕಳೆಯಿಂದ ಕಲ್ಪನಾ ಓಡುವುದು ನೆನಪಾಗುತ್ತದೆ.

ಕಣಗಾಲು, ಮಣಜೂರು, ತೊರೆನೂರು, ಕೊಣನೂರು, ಸೋಮವಾರ ಪೇಟೆ, ಶನಿವಾರ ಸಂತೆ, ವಿರಾಜಪೇಟೆ, ಶುಂಠಿಕೊಪ್ಪ, ಕುಶಾಲನಗರ, even ಮಡಿಕೇರಿ ರಸ್ತೆಗಳನ್ನು ಹಾದು ಹೋಗುವಾಗಲೆಲ್ಲಾ ಹಿಸ್ಟೀರಿಯಾವನ್ನು ಉದ್ದೀಪಿಸುವ ಆ ಸಂಗೀತದ ತುಣುಕು ನೆನಪಾಗುತ್ತದೆ. ಪುಟ್ಟಣ್ಣನವರ ಯಾವುದೋ ಸಿನಿಮಾದ ಸಂಭಾಷಣೆ ಕೈ ಹಿಡಿದು ಜಗ್ಗುತ್ತದೆ. ಒಮ್ಮೊಮ್ಮೆ ಬಸ್ಸಿನ ಕಿಟಕಿಯಾಚೆ ಕಣ್ಣು ಹಾಯಿಸುತ್ತಿರುವ ಹೊತ್ತಿನಲ್ಲಿ ಪುಟ್ಟಣ್ಣ ಹೇಳದೇ ಉಳಿಸಿ ಹೋದ ಕತೆಯನ್ನು ಈ ಘಟ್ಟದ ಮಳೆ, ಜನರು, ಚಳಿ, ಇಲ್ಲಿನ ಮಣ್ಣು, ಕಾಡು, ನದಿ, ಮುಂದುವರಿಸಿಕೊಂಡು ಹೋಗುತ್ತಿವೆ ಎಂದೆನಿಸುತ್ತದೆ. ಈ ಕಾಲಪ್ರವಾಹಕ್ಕೆ ಕೈಯೊಡ್ಡಿ ಬೊಗಸೆಯಲ್ಲಿ ನೀರನ್ನು ಮೊಗೆದುಕೊಡುವವರು ಬೇಕಷ್ಟೇ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com