ಮಂಗನ ಕೈಯಲ್ಲಿನ ಮಾಣಿಕ್ಯವೂ, ನನ್ನ ಕೈಲಿ ಸ್ಯಾಮ್ಸಂಗ್ ಮೊಬೈಲೂ: ಬೇಸ್ತು ಬಿದ್ದ ಪ್ರಹಸನ

"ಕೆಲಸಕ್ಕೆ ಲ್ಯಾಪ್ಟಾಪ್ ಹೊತ್ತುಕೊಂಡು ಯಾಕೆ ಹೋಗ್ತೀಯ ಅಕ್ಕ? ಎಲ್ಲ ಕೆಲಸ ಫೋನ್-ನಲ್ಲೆ ಮಾಡಬಹುದು. ಒಳ್ಳೆ ಸ್ಮಾರ್ಟ್-ಫೋನ್ ಖರೀದಿಸು" ಎಂದ ಸಹೋದರ ಮಹಾಶಯ. ಬೇಡ, ಬೇಡ ವೆಂದರೂ ಸಂಕ್ರಾಂತಿಯಂದು "ಬ್ರಾಂಡ್ ನ್ಯೂ ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 2" ನನ್ನ ಕೈ ಸೇರಿತು. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಇಂಜಿನಿಯರಿಂಗ್ ಪದವೀಧರೆ. ಚಿಕ್ಕ ವಯಸ್ಸಿನಿಂದಲೂ ಕಥೆ ಹೇಳುವ ಹುಚ್ಚು,
ಟಿವಿ, ಪ್ರಿಂಟ್, ರೇಡಿಯೋ ಸೇರಿದಂತೆ ಅನೇಕ ಮಾಧ್ಯಮಗಳಲ್ಲಿ 10 ವರ್ಷಗಳಿಂದ ಕೆಲಸ. ಅಪ್ಪ ಮಾಡಿದ ಬಿಸಿ ಬಿಸಿ ಶುಂಠಿ ಚಹಾ ತುಂಬಾ ಇಷ್ಟ.
ನಗುವುದು - ನಗಿಸುವುದು ಹಾಗು ಹಗಲುಗನಸು ಕಾಣುವುದು ಇನ್ನೂ ಇಷ್ಟ.
ಉಪ್ಪಿಟ್ಟು ತಿನ್ನುವುದು ಕಷ್ಟ. 
ತಡ ರಾತ್ರಿ, ಕತ್ತಲೆ ಕೋಣೆಯಲ್ಲಿ ಒಬ್ಬಳೇ ಕುಳಿತು ಹಾರರ್ ಸಿನಿಮಾ ನೋಡುವುದು. ಅಮ್ಮನೊಂದಿಗೆ ಹರಟೆ ಇವೆಲ್ಲಾ ಹವ್ಯಾಸಗಳು

ಲೇಖಕಿ: ಅದಿತಿಮಾನಸ ಟಿ. ಎಸ್., ಬೆಂಗಳೂರು

ಬಹಳ ವರ್ಷಗಳ ಹಿಂದಿನ ಕಥೆ (ವ್ಯಥೆ). ಲ್ಯಾಪ್ಟಾಪ್ ಕೊಂಡುಕೊಳ್ಳಬೇಕೆಂದು ಯೋಚಿಸುತ್ತಿದ್ದೆ. ತಮ್ಮನ ಬಳಿ ಉತ್ತಮ ಲ್ಯಾಪ್ಟಾಪ್ ಬಗ್ಗೆ ಕೇಳಿ ತಿಳಿಯೋಣವೆಂದರೆ ಅವನು "ಲ್ಯಾಪ್ಟಾಪ್ ಹೊತ್ತುಕೊಂಡು ಯಾಕೆ ಹೋಗ್ತೀಯ ಅಕ್ಕ? ಎಲ್ಲ ಕೆಲಸ ಫೋನ್-ನಲ್ಲೆ ಮಾಡಬಹುದು. ಒಳ್ಳೆ ಸ್ಮಾರ್ಟ್-ಫೋನ್ ಖರೀದಿಸು" ಎಂದ. ಬೇಡ, ಬೇಡ ವೆಂದರೂ ಸಂಕ್ರಾಂತಿಯಂದು "ಬ್ರಾಂಡ್ ನ್ಯೂ ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 2" ನನ್ನ ಕೈ ಸೇರಿತು. 

ಲ್ಯಾಪ್ಟಾಪ್-ಗೆ ಮೀಸಲಿಟ್ಟಿದ್ದ 50,000 ರೂಪಾಯಿಗಳಲ್ಲಿ ಹಣ ಉಳಿತಾಯ ಆಯಿತೆಂದುಕೊಂಡರೆ ಈ ಫೋನ್ ಗೆ ಬರೋಬ್ಬರಿ 45,000 ರೂಪಾಯಿ! ಮುಖದಲ್ಲಿ ಮಂದಹಾಸವಿದ್ದರೂ ಮನದೊಳಗೆ ಬಿಕ್ಕಿ ಬಿಕ್ಕಿ ಅಳುತ್ತಿದ್ದೆ. ಬ್ಯಾಕ್-ಗ್ರೌಂಡ್-ನಲ್ಲಿ "ಇದು ಯಾರು ಬರೆದ ಕಥೆಯೋ" ಹಾಡು ಕೇಳಿಸುತಿತ್ತು, ಮನದೊಳಗೆ. ಇದೇ ಫೋನ್ ನನ್ನ ಸಹೋದ್ಯೋಗಿ ಬಳಿಯೂ ಇತ್ತು. ಅವನು ಕರೆ ಬಂದಾಗಲೆಲ್ಲ ಫೋನ್-ಅನ್ನು ಕಿವಿಯ ಬಳಿ ಇಟ್ಟಾಗ ಸೂಟ್ಕೇಸ್ ಮುಖಕ್ಕೆ ಇಟ್ಟುಕೊಂಡಂತೆ ಕಾಣುತ್ತಿದೆಯೆಂದು ನಾವೆಲ್ಲ ಗೇಲಿ ಮಾಡಿದ್ದೆವು. ಇದೀಗ ಅಪಹಾಸ್ಯಕ್ಕೆ ತುತ್ತಾಗುವ ಸರದಿ ನನ್ನದಾಗಿತ್ತು. 

ಅಕ್ಕ ಪಕ್ಕದವರೆಲ್ಲ "ಎಷ್ಟು ಜಿ.ಬಿ? ಎಷ್ಟು ಮೆಗಾಪಿಕ್ಸೆಲ್?" ಎಂದಾಗಲೆಲ್ಲ ಹಣೆಯಿಂದ ಬೆವರಷ್ಟೇ ಇಳಿಯುತ್ತಿತ್ತು ಹೊರತು ಬಾಯಿಂದ ಧ್ವನಿ ಬರುತ್ತಿರಲಿಲ್ಲ! ಒಂದು ದಿನ "ಗೂಗಲ್" ಮಾಡಿ ಅಂತೂ ನನ್ನ ಫೋನ್-ನ ಫೀಚರ್-ಗಳನ್ನು ಬಾಯಿಪಾಠ ಮಾಡಿಕೊಂಡೆ. ಆದರೆ ಅಷ್ಟರಲ್ಲಿ ಪ್ರಶ್ನೆಗಳು ನಿಂತು ಹೋಗಿದ್ದವು. ಸಾಲಿಗ್ರಾಮಕ್ಕೆ ನೀಡುವಷ್ಟು ಪ್ರಾಮುಖ್ಯತೆಯನ್ನು ಫೋನ್-ಗೆ ನೀಡುತ್ತಿದ್ದೆ; ಗೀಟು ಬೀಳದಂತೆ ನೋಡಿಕೊಳ್ಳುತ್ತಿದ್ದೆ. ಎಲ್ಲರ ಮುಂದೆ ಕರೆ ಸ್ವೀಕರಿಸುವ/ ಮಾಡುವ ಸಮಸ್ಯೆಯೇ ಬೇಡವೆಂದು ಹೆಚ್ಚಿನ ಕಾಲ ಆಫ್ ಮಾಡಿಯೇ ಇಡುತ್ತಿದ್ದೆ. ತುರ್ತು ಕರೆಗಳಿಗಾಗಿ ಚಿಕ್ಕದೊಂದು ಫೋನ್ ಪ್ರತ್ಯೇಕವಾಗಿ ಇಟ್ಟುಕೊಂಡಿದ್ದೆ! 

ಫೋನ್ ಖರೀದಿಸಿ ವರ್ಷದ ಮೇಲಾಗಿತ್ತು. ನಿದ್ದೆಗಣ್ಣಿನಲ್ಲಿ ಫೋನ್ ಚಾರ್ಜ್ ಮಾಡಲು ಹೊರಟಾಗ, ಟಕ್ಕನೆ ಫೋನ್-ನ ಕೆಳಬದಿಯಿಂದ ಚಿಕ್ಕದೊಂದು ರಾಕೆಟ್ ಹೊರಬಂತು! ತಮ್ಮನ ಬಳಿ ಇದರ ಬಗ್ಗೆ ಕೇಳಿದಾಗ ತಿಳಿಯಿತು ಅದು "ಎಸ್ ಪೆನ್" ಎಂದು.

ಪುಸ್ತಕದಲ್ಲಿ ಬರೆದಂತೆ ಫೋನ್-ನಲ್ಲಿ ಬರೆಯಬಹುದಾದ ಯಂತ್ರ ಈ ಸ್ಟೈಲಸ್.  "ಫೋನ್-ನಲ್ಲೆ ಎಲ್ಲ ಕೆಲಸ ಮಾಡಬಹುದು ಅಂದಿದ್ದೇನಲ್ಲ! ಇಷ್ಟು ದಿವಸ ನೀನು ಏನ್ನನ್ನು ಬಳಸಿ ಬರೆಯುತ್ತಿದ್ದಿ ಹಾಗಿದ್ದರೆ?" ಎಂದು ತಮ್ಮ ಕೇಳಿದಾಗ ಮತ್ತೆ ಹಣೆಯಿಂದ ಬೆವರು ಇಳಿಯಿತು ಹೊರತು ಬಾಯಿಂದ ಮಾತು ಹೊರಡಿಲ್ಲ!

ಅಷ್ಟು ಸಮಯ ಸ್ಟೈಲಸ್ ನನ್ನ ಫೋನಿನ ಒಳಗೆಯೇ ಹುದುಗಿಕೊಂಡಿತ್ತು. ಆ ಸಂಗತಿ ನನಗೇ ತಿಳಿದೇ ಇರಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com