ವಿವಾಹೇತರ ಸಂಬಂಧ ಎಂಬ ರೋಚಕ ಅಧ್ಯಾಯದಲ್ಲಿ ಹೆಣ್ಣು ಮಾತ್ರ ಏಕೆ ಅಪರಾಧಿ?

ಇಂದಿನ ಆಧುನಿಕ ಯುಗದಲ್ಲಿ  ಎಲ್ಲ ಸರಿಯಿದ್ದೂ ಜಾರುವ ತನು ಮನಗಳಿಗೆ ಲೆಕ್ಕವಿಲ್ಲ. ಹೊಸ ಸಂಬಂಧಗಳು ಒಂದು ಸಾಹಸದಂತೆ, ರೋಚಕ ಅಧ್ಯಾಯದಂತೆ, ಬದುಕಿಗೆ ಹೊಸ ಉತ್ಸಾಹ ತರುತ್ತವೆ ಎಂದು ಭಾವಿಸುವವರೂ ಇದ್ದಾರೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
<strong>ಕವಿತಾ ಹೆಗಡೆ ಅಭಯಂ</strong>
ಕವಿತಾ ಹೆಗಡೆ ಅಭಯಂ

ಉತ್ತರಕನ್ನಡ ಮೂಲದವರಾದ ಕವಿತಾ ಹೆಗಡೆ, ಈಗ ಹುಬ್ಬಳ್ಳಿಯ ಮಂಜುನಾಥ ನಗರದ ಕೆ ಎಲ್ ಇ ಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕಿಯಾಗಿದ್ದಾರೆ. ಕನ್ನಡ ಹಾಗೂ ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಥೆ, ಕವನ, ಪ್ರಬಂಧ, ವ್ಯಕ್ತಿತ್ವ ವಿಕಸನ ಲೇಖನಗಳು, ಅನುವಾದ, ಅಂಕಣ ಬರಹ, ವಿಮರ್ಶೆಗಳಲ್ಲಿ ಆಸಕ್ತಿ. ನಾಡಿನ ಖ್ಯಾತ ಪತ್ರಿಕೆಗಳು, ಮ್ಯಾಗಝಿನ್ಗಳು, ಬ್ಲಾಗುಗಳಲ್ಲಿ ನಿಯಮಿತವಾಗಿ ಬರಹಗಳು ಪ್ರಕಟವಾಗುತ್ತಿವೆ. 'ದ ನೆಸ್ಟೆಡ್ ಲವ್' ಇವರ ಮೊದಲ ಆಂಗ್ಲ ಕಥಾ ಸಂಕಲನ.

ವಿವಾಹ ಎಂಬುದು ಎಷ್ಟೋ ಹೃದಯಗಳಿಗೆ ನವಿರಾದ ಕಂಪನ, ಮಧುರ ಬಂಧನವೊಂದಕ್ಕೆ ಬೆಸೆದುಕೊಳ್ಳುವ ದೇಹಾತ್ಮಗಳಿಗೆ ರೋಮಾಂಚನ ಹುಟ್ಟಿಸುವ, ಭವಿತವ್ಯದ ಜೀವನ ಸಂಗಾತಿಯೊಂದಿಗೆ ಬದುಕು ಹಂಚಿಕೊಳ್ಳುವ ಸಡಗರ ತರುವ ಅನುಬಂಧ. ಈ ಬಂಧಕ್ಕೆ ತಮ್ಮನ್ನು ಜೋಡಿಸಿಕೊಳ್ಳುವ ಕಣ್ಣುಗಳು ಕಾಣುವ ಕನಸುಗಳಿಗೆ ಕೊನೆಯೇ ಇಲ್ಲ.

ಮದುವೆಯ ಸಂಭ್ರಮದ ಜೋಕಾಲಿ ಹದವಾಗಿ ಜೀಕುತ್ತಿದ್ದರೆ ಮಾತ್ರ ಅದು ಸಾರ್ಥಕ. ವಿವಾಹದ ಸಾರ್ಥಕ್ಯವಿರುವುದೇ ಜೋಡಿ ಜೀವಗಳು - ದೇಹಗಳು ಒಂದಾದಾಗ. ಇಡೀ ದಾಂಪತ್ಯದ ಭದ್ರತೆ ನಿಲ್ಲುವುದು ಒಲಿದ ಮನಸ್ಸಿಗೆ ದೇಹವೂ ಸ್ಪಂದಿಸಿದಾಗ ಮಾತ್ರ. 

ಒಡೆದ ಹೃದಯದ ಚೂರು

ಪತಿ ಪತ್ನಿಯರ ಸಹಜ ದೈಹಿಕ ಸಂಬಂಧ ಏಕೀಭಾವದ ಸಮರ್ಪಣೆ ಹಾಗೂ ನಂಬಿಕೆಯ ಮೇಲೆ ನಿರ್ಧರಿತವಾಗುವಂಥದ್ದು. ಹತ್ತು ಹಲವು ಕಾರಣಗಳಿಗಾಗಿ ಇದು ಸಾಧ್ಯವಾಗದೆ ಇದ್ದಾಗ ಪತಿ ಅಥವಾ ಪತ್ನಿ, ಇಲ್ಲವೆ ಇಬ್ಬರೂ ಕವಲುದಾರಿಯನ್ನು ಆಯ್ದುಕೊಳ್ಳುವ ಅಸಂಖ್ಯ ಘಟನೆಗಳು ಕಣ್ಣ ಮುಂದಿವೆ, ಎಷ್ಟೋ ಬದುಕಿಗೆ ಮುಳ್ಳಾಗಿವೆ. 

ವಿವಾಹೇತರ ಸಂಬಂಧ ಕೇವಲ  ಮಾನಸಿಕ ಅವಲಂಬನೆಯಿರಲಿ ಅಥವಾ ದೈಹಿಕ ಸಂಪರ್ಕವಿರಲಿ, ಅದು ಜಗಜ್ಜಾಹೀರಾದಾಗ ಉಂಟುಮಾಡುವ ಪರಿಣಾಮಗಳು ಆಘಾತಕಾರಿ ಅಥವಾ ತೀವ್ರ ದುರಂತದಲ್ಲಿ ಸಿಲುಕಿಕೊಳ್ಳುವ ಎಲ್ಲ ಅಪಾಯಗಳನ್ನೂ ಹೊಂದಿರುತ್ತವೆ. 

ಇನ್ನು ಮೌಲ್ಯದ ಪ್ರಶ್ನೆ ಎತ್ತಿದರೆ ಎಂತಹ ಮುಂದುವರಿದ ದೇಶ ಅಥವಾ ಸಮಾಜದಲ್ಲಾದರೂ ಇದಕ್ಕೆ ಮಾನ್ಯತೆ ಇಲ್ಲ ಅಥವಾ ಇದ್ದರೂ ತುಂಬ ಕಡಿಮೆ. ಹಾಗಾಗಿ ಇದು ವಿಶ್ವದೆಲ್ಲೆಡೆ ಅತಿ ದೊಡ್ಡ ವಿಶ್ವಾಸದ್ರೋಹ ಎಂದರೆ ಅಫೇರ್ ಎನ್ನುವ ಅಭಿಪ್ರಾಯವಿದೆ. ತಮ್ಮನ್ನು ನಂಬಿ ಸರ್ವಸ್ವವನ್ನೂ ಅರ್ಪಿಸಿದ ಸಂಗಾತಿ ತನ್ನನ್ನು ವಂಚಿಸಿ ಹಾಸಿಗೆಯನ್ನು ಬೇರೊಬ್ಬರ ಜೊತೆ ಹಂಚಿಕೊಂಡ ವಿಷಯವನ್ನರಿಯುವಂಥ ಅಘಾತವನ್ನು ಊಹಿಸಿಕೊಳ್ಳಲೂ ಅಸಾಧ್ಯ. ಒಡೆದ ಹೃದಯದ ಚೂರುಗಳನ್ನು ಏಕಾಂಗಿಯಾಗಿ ಹೆಕ್ಕುತ್ತ ಬಿಕ್ಕುತ್ತ ಕೂರುವುದೇ ಬದುಕಾಗುವುದು ನ್ಯಾಯವೆ? 

ರೋಚಕ ಅಧ್ಯಾಯ

ಇಲ್ಲಿ ಚರ್ಚಿಸಬೇಕಾದ ವಿಷಯ ಅಂದರೆ ಎಲ್ಲ ವಿವಾಹೇತರ ಸಂಬಂಧಗಳನ್ನೂ ವಂಚನೆ ಅನ್ನುವ ಹೆಸರಿನಿಂದ ಕರೆಯುವುದು ಸರಿಯೆ? ಎಲ್ಲ ಸರಿಯಿದ್ದೂ ಜಾರುವ ತನು ಮನಗಳಿಗೆ ಇಂದಿನ ಆಧುನಿಕ ಯುಗದಲ್ಲಿ ಲೆಕ್ಕವಿಲ್ಲ. ಹೊಸ ಸಂಬಂಧಗಳು ಒಂದು ಸಾಹಸದಂತೆ, ರೋಚಕ ಅಧ್ಯಾಯದಂತೆ, ಬದುಕಿಗೆ ಹೊಸ ಉತ್ಸಾಹ ತರುತ್ತವೆ ಎಂದು ಭಾವಿಸುವವರೂ ಇದ್ದಾರೆ. 

ಪ್ರತಿ ಬಾರಿಯೂ ಒಂದು ಹೊಸ ಸಂಗಾತಿಯ ಜೊತೆ ಹೊಸ ಅನ್ವೇಷಣೆಗೆ ಮುಂದಾಗುವವರು ಈ ಯುಗದಲ್ಲಿ ಕಡಿಮೆಯಿಲ್ಲ ಅನ್ನುವುದು ಕೂಡ ಕಟು ವಾಸ್ತವ. ಗೊತ್ತಿದ್ದೂ ಗೊತ್ತಿದ್ದೂ ಜೀವನ ಸಂಗಾತಿಯನ್ನು ಅಲಕ್ಷಿಸುವ, ದೂರವಾಗಿಸಿ ಎಲ್ಲ ಆಟಗಳನ್ನು ಆಡಿಯೂ ಮುಗ್ಧರ ಸೋಗು ಹಾಕುವವರಿಗೇನು ಬರವೇ? ಇವರನ್ನು ಮೃದು ಹೃದಯದಿಂದ ನೋಡುವುದು ಸಾಧ್ಯವಾದೀತೆ?

ತನುಮನಗಳ ದಹಿಸುವ ಕಾರಣಗಳು

ಹ್ಞಾ... ಒಂದು ವಿಷಯ. ಇಲ್ಲಿ ನೋಡಿ… ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ಹಾಕಿ ತೂಗುವುದು ಸರಿಯೆ? ಯಾಕೆಂದರೆ ಜಾರಿದ ಜೀವದ ತಲ್ಲಣ ನಿಜವಾಗಿ ಏನಿತ್ತೋ ಯಾರಿಗೆ ಗೊತ್ತು. ಉಕ್ಕಿ ಚೆಲ್ಲುವ ಯೌವನದ ಹಾಲುಹಿಡಿಸುವ ಹದವಾದ ಪಾತ್ರೆ ಎಲ್ಲರಿಗೂ ಸಿಗಬೇಕಲ್ಲ! ಅದೆಷ್ಟೋ ದೇಹಗಳು ಸಂಗಾತಿಯಿಂದ ಸಿಗಬೇಕಾದ ನೈಜ ಸಂಬಂಧದಿಂದ ಹಲವು ಮನೋದೈಹಿಕ ಕಾರಣಗಳಿಂದ ಕೂಡ ವಂಚಿತರಾಗಿರಬಹುದು. 

ಒಲ್ಲದ ಸಂಬಂಧ, ಸಂಗಾತಿಯ ಅಪಮೃತ್ಯು, ಬಂಜೆತನ, ಅರಸಿಕತೆ, ಮನಸ್ತಾಪ, ಶೋಷಣೆ, ಅವಮಾನ, ಕೆಲಸದ ಒತ್ತಡ ತರುವ ಬೇಸರದ ಬದುಕು ಹೀಗೆ ಯಾವ್ಯಾವುದೋ ಹೇಳಲಾಗದ, ಹಂಚಿಕೊಳ್ಳಲಾಗದ ನೂರು ಕಾರಣಗಳು ತನುಮನಗಳನ್ನು ದಹಿಸುತ್ತಿರಬಹುದು. 

ಸಮಾಜದ ತಾರತಮ್ಯ ನೀತಿ

ದೇಹದ ಬಯಕೆಯನ್ನು ಪೂರ್ತಿಯಾಗಿ ಹತ್ತಿಕ್ಕಿಕೊಂಡು ಬದುಕುವ ಸನ್ಯಾಸತ್ವದ ಭಾವವನ್ನು ಹೊಂದುವುದು ಎಲ್ಲರಿಗೂ ಸಾಧ್ಯವಾಗದೆ ಇರಬಹುದು. ಆಗ ಹುಟ್ಟಿಕೊಂಡ ಹೊಸ ಸಂಬಂಧದ ಚಿಗುರು ಚೆಂದವೆನಿಸುತ್ತಿರಬಹುದು, ಬದುಕುವ ಭರವಸೆ ಮೂಡಿಸಿರಬಹುದು. ಆದರೆ ಈ ವರ್ಗವನ್ನೂ ಉದಾರವಾಗಿ ಕ್ಷಮಿಸಲು ಯಾರೂ ಸಿದ್ಧರಿಲ್ಲ ಎಂಬುದು ಮಾತ್ರ ವಾಸ್ತವ. ಹೀಗೆ ಅವಶ್ಯಕತೆ ಅಥವಾ ಅನಿವಾರ್ಯತೆ ಏನೇ ಇರಲಿ ವಿವಾಹೇತರ ಸಂಬಂಧಗಳು ಬಹಿರಂಗಗೊಂಡಾಗ ಸಮಾಜ ಸ್ಪಂದಿಸುವ ರೀತಿ ಮಾತ್ರ ಇಂದಿಗೂ ವಿಚಿತ್ರ. 
ಪುರಾಣದ ಕಥೆಯಿರಲಿ ಇಂದಿನ ಧಾವಂತದ ಬದುಕಿರಲಿ ಮತ್ತೆ ಬಿಚ್ಚಿಕೊಳ್ಳುವುದು ಮಾತ್ರ ತಾರತಮ್ಯದ ನೀತಿಯೇ. ಸಿಕ್ಕಿಬಿದ್ದ ಗಂಡಿಗೆ 'ಅವನು ಗಂಡಸು, ಏನೀಗ, ನಡೆಯುತ್ತೆ ಬಿಡು' ಎಂದು ಉದಾರ ಧೋರಣೆ ತಾಳಿದರೆ ಹೆಣ್ಣಿಗೆ ಮಾತ್ರ 'ಅಪವಿತ್ರೆ', 'ಕಳಂಕಿತೆ', 'ಜಾರಿಣಿ' ಎಂಬ ಹಣೆಪಟ್ಟಿ ಕಟ್ಟುವುದರೊಂದಿಗೆ ತೀವ್ರವಾಗಿ ಅವಳ ನಡತೆಯನ್ನು ಖಂಡಿಸಲಾಗುತ್ತದೆ. 

ನ್ಯಾಯದ ಮಾತು

ಈ ದೇಹಗಳು ಮಾತ್ರ ಸರಿ ಸಮಾನರಲ್ಲ ಯಾಕೆ? ಅಲ್ಲೂ ಗಂಡಿಗೆ ಮೇಲುಗೈ ದಯಪಾಲಿಸಿ ಹೆಣ್ಣನ್ನು ತುಳಿಯುವ ಸಣ್ಣ ಬುದ್ಧಿ ಹೋಗಿಯೇ ಇಲ್ಲ. ಗಂಡು ಮಾಡಿದ್ದು ತಪ್ಪಲ್ಲ, ಅದೇ ಹೆಣ್ಣು ಮಾಡಿದರೆ ಘನ ಅಪರಾಧ ಎಂಬ ರೋಗಗೃಸ್ತ ಮನಸ್ಸುಗಳೇ ಇಂದೂ ಅವಳನ್ನು ಅದುಮಿಟ್ಟು ಆಳಬಯಸುತ್ತಿವೆ. ಅವಳ ಅಂತರಂಗ ಈ ತಾರತಮ್ಯಕ್ಕೆ ಅದೆಷ್ಟು ಘಾಸಿಗೊಳ್ಳುವುದೋ ಎಂಬ ಕನಿಷ್ಠ ಪ್ರಜ್ಞೆಯೂ ಇಲ್ಲದಂತೆ ಬರೀ ಸ್ತ್ರೀ ದೂಷಣೆ ಮಾಡುವುದು ಸುಲಭವಾಗಿಬಿಟ್ಟಿದೆ. 'ಅವಳು' ಗಂಭೀರವಾಗಿರಬೇಕಿತ್ತು, 'ಪುರುಷ' ಮನ ಚಂಚಲಗೊಳ್ಳಲು ಸ್ತ್ರೀಯೇ ಕಾರಣ ಎಂಬ ಚರ್ವಿತಚರ್ವಣ ಉಕ್ತಿಗಳನ್ನುದುರಿಸಿ ಅವಳನ್ನು ತಪ್ಪಿತಸ್ಥೆಯ ಸ್ಥಾನದಲ್ಲಿ ಕೂರಿಸಿ ಅವಮಾನಿಸುವುದು ಸರಿಯೇ?

ವಿವಾಹೇತರ ದೈಹಿಕ ಸಂಬಂಧಗಳನ್ನು ಬೆಳೆಸಿ ಎಂದು ಯಾರೂ ಉಪದೇಶಿಸಲಾರರು. ಅದನ್ನು ಸರಿ ಎಂಬ ಸಮರ್ಥನೆ ಕೂಡ ಮಾಡಲಾರರು. ತಪ್ಪಿದ್ದರೆ ಇಬ್ಬರದೂ ತಪ್ಪೇ ಅನ್ನಲಿ. ನ್ಯಾಯದ ಮಾತು ಬಂದಾಗ ಮಾತ್ರ ಹೆಣ್ಣಿರಲಿ, ಗಂಡಿರಲಿ ಅದು ಇಬ್ಬರಿಗೂ ಒಂದೇ ಇರಲಿ. ಜೀವನದ ಕಾನೂನು - ಕಟ್ಟಲೆಗಳು ಕೂಡ ಇಬ್ಬರಿಗೂ ಸಮನಾಗಿರಲಿ ಅಷ್ಟೇ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com