ಪ್ರಾಚೀನ ಕಾವ್ಯಗಳಲ್ಲಿ ತೆರಿಗೆ ವ್ಯವಸ್ಥೆ; ಆದಾಯದ ಮೂಲವಾಗಿತ್ತು ಚೋರರಜ್ಜೂ, ವ್ರಜಭೂಮಿ!

ಮದ್ಯಮಾರಾಟ ಮಳಿಗೆಗಳ ಅಧ್ಯಕ್ಷ, ವೇಶ್ಯೆಯರು, ಜೂಜುಗಾರರು, ಕುಶಲಕರ್ಮಿಗಳು, ಕಲಾವಿದರು, ದೇವಾಲಯ ನಿರ್ವಹಣಾಧಿಕಾರಿಗಳೇ ಮೊದಲಾದವರಿಂದ ವಸೂಲಿ ಮಾಡಿದ ಆದಾಯವನ್ನು ಸೂಚಿಸುತ್ತದೆ. ವೇಶ್ಯೆಯರನ್ನೂ ಆದಾಯದ ಮೂಲವಾಗಿ ಬಳಸಿಕೊಳ್ಳುವ ಚಾಣಾಕ್ಷ ಚಾಣಕ್ಯ!
Raghuvamsha- Kalidasa
ರಘುವಂಶ- ಕಾಳಿದಾಸonline desk
Updated on

“ಪ್ರಜಾನಾಮೇವ ಭೂತ್ಯರ್ಥಂ ಸ ತಾಭ್ಯೋ ಬಲಿಮಗ್ರಹೀತ್।

ಸಹಸ್ರಗುಣಮುತ್ಸೃಷ್ಟುಂ ಆದತ್ತೇ ಹಿ ರಸಂ ರವಿಃ॥”

ತೆರಿಗೆಯ ಸಂಗ್ರಹಣೆಯನ್ನು ಒಬ್ಬ ರಾಜ ಏಕೆ ಮತ್ತು ಹೇಗೆ ಮಾಡುತ್ತಾನೆ ಎನ್ನುವುದನ್ನು ಕಾಳಿದಾಸನ ರಘುವಂಶದ ಈ ಶ್ಲೋಕವು ಬಹಳ ಕಾವ್ಯಾತ್ಮಕವಾಗಿ ತಿಳಿಸುತ್ತದೆ. ಸೂರ್ಯನು ಮಳೆಯ ರೂಪದಲ್ಲಿ ಸಾವಿರಪಟ್ಟು ನೀರನ್ನು ಭೂಮಿಗೆ ಮರಳಿಸಲೆಂದೇ ಜಲಮೂಲಗಳಿಂದ ನೀರನ್ನು ಹೀರಿಕೊಳ್ಳುತ್ತಾನಷ್ಟೇ. ಅಂತೆಯೇ ದಿಲೀಪ ಮಹಾರಾಜನೂ ಪ್ರಜೆಗಳ ಕಲ್ಯಾಣಕ್ಕೆಂದೇ ಅವರಿಂದ ತೆರಿಗೆಯನ್ನು ಸಂಪಾದಿಸುತ್ತಿದ್ದನಂತೆ. ಒಂದು ಬಗೆಯಲ್ಲಿ ಅದು ಸಮುದ್ರದ ನೀರು ಹಿಮ್ಮುಖವಾಗಿ ಹರಿಯುವ ರೀತಿ!

Division of labour, specialization of labour ಎನ್ನುವ ಬೆಳವಣಿಗೆಗಳ ಕಾರಣದಿಂದ ಸಮಾಜದಲ್ಲಿ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಯುಂಟಾದಾಗ ಅದನ್ನು ಸರಿದೂಗಲು ಹುಟ್ಟಿಕೊಂಡ ರಾಜ್ಯವ್ಯವಸ್ಥೆಗೆ ತಳಹದಿ ತೆರಿಗೆ. ಅಲ್ಲಿ ತೆರಿಗೆಯನ್ನು ಪಾವತಿಸುವ ಜನರಿಗೆ ನಾವು ಮತ್ತೊಬ್ಬರಿಗಾಗಿ ವ್ಯಯಿಸುತ್ತಿದ್ದೇವೆ ಎಂಬ ಭಾವವಿಲ್ಲ. ‘ನಾವು’ ‘ನಮಗಾಗಿ’ ‘ನಮ್ಮಿಂದ ಮಾಡಲಾಗದ್ದನ್ನು ಮಾಡಬಲ್ಲ’ ಒಂದು ಅಧಿಕಾರಕ್ಕೆ ಅದನ್ನು ಮಾಡಲು ಸಹಕಾರ ನೀಡುತ್ತಿದ್ದೇವೆ ಎಂದಷ್ಟೇ ಅಲ್ಲಿನ ದೃಷ್ಟಿ.

ಲಾಗಾಯ್ತಿನಿಂದಲೂ ತಮ್ಮ ಕಠಿಣವಾದ ತೆರಿಗೆ ನೀತಿಗಳಿಂದ ಜನರ ಮನೆಮಾತಾಗಿಬಿಟ್ಟಿರುವ ವಿತ್ತಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರ ನಡೆಯ ಕುರಿತಾಗಿ ದೇಶದ ಜನತೆ ಕುತೂಹಲದಿಂದ ಕಾಯುವ ಫೆಬ್ರವರಿ ತಿಂಗಳು ಬರುತ್ತಿದೆ. ಹೀಗಿರುವಾಗ ಒಮ್ಮೆ ಪ್ರಾಚೀನ ಶಾಸ್ತ್ರಗ್ರಂಥಗಳು ಮತ್ತು ಕೆಲವು ಅರಸೊತ್ತಿಗೆಗಳು ಯಾವ ಪ್ರಕಾರದ ಆಯ ಮತ್ತು ವ್ಯಯ ಪದ್ಧತಿಗಳನ್ನು ಹೊಂದಿದ್ದರು ಮತ್ತು ತೆರಿಗೆ ನೀತಿಗಳನ್ನು ಅನುಸರಿಸುತ್ತಿದ್ದರು ಎಂಬುದರ ಮೇಲೆ ಕೊಂಚ ಕಣ್ಣಾಡಿಸೋಣ.

ರಾಜನನ್ನು ‘ಷಷ್ಠಾಂಶವೃತ್ತಿ’ ಎನ್ನುವುದಾಗಿ ಕರೆಯುವುದಿದೆ. ಪ್ರಜೆಗಳ ಉತ್ಪಾದನೆಯ, ಫಲದ ಆರನೇ ಒಂದು ಅಂಶ ರಾಜನನ್ನು ಸೇರುವುದರಿಂದ ಆ ಹೆಸರು. ಅರೇ! ಹಾಗಾದರೆ ಅದಷ್ಟೇ ಆತನ ಆದಾಯದ ಮೂಲವಾಗಿತ್ತಾ? ಮತ್ತೆ ಮಳೆ ಬೆಳೆಗಳು ಸರಿಯಾಗಿ ಆಗದಿದ್ದರೆ ರಾಜಬೊಕ್ಕಸದ ಕಥೆ ಏನು ಎನ್ನುವುದಾಗಿ ‘ಅಭಿಜ್ಞಾನ ಶಾಕುಂತಲಂ’ ನಾಟಕವನ್ನು ಓದುವಾಗ ನಾನು ಅಚ್ಚರಿಗೊಂಡಿದ್ದೆ. ಆದರೆ ಮುಂದೆ ಚಾಣಕ್ಯನ ಅರ್ಥಶಾಸ್ತ್ರವನ್ನು ಓದುವಾಗ ರಾಜಾದಾಯದ ವಿರಾಟ್ ಸ್ವರೂಪದ ಅರಿವಾಯಿತು. ಅದರ ಪರಿಶೀಲನೆ ನಮಗೆ ಈ ಹೊತ್ತು ಮೂಲ ಅರ್ಥವೇ ವ್ಯತ್ಯಸ್ತವಾಗಿಬಿಟ್ಟಿರುವ ಕೆಲವು ಪದಗಳ ಸರಿಯಾದ ತಿಳುವಳಿಕೆಯನ್ನೂ ನೀಡಬಲ್ಲದು.

Raghuvamsha- Kalidasa
'ವೇಣೀಸಂಹಾರ'ಕ್ಕೊಂದು ವಿಜಯದಶಮಿ...

ಅರ್ಥವೇ ಪುರುಷಾರ್ಥಗಳಲ್ಲಿ ಉತ್ತಮ ಮತ್ತದು ರಾಜ್ಯ ವ್ಯವಸ್ಥೆಯನ್ನು ಬಲಗೊಳಿಸುವ ಸಮರ್ಥ ಉಪಕರಣ ಎನ್ನುವುದು ಚಾಣಕ್ಯನ ನಿಲುವು. ಹಾಗೆಂದೇ ಆತ ಅನೇಕವಿಧವಾದ ಆದಾಯದ ಮೂಲಗಳನ್ನು ಗುರುತಿಸುತ್ತಾನೆ. ಮತ್ತವುಗಳನ್ನು ಸಂಗ್ರಹಿಸುವವನನ್ನು ಸಮಾಹರ್ತೃ ಎನ್ನುವುದಾಗಿ ಕರೆಯುತ್ತಾನೆ. ಈ ಸಮಾಹರ್ತೃವು ದುರ್ಗ, ರಾಷ್ಟ್ರ, ಗಣಿ. ಸೇತು, ವನ, ವ್ರಜ ಮತ್ತು ಸಂಚಾರಭಾಗ ಎನ್ನುವ ಮೂಲಗಳಿಂದ ಧನವನ್ನು ಸಂಗ್ರಹಿಸುತ್ತಾನೆ. ಇವುಗಳಲ್ಲಿ ದುರ್ಗ ಎನ್ನುವ ವಿಭಾಗವು ದಂಡ (fine), ಜಮೀನು, ಮದ್ಯಮಾರಾಟ ಮಳಿಗೆಗಳ ಅಧ್ಯಕ್ಷ, ವೇಶ್ಯೆಯರು, ಜೂಜುಗಾರರು, ಕುಶಲಕರ್ಮಿಗಳು, ಕಲಾವಿದರು, ದೇವಾಲಯ ನಿರ್ವಹಣಾಧಿಕಾರಿಗಳೇ ಮೊದಲಾದವರಿಂದ ವಸೂಲಿ ಮಾಡಿದ ಆದಾಯವನ್ನು ಸೂಚಿಸುತ್ತದೆ. ವೇಶ್ಯೆಯರನ್ನೂ ಆದಾಯದ ಮೂಲವಾಗಿ ಬಳಸಿಕೊಳ್ಳುವ ಚಾಣಾಕ್ಷ ಚಾಣಕ್ಯ!

ಎರಡನೆಯದಾದ ರಾಷ್ಟ್ರ ಎನ್ನುವ ಪದವು ಸೀತಾ ಅರ್ಥಾತ್ ಕೃಷಿಯಿಂದ ಬಂದ ಉತ್ಪತ್ತಿ, ಭಾಗ ಅರ್ಥಾತ್ ಆರಂಭದಲ್ಲಿ ತಿಳಿಸಿದಂತೆ ಧಾನ್ಯಗಳ ಆರನೇ ಒಂದು ಭಾಗ. ಬಲಿ ಅಂದರೆ ಕಾಣಿಕೆ, ಕರ ಅಂದರೆ ಹಣ್ಣು ಹಂಪಲು ಮರ ಮೊದಲಾದವುಗಳಿಗಾಗಿ ರಾಜನಿಗೆ ಸಲ್ಲಿಸಬೇಕಾದ ತೆರಿಗೆ, ವಣಿಕ್ ಅರ್ಥಾತ್ ವರ್ತಕರ ಮೂಲಕ ಸೇರಬೇಕಾದ ಹಣ ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ಕಳ್ಳರನ್ನು ಹಿಡಿದು ಪ್ರಜೆಗಳನ್ನು ರಕ್ಷಿಸಲಿಕ್ಕಾಗಿಯೂ ಒಂದಷ್ಟು ಹಣವನ್ನು ಪ್ರಜೆಗಳಿಂದಲೇ ಸ್ವೀಕರಿಸುವ ಪದ್ಧತಿಯೂ ಇತ್ತಂತೆ. ಇದನ್ನು ಚೋರರಜ್ಜೂ ಎನ್ನುತ್ತಿದ್ದರು!

ಮೂರನೆಯದಾದ ಖನಿಯು ಅದರ ಹೆಸರೇ ತಿಳಿಸುವಂತೆ ಚಿನ್ನ, ಬೆಳ್ಳಿ ಮೊದಲಾದವುಗಳ ಗಣಿಗಳಿಂದ ಸಂಗ್ರಹಿಸಿದ ಹಣ. ಇನ್ನು ನಾಲ್ಕನೆಯದಾದ ಸೇತುವು ಹಣ್ಣಿನ ತೋಟ, ಹೂದೋಟ, ಹೊಲಗದ್ದೆಗಳು ಮೊದಲಾದವುಗಳಿಂದ ಕೈಸೇರುವ ಆದಾಯ. ವನವು ತೇಗ, ಹೊನ್ನೆ ಮೊದಲಾದ ಮರಗಳಿಂದಲೂ, ಜಿಂಕೆ ಆನೆಗಳೇ ಮೊದಲಾದ ಪ್ರಾಣಿಗಳಿಂದಲೂ ಬರತಕ್ಕ ಆದಾಯ.

Raghuvamsha- Kalidasa
ರಾಜ್ಯ, ರಾಜ ಅಸ್ತಿತ್ವಕ್ಕೆ ಬಂದಿದ್ದು ಹೇಗೆ?: ಶಾಂತಿಪರ್ವದ Social Contract Theory ಯಲ್ಲಿದೆ ಉತ್ತರ!

ವ್ರಜಭೂಮಿ, ವ್ರಜವಾಸಿ ಎನ್ನುವ ಪದಗಳನ್ನು ಕೃಷ್ಣನ ಭಕ್ತರಂತೂ ಅವಶ್ಯವಾಗಿ ಕೇಳಿರುತ್ತಾರೆ. ಈ ವ್ರಜ ಎಂದರೆ ಹಸು, ಆಡು ಮುಂತಾದ ಪ್ರಾಣಿಗಳ ಸಮೂಹ ಎನ್ನುವ ಅರ್ಥವಿದೆ. ದನದ ಕೊಟ್ಟಿಗೆ ಎನ್ನುವುದಾಗಿ ಸಹ. ಹಾಗಾಗಿ ಈ ಎಲ್ಲ ಪ್ರಾಣಿಗಳ ಮೂಲಕ ಬರುವ ಆದಾಯವನ್ನೂ ವ್ರಜ ಎಂದೇ ಕರೆಯಲಾಗುತ್ತದೆ. ಕೊನೆಯದಾಗಿ ವ್ಯಾಪಾರಕ್ಕೆ ಮತ್ತು ಸಂಚಾರಕ್ಕೆ ಬಳಕೆಯಾಗುವ ನೆಲ ಮತ್ತು ಜಲಮಾರ್ಗಗಳ ಹುಟ್ಟುವಳಿಯನ್ನು ‘ವಣಿಕ್ಪಥ’ ಎನ್ನುವುದಾಗಿ ಕರೆಯಲಾಗುತ್ತದೆ.

ಈ ಆದಾಯಗಳನ್ನೆಲ್ಲ ವರ್ತಮಾನ, ಪರ್ಯುಷಿತ ಮತ್ತು ಅನ್ಯಜಾತ ಎನ್ನುವುದಾಗಿ ಮೂರು ವಿಧವಾಗಿ ವಿಂಗಡಿಸಲಾಗಿದೆ. ಅವುಗಳ ಕುರಿತು ಮತ್ತು ಪ್ರಾಚೀನ ಕಾವ್ಯಗಳಲ್ಲಿ ಮತ್ತು ಇತಿಹಾಸದಲ್ಲಿ ತೆರಿಗೆ, ತೆರಿಗೆ ವಿನಾಯಿತಿ ಮತ್ತು ವೆಚ್ಚ ಮಾಡುವ ಕ್ರಮಗಳ ವರ್ಣನೆ ಹೇಗಿದೆ ಎನ್ನುವುದನ್ನು ಮುಂಬರುವ ಸಂಚಿಕೆಗಳಲ್ಲಿ ಗಮನಿಸೋಣ….

- ನಚಿಕೇತ್ ಹೆಗಡೆ

nachikethegde266@gmail.com

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com