
ಸಾಂದರ್ಭಿಕ ಚಿತ್ರ
ಗಾಳಿಯಲಿ ಆಗಾಗ
ಪಟಪಟ ಸದ್ದು ಮಾಡಿ
ಸೆಳೆಯದಿರಿ
ಖಾಲಿ ಖಾಲಿ ಕೆಲವು
ನೋವು ನಲಿವು ಕೆಲವು....
ಭಾವನೆಗಳ ಕಣಜ
ಕೆಡವಿದ ಹಾರೆಗಳು....
ಗೂಡು ಕಟ್ಟಿದ ಕಡಜ
ಕಚ್ಚಿದ ಊತಗಳು....
ಹಸಿ ಹೂಳಿಗೆ ಸಿಕ್ಕ
ಚಕ್ರದ ಗುರುತುಗಳು....
ನಡೆದ ದಾರಿಯ
ದೂಳ ಜಾಡುಗಳು....
ಉಟ್ಟು ಮಾಗಿ ಹರಿದ
ನೂಲ ಎಳೆಗಳು.....
ಹೂವೊಳಗೆ ಅಡಗಿದ್ದ
ಮಿಡಿನಾಗರಗಳು....
ಬಿಟ್ಟು ನಡೆದು ಮರೆತ
ಕೈತುತ್ತುಗಳು....
ಬಂಧ ಕಳಚಿದ
ಸಂಬಂಧಗಳು....
ಬೇವ ಕಹಿಯುಂಡು
ಜಿಹ್ವೆ ಕೆಡಿಸಿದ ರುಚಿಗಳು....
ತುಂಡು ತುಂಡಾದ
ಹಗ್ಗದ ಅಸ್ಪಷ್ಟತೆಗಳು....
ಕಾಲಸಂದಿ ನುಸುಳಿದ
ಹೆಗ್ಗಣಗಳು....
ಭೂತಗಳಾಗಿ ಎದ್ದು
ನಿಲ್ಲುವ ಹೆಣಗಳು....
ಎದೆ ಭಾರ ಇಳಿಸಿದ
ಹೊತ್ತಿಗೆಗಳು....
ಶಿರವೇರುವ ಭಯದ
ನೆರಳುಗಳು...
ಮತ್ಯಾಕೋ ಪುಟ ತೆರೆದು
ನೋಡುವ ಚಟ...
ಮರೆತು ಮೌನಿಯಾಗು
ಧ್ಯಾನಿಯಾಗು....
ಕತ್ತಲೆಯ ದಾರಿಯಲಿ
ಕರೆದೊಯ್ವ ಕೈಇಹುದು....
ಹಿಂತಿರುಗಿ ನೋಡದೆ
ಪುಟ ತೆರೆದು ಓದದೆ...
ಮುಚ್ಚಿಬಿಡು
ನಿರಾಳವಾಗು.
- ಪುಷ್ಪಾನಾಗತಿಹಳ್ಳಿ

ಲೇಖಕಿ, ಕಾದಂಬರಿಗಾರ್ತಿ ಪುಷ್ಪಾ ನಾಗತಿಹಳ್ಳಿ ಕಥೆ, ಕವನ, ಪ್ರವಾಸ, ಕೃಷಿ ಚಿಂತನೆ, ಆತ್ಮ ಕಥನ ಹೀಗೆ ಹಲವು ರೀತಿಯ ಬರಹಗಳಿಂದ ಗಮನ ಸೆಳೆದಿದ್ದಾರೆ. 'ಕಾದಿರುವಳು' ಕಾದಂಬರಿ. 'ಚಂದಿರನೇತಕೆ ಓಡುವನಮ್ಮ' ಕೃತಿ ಸೇರಿದಂತೆ ಒಟ್ಟು ಮೂರು ಕೃತಿಗಳನ್ನು ಇವರು ಪ್ರಕಟಿಸಿದ್ದಾರೆ.