ಎಬೋಲಾ: ಫೇಸ್‌ಬುಕ್‌ನಿಂದ ನಿಧಿ ಸಂಗ್ರಹ ಅಭಿಯಾನ

ಎಬೋಲಾ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ಫೇಸ್‌ಬುಕ್ ನಿಧಿ ಸಂಗ್ರಹ ಅಭಿಯಾನ ಆರಂಭಿಸಿದೆ. ಎಬೋಲಾ ಮಹಾಮಾರಿಯ...
ಫೇಸ್‌ಬುಕ್
ಫೇಸ್‌ಬುಕ್

ವಾಷಿಂಗ್ಟನ್: ಎಬೋಲಾ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ಫೇಸ್‌ಬುಕ್ ನಿಧಿ ಸಂಗ್ರಹ ಅಭಿಯಾನ ಆರಂಭಿಸಿದೆ.

ಎಬೋಲಾ ಮಹಾಮಾರಿಯ ವಿರುದ್ಧ ಹೋರಾಟದಲ್ಲಿ ಭಾಗಿಯಾಗಿರುವ ಫೇಸ್ ಬುಕ್ ಸಾಮಾಜಿಕ ಜಾಲತಾಣದ ಸಂಸ್ಥಾಪಕ ಮಾರ್ಕ್ ಜೂಕರ್‌ಬರ್ಗ್ 25 ಮಿಲಿಯನ್ ಡಾಲರ್ ಧನ ಸಹಾಯ ನೀಡಿದ್ದಾರೆ.

 ಜೂಕರ್‌ಬರ್ಗ್ ನೀಡಿದ ಹಣ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಫೌಂಡೇಶನ್‌ಗೆ ತಲುಪಿದೆ. ಆದರೆ ಫೇಸ್ ಬುಕ್ ಇಂಟರ್‌ನ್ಯಾಷನಲ್ ಮೆಡಿಕಲ್ ಕಾರ್ಪ್ಸ್, ಇಂಟರ್‌ನ್ಯಾಷನಲ್ ಫೆಡರೇಷನ್ ಆಫ್ ರೆಡ್ ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ಸೊಸೈಟಿಗಳಿಗೆ ಬೇಕಾಗಿ ಈ ನಿಧಿ ಸಂಗ್ರಹ ಮಾಡುತ್ತಿದೆ. 1.3 ಮಿಲಿಯನ್ ಬಳಕೆದಾರರನ್ನು ಹೊಂದಿರುವ ಫೇಸ್ ಬುಕ್‌ನಲ್ಲಿ, ಖಾತೆಗೆ ಲಾಗಿನ್ ಆದ ಕೂಡಲೇ ನ್ಯೂಸ್ ಫೀಡ್‌ನ ಮೇಲ್ಗಡೆ ನಿಧಿ ಸಂಗ್ರಹಕ್ಕಾಗಿರುವ ಸಂದೇಶವೊಂದು ಕಾಣಿಸಿಕೊಳ್ಳುತ್ತದೆ. ಈ ಸಂದೇಶವನ್ನು ಕ್ಲಿಕ್ ಮಾಡುವ ಮೂಲಕ ಎಬೋಲಾ ವಿರುದ್ಧ ಹೋರಾಟಕ್ಕಾಗಿ ದೇಣಿಗೆ ನೀಡಬಹುದಾಗಿದೆ.

ಎಬೋಲಾದ ರೋಗ ಲಕ್ಷಣ ಮತ್ತು ಚಿಕಿತ್ಸೆಯನ್ನು ವಿವರಿಸುವುದಕ್ಕಾಗಿ ಫೇಸ್‌ಬುಕ್ ಯುನಿಸೆಫ್ ಜತೆ ಸೇರಿ ಮಾಹಿತಿಗಳನ್ನು ಪ್ರಕಟ ಮಾಡುತ್ತಿದೆ. ಮಾತ್ರವಲ್ಲದೆ ನೆಟ್‌ಹೋಪ್ (NetHope) ಜತೆ ಕೈಜೋಡಿಸಿರುವ ಫೇಸ್‌ಬುಕ್ ಗಿನಿಯಾ , ಲಿಬೇರಿಯಾ ಮತ್ತು ಸಿರಾ ಲಿಯೋನ್‌ನಲ್ಲಿ ಎಬೋಲಾ ಪೀಡಿತರಿಗೆ ಸಹಾಯ ಮಾಡುತ್ತಿರುವವರೊಂದಿಗೆ ಸಂಪರ್ಕ ಸಾಧಿಸಲು ಹಾಗೂ ವೈದ್ಯಕೀಯ ಸಹಾಯ ನೀಡುವಲ್ಲಿ ತೊಡಗಿಸಿಕೊಂಡಿದೆ.

ಎಬೋಲಾ ಎಂಬ ಮಹಾಮಾರಿಯನ್ನು ಈಗಲೇ ತಡೆಗಟ್ಟದೇ ಇದ್ದರೆ ಅದು ಜಗತ್ತಿನಾದ್ಯಂತ ಪಸರಿಸಿ ಆರೋಗ್ಯ ಸಮಸ್ಯೆಯಿಂದ ಕಂಗೆಡುವಂತೆ ಮಾಡುತ್ತದೆ. ಆದ್ದರಿಂದ ಇದರ ವಿರುದ್ಧ ಹೋರಾಡಲು ಎಲ್ಲರೂ ಸಜ್ಜಾಗಬೇಕೆಂದು ಫೇಸ್‌ಬುಕ್ ಅಧಿಕೃತ ಪ್ರಕಟಣೆಯನ್ನು ಹೊರಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com