ಕರ್ನಾಟಕದಲ್ಲಿ ಗೋಚರಿಸಿತು ಅನ್ಯಗ್ರಹ ಜೀವಿ, ಹಾರುವ ತಟ್ಟೆ! ಏನಿದು ಕಥೆ?

ಕಳೆದ ಎರಡು ವಾರಗಳಿಂದ ಕರ್ನಾಟಕದಲ್ಲಿ ಅನ್ಯಗ್ರಹ ಜೀವಿ, ಹಾರುವ ತಟ್ಟೆಗಳು ಗೋಚರಿಸಿವೆ ಎಂಬ ವದಂತಿ ಹರಡುತ್ತಿದೆ. ಹಾಸನದ ಚಿಕ್ಕಅರಕಲಗೂಡು ನಗರದಲ್ಲಿ ಅನ್ಯಗ್ರಹ...
ಯುಎಫ್ ಒ
ಯುಎಫ್ ಒ
ಬೆಂಗಳೂರು: ಕಳೆದ ಎರಡು ವಾರಗಳಿಂದ ಕರ್ನಾಟಕದಲ್ಲಿ ಅನ್ಯಗ್ರಹ ಜೀವಿ, ಹಾರುವ ತಟ್ಟೆಗಳು ಗೋಚರಿಸಿವೆ ಎಂಬ ವದಂತಿ ಹರಡುತ್ತಿದೆ.
ಹಾಸನದ ಚಿಕ್ಕಅರಕಲಗೂಡು ನಗರದಲ್ಲಿ ಅನ್ಯಗ್ರಹ ಜೀವಿ ಕಂಡು ಬಂದಿದೆ ಎಂದು ಊರಿನವರು ಹೇಳಿದ್ದರು. ಇಷ್ಟೇ ಅಲ್ಲ ಮಿನುಗುತ್ತಿರುವ ಹಾರುವ ತಟ್ಟೆಯನ್ನೂ ನೋಡಿದ್ದೇವೆ ಅಂತಾರೆ ಇಲ್ಲಿನವರು. ಡಿಸೆಂಬರ್ 9ರಂದು ಮಂಗಳೂರಿನಲ್ಲಿ ಎರಡು ಕಾಲಿರುವ ಅನ್ಯಗ್ರಹ ಜೀವಿಯೊಂದು ಕಾಣಿಸಿತ್ತು ಎಂಬುದೂ ಸುದ್ದಿಯಾಗಿತ್ತು
ಹಾರುವ ತಟ್ಟೆ ಗಳು ಎಲ್ಲಿಂದ ಬಂತು? 
ಕಳೆದ ಶನಿವಾರ ಹಾಸನದಲ್ಲಿ ಮಹಿಳೆಯರು ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಹಾರುವ ತಟ್ಟೆ ಗೋಚರಿಸಿತ್ತಂತೆ. ಇದನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿತ್ತು. ಮಿನುಗುತ್ತಿರುವ ಈ ಹಾರುವ ತಟ್ಟೆಗಳು ಬೆಳಗ್ಗೆ  7.30 ಮತ್ತು 9.30 ಮಧ್ಯೆ ಕಾಣಿಸಿಕೊಂಡಿದ್ದವು. ಆ ಹಾರುವ ತಟ್ಟೆ ಬೆಳಕನ್ನು ಹೊರ ಸೂಸುತ್ತಿದ್ದು, ನೆಲದಿಂದ  150-200ಮೀಟರ್‌ನಷ್ಟು ಮೇಲೆ ಬೆಳಕಿನ ಪುಂಜ ಕಾಣಿಸಿತ್ತು ಎಂದು ಹೇಳಲಾಗುತ್ತಿದೆ.
ಈ ಹಾರುವ ತಟ್ಟೆಯನ್ನು ಹಲವಾರು ಮಂದಿ ನೋಡಿದ್ದಾರೆ. ಆದರೆ ವೀಡಿಯೋದಲ್ಲಿ ನೋಡಿದರೆ ಯಾವುದೂ ಸ್ಪಷ್ಟವಾಗಿ ಕಾಣಿಸುತ್ತಿಲ್ಲ.  ಆದಾಗ್ಯೂ, ತಮ್ಮ ವ್ಯಾಪ್ತಿ ಪ್ರದೇಶದಲ್ಲಿ ಇಂಥದ್ದೇನೂ ನಡೆದಿಲ್ಲ ಅಂತಾರೆ ಇಲ್ಲಿನ ಪೊಲೀಸರು.
ಮಂಗಳೂರಿನಲ್ಲಿ ಅನ್ಯಗ್ರಹ ಜೀವಿ? 
ವಾರಗಳ ಹಿಂದೆ ಅಂದ್ರೆ ಡಿ.9ಕ್ಕೆ ಮಂಗಳೂರಿನ ಬೊಳಿಯಾರ್‌ನಲ್ಲಿ  ಅನ್ಯಗ್ರಹ ಜೀವಿ ಕಾಣಿಸಿಕೊಂಡಿತ್ತಂತೆ. ಮಗುವಿನ ದೇಹ ಹೊಂದಿದ ಈ ಅನ್ಯಗ್ರಹ ಜೀವಿಯ ದನಿ ಮನುಷ್ಯನಂತೇ  ಇದ್ದರೂ, ಅದ್ಯಾವುದೋ ಅರ್ಥವಾಗದ ಭಾಷೆಯನ್ನು ಮಾತನಾಡುತ್ತಿತ್ತು. ಇದು ಆಗೊಮ್ಮೆ ಈಗೊಮ್ಮೆ ಕಾಣಿಸಿ ಮತ್ತೊಮ್ಮೆ ಅಪ್ರತ್ಯಕ್ಷವಾಗುತ್ತಿತ್ತು ಎಂದು ಇಲ್ಲಿನ ಸ್ಥಳೀಯರು ಹೇಳಿದ್ದರು. ಆಮೇಲೆ ಇದಕ್ಕಾಗಿ ಶೋಧ ನಡೆಸಿದರೂ ಏನೂ ಪ್ರಯೋಜನವಾಗಲಿಲ್ಲ.
ಪಿರಿಯಾಪಟ್ಟಣದಲ್ಲೂ...
ಅಕ್ಟೋಬರ್ ತಿಂಗಳಲ್ಲಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರಿಗೆ ಅನ್ಯಗ್ರಹ ಜೀವಿಯಂತೆ ಕಾಣುವ ಹಕ್ಕಿಯೊಂದು ಕಂಡು ಬಂದಿದೆ ಎಂಬ ವಾಯ್ಸ್ ನೋಟ್ ಟೀವಿ ಚಾನೆಲ್ ಗಳಲ್ಲಿ ಬಿತ್ತರವಾಗಿತ್ತು. ಅಷ್ಟೇ ಅಲ್ಲ ಆಕಾಶದಿಂದ ಬೆಳಕಿನ ಪುಂಜವೊಂದು ಇಲ್ಲಿ ಕಾಣಿಸಿಕೊಳ್ಳುತ್ತಿತ್ತು. ಇದು ಅನ್ಯಗ್ರಹಜೀವಿಯ ವಾಹನವೇ ಆಗಿರಬಹುದು ಎಂದು ಅಲ್ಲಿನ ಸ್ಥಳೀಯರು ಹೇಳುತ್ತಿದ್ದಾರೆ. ಯಾಕೆಂದರೆ ಆ ಬೆಳಕು ಎಲ್ಲಿಂದ ಬಂತು ಎಂಬುದು ಯಾರಿಗೂ ಗೊತ್ತೇ ಇಲ್ಲ! 
ಯುಎಫ್‌ಒ (unidentified flying object) ಅಂದ್ರೆ?
ಹಾರುವ ಅಪರಿಚಿತ ವಸ್ತುಗಳಿಗೆ ಯುಎಫ್ ಒ ಅಂತಾರೆ. ಅಮೆರಿಕ ಮತ್ತು ರಷ್ಯಾ ಬಾಹ್ಯಾಕಾಶ ಯಾನ ಮಾಡಿದ ನಂತರ ಈ ವಸ್ತುಗಳು ಕಾಣಿಸಿಕೊಂಡಿವೆ ಎಂದು ತಜ್ಞರು ಹೇಳುತ್ತಿದ್ದಾರೆ.  
ಇನ್ನೇನು ಕಾಣಿಸಿಕೊಂಡಿದೆ? 
2015 ಜೂನ್ ತಿಂಗಳಲ್ಲಿ ಕಾನ್ಪುರದ ಹುಡುಗನೊಬ್ಬ ತನ್ನ ಸ್ಮಾರ್ಟ್‌ಫೋನ್ ನಲ್ಲಿ ಹಾರುವ ತಟ್ಟೆಯ ಫೋಟೋ ಸೆರೆ ಹಿಡಿದಿದ್ದ.
2012 ಜುಲೈನಲ್ಲಿ ಪುಣೆಯಲ್ಲಿ ಯುಎಫ್ ಒ ತಯಾರಿಸಲಾಗುತ್ತಿದೆ ಎಂಬ ವದಂತಿ ಬಂದಿತ್ತು. ಆದರೆ ಅವು ಹವಾಮಾನ ನಿರೀಕ್ಷಣಾ ಬಲೂನ್ ಗಳಾಗಿದ್ದವು ಎಂಬುದು ಆಮೇಲೆ ತಿಳಿದು ಬಂತು.
ಎಲ್ಲ ಬರೀ ಓಳು...
ಅಲ್ಲಲ್ಲಿ ಅನ್ಯಗ್ರಹ ಜೀವಿಗಳು, ಹಾರುವ ತಟ್ಟೆಗಳು ಕಾಣಿಸಿಕೊಂಡಿವೆ ಎಂಬ ಸುದ್ದಿಗಳನ್ನು ವಿಜ್ಞಾನಿಗಳು ತಳ್ಳಿ ಹಾಕಿದ್ದಾರೆ. ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯೊಂದಿಗೆ ಮಾತನಾಡಿದ ಇಂಡಿಯನ್ ಇನ್ಸಿಟ್ಯೂಟ್ ಆಫ್ ಆಸ್ಟ್ರೋ ಫಿಸಿಕ್ಸ್‌ನ ಸಹಾಯಕ ಪ್ರಾಧ್ಯಾಪಕ ಸುಜನ್ ಕೆ. ಸೇನ್ ಗುಪ್ತಾ ಅವರು, ಇದೆಲ್ಲಾ ಫೋಟೋಶಾಪ್ ಕಿತಾಪತಿ ಅಂತಾರೆ.  ಜನರು ಬಾಹ್ಯಾಕಾಶದ ಬದುಕಿನ ಬಗ್ಗೆ ಕುತೂಹಲಿಗಳಾಗಿದ್ದು, ಅವರವರ ಊಹೆಗೆ ತಕ್ಕಂತೆ ಎಲ್ಲವನ್ನೂ ಚಿತ್ರಿಸುತ್ತಾರೆ. 
ಈ ಬಗ್ಗೆ ಶೋಧ ನಡೆಸಿದರೂ ಇಲ್ಲಿಯವರೆಗೆ ಯುಎಫ್‌ಒ ಬಗ್ಗೆ ಯಾವುದೇ ಒಂದು ಫೋಟೋ ಸಿಕ್ಕಿಲ್ಲ.
ಆಗಾಗ್ಗೆ ಇಂಥಾ ವದಂತಿಗಳು ಬರುತ್ತಲೇ ಇರುತ್ತವೆ. ಆದರೆ ಇದ್ಯಾವುದಕ್ಕೂ ವಿಜ್ಞಾನದ ಪುರಾವೆಗಳಲ್ಲಿ ಅಂತಾರೆ ಇಂಡಿಯನ್ ಇನ್ಸಿಟ್ಯೂಟ್ ಆಫ್ ಸಯನ್ಸ್‌ನ ಇನ್ನೊಬ್ಬ ವಿಜ್ಞಾನಿ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com