
ಲಂಡನ್: ಕೃತಿಚೌರ್ಯದ ಆರೋಪಗಳು ಇಂದು ನಿನ್ನೆಯದಲ್ಲ, ಶತಮಾನದ ಈ ಕಳ್ಳಾಟ ಸಾಮಾಜಿಕ ಜಾಲತಾಣಗಳು ಬಂದನಂತರ ಮಿತಿಮೀರಿವೆ. ಫೇಸ್ ಬುಕ್ ಮತ್ತು ಟ್ವಿಟರ್ ಗಳಲ್ಲಿ ಬರೆದ ಬರಹಗಳು, ಫೋಟೋಗಳು ಮೊದಲು ಪೋಸ್ಟ್ ಮಾಡಿದ್ದು ನಾವೇ ಎಂದು ಸಾಬೀತುಪಡಿಸುವುದು ದೊಡ್ಡ ಕಷ್ಟವೇನಲ್ಲವಾದರೂ, ನಿಮ್ಮ ಬರಹಗಳನ್ನು ಕಳ್ಳತನವಾಗಿದೆಯೆಂಬುದೇ ಗೊತ್ತಿಲ್ಲದ ಪರಿಸ್ಥಿತಿಯೂ ಇಲ್ಲಿರುತ್ತದೆ. ಕದ್ದವರು ಯಾರೆಂದು ತಿಳಿಯದಿರುವ ಸಂಭವವೂ ಇದೆ.
ಆದರೆ ಇನ್ನು ಮುಂದೆ ಟ್ವಿಟರ್ ನಲ್ಲಿ ಅಷ್ಟಲ್ಲೆ ಸಲೀಸಾಗಿ ಕದಿಯಲು ಸಾಧ್ಯವಾಗಲಿಕ್ಕಿಲ್ಲ. ನೀವು ಬರೆದ 140 ಅಕ್ಷರಗಳ ಟ್ವೀಟ್ ಗೆ ನೀವು ಕಾಪಿರೈಟ್ ಮಾಡಿಸಿಕೊಳ್ಳಬಹುದು. ಅದಂರೆ, ನಿಮ್ಮ ಟ್ವೀಟ್ ಇನ್ನೊಬ್ಬರು ಕದ್ದಿದ್ದಾರೆ ಎಂಬುದನ್ನು ನೀವು ಗಮನಕ್ಕೆ ತಂದಲ್ಲಿ ಅವುಗಳನ್ನು ಪರಿಶೀಲಿಸಿ, ಕಳ್ಳರಿಗೆ ಎಚ್ಚರಿಕೆ ನೀಡಿ, ಟ್ವೀಟ್ ಕತ್ತೆಸೆಯುವ ವ್ಯವಸ್ಥೆ ಇದೀಗ ಟ್ವಿಟರ್ ನಲ್ಲಿ ಲಭ್ಯವಿದೆ.
ಲಾಸ್ ಏಂಜಲಿಸ್ ನ ಓಲ್ಲಾ ಲೆಕ್ಸೆಲ್ ಎಂಬ ಫ್ರೀಲಾನ್ಸ್ ಬರಹಗಾರ್ತಿ ಈ ವ್ಯವಸ್ಥೆಯ ಕಾರಣೀಭೂತರು. ತಮ್ಮ ಟ್ವೀಟ್ ಒಂದು ಕಳ್ಳತನವಾಗಿ ತಮಗೆ ಕ್ರೆಡಿಟ್ ಕೂಡ ನೀಡದೆಯೇ ಇತರರ ಟೈಮ್ ಲೈನ್ ನಲ್ಲಿ ರಾರಾಜಿಸುತ್ತಿರುವುದನ್ನು ಸಾಕ್ಷಿ ಸಮೇತ ಟ್ವಿಟರ್ ನ ಗಮನಕ್ಕೆ ತಂದ ಓಲ್ಲಾ, ಆ ಕದ್ದ ಟ್ವೀಟ್ ಗಳನ್ನು ಕಳ್ಳರ ಖಾತೆಯಿಂದ ಡಿಲೀಟ್ ಮಾಡಿಸುವಲ್ಲಿ ಯಶಸ್ವಿ ಯಾಗಿದ್ದಾರೆ.
ಡಿಜಿಟಲ್ ಮಿಲೆನಿಯಮ್ ಕಾಪಿರೈಟ್ ಕಾಯ್ದೆ ಅಡಿಯಲ್ಲಿ ಈಗ ಟ್ವಿಟರ್ ಡಿಎಂಸಿಎ ಅರ್ಜಿ ಒದಗಿಸುತ್ತಿರುವ ಟ್ವಿಟರ್ ಬಳೆಕದಾರರು, ತಮ್ಮ ಟ್ವೀಟ್ ನ ಚೌರ್ಯ ನಡೆದಲ್ಲಿ ಅದನ್ನು ಫಾರ್ಮ ತುಂಬಿ ಕಳಿಸುವ ಮೂಲಕ ಟ್ವಿಟರ್ ನಿರ್ವಾಹಕರ ಗಮನಕ್ಕೆ ತರಬಹುದು. ಕ್ಷಿಪ್ರಗತಿಯಲ್ಲಿ ಟ್ವಿಟರ್ ಪರಿಶೀಲನೆ ನಡೆಸಿ ಕಳ್ಳತನಕ್ಕೆ ಕಡಿವಾಣ ಹಾಕಲಿದೆ. ಕಳ್ಳತನ ಮಾಡಿದವರಿಗೆ ವಿವರಣೆ ಒದಗಿಸಲು 10 ದಿನಗಳ ಕಾಲಾವಕಾಶವನ್ನೂ ನೀಡಲಿದೆ. ಇದು ಖುದ್ದು ಓಲ್ಲಾ ನೀಡಿರುವ ವಿವರಣೆ. ಟ್ವಿಟರ್ ಮಾತ್ರ ಈ ವಿಚಾರದಲ್ಲಿ ತುಟಿಪಿಟಿಕ್ಕೆಂದಿಲ್ಲ.
Advertisement