
ನ್ಯೂಯಾರ್ಕ್ ಮಂಗಳನಲ್ಲಿ ಜೀವಿಸಲು ಅಗತ್ಯವಿರುವ ಅಂಶಗಳ ಬಗ್ಗೆ ವಿಜ್ಞಾನಿಗಳು ನಿರಂತರವಾಗಿ ಸಂಶೋಧನೆ ನಡೆಸುತ್ತಿದ್ದಾರೆ. ಇತ್ತೀಚಿನ ಸಂಶೋಧನೆ ಮಂಗಳ ಗ್ರಹದಲ್ಲಿ ಜೀವಿಸಲು ಬೇಕಾದ ಅಂಶಗಳ ಇರುವಿಕೆಯನ್ನು ಪತ್ತೆ ಮಾಡಿದೆ.
ಅಂತಾರಾಷ್ಟ್ರೀಯ ಸಂಶೋಧಕರ ತಂಡ ಮಂಗಳ ಗ್ರಹದ ಉಲ್ಕಾಶಿಲೆಯಲ್ಲಿ ಮೀಥೇನ್ ಅಂಶ ಕಂಡುಬಂದಿದ್ದು, ಇದು ಜೀವ ಸಂಕುಲ ಉಳಿಕೆಗೆ ಸಹಕಾರಿಯಾಗಲಿದೆ ಎಂಬುದನ್ನು ಕಂಡುಕೊಂಡಿದೆ. ಪ್ರಸ್ತುತ ಮಂಗಳನಲ್ಲಿ ಕಂಡುಬಂದಿರುವ ಮೀಥೇನ್ ಅಂಶ, ಜೀವ ವಿಕಾಸದ ಆರಂಭಿಕ ರೂಪಗಳಿಗೆ ಅಹಾರವಾಗಲಿದೆ, ಭೂಮಿಯ ಪರಿಸರದಲ್ಲಿರುವ ಸೂಕ್ಷ್ಮಜೀವಿಗಳಿಗೂ ಇದೇ ಮಾದರಿಯ ಮಿಥೇನ್ ಆಹಾರ ಎಂಬುದು ಸಂಶೋಧಕರ ಅಭಿಮತ. ಮಂಗಳನ 6 ಉಲ್ಕಾ ಶಿಲೆಗಳ ಮಾದರಿಯನ್ನು ವಿಜ್ಞಾನಿಗಳು ಪರೀಕ್ಷಿಸಿದ್ದು ಎಲ್ಲಾ 6 ಮಾದರಿಯಲ್ಲೂ ಮೀಥೇನ್ ಅಂಶ ಪತ್ತೆಯಾಗಿದೆ.
ಯು.ಎಸ್ ನ ಯೇಲ್ ವಿಶ್ವವಿದ್ಯಾನಿಲಯದ ತಂಡ ನಡೆಸಿರುವ ಸಂಶೋಧನೆ ಖಗೋಳ ಜೀವಶಾಸ್ತ್ರಜ್ಞರಿಗೆ ಮಂಗಳನಲ್ಲಿ ಜೀವ ಸಂಕುಲ ಉಳಿವಿನ ಬಗ್ಗೆ ಪ್ರಯೋಗ ನಡೆಸಲು ಸಾಧ್ಯವಾಗಲಿದೆ ಎಂದು ಅಧ್ಯಯನದಲ್ಲಿ ಭಾಗಿಯಾಗಿರುವ ಸೀನ್ ಮೆಕ್ ಹೇಳಿದ್ದಾರೆ. ಮಂಗಳನಲ್ಲಿ ಕಂಡುಬಂದಿರುವ ಮೀಥೇನ್ ಅಂಶ ಸೂಕ್ಷ್ಮಜೀವಿಗಳಿಗೆ ನೇರ ಆಹಾರವಗದೇ ಇದ್ದರೂ, ಜೀವಿಗಳ ಅಸ್ತಿತ್ವಕ್ಕೆ ಅಗತ್ಯವಿರುವ ಬೆಚ್ಚಗಿನ, ತೇವ, ರಾಸಾಯನಿಕವಾಗಿ ಪ್ರತಿಕ್ರಿಯಾತ್ಮಕ ಪರಿಸರದ ಇರುವಿಕೆಯನ್ನು ಸೂಚಿಸುತ್ತದೆ ಎಂದು ಸೀನ್ ಮೆಕ್ ಹೇಳಿದ್ದಾರೆ.
ಮಂಗಳ ಗ್ರಹದಲ್ಲಿ ಜೀವಿಗಳ ಅಸ್ತಿತ್ವಕ್ಕೆ ಸಂಬಂಧಿಸಿದಂತೆ ಇದು ಮಹತ್ವದ ಸಂಶೋಧನೆಯಾಗಿದ್ದು ಈ ಅಧ್ಯಯನ ವರದಿ ನೇಚರ್ ಕಮ್ಯುನಿಕೇಷನ್ಸ್ ಎಂಬ ಜರ್ನಲ್ ನಲ್ಲಿ ಪ್ರಕಟವಾಗಿದೆ.
Advertisement