
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡುವುದಲ್ಲಿ ಭಾರತೀಯರೇ ಮುಂದೆ ಇದ್ದಾರಂತೆ. ಈ ವರ್ಷಾಂತ್ಯವಾಗುವಾಗ ದೇಶದ ಮೊಬೈಲ್ ಆ್ಯಪ್ ಡೌನ್ ಲೋಡ್ 6 ಪಟ್ಟು ಹೆಚ್ಚಾಗಿ 900 ಕೋಟಿ ತಲುಪುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಮೊಬೈಲ್ ಇಂಟರ್ನೆಟ್ ಸುಲಭ ಸಾಧ್ಯವಾಗಿರುವುದರಿಂದ ಮೊಬೈಲ್ ಆ್ಯಪ್ಗಳ ಬಳಕೆಯೂ ಹೆಚ್ಚಾಗುತ್ತಿದೆ. ಈ ಬೆಳವಣಿಗೆಯಿಂದಾಗಿ ಇ ಕಾಮರ್ಸ್ ಭಾರತದಲ್ಲಿ ಮೊಬೈಲ್ ಕಾಮರ್ಸ್ ಆಗಿ ಬದಲಾಗುವ ಸಾಧ್ಯತೆಯಿದೆ ಎಂದು ಕೆಪಿಎಂಜಿ ವರದಿ ಹೇಳಿದೆ.
ಕಳೆದ ಎರಡು ವರ್ಷಗಳಿಂದ ಭಾರತದಲ್ಲಿ ಮೊಬೈಲ್ ಆ್ಯಪ್ ಬಳಕೆ ಜಾಸ್ತಿಯಾಗಿದೆ. ಜಾಗತಿಕ ಮಟ್ಟದಲ್ಲಿ ಭಾರತದಲ್ಲಿನ ಮೊಬೈಲ್ ಆ್ಯಪ್ ಬಳಕೆದಾರರ ಸಂಖ್ಯೆ ಶೇ. 7 ರಷ್ಟು ಇದೆ. ಇಂಡೋನೇಷ್ಯಾ, ಚೀನಾ, ಯು.ಎಸ್ ಮೊದಲಾದ ರಾಷ್ಟ್ರಗಳ ನಂತರ ಮೊಬೈಲ್ ಆ್ಯಪ್ ಬಳಕೆದಾರರ ಸಂಖ್ಯೆಯಲ್ಲಿ ಭಾರತಕ್ಕೆ ನಾಲ್ಕನೇ ಸ್ಥಾನವಿದೆ.
ಭಾರತದಲ್ಲಿ ಮೊಬೈಲ್ ಇಂಟರ್ನೆಟ್ ಬಳಸುವವರ ಸಂಖ್ಯೆ 2014ರ ಹೊತ್ತಿಗೆ ಶೇ. 33 ಆಗಿ ವರ್ಧನೆಯಾಗಿತ್ತು. ಇಲ್ಲಿ 17.3 ಕೋಟಿ ಜನ ಮೊಬೈಲ್ ನಲ್ಲಿ ಇಂಟರ್ನೆಟ್ ಬಳಸುವವರಾಗಿದ್ದಾರೆ. ಆದಾಗ್ಯೂ, 2019ರ ಹೊತ್ತಿಗೆ ಬಳಕೆದಾರರ ಸಂಖ್ಯೆ 45.7 ಕೋಟಿ ಆಗಿ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಮೊಬೈಲ್ ಇಂಟರ್ನೆಟ್ ಮತ್ತು ಆ್ಯಪ್ಗಳ ಬಳಕೆಯಿಂದಾಗಿ ಡೆಸ್ಕ್ಟಾಪ್ ಸೇವೆಗಳ ಉಪಯೋಗ ಕಡಿಮೆಯಾಗಲಿದೆ ಎನ್ನುತ್ತಿದೆ ವರದಿ.
ಆ್ಯಪ್ಗಳ ಬಳಕೆ ಭಾರತದಲ್ಲಿ ಜಾಸ್ತಿಯಾಗುತ್ತಿದ್ದರೂ, ಹಣ ಕೊಟ್ಟು ಖರೀದಿಸುವ ಆ್ಯಪ್ಗಳನ್ನು ಗ್ರಾಹಕರು ಡೌನ್ಲೋಡ್ ಮಾಡಿಕೊಳ್ಳುವುದಿಲ್ಲವಂತೆ. ಭಾರತೀಯರು ಹೆಚ್ಚಾಗಿ ಉಚಿತ ಆ್ಯಪ್ಗಳನ್ನೇ ಡೌನ್ಲೋಡ್ ಮಾಡುತ್ತಾರೆ ಎಂದೂ ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.
Advertisement