ಚೀನಾದಲ್ಲಿ 100 ಅಕ್ರಮ ಡೇಟಿಂಗ್ ವೆಬ್ ಸೈಟ್ ಗಳು ಬಂದ್!

ವಂಚನೆ ಮತ್ತು ಅಶ್ಲೀಲತೆಯನ್ನು ಗುರಿಯಾಗಿರಿಸಿಕೊಂಡು ಚೀನಾ ನಡೆಸಿರುವ ಕಾರ್ಯಾಚರಣೆಯಲ್ಲಿ ಅಲ್ಲಿನ 100 ಅಕ್ರಮ ಡೇಟಿಂಗ್ ವೆಬ್ ಸೈಟ್ ಗಳನ್ನು ಮುಚ್ಚಿಸಲಾಗಿದೆ.
ಚೀನಾದಲ್ಲಿ 100 ಅಕ್ರಮ ಡೇಟಿಂಗ್ ವೆಬ್ ಸೈಟ್ ಗಳು ಬಂದ್!

ಬೀಜಿಂಗ್ : ಜಾಲತಾಣಗಳಲ್ಲಿ ನಡೆಯುತ್ತಿದ್ದ ವಂಚನೆ ಮತ್ತು ಪ್ರಸಾರವಾಗುತ್ತಿದ್ದ  ಅಶ್ಲೀಲತೆಯನ್ನು ಗುರಿಯಾಗಿರಿಸಿಕೊಂಡು ಚೀನಾ ನಡೆಸಿರುವ ಕಾರ್ಯಾಚರಣೆಯಲ್ಲಿ ಅಲ್ಲಿನ 100 ಅಕ್ರಮ ಡೇಟಿಂಗ್ ವೆಬ್ ಸೈಟ್ ಗಳನ್ನು ಮುಚ್ಚಿಸಲಾಗಿದೆ.

ಚೀನಾದ ಮ್ಯಾಚ್ ಮೇಕಿಂಗ್ ಜಾಲತಾಣಗಳಲ್ಲಿನ  ವಂಚನೆ ಮತ್ತು ಅಶ್ಲೀಲತೆಯನ್ನು ತಡೆಗಟ್ಟಲು ಫೆಬ್ರವರಿಯಿಂದ ಅಭಿಯಾನ ಪ್ರಾರಂಭವಾಗಿತ್ತು. ಮುಂದುವರೆದಿರುವ ಅಭಿಯಾನದ ಭಾಗವಾಗಿ ಮೇ.18 ರಂದು  100 ಅಕ್ರಮ ಡೇಟಿಂಗ್ ವೆಬ್ ಸೈಟ್ ಗಳನ್ನು ಮುಚ್ಚಿಸಲಾಗಿದ್ದು  20 ವೆಬ್ ಸೈಟ್ ಗಳಿಗೆ ತಮ್ಮ ಕಾರ್ಯವಿಧಾನದ ವಿಧಾನಗಳನ್ನು ಬದಲಾವಣೆ ಮಾಡಿಕೊಳ್ಳುವಂತೆ ಎಚ್ಚರಿಕೆ ನೀಡಲಾಗಿದೆ.

ವೆಬ್ ಸೈಟ್ ಗೆ ನೋಂದಣಿ ಮಾಡಿಕೊಳ್ಳುವವರ ದಾಖಲೆಗಳ ಕೊರತೆ, ಬಳಕೆದಾರರ ಮಾಹಿತಿ ಸೋರಿಕೆ ಮತ್ತು ಅಸಭ್ಯ, ಅಶ್ಲೀಲ ದೃಶ್ಯಗಳನ್ನು ಪ್ರಸಾರ ಮಾಡುತ್ತಿದ್ದ 100 ಡೇಟಿಂಗ್ ವೆಬ್ ಸೈಟ್ ಗಳನ್ನು ಅಕ್ರಮವೆಂದು  ಗುರುತಿಸಿ ಮುಚ್ಚಿಸಲಾಗಿದೆ ಎಂದು ಚೀನಾದ ಸೈಬರ್ ಸ್ಪೇಸ್ ಆಡಳಿತ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಕೆಲ ವೆಬ್ ಸೈಟ್ ಗಳು ಉದ್ದೇಶಪೂರ್ವಕವಾಗಿಯೇ ತನ್ನ ಬಳಕೆದಾರರಿಗೆ ಅಶ್ಲೀಲ ದೃಶ್ಯ ಕಾದಂಬರಿಗಳನ್ನು ಪ್ರಕಟ ಮಾಡಲು ಅವಕಾಶ ನೀಡಿತ್ತು ಎಂದು ಚೀನಾದ ಸೈಬರ್ ಸ್ಪೇಸ್ ಆಡಳಿತ ವರದಿಯಲ್ಲಿ ತಿಳಿಸಿದೆ. ಅಶ್ಲೀಲತೆ, ವಂಚನೆ ವಿರುದ್ಧ ಕ್ರಮ ಕೈಗೊಳ್ಳುವುದರೊಂದಿಗೆ ತನ್ನ ಬಳಕೆದಾರರು ತಮ್ಮ ನಿಜವಾದ ಹೆಸರನ್ನು ನೋಂದಣಿ ಮಾಡುವುದನ್ನು ಕಡ್ಡಾಯಗೊಳಿಸಬೇಕು ಎಂದು ಎಚ್ಚರಿಕೆ ನೀಡಿರುವ  ಡೇಟಿಂಗ್ ವೆಬ್ ಸೈಟ್ ಗಳಿಗೆ ಸೈಬರ್ ಸ್ಪೇಸ್ ಆಡಳಿತ ಆದೇಶ ನೀಡಿದೆ.  

ಚೀನಾ ಸೈಬರ್ ಸ್ಪೇಸ್ ನಡೆಸುತ್ತಿರುವ ಅಭಿಯಾನಕ್ಕೆ ಅಲ್ಲಿನ ಹಲವು ಮ್ಯಾಚ್-ಮೇಕಿಂಗ್ ವೆಬ್ ಸೈಟ್ ಗಳು ಬೆಂಬಲ ವ್ಯಕ್ತಪಡಿಸಿವೆ. ಮ್ಯಾಚ್-ಮೇಕಿಂಗ್ ವೆಬ್ ಸೈಟ್ ಗಳ ದೀರ್ಘಾವಧಿ ಬೆಳವಣಿಗೆಗೆ ಈ ಅಭಿಯಾನ ಸಹಕಾರಿಯಾಗಲಿದೆ ಎಂದು ಸುಮಾರು 100 ಮಿಲಿಯನ್ ಗಳಷ್ಟು ಬಳಕೆದಾರರನ್ನು ಹೊಂದಿರುವ ಚೀನಾದ ಜನಪ್ರಿಯ ಮ್ಯಾಚ್-ಮೇಕಿಂಗ್ ವೆಬ್ ಸೈಟ್ ಅಭಿಪ್ರಾಯಪಟ್ಟಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com