
ಲಂಡನ್:ಫೇಸ್ ಬುಕ್, ಟ್ವಿಟರ್ ನಂತಹ ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಜೀವನಕ್ಕೆ ಸಂಬಂಧಿಸಿದ ವಿಷಯಗಳಿಗೆ ಪ್ರತಿಕ್ರಿಯಿಸುವುದು ಹಾಗೂ ಲೈಕ್ ನೀಡುವುದು ಸಾಮಾಜಿಕ ಜಾಲತಾಣಗಳಿಗೆ ಲಾಭ ಉಂಟು ಮಾಡುತ್ತಿದೆ.
ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಜೀವನಕ್ಕೆ ಸಂಬಂಧಿಸಿದ ವಿಷಯದ ಬಗ್ಗೆ ಹೆಚ್ಚು ಭಾವನಾತ್ಮಕವಾಗಿ ಬೆಸೆದುಕೊಂಡಿರುತ್ತಾರೆ. ಇದನ್ನೇ ಬಂಡವಾಳವಾಗಿರಿಸಿಕೊಳ್ಳುವ ಸಾಮಾಜಿಕ ಜಾಲತಾಣಗಳು ಲಾಭ ಮಾಡಿಕೊಳ್ಳುತ್ತವೆ. ಇತ್ತೀಚೆಗಷ್ಟೇ ಲೈಕ್ ನೊಂದಿಗೆ ವಿಸ್ತರಿಸಲಾಗಿದ್ದ 6 ಎಮೋಜಿಗಳು ಜನರ ಭಾವನೆಗಳನ್ನು ತಿಳಿಯಲು ಮತ್ತಷ್ಟು ಸಹಕಾರಿಯಾಗಿವೆ.
ಸಾಮಾಜಿಕ ಜಾಲತಾಣಗಳಲ್ಲಿ ಗ್ರಾಹಕರು ಭಾವನಾತ್ಮಕವಾಗಿ ಪ್ರತಿರಿಯಿಸುವುದರಿಂದ ಎರಡು ಲಾಭವಿದೆ. ಜನರಿಗೆ ತಮ್ಮ ಭಾವನೆಯನ್ನು ವ್ಯಕ್ತಪಡಿಸಲು ಮುಕ್ತ ಅವಕಾಶ ನೀಡುವುದು ಒಂದಾದರೆ ಮತ್ತೊಂದು ಫೇಸ್ ಬುಕ್ ನ ಜಾಹಿರಾತುಗಳಿಗೆ ಜನರು ಹೇಗೆ ಸ್ಪಂದಿಸುತ್ತಾರೆ ಎಂದು ಅದೇ ಪ್ರತಿಕ್ರಿಯೆಗಳ ಮೂಲಕ ತಿಳಿಯಬಹುದಾಗಿದೆ.
ಗ್ರಾಹಕರು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಭಾವನಾತ್ಮಕವಾಗಿರುವುದರಿಂದ ಜಾಹಿರಾತುಗಳೆಡೆಗೆ ಜನರ ಸ್ಪಂದನೆಯನ್ನು ನಿಖರವಾಗಿ ತಿಳಿಯಬಹುದಾಗಿದೆ. ಇದರಿಂದ ಫೇಸ್ ಬುಕ್ ಗೆ ವಾಣಿಜ್ಯ ದೃಷ್ಟಿಯಿಂದ ಹೆಚ್ಚು ಲಾಭವಿದೆ. ಅಲ್ಲದೇ ಗ್ರಾಹಕರ ಭಾವನೆಗಳಿಂದ ಬ್ರ್ಯಾಂಡ್ ಲಾಯಲ್ಟಿಯನ್ನೂ ಪತ್ತೆ ಮಾಡಬಹುದಾಗಿದೆ.
ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಜನರು ಹೆಚ್ಚು ಭಾವನಾತ್ಮಕವಾಗುವುದರಿಂದ ಫೇಸ್ ಬುಕ್ ಗೆ ಹೆಚ್ಚು ಲಾಭವಿದೆ ಎಂದು ಫೇಸ್ಬುಕ್ ನ ಮುಖ್ಯ ಉತ್ಪನ್ನ ಅಧಿಕಾರಿ ಕ್ರಿಸ್ ಕಾಕ್ಸ್ ಬ್ಲಾಗ್ ನಲ್ಲಿ ಬರೆದಿದ್ದಾರೆ.
Advertisement