ಮೊಬೈಲ್ ಗೆ ಪರ್ಯಾಯ ಇ-ಸ್ಕಿನ್, ಕೈಮೇಲೆ ಸಿನಿಮಾ ನೋಡುವ ಅವಕಾಶ!

ಅಂಗೈ ನೋಡಿ ಭವಿಷ್ಯ ಹೇಳೋದು ಅಂದ್ರೆ ಬಹುಶಃ ಇದೇ ಇರಬುಹುದು. ಏಕೆಂದರೆ ಸೌದಿ ವಿಜ್ಞಾನಿಗಳು ಮತ್ತು ಟೋಕಿಯೋ ವಿವಿಯ ವಿಜ್ಞಾನಿಗಳು ಜಂಟಿಯಾಗಿ ಸಂಶೋಧಿಸಿರುವ ಇ-ಸ್ಕಿನ್ ತಂತ್ರಜ್ಞಾನ..
ಇ-ಸ್ಕಿನ್ (ಚಿತ್ರಕೃಪೆ: ಡೈಲಿಮೇಲ್)
ಇ-ಸ್ಕಿನ್ (ಚಿತ್ರಕೃಪೆ: ಡೈಲಿಮೇಲ್)

ಟೋಕಿಯೋ: ಅಂಗೈ ನೋಡಿ ಭವಿಷ್ಯ ಹೇಳೋದು ಅಂದ್ರೆ ಬಹುಶಃ ಇದೇ ಇರಬುಹುದು. ಏಕೆಂದರೆ ಸೌದಿ ವಿಜ್ಞಾನಿಗಳು ಮತ್ತು ಟೋಕಿಯೋ ವಿವಿಯ ವಿಜ್ಞಾನಿಗಳು ಜಂಟಿಯಾಗಿ ಸಂಶೋಧಿಸಿರುವ ಇ-ಸ್ಕಿನ್ ತಂತ್ರಜ್ಞಾನ ಕೇವಲ ನಿಮ್ಮ ಕೈಮೇಲೆ  ಸಿನಿಮಾ ಮಾತ್ರ ಅಲ್ಲ ನಿಮ್ಮ ಆರೋಗ್ಯದ ಗುಟ್ಟನ್ನು ಬಿಚ್ಚಿಡುತ್ತದೆಯಂತೆ..!

ಜಪಾನ್ ನ ಸೊಮೆಯಾ ತಂತ್ರಜ್ಞಾನ ಸಂಸ್ಥೆಯ ವಿಜ್ಞಾನಿಗಳು ಈ ಎಲೆಕ್ಟ್ರಾನಿಕ್ ಸ್ಕಿನ್ (ವಿದ್ಯುನ್ಮಾನ ಚರ್ಮ) ಅನ್ನು ಸಂಶೋಧಿಸಿದ್ದು, ಇದನ್ನು ಟ್ಯಾಟೂವಿನಂತೆ ಕೈಮೇಲೆ ಅಂಟಿಸಿಕೊಂಡರೆ  ಸಿನಿಮಾ ವೀಕ್ಷಣೆ ಮಾಡಬಹುದಂತೆ. ಇದನ್ನು ನೇರವಾಗಿ ದೇಹಕ್ಕೆ ಅಂಟಿಸಬಹುದಾಗಿದ್ದು, ಈ ಹೆಚ್ಚುವರಿ ಕೃತಕ ಚರ್ಮದ ಮೂಲಕ ನಮಗೆ ಬೇಕೆಂದಲ್ಲಿ ಬೇಕಾದಾಗ ಸಿನಿಮಾ ವೀಕ್ಷಣೆ  ಮಾಡಬಹುದು. ಅಷ್ಟು ಮಾತ್ರ ಈ ಕೃತಕ ಇ-ಸ್ಕಿನ್ ಅನ್ನು ದೇಹಕ್ಕೆ ಅಂಟಿಸಿಕೊಳ್ಳುವ ಮೂಲಕ ದೇಹದಲ್ಲಿನ ಆಕ್ಸಿಜನ್ ಪ್ರಮಾಣ, ರಕ್ತದೊತ್ತಡ, ಉಷ್ಣಾಂಶ, ಆಮ್ಲದ ಪ್ರಮಾಣ, ಆರ್ದ್ರತೆಯನ್ನು  ತಿಳಿದುಕೊಳ್ಳಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಈ ಇ-ಸ್ಕಿನ್‌ಗೆ ಕೆಂಪು, ಹಸಿರು ಹಾಗೂ ನೀಲಿ ಬಣ್ಣಗಳ ಎಲೆಕ್ಟ್ರೋಡ್‌ಗಳನ್ನು ಅಳವಡಿಸಲಾಗಿದ್ದು, ಉಷ್ಣ ಅಯಾನಿಕ ಕವಾಟದ ಮೂಲಕ ಬೇಕಾದ ಬಣ್ಣವನ್ನು ಪ್ರತಿಫಲಿಸುವಂತೆ ಮಾಡಲಾಗಿದೆ.  ರೋಗಿ ದೇಹದ ಮೇಲೆ ಅಂಟಿಸಿಕೊಂಡರೆ, ಆತನ ಕಾಯಿಲೆಗೆ ಸಂಬಂಧಿಸಿದ ತಾಜಾ ಮಾಹಿತಿಗಳನ್ನು ಇವು ದಾಖಲಿಸಿಕೊಳ್ಳುತ್ತವೆಯಂತೆ. ಚರ್ಮದ ಮೇಲೆ ಬೆಳಕು ಹರಿದರೆ, ರಕ್ತದಲ್ಲಿರುವ  ಆಮ್ಲಜನಕ ಪ್ರಮಾಣವನ್ನು ತಕ್ಷಣಕ್ಕೆ ಈ ತಂತ್ರಜ್ಞಾನ ಕಂಡುಹಿಡಿಯುತ್ತದೆ. ಅಷ್ಟೇ ಅಲ್ಲ, ಹೃದಯ ಬಡಿತವನ್ನು ಪತ್ತೆಹಚ್ಚುವ ಸಾಮರ್ಥ್ಯ ಕೂಡ ಈ ಇ-ಸ್ಕಿನ್ ಗೆ ಇದೆಯಂತೆ.

ಸಂವಹನ ಉಪಕರಣಗಳು ದಿನದಿಂದ ದಿನಕ್ಕೆ ಚಿಕ್ಕದಾಗುತ್ತಿರುವುದಕ್ಕೆ ಇದೊಂದು ಉದಾಹರಣೆಯಾಗಿದೆ ಎಂದು ಟೋಕಿಯೋ ವಿವಿಯ ಸಂಶೋಧಕ ಟಾಕಾವೋ ಸೊಮೆಯಾ ಹೇಳಿದ್ದಾರೆ.  ಇ-ಸ್ಕಿನ್ ಎರಡು ಮೈಕ್ರೋಮೀಟರ್‌ನಷ್ಟು ದಪ್ಪವಿದ್ದು, ಮನುಷ್ಯನ ಕೂದಲಿಗೆ ಹೋಲಿಸಿದರೆ 50 ಪಟ್ಟು ತೆಳುವಾಗಿದೆ. ಇ-ಸ್ಕಿನ್ ಮುಂದಿನ ದಿನಗಳಲ್ಲಿ ಮೊಬೈಲ್ ಕೊಂಡೊಯ್ಯುವುದನ್ನೇ  ನಿಲ್ಲಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ, ಪೇಪರ್‌ನಂತಿರುವ ಇದನ್ನು ದೊಡ್ಡ ಪ್ರಮಾಣದಲ್ಲಿ ತಯಾರಿಸಿದರೆ, ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸುವ ದಿನಗಳು ದೂರವಿಲ್ಲ ಎಂದು  ಸೊಮೆಯಾ ಸಂಸ್ಥೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com