ಅಳಿದು ಹೋಗಿದೆ ಎಂದು ನಂಬಲಾಗಿದ್ದ ಸಸ್ಯ ಪೂರ್ವ ಹಿಮಾಲಯದಲ್ಲಿ ಪತ್ತೆ

ಸಂಪೂರ್ಣ ಅಳಿದುಹೋಗಿದೆ ಎಂದು ನಂಬಲಾದ 'ಪೆಡಿಕ್ಯುಲಾರಿಸ್ ಹ್ಯುಮಿಲಿಸ್' ಎಂಬ ಗಿಡಮೂಲಿಕೆಯನ್ನು ಚೈನಾದ ಸಸ್ಯಶಾಸ್ತ್ರಜ್ಞರು ಹಿಮಾಲಯದಲ್ಲಿ ಪತ್ತೆಹಚ್ಚಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೀಜಿಂಗ್: ಸಂಪೂರ್ಣ ಅಳಿದುಹೋಗಿದೆ ಎಂದು ನಂಬಲಾದ 'ಪೆಡಿಕ್ಯುಲಾರಿಸ್ ಹ್ಯುಮಿಲಿಸ್' ಎಂಬ ಗಿಡಮೂಲಿಕೆಯನ್ನು ಚೈನಾದ ಸಸ್ಯಶಾಸ್ತ್ರಜ್ಞರು ಹಿಮಾಲಯದಲ್ಲಿ ಪತ್ತೆಹಚ್ಚಿದ್ದಾರೆ.

ಚೈನಾದ ಪೂರ್ವ ಹಿಮಾಲಯದ ಹೆಂಗ್ಡುವಾನ್ ಪರ್ವತಶ್ರೇಣಿಯಲ್ಲಿ ಕಾಣಬರುತ್ತಿದ್ದ ಇದು ನಾಶವಾಗಿದೆ ಎಂದೇ ನಂಬಲಾಗಿತ್ತು.

ಅಳಿದು ಹೋದ ಸಸ್ಯರಾಶಿ ಎಂದು ನಂಬಲಾಗಿದ್ದ ಈ ಗಿಡವನ್ನು ಈ ಹಿಂದೆ ಒಮ್ಮೆಯಷ್ಟೇ ಪತ್ತೆ ಹಚ್ಚಲಾಗಿತ್ತು. ಎಡಿನ್ ಬರ್ಗ್ ರಾಯಲ್ ಬೊಟಾನಿಕ್ ಗಾರ್ಡನ್ ನ ಜಾರ್ಜ್ ಫಾರೆಸ್ಟ್ ಎಂಬುವವರು ಇದನ್ನು ೧೯೧೩ ರಲ್ಲಿ ಪತ್ತೆಹಚ್ಚಿದ್ದರು ಎಂದು ಮಾಧ್ಯಮವೊಂದು ವರದಿ ಮಾಡಿದೆ.

ನಲಮಟ್ಟದಿಂದ ಸುಮಾರು ೩೨೦೦ ಅಡಿ ಮೇಲಿರುವ ಪರ್ವತ ಶ್ರೇಣಿ ಗೋಲಿಗಾಂಗ್ ನಲ್ಲಿ ಮೂರು ಕಡೆ ಸುಮಾರು ೩೦೦ ಸಸ್ಯಗಳು ಕಂಡುಬಂದಿವೆ.

ಈ ಸಂಶೋಧನೆಯನ್ನು ಸಂರಕ್ಷಣೆಗಾಗಿರುವ ಅಂತರಾಷ್ಟ್ರೀಯ ಜರ್ನಲ್ 'ಆರಿಕ್ಸ್'ನಲ್ಲಿ ಪ್ರಕಟಿಸಲಾಗಿದೆ.

ಜನ ಈ ಪ್ರದೇಶಗಳನ್ನು ಆಕ್ರಮಿಸಿಕೊಳ್ಳುತ್ತಿರುವುದರಿಂದ ಅಳಿದುಳಿದ ಈ ಗಿಡಗಳು ಅಳಿವಿನಂಚಿನಲ್ಲಿವೆ ಎಂದು ಸಂಶೋಧಕರು ತಿಳಿಸಿದ್ದಾರೆ. ಇತರ ಜೀವಿಗಳ ಉಗಮಕ್ಕೆ ಈ ಸಸ್ಯರಾಶಿ ಹೇಗೆ ಸಹಕರಿಸಿದೆ ಎಂಬುದರ ಬಗ್ಗೆ ಹೆಚ್ಚಿನ ಸಂಶೋಧನೆ ಮಾಡಲಾಗುತ್ತಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com