ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

2017ರಲ್ಲಿ ಗಮನ ಸೆಳೆದ 8 ಆಕರ್ಷಕ ಗ್ಯಾಜೆಟ್ ಗಳು

ಗ್ಯಾಜೆಟ್ ಲೋಕದಲ್ಲಿ ದಿನಕ್ಕೊಂದು ಗ್ಯಾಜೆಟ್ ಗಳು ಮಾರುಕಟ್ಟೆ ಸೇರುತ್ತಿವೆ. ಆದರೆ 2017ರಲ್ಲಿ ಖ್ಯಾತ ಅಂತರ್ಜಾಲ ಶಾಪಿಂಗ್ ತಾಣ ಅಮೇಜಾನ್ ಅತೀ ಹೆಚ್ಚು ಸಕಾರಾತ್ಮಕ ಪ್ರತಿಕ್ರಿಯೆ ಪಡೆದ 8 ಗ್ಯಾಜೆಟ್ ಗಳ ವಿವರ ಇಲ್ಲಿದೆ.
Published on
ಗ್ಯಾಜೆಟ್ ಲೋಕದಲ್ಲಿ ದಿನಕ್ಕೊಂದು ಗ್ಯಾಜೆಟ್ ಗಳು ಮಾರುಕಟ್ಟೆ ಸೇರುತ್ತಿವೆ. ಆದರೆ 2017ರಲ್ಲಿ ಖ್ಯಾತ ಅಂತರ್ಜಾಲ ಶಾಪಿಂಗ್ ತಾಣ ಅಮೇಜಾನ್ ಅತೀ ಹೆಚ್ಚು ಸಕಾರಾತ್ಮಕ ಪ್ರತಿಕ್ರಿಯೆ ಪಡೆದ 8 ಗ್ಯಾಜೆಟ್ ಗಳ ವಿವರ ಇಲ್ಲಿದೆ.
1.ನಿಮ್ಮ ಹೃದಯದ ಆರೋಗ್ಯ ಪರೀಕ್ಷಿಸುವ ವಾಚ್
ವಾಚ್ ಗಳನ್ನು ಸಮಯ ಮತ್ತು ದಿನಾಂಕ ವೀಕ್ಷಣೆಗೆ ಬಳಸುವ ಕಾಲ ಮುಕ್ತಾಯವಾಗಿದ್ದು, ವಾಚ್ ಗಳು ಈಗ ಕೇವಲ ಸಮಯ ದಿನಾಂಕ ವೀಕ್ಷಣೆಗೆ ಮಾಚ್ರ ಸೀಮಿತವಾಗಿಲ್ಲ. ಬದಲಿಗೆ ನಿಮ್ಮ ಹೃದಯ ಆರೋಗ್ಯ ಪರೀಕ್ಷೆಯನ್ನೂ  ಮಾಡುತ್ತವೆ. ಹೌದು ಆಲಿವ್ ಕೋರ್ ಸಂಸ್ಥೆ 2017ರಲ್ಲಿ ಬಿಡುಗಡೆ ಮಾಡಿದ್ದ ಕಾರ್ಡಿಯಾ ಬ್ಯಾಂಡ್ ವಾಚ್ ದಿನಾಂಕ ಸಮಯದೊಂದಿಗೆ ಅದನ್ನು ಧರಿಸುವ ವ್ಯಕ್ತಿಯ ಹೃದಯ ಆರೋಗ್ಯವನ್ನೂ ಪರೀಕ್ಷಿಸುತ್ತದೆ. ಈ ವಾಚ್ ಧರಿಸಿದ್ದಾಗ  ಇದು ನಮ್ಮ ದೈಹಿಕ ಚಲನೆಗಳನ್ನು ಟ್ರಾಕ್ ಮಾಡಿ ಹೃದಯ ಆರೋಗ್ಯದ ಮಾಹಿತಿ ನೀಡುತ್ತದೆ. ಅಮೇಜಾನ್ ನಲ್ಲಿ ಇದರ ಬೆಲೆ 12,739 ರುಗಳಿದ್ದು, ಶೇ.50ರಷ್ಟು ಮಂದಿ ಇದಕ್ಕೆ ಸಂಬಂಧಿಸಿದಂತೆ ಸಕಾರಾತ್ಮಕ ಪ್ರತಿಕ್ರಿಯೆ  ನೀಡಿದ್ದಾರೆ.
2.ಅಗ್ನಿ ಅವಘಡವನ್ನು ಮೊದಲೇ ಗುರುತಿಸುವ ನೆಸ್ಟ್ ಪ್ರೊಟೆಕ್ಟ್ ಸ್ಮೋಕ್ ಅಲಾರ್ಮ್
ನೆಸ್ಟ್ ಸಂಸ್ಥೆ ಅಗ್ನಿ ಅವಘಡವನ್ನು ಮೊದಲೇ ಗುರುತಿಸುವ ಸ್ಮೋಕ್ ಅಲಾರ್ಮ್ ವ್ಯವಸ್ಛೆಯನ್ನು 2017ರಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ನಾವಿರುವ ಸ್ಥಳದಲ್ಲಿ ಅಗ್ನಿ ಅವಘಡ ಸಂಭವಿಸುವಂತಿದ್ದರೆ ಗಾಳಿಯಲ್ಲಿ ಹೊಗೆಯ  ಕಣಗಳನ್ನು ಇದು ಮೊದಲೇ ಗುರುತಿಸಿ ನಮಗೆ ಮಾಹಿತಿ ನೀಡುತ್ತದೆ. ಆಗ ಬೆಂಕಿ ಅವಘಡದಿಂದ ಪಾರಾಗಬಹುದು ಎಂಬುದು ನೆಸ್ಟ್ ಸಂಸ್ಥೆಯ ಅಂಬೋಣ. ಇನ್ನು ಈ ವ್ಯವಸ್ಥೆಯನ್ನು ನಮ್ಮ ಸ್ಮಾರ್ಟ್ ಫೋನ್  ಅಳಡಸಿಕೊಳ್ಳಬಹುದು. ಇನ್ನು ಇದು ಕೇವಲ ಅಗ್ನಿ ಅವಘಡಗಳು ಮಾತ್ರವಲ್ಲದೇ ಮೊಬೈಲ್ ನ ಬ್ಯಾಟರಿ ಖಾಲಿಯಾಗುತ್ತಿರುವಂತಿದ್ದರೂ ಇದು ಎಚ್ಚರಿಕೆ ನೀಡುತ್ತದೆ. ಅಮೇಜಾನ್ ನಲ್ಲಿ ಇದರ ಬೆಲೆ 19,587 ರುಗಳಿದ್ದು, ಶೇ.95ರಷ್ಟು  ಮಂದಿ ಇದಕ್ಕೆ ಸಂಬಂಧಿಸಿದಂತೆ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ.
3.ಧೂಳಿನ ಅಲರ್ಜಿಯಿಂದ ಕೆಂಗೆಟ್ಟವರಿಗಾಗಿ ಹೊಸ ಗ್ಯಾಜೆಟ್
ಧೂಳಿನ ಅಲರ್ಜಿ ಅಥವಾ ಡಸ್ಟ್ ಅಲರ್ಜಿಯಿಂದ ಬಳಲುತ್ತಿರುವವರಿಗಾಗಿಯೇ ಹನಿವೆಲ್ ಸಂಸ್ಥೆ ಹೆಚ್ ಪಿ300 ಅಲರ್ಜಿನ್ ರಿಮೂವರ್ ಎಂಬ ಗ್ಯಾಜೆಟ್ ಅನ್ನು ಹೊರತಂದಿತ್ತು. ಈ ವಿಶೇಷ ಉಪಕರಣ ನಮ್ಮ ಸುತ್ತಲಿನ  ಗಾಳಿಯಲ್ಲಿರುವ ಧೂಳಿನ ಕಣಗಳನ್ನು ಸೆಳೆದುಕೊಂಡು ತನ್ನಲ್ಲಿ ಅಳವಡಿಸಿರುವ ವಿಶೇಷ ತಂತ್ರಜ್ಞಾನದ ಮೂಲಕ ಅವುಗಳನ್ನು ಫಿಲ್ಟರ್ ಮಾಡಿ ಅವುಗಳಲ್ಲಿರುವ ಹಾನಿಕಾರಕ ಕಣಗಳನ್ನು ತನ್ನಲ್ಲೇ ಉಳಿಸಿಕೊಳ್ಳುತ್ತದೆ. ಆ ಮೂಲಕ  ನಮ್ಮ ಕೊಠಡಿಯಲ್ಲಿರುವ ಗಾಳಿಯಲ್ಲಿನ ವಿಷಕಾರಿ ಬ್ಯಾಕ್ಟೀರಿಯಾ ಮತ್ತೆ ಇತರೆ ಹಾನಿಕಾರಕ ಸೂಕ್ಷ್ಮಾಣುಗಳನ್ನು ಶೋಧಿಸುತ್ತದೆ. ಇನ್ನು ಅಮೇಜಾನ್ ನಲ್ಲಿ ಇದರ ಬೆಲೆ 12,099 ರುಗಳಿದ್ದು, ಶೇ.84ರಷ್ಟು ಮಂದಿ ಇದಕ್ಕೆ  ಸಂಬಂಧಿಸಿದಂತೆ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ.
4.ಮನೆಯಲ್ಲಿರುವ ಗಾಳಿಯ ಗುಣಮಟ್ಟ ತಿಳಿಸುವ ಉಪಕರಣ
ನೆಟನಾಮೋ ಸಂಸ್ಥೆ ಅಭಿವೃದ್ಧಿ ಪಡಿಸಿರುವ ಹೆಲ್ತಿ ಹೋಮ್ ಕೋಚ್ ಎಂಬ ಉಪಕರಣ ನಮ್ಮ ಮನೆಯಲ್ಲಿರುವ ಗಾಳಿಯ ಗುಣಮಟ್ಟವನ್ನು ಅಳೆಯುತ್ತದೆ. ಕೇವಲ ಅಷ್ಟು ಮಾತ್ರವಲ್ಲದೇ ಗಾಳಿಯಲ್ಲಿರುವ ತೇವಾಂಶ (ಆರ್ದ್ರತೆ),  ವಾಯು ಗುಣಮಟ್ಟ ಮತ್ತು ಶಬ್ದದ ಮಟ್ಟಗಳನ್ನೂ ಕೂಡ ಅಳೆದು ಮಾಹಿತಿ ನೀಡುತ್ತದೆ. ಈ ಉಪಕರಣವನ್ನು ನಮ್ಮ ಸ್ಮಾರ್ಟ್ ಫೋನ್ ಗೆ ಕನೆಕ್ಟ್ ಮಾಡಿದರೆ ಗಾಳಿ ಮತ್ತು ಶಬ್ದದ ಗುಣಮಟ್ಟದ ಮಾಹಿತಿಯನ್ನು ಇದು ರವಾನಿಸುತ್ತದೆ.  ಗೂಗಲ್ ಪ್ಲೇ ಸ್ಟೋರ್ ನಲ್ಲಿ ಈ ಗ್ಯಾಜೆಟ್ ಗೆ ಸಂಬಂಧಿಸಿದ ಆ್ಯಪ್ ಲಭ್ಯವಿದ್ದು, ಇದನ್ನು ಇನ್ ಸ್ಟಾಲ್ ಮಾಡಿಕೊಂಡರೆ ಇದು ಮಾಹಿತಿ ನೀಡಲಾರಂಭಿಸುತ್ತದೆ. ಅಮೇಜಾನ್ ನಲ್ಲಿ ಇದರ ಬೆಲೆ 7,709 ರು.ಗಳಿದ್ದು, ಶೇ.73ರಷ್ಟು ಮಂದಿ  ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ.
5.ರಸ್ತೆಗಳ ಮಾಹಿತಿ ನೀಡುವ ನ್ಯಾವ್ಡೀ ಬೆಸ್ಟ್ ಹೆಡ್ ಅಪ್ ಡಿಸ್ ಪ್ಲೇ 
ವಾಹನಗಳ ಜಿಪಿಎಸ್ ವಿಭಾಗದಲ್ಲಿ ಸಾಕಷ್ಟು ತಂತ್ರಜ್ಞಾನಗಳು ಬಂದು ಹೋಗಿದ್ದು, ಇದಕ್ಕೆ ಹೊಚ್ಚ ಹೊಸ ಸೇರ್ಪಡೆ ನ್ಯಾವ್ಡೀ ಸಂಸ್ಥೆಯ ಹೆಡ್ ಅಪ್ ಡಿಸ್ ಪ್ಲೇ  ವ್ಯವಸ್ಥೆ. ಈ ಉಪಕರಣ ವಿಶೇಷತೆ ಎಂದರೆ ಇದು ಕೇವಲ ರಸ್ತೆಗಳ  ಮಾಹಿತಿ ಮಾತ್ರ ನೀಡದೇ ರಸ್ತೆಗಳ ಉಬ್ಬುತಗ್ಗುಗಳ ಮಾಹಿತಿಯನ್ನೂ ನೀಡುತ್ತದೆಯಂತೆ. ಇದರಲ್ಲಿ ಅಳವಡಿಸಿರುವ ಸೆನ್ಸಾರ್ ಸಿಸ್ಟಮ್ ಇದಕ್ಕೆ ನೆರವಾಗಲಿದ್ದು, ರಸ್ತೆಗಳ ಮಾರ್ಗದರ್ಶನ ಮತ್ತು ಮಾಹಿತಿ ಮಾತ್ರವಲ್ಲ ಇದನ್ನು  ಸ್ಮಾರ್ಟ್ ಫೋನ್ ಗೆ ಕನೆಕ್ಟ್ ಮಾಡಿ ಫೋನ್ ಗೆ ಬರುವ ಮೆಸೇಜ್, ದೂರವಾಣಿ ಕರೆಗಳು ಮತ್ತು ಆ್ಯಪ್ ಗಳ ನೋಟಿಫಿಕೇಷನ್ ಗಳನ್ನು ಇದಕ್ಕೆ ವರ್ಗಾಸಿಕೊಳ್ಳುತ್ತದೆ. ಅಲ್ಲದೆ ಫೋನ್ ತೆರೆಯುವ ಅವಕಾಶ ನೀಡದೇ ತಾವೇ ಮಸೆಜ್  ಮತ್ತು ನೋಟಿಫಿಕೇಶನ್ ಗಳ ಓದಿ ತಿಳಿಸುತ್ತದೆ ಮತ್ತು ಕರೆಗಳನ್ನು ಸ್ವೀಕರಿಸುವ ವ್ಯವಸ್ಥೆ ಕೂಡ ಇದೆ. ಈ ಉಪಕರಣದ ಬೆಲೆ ಅಮೇಜಾನ್ ನಲ್ಲಿ 79,999 ರು,ಗಳಿದ್ದು, ಶೇ.78ರಷ್ಟು ಮಂದಿ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ.
6.ನಾವಿಲ್ಲದಿದ್ದರೂ ಮನೆ ಕಾಯುವ ಪುಟ್ಟ ಕಣ್ಗಾವಲು ವ್ಯವಸ್ಥೆ
ಭದ್ರತೆ ಎಷ್ಟೇ ಇದ್ದರೂ ಕಳ್ಳರು ಆಗ್ಗಿಂದಾಗ್ಗೆ ತಮ್ಮ ಕರಾಮತ್ತು ತೋರಿಸುತ್ತಾರೆ. ಇದೇ ಕಾರಣಕ್ಕೆ ಭದ್ರತೆಗಾಗಿ ನೆಟ್ ಗೇರ್ ಸಂಸ್ಥೆ ಅರ್ಲೋ ಕ್ಯೂ ಪ್ಲಸ್ ಎಂಬ ಕಣ್ಗಾವಲು ವ್ಯವಸ್ಥೆಯನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಮೊಬೈಲ್  ಆ್ಯಪ್ ಆಧಾರಿತ ಉಪಕರಣವಾಗಿರುವ ಈ ಅರ್ಲೋ ಕ್ಯೂ ಪ್ಲಸ್ ಗಾತ್ರದಲ್ಲಿ ಪುಟ್ಟದಾಗಿದ್ದು, ಇದರಲ್ಲಿರುವ ಪುಟ್ಟ ಕ್ಯಾಮೆರಾ ತನ್ನ ಮುಂದೆ ನಡೆಯುವ ಅಷ್ಟೂ ದೃಶ್ಯಾವಳಿಯಲ್ಲಿ ಉತ್ತಮ ಗುಣಮಟ್ಟದ ರೆಸಲ್ಯೂಷನ್ ನಲ್ಲಿ ಸೆರೆ  ಹಿಡಿಯುತ್ತದೆ. ಇದು ತುಂಬಾ ಚಿಕ್ಕದಾಗಿರುವುದರಿಂದ ಇದನ್ನು ಹೊಸಬರು ಗುರುತಿಸುವುದು ಕಷ್ಟಸಾಧ್ಯ. ಇನ್ನು ಇದರಲ್ಲಿರುವ ಸೆನ್ಸಾರ್ ವ್ಯವಸ್ಥೆ ಅಪರಿಚಿತರು ಮನೆಯೊಳಗೆ ಬಂದಾಗ ಬೀಪ್ ಶಬ್ದದ ಮೂಲಕ ಮಾಲೀಕರನ್ನು  ಎಚ್ಚರಿಸುತ್ತದೆ.  ಅಮೆಜಾನ್ ನಲ್ಲಿ ಇದರ ಬೆಲೆ 18,799 ರು.ಗಳಿದ್ದು, ಶೇ.83ರಷ್ಟು ಮಂದಿ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.
7.ಅಡುಗೆ ಬೆಂದಿದೆ ಅಥವಾ ಇಲ್ಲ ಎಂದು ಹೇಳುವ ಉಪಕರಣ
ಇದು ತಂತ್ರಜ್ಞಾನ ಯುಗ..ಇಂದಿನ ಮಹಿಳೆಯರು ಸಾಮಾನ್ಯವಾಗಿ ಸ್ಮಾರ್ಟ್ ಕಿಚನ್ ಗಳನ್ನೇ ಇಷ್ಟಪಡುತ್ತಾರೆ. ಇಂತಹ ಸ್ಮಾರ್ಟ್ ಕಿಚನ್ ನ ಒಂದು ಉಪಕರಣವೇ ಥರ್ಮಾ ಫಾಸ್ಟ್ ಪೆನ್..ಈ ಉಪಕರಣ ನೋಡಲು ಥರ್ಮಾ  ಮೀಟರ್ ನಂತೆ ಕಾಣುತ್ತದೆ. ಕೆಲಸ ಕೂಡ ಅದೇ ಆದರೂ ಅದಕ್ಕಿಂತಲೂ ಕೊಂಚ ಭಿನ್ನವಾಗಿದೆ. ಇದು ನಾವು ಮಾಡುವ ಆಹಾರ ಸರಿಯಾಗಿ ಬೆಂದಿದೆಯೇ ಇಲ್ಲವೇ ಎಂಬುದನ್ನು ತಿಳಿಸುತ್ತದೆ. ಆಹಾರದ ನಿಖರ ಉಷ್ಟತೆಯನ್ನು ಇದು  ತಿಳಿಸುತ್ತದೆ. ಹೀಗಾಗಿ ಆಹಾರ ಎಷ್ಟು ಬೆಂದಿದೆ ಎಂಬುದನ್ನು ತಿಳಿಯಬಹುದು. ಇದರ ಬೆಲೆ ಅಮೇಜಾನ್ ನಲ್ಲಿ 2,560 ರು.ಗಳಿದ್ದು, ಶೇ.86ರಷ್ಟು ಮಂದಿ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ.
8.ದೂರದಿಂದಲೇ ಮನೆ ಬಾಗಿಲು ತೆರೆಯುವ ಸ್ಮಾರ್ಟ್ ಲಾಕ್
ಕಳ್ಳರ ಕಾಟ ತಪ್ಪಿಸಲು ಸಾಕಷ್ಚು ಸಂಸ್ಥೆಗಳು ಅತ್ಯಾಧುನಿಕ ಸ್ಮಾರ್ಟ್ ಲಾಕ್ ಉಪಕರಣಗಳನ್ನು ಹೊರತಂದಿವೆ. ಈ ಪೈಕಿ ಆಗಸ್ಚ್ ಡಾಟ್ ಕಾಮ್ ಸಂಸ್ಥೆಯ ಸ್ಮಾರ್ಟ್ ಲಾಕ್ ಕೂಡ ಒಂದಾಗಿದ್ದು, ಆ್ಯಪ್ ಆಧಾರಿತ ಲಾಕಿಂಗ್  ವ್ಯವಸ್ಥೆಯನ್ನು ಈ ಉಪಕರಣ ಹೊಂದಿದೆ. ಈ ಉಪಕರಣಕ್ಕೆ ಸಂಬಂಧಿಸಿದ ಆ್ಯಪ್ ಅನ್ನು ನಾವು ನಮ್ಮ ಸ್ಮಾರ್ಟ್ ಫೋನ್ ಗೆ ಇನ್ ಸ್ಟಾಲ್ ಮಾಡಿಕೊಳ್ಳಬೇಕಾಗುತ್ತದೆ. ಈ ಉಪಕರಣವನ್ನು ನಾವು ನಮ್ಮ ಮನೆ ಅಥವಾ ಕಚೇರಿ  ಬಾಗಿಲಿಗೆ ಅಳವಡಿಸಿದರೆ, ಬೀಗ ಮತ್ತು ಬೀಗದ ಕೈನ ಅವಶ್ಯಕತೆ ಇರುವುದಿಲ್ಲ. ಅಷ್ಟು ಮಾತ್ರವಲ್ಲ ಹೊರಡುವ ಗಡಿಬಿಡಿಯಲ್ಲಿ ನಾವು ಬೀಗ ಹಾಕುವುದನ್ನು ಮರೆತರೂ ಅಥವಾ ಬೀಗದ ಕೈ ಮರೆತರೂ ಈ ಆ್ಯಪ್ ನ ಮೂಲಕ  ಬಾಗಿಲನ್ನು ದೂರದಿಂದಲೇ ತೆರೆಯಬಹುದು ಮತ್ತು ಲಾಕ್ ಮಾಡಬಹುದು. ಈ ಉಪಕರಣದ ಬೆಲೆ ಅಮೇಜಾನ್ ನಲ್ಲಿ  24, 382 ರು.ಗಳಿದ್ದು, ಶೇ.78ರಷ್ಟು ಮಂದಿ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com