ಇಸ್ರೋ ದಾಖಲೆಗೆ ದಿನಗಣನೆ: ಫೆಬ್ರವರಿ 15ಕ್ಕೆ ಏಕಕಾಲಕ್ಕೆ 104 ಉಪಗ್ರಹಗಳ ಉಡಾವಣೆ

ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮತ್ತೊಂದು ಮೈಲಿಗಲ್ಲಿಗೆ ಸಜ್ಜುಗೊಂಡಿದ್ದು, ತಮ್ಮ ಬಹು ಉದ್ದೇಶಿತ ಮತ್ತು ಐತಿಹಾಸಿಕ ದಾಖಲೆ 104 ಉಪಗ್ರಹಗಳ ಏಕಕಾಲದ ಉಡಾವಣೆಯನ್ನು ಇದೇ ಫೆಬ್ರವರಿ 15ರಂದು ನಡೆಸುವುದಾಗಿ ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮತ್ತೊಂದು ಮೈಲಿಗಲ್ಲಿಗೆ ಸಜ್ಜುಗೊಂಡಿದ್ದು, ತಮ್ಮ ಬಹು ಉದ್ದೇಶಿತ ಮತ್ತು ಐತಿಹಾಸಿಕ ದಾಖಲೆ 104 ಉಪಗ್ರಹಗಳ ಏಕಕಾಲದ ಉಡಾವಣೆಯನ್ನು ಇದೇ ಫೆಬ್ರವರಿ 15ರಂದು ನಡೆಸುವುದಾಗಿ ಹೇಳಿದೆ.

ಏಕಕಾಲದಲ್ಲಿ 104 ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ಹೊಸ ದಾಖಲೆ ಸೃಷ್ಟಿಗೆ ಇಸ್ರೋ ಸಜ್ಜುಗೊಂಡಿದ್ದು, ಈ 104 ಉಪಗ್ರಹಳನ್ನು ಭಾರತದ ಅತ್ಯಂತ ಯಶಸ್ವೀ ಉಡಾವಣಾ ವಾಹಕ ಪಿಎಸ್‌ಎಲ್‌ವಿ –ಸಿ 37  ರಾಕೆಟ್‌ ಹೊತ್ತೊಯ್ಯಲಿದೆ. ಆಂಧ್ರ ಪ್ರದೇಶದ ಶ್ರೀಹರಿ ಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂ ಉಡಾವಣೆ ಮಾಡಲಾಗುತ್ತಿದೆ.

ಈವರೆಗೂ ಜಗತ್ತಿನ ಯಾವುದೇ ಬಾಹ್ಯಾಕಾಶ ಸಂಸ್ಥೆ ಮಾಡಿರದ ಪ್ರಯತ್ನಕ್ಕೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಮುಂದಾಗಿದೆ. ಏಕಕಾಲದಲ್ಲಿ ಒಂದೇ ರಾಕೆಟ್‌ ಮೂಲಕ ಒಟ್ಟು 104 ಉಪಗ್ರಹಗಳನ್ನು ಕಕ್ಷೆಗೆ  ಸೇರಿಸುವ ಬೃಹತ್‌ ಯೋಜನೆ ಕೈಗೊಂಡಿದೆ. ಅಮೆರಿಕ, ಜರ್ಮನಿ, ಇಸ್ರೋಲ್‌, ಯುಎಇ, ನೆದರ್‌ಲ್ಯಾಂಡ್, ಬೆಲ್ಜಿಯಂ ಸೇರಿದಂತೆ ವಿದೇಶದ 101 ವಾಣಿಜ್ಯ ಉದ್ದೇಶಿತ ಉಪಗ್ರಹಗಳನ್ನು ಉಡಾವಣೆ ಒಳಗೊಂಡಿದ್ದು,  ಪಿಎಸ್‌ಎಲ್‌ವಿ–ಸಿ37 ಉಡಾವಣಾ ವಾಹಕ ಒಟ್ಟು1500 ಕೆ.ಜಿ. ತೂಕದ ಉಪಗ್ರಹಗಳನ್ನು ಹೊತ್ತೊಯ್ಯಲಿದೆ. ಈ ಮೂಲಕ ಇಸ್ರೋ ಹೊಸ ಮೈಲಿಗಲ್ಲು ತಲುಪಲಿದೆ.

ಈ 104 ಉಪಗ್ರಹಳ ಪೈಕಿ ಭೂವೀಕ್ಷಣಾ ಕಾರ್ಯ ನಡೆಸುವ ಅಮೆರಿಕ ಸಂಸ್ಥೆಯ 88 ಚಿಕ್ಕ ಉಪಗ್ರಹ(ಕ್ಯೂಬ್‌ಸ್ಯಾಟ್‌)ಗಳು ಕಕ್ಷೆ ಸೇರಲಿವೆ. ಇದಲ್ಲದೆ ಕಾರ್ಟೋಸ್ಯಾಟ್–2, ಐಎನ್‌ಎಸ್‌–1ಎ ಹಾಗೂ ಐಎನ್‌ಎಸ್‌–1ಬಿ ಸೇರಿದಂತೆ  ಭಾರತದ ಮೂರು ಉಪಗ್ರಹಗಳು ಮಾತ್ರ ಉಡಾವಣೆಗೊಳ್ಳಲಿವೆ.

ಕಳೆದ ವರ್ಷ ಇಸ್ರೊ ಒಂದೇ ಬಾರಿಗೆ 22 ಉಪಗ್ರಹಗಳನ್ನು ಉಡಾವಣೆ ಮಾಡಿತ್ತು. 2014ರಲ್ಲಿ ರಷ್ಯಾ ಒಟ್ಟಿಗೆ 37 ಉಪಗ್ರಹಗಳನ್ನು ಹಾಗೂ ನಾಸಾ 29 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿರುವುದು ಈವರೆಗಿನ ದಾಖಲೆಯಾಗಿದೆ.  2018 ರಲ್ಲಿ ಚಂದ್ರಯಾನ–2 ಮತ್ತು ಸೂರ್ಯನನ್ನು ಅಧ್ಯಯನ ಮಾಡಲು 2019ರಲ್ಲಿ ಆದಿತ್ಯಾ–ಎಲ್‌1 ಉಪಗ್ರಹಗಳ ಉಡಾವಣೆ ಇಸ್ರೊದ ಮುಂದಿನ ಯೋಜನೆಗಳಾಗಿವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com