ಬೆಂಗಳೂರು: ರಾಜ್ಯದ ಯಾವುದೇ ಭಾಗದಲ್ಲಿ ಭೂಮಿ ಖರೀದಿಸಲು, ಅಥವಾ ಯಾವುದೇ ಆಸ್ತಿ ವಿಲೇವಾರಿ, ಸರ್ವೆ ನಂಬರ್ ತಿಳಿದುಕೊಳ್ಳಲು ಇನ್ನು ಹೆಚ್ಚು ಶ್ರಮ ಪಡಬೇಕಾಗಿಲ್ಲ. ಕಂದಾಯ ಇಲಾಖೆ ಹೊರತಂದಿರುವ ‘ದಿಶಾಂಕ್’ ಆ್ಯಪ್ ನಲ್ಲಿ ಈ ಎಲ್ಲಾ ಸಂದೇಹಗಳಿಗೆ ಪರಿಹಾರ ಸಿಗಲಿದೆ.
‘ದಿಶಾಂಕ್’ ಆ್ಯಪ್ ನಲ್ಲಿ ರಾಜ್ಯದಾದ್ಯಂತದ ಆಸ್ತಿಗಳ ವಿವರಗ ಹಾಕಲಾಗಿದ್ದು ಗೂಗಲ್ ಪ್ಲೇಸ್ಟೋರ್‌ನಲ್ಲಿ ಲಭ್ಯವಾಗುವ ಈ ಆ್ಯಪ್ ಸಾರ್ವಜನಿಕರಿಗೆ ಅತ್ಯಂತ ಅನುಕೂಲಕರವಾಗಿದೆ.
ಮೂರು ವರ್ಷಗಳ ಪರಿಶ್ರಮದಿಂದ ಈ ಆ್ಯಪ್ ತಯಾರಾಗಿದ್ದು ಇಲಾಖೆಯ ದಾಖಲೆಗಲಲ್ಲಿನ 1960ರ ಸರ್ವೆ ನಕಾಶೆಗಳ ಆಧಾರದಲ್ಲಿ ಇದನ್ನು ರಚಿಸಲಾಗಿದೆ.
ಭೂದಾಖಲೆ ಮತ್ತು ಸರ್ವೆ ಇಲಾಖೆಯ ಆಯುಕ್ತ ಮುನೀಶ್ ಮೌದ್ಗಿಲ್ ಮಾತನಾಡಿ ಆ್ಯಪ್ ನಿಂದಾಗಿ 1960ರ ಭೂ ನಕಾಶೆ ದೊರಕಲಿದೆ. ಯಾವುದೇ ಆಸ್ತಿಯ ಮೂಲ ವಿವರಗಳನ್ನು ತಿಳಿಯಲು ಇದರಿಂದ ಅನುಕೂಲವಾಗಲಿದೆ ಎಂದರು.
ಆದರೆ ಈ ಮಾಹಿತಿಯು ಕಾನೂನು ಬದ್ದವಾಗಿದೆ ಎನ್ನಲಾಗುವುದಿಲ್ಲ. ಆ್ಯಪ್ ನಲ್ಲಿ ಕಾಣಿಸುವ ನಕಾಶೆ ಕೇವಲ ಸಾಂಕೇತಿಕವಾಗಿದ್ದು ಸರ್ವೆ ನಂಬರ್‌ನ ಗಡಿರೇಖೆಗಳ ಮಾಹಿತಿ ಇದರಲ್ಲಿ ಲಭ್ಯ. ಮೊದಲಿಗೆ ಮೊಬೈಲ್ ನಲ್ಲಿ ಈ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಲೊಕೇಷನ್ ಅನ್ನು ಅಪ್ ಡೇಟ್ ಮಾಡಿಕೊಳ್ಳಬೇಕು. ಆಗ ನಿಮ್ಮ ನಿಗದಿತ ಸ್ಥಳ ಯಾವ ಸರ್ವೆ ನಂಬರ್ ಒಳಗೆ ಬರಲಿದೆ ಎನ್ನುವುದನ್ನು ತಿಳಿಸುತ್ತದೆ. ಅಲ್ಲದೆ ಸರ್ವೆ ನಂಬರ್ ನಮೂದಿಸಿ ನಿಗದಿತ ಸ್ಥಳದ ಮಾಹಿತಿ ಪಡೆಯಬಹುದು.
ಆಸ್ತಿ ಖರೀದಿಗೆ ಆಸಕ್ತಿ ಇರುವವರು ಈ ಆ್ಯಪ್ ಮೂಲಕ ತಾವು ಖರೀದಿಸಲು ಹೊರಡುವ ಜಾಗದ ವಿವರ ತಿಳಿದುಕೊಳ್ಳಲು ಸಾಧ್ಯ. ಬಿಬಿಎಂಪಿ, ಬಿಎಂಆರ್‌ಡಿಎ ಆ್ಯಪ್ ಗಳಿಗಿಂತ ದಿನಾಂಕ್ ಅತ್ಯುತ್ತಮ ಗುಣಲಕ್ಷಣ ಹೊಂದಿದೆ.ಮುಂದಿನ ದಿನಗಳಲ್ಲಿ ಇದನ್ನು ಇನ್ನಷ್ಟು ಅಭಿವೃದ್ದಿಪಡಿಸಿ ಒಂದೇ ಆ್ಯಪ್‌ನಲ್ಲಿ ಸಾರ್ವಜನಿಕರಿಗೆ ಅಗತ್ಯವಾದ ಎಲ್ಲಾ ಭೂದಾಖಲೆಗಳಿಗೆ ಸಂಬಂಧಿಸಿ ಮಾಹಿತಿ ಒದಗಿಸಲು ಇಲಾಖೆ ತೀರ್ಮಾನಿಸಿದೆ.