'ಭಾರತದ ವಾಟ್ಸಪ್'; ಒಂದೇ ದಿನಕ್ಕೆ ಗೂಗಲ್​ ಪ್ಲೇ ಸ್ಟೋರ್​ನಿಂದ ಮಾಯವಾದ ಕಿಂಭೋ

ಭಾರತದ ವಾಟ್ಸಪ್ ಎಂದೇ ಹೇಳಿಕೊಂಡಿದ್ದ ಪತಂಜಲಿ ಸಂಸ್ಥೆಯ ಕಿಂಭೋ ಆ್ಯಪ್ ಬಿಡುಗಡೆಯಾದ ಕೇವಲ ಒಂದೇ ದಿನದಲ್ಲಿ ಗೂಗಲ್ ಪ್ಲೇ ಸ್ಟೋರ್ ನಿಂದ ನಾಪತ್ತೆಯಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಭಾರತದ ವಾಟ್ಸಪ್ ಎಂದೇ ಹೇಳಿಕೊಂಡಿದ್ದ ಪತಂಜಲಿ ಸಂಸ್ಥೆಯ ಕಿಂಭೋ ಆ್ಯಪ್ ಬಿಡುಗಡೆಯಾದ ಕೇವಲ ಒಂದೇ ದಿನದಲ್ಲಿ ಗೂಗಲ್ ಪ್ಲೇ ಸ್ಟೋರ್ ನಿಂದ ನಾಪತ್ತೆಯಾಗಿದೆ.
ಹೌದು.. ಯೋಗ ಗುರು ಬಾಬಾ ರಾಮದೇವ್ ನೇತೃತ್ವದ ಪತಂಜಲಿ ಸಮೂಹವು ಬುಧವಾರ ಬಿಡುಗಡೆ ಮಾಡಿದ್ದ ‘ಕಿಂಭೋ’ ಮೆಸೆಂಜರ್ ಆ್ಯಪ್ ಒಂದೇ ದಿನಕ್ಕೆ ಸ್ಥಗಿತಗೊಂಡಿದ್ದು, ಗೂಗಲ್​ ಪ್ಲೇ​ ಸ್ಟೋರ್​ನಿಂದ ಮಾಯವಾಗಿದೆ.
ವಾಟ್ಸಪ್​ ಆ್ಯಪ್​ಗೆ ಪ್ರತಿಯಾಗಿ ಸ್ವದೇಶಿ ಮೆಸೆಂಜರ್ ಆ್ಯಪ್ ಅ​ನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದ ಪತಂಜಲಿ ಸಂಸ್ಥೆ ಅದರಂತೆ ನಿನ್ನೆ ಕಿಂಭೋ ಆ್ಯಪ್ ಅನ್ನು ಬಿಡುಗಡೆ ಮಾಡಿತ್ತು. ಅಲ್ಲದ ಆ್ಯಪ್ ನ ಟ್ಯಾಗ್ ಲೈನ್ ಆಗಿ  ‘ಅಬ್ ಭಾರತ್ ಬೋಲೇಗಾ’ ಎಂಬ ಘೋಷವಾಕ್ಯವನ್ನೂ ಸೇರಿಸಲಾಗಿತ್ತು. ಬುಧವಾರ ರಾತ್ರಿ ಈ ಆ್ಯಪ್​ ಅನ್ನು ಗೂಗಲ್ ಪ್ಲೇಸ್ಟೋರ್ ಹಾಗೂ ಆಪಲ್ ಐಒಸ್ ಆ್ಯಪ್ ಸ್ಟೋರ್​ನಲ್ಲಿ ಬಿಡುಗಡೆ ಮಾಡಲಾಗಿತ್ತು. 
ಸ್ವದೇಶಿ ಆ್ಯಪ್ ಎಂಬ ಕಾರಣಕ್ಕೆ ಈ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಲು ಜನ ಮುಗಿಬಿದ್ದರು. ತಡರಾತ್ರಿ ವೇಳೆಗೆ 5 ಸಾವಿರಕ್ಕೂ ಅಧಿಕ ಜನರು ಆ್ಯಪ್ ಡೌನ್​ಲೋಡ್ ಮಾಡಿಕೊಂಡಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ಈ ಆ್ಯಪ್​ ಸಾಮಾಜಿಕ ಜಾಲತಾಣಗಳಲ್ಲಿಯೂ ಭಾರಿ ಸದ್ದು ಮಾಡಿತ್ತು. ಆದರೆ, ಬೆಳಗಾಗುವಷ್ಟರಲ್ಲಿ ಕಿಂಭೋ ಆ್ಯಪ್​ ನ ಸರ್ವರ್ ಮೇಲೆ ಒತ್ತಡ ಹೆಚ್ಚಾಗಿದ್ದು, ಇದರಿಂದ ಆ್ಯಪ್ ತನ್ನ ಕಾರ್ಯ ನಿರ್ವಹಣೆಯನ್ನೇ ಸ್ಥಗಿತಗೊಳಿಸಿದೆ. ಕನಿಷ್ಠ ಸಂದೇಶ ರವಾನೆ ಕೂಡ ಅಸಾಧ್ಯವಾಗಿದೆ. 
ಈ ಬೆಳವಣಿಗೆಯಿಂದ ಎಚ್ಚೆತ್ತುಕೊಂಡ ಪತಂಜಲಿ ಸಮೂಹವು ಪ್ಲೇ ಸ್ಟೋರ್​ನಿಂದ ಆ್ಯಪ್ ಅನ್ನು ಹಿಂಪಡೆದಿದ್ದು, ಸುಧಾರಿತ ಆವೃತ್ತಿಯ ಆ್ಯಪ್​ನೊಂದಿಗೆ ಮತ್ತೆ ಮಾರುಕಟ್ಟೆಗೆ ಬರುತ್ತೇವೆ ಎಂದು ಹೇಳಿಕೊಂಡಿದೆ. ಆದರೆ ಐಒಎಸ್ ಆ್ಯಪ್ ಸ್ಟೋರ್ ನಲ್ಲಿ ಕಿಂಭೋ ಇನ್ನು ಲಭ್ಯವಿದ್ದು, ಅದನ್ನೂ ಹಿಂಪಡೆಯುವ ಸಾಧ್ಯತೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com